ಒಲಿಂಪಿಕ್ಸ್ ಕನಸಿಗೆ ನೀರೆರದು ಪೋಷಿಸಿದ್ದ ದೊರಾಬ್ಜಿ ಟಾಟಾ ...
https://epaper.samyukthakarnataka.com/edition/Ballari/SMYK_BALL/SMYK_BALL_20240812/page/8
ಟಾಟಾ ಹೆಸರು ಕೇಳಿದರೆ ಸಾಕು ಅದೇನೋ ಪ್ರೀತಿ, ಆಪ್ತತೆ , ಗೌರವ ಹಾಗು ದೇಶ ಪ್ರೇಮದ ಭಾವನೆಗಳು ತಾನಾಗಿಯೇ ಹೊರ ಹೊಮ್ಮುತ್ತದೆ. ರತನ್ ಟಾಟಾ ಹಾಗು ಜಮ್ಶೆಡ್ಜಿ ಟಾಟಾ ಅವರ ಹೆಸರನ್ನು ನಾವೆಲ್ಲರೂ ಕೇಳಿರುತ್ತೇವೆ, ಆದರೆ ದೊರಾಬ್ಜಿ ಟಾಟಾ ಅವರ ಹೆಸರನ್ನು ಅಷ್ಟಾಗಿ ಕೇಳಿರಲಿಕ್ಕಿಲ್ಲ, ಅದರಲ್ಲೂ ಈಗಿನ ಯುವ ಪೀಳಿಗೆಯಂತೂ ದೊರಾಬ್ಜಿ ಟಾಟಾ ಅವರ ಬಗ್ಗೆ ಕೇಳಿರುವುದು ಕಡಿಮೆಯೇ. ಹಾಗಾದರೆ ಯಾರಿವರು ದೊರಾಬ್ಜಿ ಟಾಟಾ ಎಂದು ನೋಡ ಹೊರಟರೆ ಮತ್ತ್ಯಾರು ಅಲ್ಲ ಕೈಗಾರಿಕಾಕರಣಗೊಂಡ ದೇಶಗಳ ಸಾಲಿನಲ್ಲಿ ಭಾರತದ ಬಾವುಟವನ್ನು ಮುಗಿಲೆತ್ತರಕ್ಕೆ ಹಾರಿಸಿದ ಕೀರ್ತಿವಂತ ಜಮ್ಶೆಡ್ಜಿ ಟಾಟಾ ಅವರ ಸುಪುತ್ರ. ಸರ್ ದೊರಾಬ್ಜಿ ಅವರು ಅವರ ತಂದೆಯಂತೆ ವ್ಯವಹಾರ ಕುಶಾಗ್ರಮತಿಗಳು, ದೇಶಭಕ್ತರು ಹಾಗು ಹಾಗು ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಉದಾತ್ತ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ದೊರಾಬ್ಜಿ ಟಾಟಾ ಅವರ ನಾಯಕತ್ವದಲ್ಲಿ, ಟಾಟಾ ಸಮೂಹವು ಇನ್ನಿಲ್ಲದಂತೆ ತನ್ನ ವ್ಯಾಪಾರ ವಹಿವಾಟನ್ನು ವಿಸ್ತರಿಸುತ್ತ ಹೋಯಿತು. ನೋಡ ನೋಡುತ್ತಲೇ ಹತ್ತಿ ಗಿರಣಿಗಳು ಮತ್ತು ಬಾಂಬೆಯ ತಾಜ್ ಮಹಲ್ ಹೋಟೆಲ್‌ನ ಒಡೆತನದಿಂದ ದೊರಾಬ್ಜಿ ಉಕ್ಕಿನ ಸ್ಥಾವರ, ಜಲವಿದ್ಯುತ್ ಕಂಪನಿಗಳು, ತೈಲ ಮತ್ತು ಸಾಬೂನು ಕಂಪನಿ, ಸಿಮೆಂಟ್ ಕಾರ್ಖಾನೆಗಳನ್ನು ಸ್ಥಾಪಿಸಿದರು ಅಲ್ಲದೆ ಜೆ ಅರ ಡಿ ಅವರು ಸ್ಥಾಪಿಸಿದ್ದ ವಿಮಾನಯಾನ ಘಟಕ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ಹೊಸ ಆಯಾಮವನ್ನು ಕೊಟ್ಟಿದ್ದು ಸರ್ ದೊರಾಬ್ಜಿ .
ಇದು ದೊರಾಬ್ಜಿ ಟಾಟಾ ಅವರ ಕೈಗಾರಿಕಾ ಕ್ಷೇತ್ರದಲ್ಲಿನ್ನ ಸಾಧನೆಯ ಕಿರು ನೋಟವಾದರೆ ದೊರಾಬ್ಜಿ ಟಾಟಾ ಅವರಿಗೆ ಕ್ರೀಡೆಯ ಬಗ್ಗೆಯೂ ಅಷ್ಟೇ ಆಸಕ್ತಿಯಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಹಾಗು ಅಂದು ಅವರು ಇಟ್ಟ ದಿಟ್ಟ ಹೆಜ್ಜೆಯ ಫಲವಾಗಿ ಇಂದು ನಾವು ಭಾರತಕ್ಕೆಷ್ಟು ಪದಕ ಎಂದು ಕಾತುರದಿಂದ ಒಲಂಪಿಕ್ ನತ್ತ ನೋಡುವಂತೆ ಮಾಡಿದೆ. ದೊರಾಬ್ಜಿ ಬ್ರಿಟನ್ ನ ಕೇಂಬ್ರಿಡ್ಜ್ನಲ್ಲಿದ್ದಾಗಲೇ ಕ್ರಿಕೆಟ್ , ಫುಟ್ಬಾಲ್ ಹಾಗು ಟೆನಿಸ್ ಬಗ್ಗೆ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು ಹಾಗು ಹಲವಾರು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದರು. 1879 ರಲ್ಲಿ ಬ್ರಿಟನ್ ನಿಂದ ಮುಂಬೈ ನಗರಕ್ಕೆ ಹಿಂದಿರುಗಿದ ದೊರಾಬ್ಜಿ, ಸೇಂಟ್ ಕ್ಸೇವಿಯರ್ ಕಾಲೇಜಿಗೆ ಸೇರಿ ಆಯ್ದು ಕೊಂಡಿದ್ದು ಜರ್ನಲಿಸಂ. ಎಲ್ಲಿಯ ವ್ಯಾಪಾರ ಎಲ್ಲಿಯ ಜರ್ನಲಿಸಂ ಎಂದು ನಿಮಗನಿಸಬಹುದು ಅದು ಜೇಮ್ಶೆಟ್ ಜಿ ಟಾಟಾ ಅವರ ಅಭಿಲಾಷೆಯಾಗಿತ್ತು, ಅಂದರೆ ತನ್ನ ಮಗ ಎಲ್ಲ ರಂಗಗಳ ಒಳಹರಿವು ತಿಳಿದಿರಬೇಕು ಎಂಬ ಹೆಬ್ಬಯಕೆ ಅವರದಾಗಿತ್ತು. ಮುಂಬೈ ನಲ್ಲಿ ಕೂಡ ಕ್ರಿಕೆಟ್ ಆಟಕ್ಕೆ ಕಾಲೇಜು ವಲಯಗಳಲ್ಲಿ ಒಂದು ಸ್ವೀಕೃತಿಯನ್ನು ತರಲು ಸಹಕಾರಿಯಾಗಿದ್ದರು ದೊರಾಬ್ಜಿ . ಕಾಲಕ್ರಮೇಣ ಡೆಕ್ಕನ್ ಜಿಮಖಾನದ ಅಧ್ಯಕ್ಷರಾದ ಮೇಲೆ ಕ್ರೀಡೆಯನ್ನು ಭಾರತದಲ್ಲಿ ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ನಿರ್ಧಾರಕ್ಕೆ ಬಂದಿದ್ದರು ದೊರಾಬ್ಜಿ , ಆದರೆ ಅದು ಅಷ್ಟೊಂದು ಸುಲಭವಾಗಿರಲಿಲ್ಲ, ಮೊದಲನೇ ಅಥ್ಲೆಟಿಕ್ ಮೀಟ್ ನಲ್ಲಿ ದೊರಾಬ್ಜಿ ಕಂಡು ಕೊಂಡಿದ್ದು ಭಾರತದಲ್ಲಿ ನಡೆಯುವ ಕ್ರೀಡಾ ಕೂಟದಲ್ಲಿ ಭಾಗವಹಿಸುತ್ತಿದ್ದಿದ್ದು ಹೆಚ್ಚಾಗಿ ರೈತಾಪಿ ಮಕ್ಕಳು ಹಾಗು ಅವರಿಗೆ ಐರೋಪ್ಯ (ಯುರೋಪಿಯನ್) ರಾಷ್ಟ್ರಗಳಲ್ಲಿನ ಕ್ರೀಡಾ ಕೂಟಗಳಲ್ಲಿನ ನಿಯಮಗಳು ಹಾಗು ಪಡೆದು ಕೊಳ್ಳಬೇಕಾದ ತರಬೇತಿಗಳ ಅರಿವು ಇಲ್ಲದಿರುವುದು. ಯಾರೊಬ್ಬರ ಕಾಲಿನಲ್ಲಿ ಶೂಸ್ ಗಳಿರುತ್ತಿರಲಿಲ್ಲ ಹಾಗು ಅವರಿಗೆ ಓಡುವುದೆಂದರೆ ಓಡುವುದಷ್ಟೇ ಗೊತ್ತು ಅದು ಕರಾರುವಕ್ಕಾಗಿ ಲೈನ್ ಗಳನ್ನೂ ಹಾಕಿ ಟ್ರ್ಯಾಕ್ ಗಳನ್ನೂ ನಿರ್ಮಿಸಿ ಟ್ರ್ಯಾಕ್ ಗಳಲ್ಲಿ ಓಡುವುದು ಹೀಗೆ ಯಾವುದರ ಬಗ್ಗೆಯೂ ಅರಿವಿರಲಿಲ್ಲ, ಆದರೆ ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ್ದ ದೊರಾಬ್ಜಿ ಕಂಡು ಕೊಂಡದ್ದು ಹಲವಾರು ರೈತಾಪಿ ಮಕ್ಕಳು ಯಾವುದೇ ತರಬೇತಿಗಳು ಹಾಗು ಶೂಸ್ ಗಳಿಲ್ಲದಿದ್ದರು ಅವರ ಓಟ ಹಾಗು ತೆಗೆದು ಕೊಂಡಿದ್ದ ಓಟದ ಸಮಯ ಅಂದಿನ ಒಲಂಪಿಕ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕ್ರೀಡಾ ಪಟುಗಳು ತೆಗೆದು ಕೊಂಡಿದ್ದ ಓಟದ ಸಮಯಕ್ಕೆ ತಾಳೆಯಾಗಿದ್ದು. ಇದೆಲ್ಲವನ್ನು ಗಮನಿಸಿದ ಸರ್ ದೊರಾಬ್ಜಿ ಮೂವರನ್ನು ಆಯ್ಕೆ ಮಾಡಿ 1920 ರ ಬೆಲ್ಜಿಯಮ್ ನ ಆಂಟ್ವೆರ್ಪ್ ಒಲಂಪಿಕ್ ಕ್ರೀಡಾಕೂಟಕ್ಕೆ ತನ್ನದೇ ಖರ್ಚಿನಲ್ಲಿ ಕಳುಹಿಸುವ ನಿರ್ಧಾರ ಮಾಡಿದ್ದರು. ಉದ್ದೇಶ ಸ್ಪಷ್ಟವಾಗಿತ್ತು ಆ ಮೂವರು ಅಲ್ಲಿನ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆಲ್ಲಲಾಗದಿದ್ದರು ಅಲ್ಲಿನ ನೀತಿ ನಿಯಮಗಳನ್ನು ಗಮನಿಸಿ ಹಿಂತಿರುಗಿದಾಗ ಇಲ್ಲಿದ್ದ ಕ್ರೀಡಾ ಪಟುಗಳಿಗೆ ತರಬೇತಿ ಕೊಡಬೇಕೆಂಬುದಾಗಿತ್ತು. ಒಂದನೇ ವಿಶ್ವ ಯುದ್ಧದಲ್ಲಿ ಸಮಯದಲ್ಲಿ ಧ್ವಂಸಗೊಂಡಿದ್ದ ಬೆಲ್ಜಿಯಂನ ಪುನರುತ್ಥಾನಕ್ಕಾಗಿ ಬೆಲ್ಜಿಯಂನಲ್ಲಿ ಕ್ರೀಡಾ ಕೂಟವನ್ನು ಆಯೋಜಿಸಲಾಗಿತ್ತು ಮೊದಲನೇ ವಿಶ್ವ ಯುದ್ಧದಲ್ಲಿ ಸೋತ ದೇಶಗಳಾದ ಜರ್ಮನಿ, ಆಸ್ಟ್ರಿಯಾ, ಹಂಗೇರಿ, ಬಲ್ಗೇರಿಯಾ ಮತ್ತು ಟರ್ಕಿ ದೇಶಗಳಿಗೆ ಆಹ್ವಾನವಿರಲಿಲ್ಲ. ಎಣಿಸಿದಂತೆ ಸ್ಪರ್ಧಿಗಳಿಗೆ ಕ್ರೀಡಾಕೂಟದ ನಿಯಮಗಳ ಅರಿವಿರಲಿಲ್ಲ , ಸಿದ್ಧತೆ ಹೇಗಿರಬಕೆಂದು ತಿಳಿದಿರಲಿಲ್ಲ , ಜಿಮಖಾನಾದ ಕೋಚ್ 100 ಯಾರ್ಡ್ ರೇಸ್ ಪೂರೈಸಲು ಅಂದಾಜು ಎಷ್ಟು ಸಮಯ ತೆಗೆದು ಕೊಳ್ಳಬಹುದು ಅಥವಾ ಸಾಮಾನ್ಯವಾಗಿ ಎಷ್ಟು ಸಮಯದಲ್ಲಿ ಮುಗಿಸಿದರೆ ಪದಕ ಗೆಲ್ಲಬಹುದು ಎಂದು ಕೇಳಿದಾಗ ಸ್ಪರ್ಧಿಗಳಿಂದ ಬಂದ ಉತ್ತರ ಒಂದು ನಿಮಿಷದಿಂದ ಅರ್ಧ ನಿಮಿಷ ಒಳಗೆ ಎಂದಾಗಿತ್ತು. ಈ ಉತ್ತರವನ್ನು ಕೇಳಿ ಕೋಚ್ ಧಿಗ್ಬ್ರಮೆ ಗೊಂಡಿದ್ದರಂತೆ ಹಾಗು ನಂತರ ಅಲ್ಲಿ ಸೋಲು ಗೆಲುವು ನಿಮಿಷಗಳಲ್ಲಿ ಅಲ್ಲ ಸೆಕೆಂಡುಗಳಲ್ಲಿ ನಿರ್ಧಾರವಾಗುತ್ತದೆ ಎಂದು ತಿಳಿ ಹೇಳಬೇಕಾಯಿತು, ಬಹುಶಹ ಈ ಒಂದು ನಿದರ್ಶನ ಸ್ಪರ್ಧಾಳುಗಳ ಸಿದ್ದತೆಯನ್ನು ಆಟದ ಬಗ್ಗೆ ಇದ್ದ ಅರಿವನ್ನು ತೋರಿಸಿಕೊಡುತ್ತದೆ. ಆದರೆ ದೊರಾಬ್ಜಿ ಅವರ ಆಸಕ್ತಿಯನ್ನು ಗಮನಿಸಿದ್ದ ಅಂದಿನ ಭಾರತ ಸರ್ಕಾರ ಒಂದಿಷ್ಟು ಹಣವನ್ನು ಕೊಡಲು ಮುಂದೆ ಬಂದಿತು ನಂತರ ಹಲವರ ಸಹಾಯದಿಂದ ಹಾಗು ದೊರಾಬ್ಜಿ ಅವರ ಹಣಕಾಸಿನ ನೆರವಿನಿಂದ ತಂಡವೇನೋ ಕ್ರೀಡಾಕೂಟಕ್ಕೆ ಹೋಯಿತು ಆದರೆ ಫಲಿತಾಂಶ ಏನಾದೀತೆಂದು ಎಲ್ಲರೂ ಮೊದಲೇ ನೀರಿಕ್ಷಿಸಿದ್ದರು ಅಂತೆಯೇ ಯಾರು ಕೂಡ ಹೇಳಿ ಕೊಳ್ಳುವ ಪ್ರದರ್ಶನ ನೀಡಲಿಲ್ಲ. ದೊರಾಬ್ಜಿ ಟಾಟಾ ಕೂಡ ಅನಾರೋಗ್ಯದ ಕಾರಣ ಕ್ರೀಡಾಳುಗಳೊಂದಿಗೆ ಹೆಚ್ಚು ಸಮಯ ಕಳೆಯಲಾಗಲಿಲ್ಲ ಒಟ್ಟಾರೆಯಾಗಿ ಭಾರತದ ಪ್ರಪ್ರಥಮ ಒಲಂಪಿಕ್ ಪ್ರಯತ್ನ ಫಲಿಸಲಿಲ್ಲ ಆದರೆ ಅಂದು ಕ್ರೀಡಾಳುಗಳು ಬ್ರಿಟಿಷ್ ಇಂಡಿಯಾ ದ ಆಡಳಿತದಲ್ಲಿ ಅಲ್ಲಿಯವರೆಗೆ ತಲುಪಿದ್ದೆ ಒಂದು ಸಾಧನೆ ಅಂದರು ತಪ್ಪಾಗಲಾರದು.
ನಾಲ್ಕು ವರುಷದ ನಂತರ 1924 ರ ಹೊತ್ತಿಗೆ ಪ್ಯಾರಿಸ್ ನಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟಕ್ಕೆ ಹಿಂದಿನ ಸಿದ್ಧತೆಗಳಿಗಿಂತ ಹೆಚ್ಚು ಸಿದ್ಧಗೊಂಡು ಸ್ಪರ್ದಿಸಲು ತಂಡ ಸಜ್ಜಾಗುತ್ತಿತ್ತು . 1920 ರ ತಂಡ ಪೂನದಲ್ಲಿನ ಸ್ಥಳೀಯ ಕ್ರೀಡಾಪಟುಗಳಲ್ಲೇ ಉತ್ತಮವಾಗಿ ಆಡುವವರನ್ನು ಆಯ್ಕೆ ಮಾಡಿ ಕಳಿಸಿಕೊಟ್ಟ ತಂಡವಾಗಿತ್ತು ಆದರೆ 1924 ರ ಆಯ್ಕೆಯ ಸಿದ್ದತೆಯನ್ನು ದೊರಾಬ್ಜಿ ಹಾಗು ಜಿಮ್ಖಾನ್ ತಂಡ ತುಸು ಹೆಚ್ಚು ನಿಗಾ ವಹಿಸಿ ಮಾಡಿದ್ದರು. ಡೆಲ್ಲಿಯಲ್ಲಿ ಅದಕ್ಕಾಗಿಯೇ ವಿಶೇಷ ಒಲಂಪಿಕ್ ಗೇಮ್ಸ್ ಸ್ಕ್ರೀನಿಂಗ್ ನಡೆಸಿ ಕ್ರೀಡಾ ಪಟುಗಳನ್ನು ಆಯ್ಕೆ ಮಾಡಿತ್ತು. 1924 ರಲ್ಲಿ ಕ್ರೀಡಾ ಪಟುಗಳನ್ನು ಕ್ರೀಡಾ ಕೂಟಕ್ಕೆ ಕಳುಹಿಸಿ ಕೊಡಲು ಸಂಪನ್ಮೂಲದ ಕೊರತೆಯು ಅಷ್ಟಾಗಿ ಕಾಣಲಿಲ್ಲ. ಪಂಜಾಬ್ ಒಲಂಪಿಕ್ ಸಮಿತಿ , ಬಿಹಾರ್ , ಒರಿಸ್ಸಾ , ಮದರಾಸು ಪ್ರಾಂತ್ಯ , ಚಿಕ್ಕ ಚಿಕ್ಕ ರಾಜ ಮನೆತನದ ಪ್ರಾಂತ್ಯಗಳು ಹೀಗೆ ಎಲ್ಲೆಡೆಯಿಂದ ಹಣದ ಹರಿವು ಸುಗಮವಾಗಿ ಹರಿದು ಬಂದಿತ್ತು , ಪರಿಣಾಮವಾಗಿ ಒಳ್ಳೆಯ ಕೋಚ್ ಕೂಡ ನೇಮಿಸಲಾಗಿತ್ತು. ಪತ್ರಿಕೆಗಳಲ್ಲೂ ತಕ್ಕ ಮಟ್ಟಿಗೆ ಪ್ರಚಾರ ದೊರೆಯಿತು. 1924 ರ ಕ್ರೀಡಾ ಕೂಟದ ಸಂಪೂರ್ಣ ಯೋಜನೆ ಹಾಗು ನಿರ್ವಹಣೆಯನ್ನು ಆಲ್ ಇಂಡಿಯಾ ಒಲಂಪಿಕ್ ಅಸೋಸಿಯೇಷನ್ ನಿರ್ವಹಿಸಿತ್ತು ಆ ಬಾರಿಯೂ ಅಂತಹ ನೀರಿಕ್ಷೆ ಇರಲಿಲ್ಲ ಆದರೆ ಕ್ರೀಡೆಯ ಬಗ್ಗೆ ಒಂದು ಸ್ವೀಕಾರ ಮನೋಭಾವ ಎಲ್ಲೆಡೆ ವ್ಯಕ್ತವಾಗಿತ್ತು. 1920 ರಲ್ಲಿಟ್ಟ ದಿಟ್ಟ ಹೆಜ್ಜೆ 1928 ರಲ್ಲಿ ಫಲ ನೀಡಿತ್ತು .1928 ರಲ್ಲಿ ಆಮ್ಸ್ಟರ್ಡ್ಯಾಮ್ ನಲ್ಲಿ ನಡೆದ ಒಲಂಪಿಕ್ ಕ್ರೀಡಾ ಕೂಟದಲ್ಲಿ ಭಾರತದ ಹಾಕಿ ತಂಡವು ಐದು ಪಂದ್ಯಗಳಲ್ಲಿ 29 ಗೋಲುಗಳನ್ನು ಗಳಿಸಿ ತನ್ನ ಮೊದಲ ಒಲಿಂಪಿಕ್ ಚಿನ್ನದ ಪದಕವನ್ನು ಪಡೆದುಕೊಂಡಿತ್ತು. ಧ್ಯಾನ್ ಚಂದ್ 14 ಗೋಲುಗಳನ್ನು ಗಳಿಸಿದರು, ನೆದರ್ಲ್ಯಾಂಡ್ಸ್ ವಿರುದ್ಧದ ಫೈನಲ್‌ನಲ್ಲಿ ಭಾರತ ದಿಗ್ವಿಜಯಿಯಾಗಿ ಚಿನ್ನದ ಪದಕ ಮುಡಿಗೇರಿಸಿಕೊಂಡಿತ್ತು. ದೊರಾಬ್ಜಿ ಟಾಟಾ ಕನಸು ನನಸಾಗಿತ್ತು. ಈ ಬಾರಿ ಹಾಕಿ ಕಂಚಿನ ಪದಕದೊಂದಿಗೆ ಮುಕ್ತಾಯಗೊಂಡಿದೆ. ಅಂದಿನಿಂದ ಇಂದಿನವರೆಗೆ ಕ್ರೀಡಾ ವಲಯದಲ್ಲಿ ಹಲವಾರು ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಲೇ ಬಂದಿದೆ ಆದರೆ ಅಂದು ಸರ್ ದೊರಾಬ್ಜಿ ನೆಟ್ಟ ಒಲಂಪಿಕ್ ಎಂಬ ಗಮ್ಯದ ಸಸಿಯ ಪರಿಪೋಷಣೆಯನ್ನು ಸಮರ್ಪಕವಾಗಿ ಮಾಡುತ್ತಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಏಕೆಂದರೆ ಬೆಂಗಳೂರಿನಷ್ಟಿರುವ ಸಣ್ಣ ಸಣ್ಣ ದೇಶಗಳು ಪದಕ ಪೈಪೋಟಿಯಲ್ಲಿ ಅಘಾದ ಸಾಧನೆ ಮಾಡಿವೆ ಆದರೆ ಒಂದಿಡೀ ಯುರೋಪ್ ಪ್ರಾಂತ್ಯದಷ್ಟಿರುವ ಭಾರತದಲ್ಲಿ ನೀರಜ್, ಪಿ ಟಿ ಉಷಾ , ಕರಣಂ ಮಲ್ಲೇಶ್ವರಿ , ಮನು ಭಾಕರ್, ಅಭಿನವ ಬಿಂದ್ರ , ವಿನೇಶ್ ಫೋಗಟ್ ಅಂತಹ ಬೆಳಣಿಕೆಯಷ್ಟು ಸಾಧನ ವೀರರು ಸೃಷ್ಠಿ ಆಗುತ್ತಿದ್ದಾರೆ, ಅದರಲ್ಲೂ ಹಳ್ಳಿ ಗಾಡಿನ ಹಾಗು ಸಣ್ಣ ಪಟ್ಟಣಗಳ ಸಾಧಕರು ಜಿಲ್ಲಾ ಕ್ರೀಡಾ ಪಂದ್ಯ ಹಾಗು ರಾಜ್ಯ ಮಟ್ಟದ ಕ್ರೀಡಾ ಪಂದ್ಯಗಳಿಗೆ ತಮ್ಮನು ತಾವು ಸೀಮಿತ ಮಾಡಿ ಕೊಳ್ಳುತ್ತಿದ್ದಾರೆ ಇವರೆಲ್ಲರೂ ಎದುರಿಸುವ ಹಾಗು ಎದುರಿಸುತ್ತಿರುವ ಸಮಸ್ಯೆ ಸಂಪನ್ಮೂಲ ಸಮಸ್ಯೆ ಆದ್ದರಿಂದ ಮತ್ತೊಬ್ಬ ದೊರಾಬ್ಜಿ ತಾನಾಗಿಯೇ ಬರಲಿ ಎಂದು ಕಾದು ಕುಳಿತರೆ ಅದು ಸಾಧ್ಯವಾಗದು. ಪ್ರತಿ ಶಾಲೆಗಳು ತಮ್ಮ ತಮ್ಮ ಹಳ್ಳಿಗಳಲ್ಲಿ , ಪಟ್ಟಣಗಳಲ್ಲಿ ಹಾಗು ನಗರಗಳಲ್ಲಿ ಸರ್ ದೊರಾಬ್ಜಿ ಅವರಂತಹ ಮಹಾನ್ ಚೇತನಗಳನ್ನು ಹುಡುಕಿ ಸರ್ಕಾರದೊಂದಿಗೆ ಕೈ ಜೋಡಿಸುವಂತೆ ಮಾಡಬೇಕು. ಏಕೆಂದರೆ ಸರ್ಕಾರವೆಂದರೆ ನಾವು , ನಾವೆಂದರೆ ಸರ್ಕಾರ.ಕಾರ್ತಿಕ್
ಎಸ್ ಬಾಪಟ್.
.jpeg)
No comments:
Post a Comment