ಆಪರೇಷನ್ ಕಗಾರ, ನಕ್ಸಲ ನಿರ್ಮೂಲನೆಯ ಕೊನೆಯ ಚರಣವೇ ?
ಆಪರೇಷನ್
ಸಿಂಧೂರ ಕದನ ವಿರಾಮದಿಂದಾಗಿ ಅಲ್ಪ ವಿರಾಮದ ಸ್ಥಿತಿಯಲ್ಲಿದೆ. ಆದರೆ ಭಾರತೀಯರಿಗೆ ಕದನ ವಿರಾಮ ಒಪ್ಪಲು ಮನಸಿಲ್ಲ, ಎಷ್ಟರ
ಮಟ್ಟಿಗೆಂದರೆ ಬಿ ಜೆ ಪಿ ಕಟ್ಟಾ ಬೆಂಬಲಿಗರೇ ವಿರಾಮದ ಅಗತ್ಯವಿರಲಿಲ್ಲ ಎಂದು ಕೆಲವೊಮ್ಮೆ ಒಳಗೊಳಗೇ
ಗೊಣಗಿದರೆ ಇನ್ನು ಕೆಲವೊಮ್ಮೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್
ಪಕ್ಷದ ಹಿತ ಚಿಂತಕರು ಹಾಗು ನಾಯಕರು ನೋಡ್ರಿ ಇಂದಿರಾ ಗಾಂಧಿ ಅಂತಹ ಪ್ರಧಾನಿ ಇರಬೇಕು. ಎದೆಗಾರಿಕೆ
ಎಂದರೆ ಅವರದೇ ಎಂದು ಬೀಗುತ್ತಿದ್ದಾರೆ. ಕಾಂಗ್ರೆಸ್ಗೆ ನ ಪರಿಸ್ಥಿತಿ ಒಂದು ರೀತಿಯಲ್ಲಿ ಬಾಲ ಸುಟ್ಟ
ಬೆಕ್ಕಿನ ಪರಿಸ್ಥಿತಿಯಂತಾಗಿದೆ. ಕಾಂಗ್ರೆಸ್ ಆಪರೇಷನ್ ಸಿಂಧೂರದ ಕ್ರೆಡಿಟ್ಟು ಬಿ ಜೆ ಪಿ ಗೆ ಹೋದರೇನು
ಗತಿ ಎಂದು ಚಡಪಡಿಸುತ್ತಿದೆ. ಇತ್ತ ಬಿ ಜೆ ಪಿ ಕದನ ವಿರಾಮದಿಂದ ತನ್ನ ಕಟ್ಟಾ ಬೆಂಬಲಿಗರು ಬೇಸರಗೊಂಡರೇ?
ಎಂದು ಯೋಚಿಸುತ್ತಿದೆ. ಆದರೆ ಆಗಬೇಕಾದ ಕೆಲಸಗಳು ಆಯಾ ಕಾಲಕ್ಕೆ ಯಾರ ಮುಲಾಜಿಗೂ ಒಳಪಡದೆ ಆಗಲೇಬೇಕು
. ಹಿಂದೊಮ್ಮೆ ಕಾರ್ಗಿಲ್ ಯುದ್ಧದ ಸಮಯದಲ್ಲಿ ಅಟಲ್ ಜಿ
ಹೇಳಿದ ನೆನಪು, ಯಾವುದೇ ಯುದ್ಧಕ್ಕೆ ಒಂದು ನಿರ್ಧಿಷ್ಟ ಗುರಿ ಇರಬೇಕು. ಗುರಿ ಇಲ್ಲದ ಯುದ್ಧ
ವ್ಯರ್ಥ ಎಂದು, ಅಂದರೆ ಯುದ್ಧ ಘೋಷಿಸಿದರೆ ಅದರ ಲಕ್ಷ್ಯ ಪೂರೈಸಿಸಬೇಕು. ಆಪರೇಷನ್ ಸಿಂಧೂರ್ ಲಕ್ಷ್ಯವಿದ್ದದ್ದು
ಉಗ್ರ ಪಾಳಯಗಳ ಧ್ವಂಸ ಅದು ತಕ್ಕ ಮಟ್ಟಿಗೆ ಆದಂತಿದೆ, ಆದ್ದರಿಂದ ಯುದ್ಧ ಮಾಡುವುದರೊಂದಿಗೆ, ಯುದ್ಧವನ್ನು
ಪ್ರಾರಂಭಿಸಿದ ಮೇಲೆ ಅದನ್ನು ನಿಲ್ಲಿಸುವ ಅಥವಾ ಯುದ್ಧವೇ ಆಗದಂತೆ ನೋಡಿಕೊಳ್ಳುವುದು ಒಂದು ಬಗೆಯ ಜಾಣ್ಮೆಯೇ
ಸರಿ. ಹಾಗಾದರೆ ಪೂರ್ವ ಪಾಕಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಿ ಬಾಂಗ್ಲಾದೇಶವೆಂಬ ಹೊಸ ದೇಶವನ್ನು
ಹುಟ್ಟು ಹಾಕಿದ್ದು ಕಡಿಮೆ ಸಾಧನೆಯೇ ? ಅಲ್ಲ ಅದರ ಶ್ರೇಯಸ್ಸು ನಿಜಕ್ಕೂ ಇಂದಿರಾ ಗಾಂಧಿ ಅವರಿಗೆ ಹಾಗು
ಅಂದು ಸೈನ್ಯದಲ್ಲಿದ್ದ ಜನರಲ್ ಸಗತ್ ಸಿಂಗ್ ರಂತಹ ಕೆಚ್ಚೆದೆಯ ವೀರರಿಗೆ ಸಲ್ಲಲೇಬೇಕು,
ಆದರೆ ಅಂದು ಇದ್ದ ಈಸ್ಟ್ ಪಾಕಿಸ್ತಾನ ಹಾಗು ವೆಸ್ಟ್
ಪಾಕಿಸ್ತಾನ ಎಂಬ ಬೌಗೋಳಿಕವಾಗಿ ಭಿನ್ನ ಭಿನ್ನ ಸೀಮಾ ರೇಖೆಗಳನ್ನು ಹೊಂದಿದ್ದ ಅಂದಿನ ಪಾಕಿಸ್ತಾನದ
ಪರಿಸ್ಥಿತಿಗೂ ಇಂದು ಪಾಕಿಸ್ತಾನದಲ್ಲಿರುವ ಬಲೂಚಿಸ್ತಾನದ
ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಎರಡನ್ನು ತಾಳೆ ಹಾಕುವುದು ಅಷ್ಟು ಸರಿಯಲ್ಲ, ಆದರೆ
ಇದ್ಯಾವುದನ್ನು ಕೇಳುವ ಸ್ಥಿತಿಯಲ್ಲಿ ಭಾರತೀಯರ ಮನಸ್ಥಿತಿ ಇದ್ದಂತಿಲ್ಲ, ಇಂತಹ ಪರಿಸ್ಥಿತಿಯ ನಡುವೆ
ಸರ್ಕಾರ ನಡೆಸಿದ ಆಪರೇಷನ್ ಕಗಾರ ಅದೇಕೋ ಹೆಚ್ಚು
ಚರ್ಚೆಯಾಗಲಿಲ್ಲ.
ಹಾಗಾದರೆ
ಏನಿದು ಆಪರೇಷನ್ ಕಗಾರ ?
ನಕ್ಸಲರ
ನಿರ್ಮೂಲನೆ ಹಾಗು ಮಾವೋವಾದದ ರಾಜಕೀಯ
ಸಿದ್ಧಾಂತವನ್ನು ಕಿತ್ತುಹಾಕುವುದೇ ಆಪರೇಷನ್
ಕಗಾರ ದ ಉದ್ದೇಶ.ನಕ್ಸಲ
ವಾದದ ಹೆಡೆ ಮುರಿ ಕಟ್ಟಲು
ಈ ಹಿಂದಿನ ಸರ್ಕಾರಗಳು ಪ್ರಯತ್ನಿಸಲಿಲ್ಲವೇ ? ಹಾಗೇನು ಇಲ್ಲ ಯು ಪಿ
ಏ ಸರ್ಕಾರವಿದ್ದಾಗ ಪ್ರಧಾನ ಮಂತ್ರಿಗಳಾಗಿದ್ದ ಮನಮೋಹನ್ ಸಿಂಗ್ ಪ್ರಯತ್ನ
ಮಾಡುವತ್ತ ಆಲೋಚನೆ ಮಾಡಿದ್ದು ನಿಜ ಹಾಗು ನಕ್ಸಲಿಸಂ
ಎಂಬುದು ಭಾರತದ ಆಂತರಿಕ ಭದ್ರತೆಯ ದೊಡ್ಡ ಶತ್ರು ಎಂದು ಅವರೇ ಉಲ್ಲೇಖಿಸಿದ್ದರು,
ಆದರೆ ಹಂಗಿನ ಅರಮನೆಯಲ್ಲಿರುವಾಗ ಅರಮನೆ ರಕ್ಷಿಸಿಕೊಳ್ಳುವುದೊಂದೇ ಆದ್ಯತೆ ಆಗಿರುತ್ತದೆ. ಇತ್ತ ಕಮ್ಯುನಿಸ್ಟರ ಸರಿ
ಸುಮಾರು 60 ಸಂಸದರ ಬೆಂಬಲ ಯು ಪಿ ಏ
ಸರ್ಕಾರರಕ್ಕೆ ಬೇಕಾಗಿತ್ತು ಆದ್ದರಿಂದ ಮನಮೋಹನ್ ಸರ್ಕಾರ ನಕ್ಸಲರೆಡೆಗೆ ಸಹಾನುಭೂತಿ ಉಳ್ಲವರಂತೆ ನಡೆದು ಕೊಂಡಿತು ಎಂಬ ಅಪವಾದ ಹೊತ್ತುಕೊಳ್ಳುಬೇಕಾಯಿತು.
ಅಷ್ಟೇ ಅಲ್ಲ ನಕ್ಸಲ್ ಸಮಸ್ಯೆ
ಎಂಬುದು ಸಾಮಾಜಿಕ ಹಾಗು ಆರ್ಥಿಕ ದಬ್ಬಾಳಿಕೆಯ
ಬಳುವಳಿ ಎಂಬಂತೆ ಬಿಂಬಿಸುವ ಪ್ರಯತ್ನ ಎಗ್ಗಿಲ್ಲದೆ ಸಾಗಿತ್ತು, ಆರಂಭದ ಹಂತದಲ್ಲಿ ನಕ್ಸಲ್ ವಾದ ಹುಟ್ಟಿ ಕೊಂಡದ್ದು
ಈ ಸಾಮಾಜಿಕ ಸ್ಥಿತಿ ಗತಿಗಳ ಉಪ ಉತ್ಪನ್ನವಾಗಿರಬಹುದು ಆದರೆ ಕಾಲ
ಕ್ರಮೇಣ ಕಳ್ಳಸಾಗಣೆ , ಮಾದಕ ವಸ್ತು ಮಾರಾಟ
, ಸುಲಿಗೆ ಇಂತಹ ಸಮಾಜಘಾತುಕ ಕೃತ್ಯದಲ್ಲಿ
ತೊಡಗಿಸಿಕೊಂಡಿದ್ದು ನಕ್ಸಲ್ ವಾದಕ್ಕೆ ಯಾವುದೇ ರಿಯಾಯಿತಿ ಇಲ್ಲದಂತೆ ಮಾಡಿತು. ಈ ನಿಟ್ಟಿನಲ್ಲಿ ಅಂದಿನ
ಗ್ರಹ ಮಂತ್ರಿ ಪಿ ಚಿದಂಬರಂ ಆಪರೇಷನ್
ಗ್ರೀನ್ ಹಂಟ್ ಗು ಚಾಲನೆ
ನೀಡಿದ್ದರು, ಆದರೆ ಅದು ಸಮಾಜದ
ಕೆಲವು ಭುದ್ದಿ ಜೀವಿಗಳಿಗೆ ಪಚಿಸಲಿಲ್ಲ. ಸಾಕೇತ್ ರಾಜ್ ಎಂಬ ನಕ್ಸಲ್
ನಾಯಕನ ಎನ್ಕೌಂಟರ್ ಆದಾಗ ಗೌರಿ ಲಂಕೇಶ್
ತೆಹಲ್ಕಾ ಎಂಬ ಪತ್ರಿಕೆಯಲ್ಲಿ ಪುಟಗಳಷ್ಟು
ಅಶ್ರುತರ್ಪಣ ಸಲ್ಲಿಸಿದರು. ಅನಂತ ಮೂರ್ತಿಗಳಂತಹ ಅನಂತ
ಮೂರ್ತಿಗಳೇ ಶ್ರದ್ಧಾಂಜಲಿ ಅರ್ಪಿಸುವ ಘಟನೆ ನಡೆಯಿತು. ಅಷ್ಟೇ
ಅಲ್ಲ ಅಂದಿನ ಮುಖ್ಯ ಮಂತ್ರಿ ಧರ್ಮ ಸಿಂಗ ಅವರಿಗೆ ಸಿಟಿಜನ್
ಎಂಟಿಟಿ ಫಾರ್ ಪೀಸ್ ಎಂಬ
ಸಂಸ್ಥೆ ಸಾಕೇತ್ ರಾಜನ ಕಳೆಬರಹವನ್ನು ತಮಗೊಪ್ಪಿಸಬೇಕೆಂದು
ಒತ್ತಡ ತಂದಿತ್ತು.
ಅದೇನೇ
ಇರಲಿ ಭಾರತ ಹೊರಗಿರುವ ಶತ್ರುವಿಗೆ ಉತ್ತರ ಕೊಟ್ಟಂತೆ ದೇಶದೊಳಗಿರುವ ಆಂತರಿಕ ಶತ್ರುಗಳನ್ನು ಮೂಲದಿಂದಲೇ
ಕಿತ್ತಸೆಯುವತ್ತ ಹೆಜ್ಜೆ ಇಟ್ಟಿದೆ. 2019 ರಲ್ಲಿ ಅಮಿತ್ ಶಾ ಗ್ರಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ
ಸಂಧರ್ಭದಲ್ಲಿ ಕಾಶ್ಮೀರದ ಉಗ್ರರ ಸಮಸ್ಯೆಯಷ್ಟೇ ನಕ್ಸಲ್ ಸಮಸ್ಯೆಯು ಮೈದೆಳೆದಿತ್ತು. ಆಗ ಅಮಿತ್ ಶಾ
ಆಡಳಿತ ಯಂತ್ರಕ್ಕೆ ಕಾಶ್ಮೀರದೊಂದಿಗೆ ನಕ್ಸಲ್ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲು ತಾಕೀತು ಮಾಡಿತು
ಪರಿಣಾಮವಾಗಿ 2023 ರ ಆಸು ಪಾಸಿನಲ್ಲಿ ಆಂಧ್ರ , ತೆಲಂಗಾಣ , ಒಡಿಶಾ , ಬಿಹಾರ್ , ಝಾರ್ಕಂಡ್ ಹಾಗು
ಮಧ್ಯಪ್ರದೇಶ ಈ ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆಗಳು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದವು, ಇದೀಗ ಮೇ 20 ರಂದು
ಆಪರೇಷನ್ ಕಗಾರ ದ ಭಾಗವಾಗಿ ಛತ್ತೀಸಘಡ್ನ ಕರೆಗುಟ್ಟಾ ಗುಡ್ಡ ಗಾಡಿನಲ್ಲಿ ನಡೆದ ನಕ್ಸಲ್ ಎನಕೌಂಟರ್ನಲ್ಲಿ
27 ಕ್ಕೂ ಹೆಚ್ಚು ನಕ್ಸಲರೊಂದಿಗೆ ನಕ್ಸಲರ ಪ್ರಧಾನ
ಕಾರ್ಯದರ್ಶಿ ಬಸವರಾಜು ಉರ್ಫ್ ನಂಬಲ ಕೇಶವ ರಾವ್ ನನ್ನು ಹೊಡೆದುರಳಿಸುವ ಮೂಲಕ ಸರ್ಕಾರಕ್ಕೆ ಅತಿ ದೊಡ್ಡ
ಯಶಸ್ಸು ದೊರಕಿದೆ. ಈ ಜಯ ನಕ್ಸಲಬಾರಿಯ ಕೊನೆಯ ಚರಣಕ್ಕೆ ನಾಂದಿ ಹಾಡಿದೆ ಎಂದರೆ ತಪಿಲ್ಲ. ಒಟ್ಟಿನಲ್ಲಿ
ಅಮಿತ್ ಶಾ ಪಟೇಲರ ನಂತರ ಅವರ ಮಾರ್ಗದಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಹಾಗಾಗಲಿ ಭಾರತಕ್ಕೀಗ
ಮತ್ತೊಬ ಉಕ್ಕಿನ ಮನುಷ್ಯನ ಅವಶ್ಯಕೆತೆಯಿದೆ.
https://epaper.samyukthakarnataka.com/editionname/Bangalore/SMYK_BANG/page/8/article/SMYK_BANG_20250602_08_4
ಕಾರ್ತಿಕ್
ಎಸ್ ಬಾಪಟ್
Picture Courtesy: Air India Radio





