Wednesday, June 26, 2024

 ಅಮರಾವತಿ ಕಲ್ಯಾಣದತ್ತ ಹೆಜ್ಜೆ 

                                                                                 ಕಾರ್ತಿಕ್ ಎಸ್ ಬಾಪಟ್



ಕಿಕ್ಕಿರಿದ ಜನಸ್ತೋಮ , ನೆರೆದಿದ್ದ ಜನರಲ್ಲೊಂದು ಉದ್ವೇಗ, ಭರವಸೆ  ಸುತ್ತ ಮುತ್ತ ಪೊಲೀಸ್ ವಾಹನ , ನೆರೆದಿದ್ದ ಜನೋತ್ಸಮದಿಂದ ಆಗಾಗ್ಗೆ ಕೇಳುತ್ತಿದ್ದ ಜೈ ಘೋಷ, ನೆಚ್ಚಿನ ನಾಯಕ ಕೊನಿಡೇಲ ಕಲ್ಯಾಣ ಬಾಬುರನ್ನು ನೋಡುತ್ತಿದಂತೆ ಜೈ ಜೈ ಜಯ ಸೇನಾ ಎಂದು ಮುಗಿಲು ಮುಟ್ಟುತ್ತಿದ್ದ ಜೈ ಘೋಷ ಇದೆಲ್ಲವೂ ಯಾವುದೊ ಚಲನ ಚಿತ್ರದ ಇಂಟ್ರೊಡಕ್ಷನ್ ಸೀನ್ ಅಲ್ಲ ಕೆಲವೇ ಕೆಲವು ತಿಂಗಳ ಹಿಂದೆ ಮುಕ್ತಯವಾದ ಆಂಧ್ರದ ಚುನಾವಣಾ ಸಭೆಗಳಲ್ಲಿ ಹಾಗು ರ‍್ಯಾಲಿಗಳಲ್ಲಿ ಕಂಡು ಬಂದ ದೃಶ್ಯ. ದಕ್ಷಿಣ ಭಾರತದಲ್ಲಿ ಅದರಲ್ಲೂ ಆಂಧ್ರ , ತೆಲಂಗಾಣ ಹಾಗು ತಮಿಳುನಾಡಿನಲ್ಲಿ ಚಲನ ಚಿತ್ರ ನಟರನ್ನು ಆರಾಧಿಸುವ ಪರಿ ಯಾರನ್ನಾದರೂ ಬೆಕ್ಕಸ ಬೆರಗಾಗಿಸುತ್ತದೆ ಹಾಗು ಮೆಚ್ಚಿನ ಅಭಿಮಾನಿಗಳನ್ನು ನೆಚ್ಚಿ ರಾಜಕೀಯಕ್ಕೆ ಬಂದವರಲ್ಲಿ ಕೊನಿಡೇಲ ಕಲ್ಯಾಣ ಬಾಬು ಅಂದರೆ ಪವನ್ ಕಲ್ಯಾಣ  ಮೊದಲಿಗರಂತೂ ಅಲ್ಲವೇ ಅಲ್ಲ  ತಮಿಳುನಾಡಿನಲ್ಲಿ ಎಂಜಿ ರಾಮಚಂದ್ರನ್ (ಎಂಜಿಆರ್)  ಆಂಧ್ರಪ್ರದೇಶದಲ್ಲಿ   ನಂದಮೂರಿ ತಾರಕ ರಾಮರಾವ್ (ಎನ್‌ಟಿಆರ್) ಮತ್ತು ಚಿತ್ರಕಥೆ ಬರಹಗಾರ ಮತ್ತು ಕವಿ ಎಂ ಕರುಣಾನಿಧಿ ಇವರೆಲ್ಲರೂ  ಅಭಿಮಾನಿಗಳ ಭರವಸೆಯ ಮೇಲೆಯೇ ರಾಜಕೀಯಕ್ಕೆ ಧುಮುಕಿ ಆ ರಾಜ್ಯದ  ಮುಖ್ಯ ಮಂತ್ರಿ  ಹುದ್ದೆಯನ್ನು ಅಲಂಕರಿಸಿದವರು, ಕೆಲವೇ ವರುಷಗಳ ಹಿಂದೆ  ರಜನಿಕಾಂತ್ ಕೂಡ  ರಾಜಕೀಯದತ್ತ ವಾಲಿದರು ಕಾರಣಾಂತರಗಳಿಂದ  ರಾಜಕೀಯದಿಂದ ದೂರವಿರುವ  ನಿರ್ಣಯವನ್ನು ಕೈಗೊಂಡರು, ಇತ್ತೀಚಿಗೆ ಕಮಲ್ ಹಾಸನ್ ಕೂಡ ರಾಜಕೀಯದ ರಂಗ ಪ್ರವೇಶ ಮಾಡಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಲೇ  ಇದ್ದಾರೆ ಇವರೊಂದಿಗೆ  ಪವನ್ ಕಲ್ಯಾಣ ಅಣ್ಣ  ಮೆಗಾಸ್ಟಾರ್ ಚಿರಂಜೀವಿ ಕೂಡ ಪ್ರಜಾರಾಜ್ಯಂ ಎಂಬ ಪಕ್ಷ ಕಟ್ಟಿ ಅದನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸುದ್ದು ಈಗ ಇತಿಹಾಸ.

 ಹಾಗೆ ನೋಡಿದರೆ ಪವನ್ ಕಲ್ಯಾಣ ರಾಜಕೀಯ ಪ್ರವೇಶ ನಿನ್ನೆ ಮೊನ್ನೆಯದಲ್ಲ ಮೆಗಾಸ್ಟಾರ್ ಚಿರಂಜೀವಿ  ಪ್ರಜಾರಾಜ್ಯಂ ಪಕ್ಷ ಕಟ್ಟಿದಾಗ ಯುವ ವಿಭಾಗದ ಚುಕ್ಕಾಣಿ ಹಿಡಿದಿದ್ದು ಪವನ್ ಕಲ್ಯಾಣ, ಆದರೆ  ಎನ್‌ಟಿಆರ್ ಅವರಿಗೆ ದಕ್ಕಿದ ರಾಜಕೀಯ ಯಶಸ್ಸು ಚಿರಂಜೀವಿ ಗೆ ದಕ್ಕಲಿಲ್ಲ 2009 ರಲ್ಲಿ ಅವಿಭಜಿತ ಆಂಧ್ರದಲ್ಲಿ ನಡೆದ ಚುನಾವಣೆಯಲ್ಲಿ  ವೈ ಎಸ್ ಆರ್ ಅಲೆಯ ಮುಂದೆ 294 ಸ್ಥಾನಗಳಲ್ಲಿ ಪ್ರಜಾರಾಜ್ಯಂ ಗೆದ್ದಿದ್ದು ಕೇವಲ 18 ಸ್ಥಾನಗಳನ್ನು ಆದರೆ 16 % ವೋಟ್ ಶೇರ್ ಪಡೆದಿತ್ತು ಇದು ಕಡಿಮೆ ಸಾಧನೆಯಾಗಿರಲಿಲ್ಲ ಆದರೆ ರಾಜಕೀಯದಲ್ಲಿ ಇರಲೇಬೇಕಾದ ಗುಣ ಎಂದರೆ ತಾಳ್ಮೆ. ಬಿ ಎಸ್ ಪಿ ಯ ಸಂಸ್ಥಾಪಕರು ಹಾಗು ನಾಯಕರು ಆದ ಕಾನ್ಷಿರಾಮ್    ತಮ್ಮ ಕಾರ್ಯಕರ್ತರಿಗೆ  ಹೇಳುತ್ತಿದ್ದರಂತೆ ಮೊದಲ ಚುನಾವಣೆ ಸೋಲಲ್ಲೆಂದೆ ನಿಲ್ಲಬೇಕು , ಎರಡನೇ ಚುನಾವಣೆ ಸೋಲಿಸಲು ನಿಲ್ಲಬೇಕು ಹಾಗಾದಾಗ ಮೂರನೇ ಚುನಾವಣೆಯಲ್ಲಿ ಗೆಲವು ಕಟ್ಟಿಟ್ಟ ಬುತ್ತಿ ನಿಮ್ಮಿಂದ ಗೆಲುವನ್ನು ಯಾರು ಕಿತ್ತುಕೊಳ್ಳಲಾರರು, ಅಂದರೆ  ಸೋತರು ಸೋತಲ್ಲೆ ಮತ್ತೆ ಮತ್ತೆ ಕ್ಷೇತ್ರದಲ್ಲಿ ಸಂಪರ್ಕದಲ್ಲಿರಬೇಕು , ಸಮಸ್ಯೆಗಳ ದನಿಯಾಗಬೇಕು, ಜನರೊಡನೆ ಬೆರೆಯಬೇಕು ಆಗ ಜನರಿಗೆ ಛೆ ಸೋಲಿಸಿಬಿಟ್ಟೆವಲ್ಲ ಎಂಬ ಸಣ್ಣ ಪಶ್ಚಾತಾಪ ಮೂಡಿ  ಸಹಾನುಭೂತಿ ಸೃಷ್ಟಿಯಾಗಬೇಕು ಆಗ ಗೆಲುವು ಕಟ್ಟಿಟ್ಟ ಬುತ್ತಿ ಎಂಬುದು ಇದರ ತಾತ್ಪರ್ಯ. ಬಹುಷಃ ಪವನ್ ಇವೆಲ್ಲವನ್ನೂ ಅಣ್ಣನೊಡನೆ ಇದ್ದು ಗಮನಿಸಿದ್ದರಬೇಕು ಆದ್ದರಿಂದಲೇ ಚಿರಂಜೀವಿ 2014 ರಲ್ಲಿ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್ ನೊಂದಿಗೆ ವಿಲೀನ ಗೊಳಿಸಿದರೂ  ಪವನ್ ಮಾತ್ರ ಕಾಂಗ್ರೆಸ್ ಸೇರಲಿಲ್ಲ ಕಾಂಗ್ರೆಸ್ ಸೇರದೆ ಬೇರೆ ಪಕ್ಷ ಸೇರಿದರೆ ಎಲ್ಲಿ ಅಣ್ಣನಿಗೆ ನೋವಾಗುವದೋ ಎಂದು ಬೇರೆಯೇ ಪಕ್ಷಕ್ಕೂ ಸೇರಲಿಲ್ಲ , ಒಂದಿಷ್ಟು ಕಾಲ ರಾಜಕೀಯದಿಂದ ದೂರವಿದ್ದು ಮತ್ತೆ ರಾಜಕೀಯ ಪ್ರವೇಶಿಸಿದ್ದು ಜನಸೇನಾ ಪಕ್ಷವನ್ನು ಸ್ಥಾಪಿಸಿದ ನಂತರವೇ.

 ಹೀಗೆ ಜನಸೇನಾ ವನ್ನು ಹುಟ್ಟು ಹಾಕಿದ ಮೇಲೆ ಪವನ್ ಹಾದಿಯೇನು ಅಷ್ಟೊಂದು  ಸುಗಮವಾಗಿರಲಿಲ್ಲ ಪಕ್ಷವನ್ನು ಹುಟ್ಟು ಹಾಕಿದ ನಂತರ 2019 ರಲ್ಲಿ  ಪವನ್ ಅಷ್ಟೇ ಅಲ್ಲ ಟಿ ಡಿ ಪಿ ಯ ನಾಯ್ಡುಗರು ಕೂಡ ಜಗನ್ ಅಬ್ಬರದ ಮುಂದೆ ಸೋಲಪ್ಪಿಕೊಳ್ಳಬೇಕಾಯಿತು, ಕೆಲವರಂತೂ ಅಣ್ಣನಂತೆ ತಮ್ಮನು ಸೋತು ಸುಣ್ಣವಾದನು ಇನ್ನೇನು  ಕೊನಿಡೇಲ ಕುಟುಂಬದ ರಾಜಕೀಯ ಪಯಣ ಅಂತ್ಯವಾದಂತೆ ಎಂದರು  ಆದರೆ ಒಬ್ಬ ಕಮೇಡಿಯನ್ ಗೆ ಹೇಗೆ ಟೈಮಿಂಗ್ ಮುಖ್ಯವೋ ರಾಜಕೀಯದಲ್ಲೂ ಅಷ್ಟೇ ಟೈಮಿಂಗ್ ಅಷ್ಟೇ ಮಹತ್ತರವಾದದ್ದು, 2023 ಸೆಪ್ಟೆಂಬರ್ ತಿಂಗಳಲ್ಲಿ ಅಂದಿನ ಆಂಧ್ರ ಸರ್ಕಾರ ಚಂದ್ರ ಬಾಬು ಅವರನ್ನು ಬಂಧಿಸುವಂತೆ  ಆದೇಶಿಸಿತು, ಚಂದ್ರ ಬಾಬು ನಾಯ್ಡು ಗೆ ಸಂಬಂಧವೇ ಇಲ್ಲದ ಕೇಸಿನಲ್ಲಿ ಬಂಧಿಸುವಂತೆ ಜಗನ್ ಸರ್ಕಾರ ಆದೇಶಿಸಿತು ಎಂಬುವುದು ಕೆಲವರ ವಾದ ಅದೇನೇ ಇರಲಿ ರಾಜಕೀಯದಲ್ಲಿ ಬಂಧನಕ್ಕೊಳಗಾದರು ಕೂಡ ಅದೊಂದು ಇಮೇಜ್ ಸೃಷ್ಟಿ ಮಾಡಿ ಸಹಾನುಭೂತಿ ಸೃಷ್ಟಿಸುತ್ತದೆ ಅದು ಸರಿಯೋ ತಪ್ಪೋ ಎನ್ನುವ ವಿಚಾರ ಒತ್ತಟ್ಟಿಗಿರಲಿ. ಈ ರೀತಿಯ ಎಕಾಏಕಿಯಾ ನಿರ್ಧಾರವನ್ನು ವಿರೋಧಿಸಿ ಪವನ್  ನಾಯ್ಡು ಅವರನ್ನು ಭೇಟಿಯಾಗಲು ರಾಜಮುಂಡ್ರಿ ಜೈಲ್ ಗೆ ಹೋಗುವುದಾಗಿ ಘೋಷಿಸಿ ಅತ್ತ ಪಯಣ ಬೆಳೆಸಿದರು. ಆದರೆ  ಜಗನ್ ಸರ್ಕಾರ  ಪವನ್ ರನ್ನು ಭೇಟಿಯಾಗಲು ಬಿಡದೆ ಮಾರ್ಗ ಮಧ್ಯದಲ್ಲೇ ತಡೆಯೊಡ್ಡಿತು , ಪವನ್ ಈ ಸಂಧರ್ಭದಲ್ಲಿ ಛಲ ಬಿಡದೆ ಆಂಧ್ರ ಹಾಗು ತೆಲಂಗಾಣದ ಸರಹದ್ದಿನಲ್ಲಿ ಜಗ್ಗಯ್ಯಪೇಠಾ ಎಂಬುವಲ್ಲಿ ರಾತ್ರಿ ಎಂಬುದನ್ನು ಲೆಕ್ಕಿಸದೆ ರಸ್ತೆಯ ಮೇಲೆ ನಿದ್ರಿಸಿ ಪ್ರತಿರೋಧ ಒಡ್ಡಿದ್ದರು ಈ ಚಿತ್ರ ಕ್ಷಣ ಮಾತ್ರದಲ್ಲಿ ಆಂಧ್ರ ಹಾಗು ತೆಲಂಗಾಣದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತ್ತು , ಅದಾಗಲೇ ನಾನಾ ಕಾರಣಗಳಿಗೆ ಜಗನ್ ವಿರುದ್ಧ ಅಕ್ರೋಷಗೊಂಡಿದ್ದ ಜನರಿಗೆ ಜಗನ್ ವಿರುದ್ಧ ತೊಡೆ ತಟ್ಟಿ ನಿಲ್ಲುವ ಶಕ್ತಿ ಯೊಂದು ಬೇಕಿತ್ತು, ಬಹುಶ ಆ ರಾತ್ರಿಯೇ ಆಂಧ್ರದ ಜನತೆ ಪವನ್ ಗೆಲುವು ಹಾಗು ಅಮರಾವತಿಯ ಕಲ್ಯಾಣಕ್ಕೆ ನಿರ್ಧರಿಸಿಬಿಟ್ಟಿರಬೇಕು ಕೊನೆಗೂ  ಜಗನ್ ಸರ್ಕಾರ ಪವನ್ ಗೆ ಮಣಿದು ನಾಯ್ಡು ಅವರನ್ನು ಭೇಟಿ ಮಾಡಲು ಅವಕಾಶ ಕೊಟ್ಟಿತು , ಭೇಟಿ ಮಾಡಿ ಬಂದ ನಂತರ ಅಂದೇ ಒಂದು ಬಗೆಯ ಟಿಡಿಪಿ ಹಾಗು ಜನಸೇನೆಯ ಮೈತ್ರಿಯನ್ನು ಪವನ್ ಘೋಷಿಸಿಯೇ ಬಿಟ್ಟರು 2020 ರಿಂದಲೇ ಬಿ ಜೆ ಪಿ ಗೆ ಬೆಂಬಲ ಘೋಷಿಸಿದ್ದ ಪವನ್ ನೇತೃತ್ವದಲ್ಲಿ ಟಿಡಿಪಿ , ಬಿ ಜೆ ಪಿ  ಮತ್ತೊಮ್ಮೆ ಒಂದಾಗುವಂತಾಯಿತು.

 2024 ರ ವಿಧಾನಸಭಾ ಹಾಗು ಲೋಕಸಭಾ  ಚುನಾವಣೆಗೆ   ಜನಸೇನಾ , ಟಿ ಡಿ ಪಿ ಹಾಗು ಬಿ ಜೆ ಪಿ ಒಟ್ಟಾಗಿ ಬರುವ ನಿರ್ಧಾರ ಮಾಡಿತು ಆಡಳಿತ  ವಿರೋಧಿ ಅಲೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು , ಅದೆಲ್ಲದರೊಂದಿಗೆ ಬಹುಷಃ ಆಂಧ್ರದ ಇತಿಹಾಸದಲ್ಲಿಯೇ ಪವನ್ ಕಾರಣಕ್ಕಾಗಿ ಮೊದಲಬಾರಿ ಎಂಬಂತೆ ಕಾಪು ಹಾಗು ಕಮ್ಮ ಸಮಾಜ ಒಟ್ಟಾಗಿ ಮೈತ್ರಿಕೂಟಕ್ಕೆ ಬೆಂಬಲ ನೀಡಿತು, ಟಿ ಡಿ ಪಿ , ಜನಸೇನಾ ಹಾಗು ಬಿ ಜೆ ಪಿ ಭಾರಿ ಜಯದೊಂದಿಗೆ ಅಧಿಕಾರಕ್ಕೇರಿ ಚಂದ್ರಬಾಬು ಇದೀಗ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ    ಚುನಾವಣೆಯ ಮ್ಯಾನ್ ಆ ದಿ ಮ್ಯಾಚ್ ಆಗಿ ಹೊರ ಹೊಮ್ಮಿದ  ಪವನ್ ಉಪ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ, ಅಣ್ಣ ಚಿರಂಜೀವಿಯ ಖುಷಿಗಂತೂ ಪಾರವಿಲ್ಲ ಅದೆಲ್ಲದರ ನಡುವೆ ಮೋದಿಜಿ ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ ಪವನ್ ಹಾಗು ಚಿರಂಜೀವಿ ಸಹೋದರರ ಕೈ ಮೇಲೆ ಎತ್ತಿ ಹಿಡಿದಿದ್ದು ಇದರಲ್ಲೇನೋ ತೆಲಂಗಾಣದ ರಾಜಕೀಯದ ಸೂಚನೆಗಳು ಕಂಡು ಬರುತ್ತಿದೆ ಎಂದು ಎಲ್ಲರೂ ವಿಮರ್ಶಿಸುತ್ತಿದರೆ ಅದೇನೇ ಇರಲಿ ಈ  ಬಾರಿ ಮಾತ್ರ ಪವನ್ ಕಲ್ಯಾಣ್  ಅವರ ಪ್ರತಿಯೊಂದು ನಡೆಯು ರಾಜಕೀಯವೆಂಬ  ನಿರಂತರ ಪ್ರಯೋಗ ಶಾಲೆಯಲ್ಲಿ ಪರಿಪಕ್ವಗೊಂಡ ಚತುರ ನಾಯಕನೊಬ್ಬನ  ಜಾಣ್ಮೆಯ ನಡೆಯಂತೆ ಕಂಡು ಬರುತ್ತಿತ್ತು , ಪ್ರತಿ ಹೆಜ್ಜೆಯು ಅಳೆದು ತೂಗಿ ಇಟ್ಟಂತಿತ್ತು , ಪವನ್ ಭಾಷಣವನ್ನು ಕೇಳಿದವರಂತೂ  ಒಂದು ರೀತಿಯ ಆವೇಶಕೊಳಗಾದವರಂತೆ ಕಾಣುತ್ತಿದ್ದರು ಅಂತಹ ಆಕರ್ಷಕ ಭಾಷಣಗಳು ಹಲೋ ಏ ಪಿ ಬೈ ಬೈ ವೈ ಸಿ ಪಿ ಎಂಬ ಘೋಷಣೆಗಳು ಆಂಧ್ರದ ಮೂಡನ್ನೇ ಬದಲಾಯಿಸಿಬಿಟ್ಟಿದವು   ಪರಿಣಾಮವಾಗಿ  ಈ ಬಾರಿಯ ಆಂಧ್ರದ ಚುನಾವಣೆಯನ್ನು ಪವನ್ ಬ್ಲಾಕ್ ಬ್ಲಾಸ್ಟರ್ ಮೂವಿಯನ್ನಾಗಿಸಿದರು, ಆದರೆ ಇಷ್ಟು ದಿನಗಳ ವಿಷಯವೇ ಬೇರೆ ನಿಜವಾದ ಸವಾಲುಗಳು ಪ್ರಾರಂಭವಾಗುವುದು ಆಡಳಿತ ಪಕ್ಷದಲ್ಲಿದ್ದಾಗಲೇ ಆದ್ದರಿಂದ ಎಲ್ಲರ ದೃಷ್ಠಿ ಪವನ್ ರತ್ತ ನೆಟ್ಟಿದೆ.  ಆಂಧ್ರದ ಜನತೆ ಹೊಸ ರಾಜಧಾನಿ ಅಮರಾವತಿಯ ಕಲ್ಯಾಣದ ನೀರಿಕ್ಷೆಯಲ್ಲಿದ್ದಾರೆ.




Saturday, June 8, 2024

ವಾಜಪೇಯಿ ಯುಗಕ್ಕೆ ಕ್ಷಣಗಣನೆ, ಅಡ ಕತ್ತರಿಯಲ್ಲಿ ಮೋದಿ ಗ್ಯಾರಂಟೀ? 
                                                                                                                        ಕಾರ್ತಿಕ್ ಎಸ್ ಬಾಪಟ್.

ಈ ಬಾರಿಯ ಚುನಾವಣೆ ಪ್ರಕ್ರಿಯೆಯೇ ಒಂದು ರೀತಿಯಲ್ಲಿ ನೀರಸವಾಗಿತ್ತು ಬರೋಬ್ಬರಿ ಎರಡು ಎರಡೂವರೆ ತಿಂಗಳು ನಡೆದ ಚುನಾವಣೆ ಒಂದು ರೀತಿ ಟೆಸ್ಟ್ ಮ್ಯಾಚ್ ಗಳಂತೆ ಭಾಸವಾಗುತಿತ್ತು. ಚುನಾವಣೆಗಳ ನಂತರ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿ ಹೆಚ್ಚು ಬಿಸಿಲಿದ್ದಿದ್ದದ್ದು ಸ್ವಲ್ಪ ತೊಡಕಾಗಿ ಪರಿಣಮಿಸಿತು ಇದು ನಮಗೆ ಕಲಿಕೆ ಇದ್ದಂತೆ ಎಂದು ಹೇಳಿದ್ದು ನಿಜಕ್ಕೂ ಹಾಸ್ಯಾಸ್ಪದವಾಗಿತ್ತು. ಭಾರತದಂಥ ಭೌಗೋಳಿಕ ಭಿನ್ನತೆಯನ್ನು ಹೊಂದಿರುವ ದೇಶದಲ್ಲಿ ಚುನಾವಣಾ ಆಯೋಗಕ್ಕೆ ಮಳೆ , ಬಿಸಿಲು , ಚಳಿಗಾಲ ಹಾಗು ಮಳೆಗಾಲದ ಅರಿವಿಲ್ಲವೆಂದರೆ ಹೇಗೆ  ಕರ್ನಾಟಕದಂತಹ ರಾಜ್ಯದಲ್ಲಿ  ಎರಡು ಚರಣಗಳಲ್ಲಿ ಚುನಾವಣೆ , ತಮಿಳುನಾಡಿನಂತಹ ರಾಜ್ಯದಲ್ಲಿ  ಒಂದೇ ಚರಣದಲ್ಲಿ ಚುನಾವಣೆ  ಹೀಗೆ ಚುನಾವಣಾ ಆಯೋಗದ ನಿರ್ಧಾರ ತರ್ಕಕ್ಕೆ ನಿಲುಕದ ವಿಷಯ, ಇದೇ ರೀತಿ ಹಲವು ಸಂಸ್ಥೆಗಳು ನಡೆಸಿದ  ಚುನಾವಣಾ ಪೂರ್ವ ಹಾಗು ಚುನಾವಣೋತ್ತರ ಸಮೀಕ್ಷೆಗಳು     ಬಿಜೆಪಿ ಪರ ತೋರಿದ  ಸಂಖ್ಯಾ ಧಾರಾಳತನ ನಿಜಕ್ಕೂ ಅಚ್ಚರಿಯೇ ಸರಿ, ಎರಡನೇ ಚರಣದ  ನಂತರವೇ ಅಲ್ಲಲ್ಲಿ ಇದು ಇಂಡಿಯಾ ಶೈನಿಂಗ್ ರೀತಿಯ ಚುನಾವಣೆ ಆಗುತ್ತಿದೆ ಎಂದು ಹಲವಾರು ಹಿರಿಯ ಪತ್ರಕರ್ತರು ಅಭಿಪ್ರಾಯಪಟ್ಟಾಗ  ಎಕ್ಸಿಟ್ ಪೊಲ್ ಸಂಸ್ಥೆಗಳು ಕ್ಯಾರೇ ಅನ್ನಲಿಲ್ಲ ಎಲ್ಲರೂ ಕುದರೆಯಂತೆ 370 ಪ್ಲಸ್ ಜಪ ಮಾಡಿದರು ಸಾಮಾನ್ಯವಾಗಿ 10 ಭಿನ್ನ ಭಿನ್ನ ಸಂಸ್ಥೆಗಳ  ಚುನಾವಣೋತ್ತರ ಸಮೀಕ್ಷೆಗಳು  ಹೊರಬಂದರೆ  ಅವುಗಳಲ್ಲಿ 5 ರಿಂದ 7 ಒಂದು ದಿಶೆಯನ್ನು ತೋರಿಸಿದರೆ ಇನ್ನುಳಿದ ಮೂರು ಸಮೀಕ್ಷೆಗಳು  ಇನ್ನೊಂದು ದಿಶೆ ತೋರಿಸುತ್ತಿದ್ದವು ಆದರೆ ಈ ಬಾರಿ ಎಲ್ಲವೂ ಒಂದೇ ದಿಶೆಯಲ್ಲಿದ್ದವು ,  ಸಮೀಕ್ಷೆಗಳು ನಿಖರವಾಗಿರಬೇಕೆಂದು ಯಾರು ಬಯಸುವುದಿಲ್ಲ ಆದರೆ ಅವುಗಳು ಫಲಿತಾಂಶದ ಆಸು ಪಾಸಾದರು ಇರಬೇಕಲ್ಲವೇ ಹಾಗಿರಬೇಕೆಂದು ಬಯಸುವುದಕ್ಕೂ ಕಾರಣಗಳಿವೆ ಇದು ಟೆಕ್ನಾಲಜಿ ಯುಗ ಚುನಾವಣಾ ಸಮೀಕ್ಷೆಗಳು ವೈಜ್ಞಾನಿಕವಾಗಿ ಹಾಗು ಪ್ರಾಮಾಣಿಕವಾಗಿ ನಡೆದಾಗ ನಿಖರವಾಗಿರದಿದ್ದರು ಸನಿಹಕ್ಕಂತೂ ಇರಲೇ ಬೇಕು , ಚುನಾವಣೋತ್ತರ ಸಮೀಕ್ಷೆಗಳು ಬಂದಾಗ ಷೇರು ಮಾರುಕಟ್ಟೆ 2500 ಪಾಯಿಂಟ್ಸ್ ಗಳಷ್ಟು ಪುಟಿದೇಳುತ್ತದೆ ಅದೇ ರೀತಿ  ಫಲಿತಾಂಶ ಬಂದಾಗ 4000 ಪಾಯಿಂಟ್ಸ್ಗಳಷ್ಟು ಧರೆಗಿಳಿಯುತ್ತದೆ ಎಂದರೆ ಸಮೀಕ್ಷೆಗಳ ಪರಿಣಾಮಗಳೇನೆಂದು ನೀವೇ ಊಹಿಸಿ.

ಇದು ಚುನಾವಣೆ ನಡೆದ ರೀತಿ ಹಾಗು ಸಮೀಕ್ಷೆಗಳ ಸಂಗತಿಯಾದರೆ  ಭಾರತದ ರಾಜಕೀಯ  ಮತ್ತೆ  ವಾಜಪೇಯೀ ಯುಗದತ್ತ ತಿರುಗುತ್ತಿದೆ. ಮೇಲ್ನೋಟಕ್ಕೆ ಮೋದಿ 3.೦ ಸರ್ಕಾರದ ರಚನೆ ಯಾವ ಅಡೆತಡೆಗಳಿಲ್ಲದೆ  ರಚನೆಯಾಯಿತು ಎಂದು ಭಾಸವಾಗುತ್ತಿದೆ ಆದರೆ ಹೀಗೆ ರಚನೆಯಾದ ಸರ್ಕಾರ ಎಷ್ಟು ದಿನ ಬಾಳುವುದು ಎಂಬುದು ಮಾತ್ರ ನಿತೀಶ್ ಬಾಬು ಹಾಗು ಚಂದ್ರಬಾಬು ಇವರಿಬ್ಬರ  ಮರ್ಜಿಯ ಮೇಲೆ ನಿರ್ಧರಿತವಾಗುತ್ತದೆ , ಹಾಗೆ ನೋಡಿದರೆ ಈ ಇಬ್ಬರು ಬಾಬುಗಳಿಗೆ ಸಮ್ಮಿಶ್ರ ಸರ್ಕಾರಗಳು ಮತ್ತು ಅದರ ಕಾರ್ಯವೈಖರಿ ಯಾವುದು ಹೊಸದಲ್ಲ ಆದರೆ ಮೋದಿಯವರಿಗೆ ಇದು ಹೊಸ ಅಧ್ಯಾಯ , ಕಾರಣವಿಷ್ಟೇ ಗುಜರಾತಿನಿಂದಾದಿಯಾಗಿ  ದೆಹಲಿಯವರೆಗೆ ಮೋದಿ ಆಡಳಿತ ನಡೆಸಿದ್ದು ಪರಿಪೂರ್ಣ  ಬಹುಮತದಲ್ಲಿ ಆದರೆ ಇದೀಗ ಬೆಳಗಾಗೆದ್ದು ಬಾಬುಗಳಿಗೆ ಹಲೋ ಹೇಳಬೇಕು ಮೋದಿಜಿ ಬಾಬುಗಳಿಗಿರಲಿ ತಮ್ಮ ಪಕ್ಷದವರಿಗೆ ಹಲೋ ಹೇಳುವುದಿಲ್ಲ , ಎಂಬುದು ಅವರ ಮೇಲಿರುವ ಅಪವಾದ ಇದು ಸುಳ್ಳೇ ಆಗಿದ್ದರು ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೆಯೋ ಈ ರೀತಿಯ ಅಭಿಪ್ರಾಯಗಳು ರೂಪುಗೊಳ್ಳುತ್ತಿರುತ್ತವೆ ಪ್ರಸ್ತುತ ಸನ್ನಿವೇಶದಲ್ಲಂತೂ ಅದನ್ನು ಬದಲಾಯಿಸುವುದು ಬಲು ಕಷ್ಟ, ಅಷ್ಟಲ್ಲದೇ ಅಟಲ್ ಜಿ ಕಾಲದ  ಏನ್ ಡಿ ಏ ಮಿತ್ರ ಪಕ್ಷಗಳಿಗೂ ಈಗಿನ ಏನ್ ಡಿ ಏ ಮಿತ್ರ ಪಕ್ಷಗಳಿಗೂ  ಬಹಳಷ್ಟು ವ್ಯತ್ಯಾಸವಿದೆ ಆಗ ಏನಕೇನ ಅಕಾಲಿ ದಳ , ಬಾಳಸಾಹೇಬರ  ಶಿವಸೇನಾ ಇವರೆಲ್ಲರೂ ನ್ಯಾಚುರಲ್ ಅಲಯನ್ಸ್ ನಂತೆ ಇದ್ದವರು ಅಂದರೆ ಸ್ವಾಭಾವಿಕ ಮಿತ್ರರರು ಅವರು  ಅಧಿಕಾರ ಇದ್ದರು ಇಲ್ಲದಿದ್ದರೂ ಜೊತೆಗಾರರಾಗಿದ್ದವರು ಆದರೆ ಇಂದಿನ  ಜೊತೆಗಾರರು  ಇ ಡಿ ಅಥವಾ ಇನ್ಯಾವುದೋ ತನಿಖಾ ಸಂಸ್ಥೆಯ ಹಂಗಿಗೆ ಬೆಸುಗೆ ಗೊಂಡವರು ಬಲವಂತದ ಬೆಸುಗೆಗೆ ಬಿರುಕನ್ನು ತಾಳುವ ಶಕ್ತಿಯಿರುವುದಿಲ್ಲ  ಹಾಗು ಬೆಸುಗೆಯ ಮುನ್ನ ಕಬ್ಬಿಣವನ್ನು ಕಾಯಿಸಿದ ಪರಿ ಬಹಳ ಮುಖ್ಯ ಆ ಜೊತೆಗಾರರಿಗೆ ಆ ನೆನಪು ಮಾಸಿದ್ದರೆ ಚಿಂತೆಯಿಲ್ಲ ಅದೇನಾದರೂ ಮಾಸದೆ ಬೆಸುಗೆಯ ಗಾಯಗಳು ತಾಜಾ ಇದ್ದರೆ ಏನ್ ಡಿ ಏ ಸರ್ಕಾರ ಹಾಗು ಮೋದಿ ಗ್ಯಾರಂಟೀಗಳು ಅಡ ಕತ್ತರಿಯಲ್ಲಿಸಿಕ್ಕು ಒದ್ದಾಡಲಿವೆ. ಬಾಬುಗಳ ಮರ್ಜಿಯಲ್ಲಿ ಮೋದಿ ಗ್ಯಾರಂಟೀಗಳು ಮರೆಯಾಗಿ ಕಾಮನ್ ಮಿನಿಮಂ ಗ್ಯಾರಂಟೀಗಳು ತಲೆಯೆತ್ತಲಿವೆ , ಇದಿಷ್ಟೇ ಆದರೆ ತೊಂದರೆಯಿಲ್ಲ ಇಬ್ಬರು ಬಾಬುಗಳು ಒಳ್ಳೆಯ ಚೌಕಾಸಿ ನಿಪುಣರೆ ಆದ್ದರಿಂದ ಯಾರು ಯಾವ ವಿಷಯದಲ್ಲಿ ತಗಾದೆ ತೆರೆಯುತ್ತಾರೆ ಎಂದು ಹೇಳುವುದು ಕಷ್ಟ . ಹಿಂದೊಮ್ಮೆ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಚಂದ್ರ ಬಾಬು ನಾಯ್ಡು ಏನ್ ಡಿ ಏ ಸಂಚಾಲಕರಾಗಿದ್ದ ನೆನಪು ಆಗ ಚಂದ್ರ ಬಾಬು ನಾಯ್ಡು 118 ಬೇಡಿಕೆಗಳನ್ನು ಅಟಲ್ ಜಿ  ಮುಂದೆ ಇಟ್ಟಿದ್ದರಂತೆ, ಅದರಲ್ಲಿ 118 ನೆಯ ಬೇಡಿಕೆ  ಇನ್ಶೂರೆನ್ಸ್  ರೆಗ್ಯುಲೇಟರಿ ಅಂಡ್  ಡೆವಲಪ್ಮೆಂಟ್  ಅಥಾರಿಟಿ ಆಫೀಸ್ ಹೈದೆರಾಬಾದ್ನಲ್ಲೇ ಸ್ಥಾಪನೆಯಾಗಬೇಕೆಂಬ ಬೇಡಿಕೆಯಾಗಿತ್ತಂತೆ , ಇನ್ಶೂರೆನ್ಸ್ ಕಂಪನಿಗಳ ಆಫೀಸಗಳು ಮುಂಬೈನಲ್ಲಿದ್ದರೆ  ಅವುಗಳನ್ನು ನಿಯಂತ್ರಿಸುವ ರೆಗ್ಯುಲೇಟರಿ ಸಂಸ್ಥೆ ಮಾತ್ರ  ಹೈದೆರಾಬಾದ್ ನಲ್ಲೆ ಆಗಬೇಕು ಅದಕ್ಕೆ ಕೊಟ್ಟ ಕಾರಣಗಳು ಇಂಟೆರೆಸ್ಟಿಂಗ್ ಇನ್ಶೂರೆನ್ಸ್ ಕಂಪನಿಗಳ ಆಫೀಸರ್ಗಳು ಆಗಾಗ ಹೈದೆರಾಬಾದ್ ಗೆ ಹೋಗಿಬರುವದರಿಂದ  ವಿಮಾನ ಯಾನ ಸಂಸ್ಥೆಗಳಿಗೆ ಒಂದಿಷ್ಟು ವ್ಯಪಾರ ಆಗುತ್ತದೆ ಮತ್ತು ಸಂಬಂಧ ಪಟ್ಟ ವ್ಯಪಾರ ವಹಿವಾಟಿಗೂ ಪ್ರೋತ್ಸಾಹ ದೊರೆಯುತ್ತದೆ , ಹೀಗೆ ಅವರದೇ ವಾದ ಮಂಡಿಸಿದ್ದರು , ಅಟಲ್ ಜಿ ಆ 118 ಬೇಡಿಕೆಗಳಲ್ಲಿ ಬಾಬುಗರು ನಿಮ್ಮ 118 ನೇ ಬೇಡಿಕೆಗೆ ಒಪ್ಪಿಗೆ ಕೊಟ್ಟಿದ್ದೇವೆ ಅಂದಿದ್ದರಂತೆ ಆಗ ಚಂದ್ರಬಾಬು ನೂರಾ ಹದಿನೆಂಟು ಬೇಡಿಕೆಗಳಿಗೂ ಅಸ್ತು ಎಂದಿದ್ದಾರೆ ಎಂದೇ ಭಾವಿಸಿದ್ದರಂತೆ, ಅಂದರೆ ಬದಲಾದ ಸನ್ನಿವೇಶದಲ್ಲಿ ಮಹತ್ತರವಾದ ಖಾತೆಗಳಿಗೆ ಮಿತ್ರ ಪಕ್ಷಗಳು ಬೇಡಿಕೆಯಿಟ್ಟರೆ ಅದರ ಪರಿಣಾಮಗಳು ಏನಾಗಬಹುದು  ಎಂಬುದಕ್ಕೆ ಇದು ನಿದರ್ಶನ.

ಇನ್ನು ನಿತೀಶ್ ಕುಮಾರ್ ಬಗ್ಗೆ ಹೆಚ್ಚೇನೂ ಹೇಳುವ ಅವಶ್ಯಕತೆಯಿಲ್ಲ, ಇತ್ತೀಚಿನ ದಿನಗಳಲ್ಲಿ ಯುವಕರಿಂದಾದಿಯಾಗಿ  ಹಿರಿಯರವರೆಗೂ ಎಲ್ಲರೂ ನಿತೀಶ್ ಕುಮಾರರನ್ನು ಪಲ್ಟು ಚಾಚಾ , ಜಂಪಿಂಗ್ ಸ್ಟಾರ್ ಎಂದು  ಆಡಿಕೊಂಡಿದ್ದೆ  ಆಡಿಕೊಂಡಿದ್ದು ಆದರೆ ಇದೀಗ ನೋಡಿ   ಜಗತ್ತಿನ  ಅತ್ಯಂತ ಪ್ರಭಾವಿ ನಾಯಕ ಇಂದು ನಿತೀಶ್ ಹಂಗಿನಲ್ಲಿ ಸರ್ಕಾರ ರಚಿಸಬೇಕು. ಸರಿ ಸುಮಾರು ಇಪ್ಪತ್ತು ವರುಷಗಳಿಂದ ನಿತೀಶ್ ಕುಮಾರ್ ತಾವೇ ಆಡಳಿತ ನಡೆಸುತ್ತಿದ್ದರು ಹಮ್ ಬಿಹಾರ್ ಮೆ ಜಂಗಲ್ ರಾಜ್ ಕೋ ಹಠಾನೆ ಕೇಲಿಯೆ ಮೈತ್ರಿ ಮಾಡಿ ಕೊಂಡಿದ್ದೇವೆ ಎಂದು ಹೇಳುತ್ತಿರುತ್ತಾರೆ.  ಡೆಲ್ಲಿ ಯ ವಿಮಾನ ನಿಲ್ದಾಣದಲ್ಲಿ  ವಿಮಾನ ಹತ್ತುವಾಗ  ಏನ್ ಡಿ ಯೆ ಕಾಮನ್ ಮಿನಿಮಂ ಗ್ಯಾರಂಟೀಗಳ ಬಗ್ಗೆ ಮಾತನಾಡಿ  ವಿಮಾನ ಹತ್ತಿದೊಡನೆ ಜಾತಿ ಗಣತಿ , ಜೆಪಿ, ಲೋಹಿಯಾ ಹಾಗು ಸಮಾಜವಾದದ  ನೆನಪಾಗಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಇಂಡಿಯಾ ಮೈತ್ರಿಕೂಟಕ್ಕೆ ಚಾಲನೆ ಕೊಟ್ಟು ಅರ್ಧ ದಾರಿಯಲ್ಲಿ ಬಿಟ್ಟು ಬಂದ ಪಶ್ಚಾತಾಪದ ಬೇಗೆಯಲ್ಲಿ ಬೆಂದು  ಅವರ ಕಛೇರಿ ತಲುಪುವುದರೊಳಗೆ  ಇಂಡಿಯಾ ಕೂಟದ ಶರದ್ ಪವಾರರನ್ನು ಸಂಪರ್ಕಿಸುವ ಸಾಧ್ಯತೆಗಳಿರುತ್ತವೆ, ಇದೆಲ್ಲದರ ಪರಿಣಾಮವಾಗಿ ಇಷ್ಟವಿದೆಯೋ ಇಲ್ಲವೋ ಮೋದಿಜಿ ಬಾಬುಗಳಿಗೆ ಹಲೋ ಹೇಳುವ ಮೂಲಕ ದಿನಚರಿ ಪ್ರಾರಂಭಿಸಬೇಕು ಸ್ವಲ್ಪ ಏಮಾರಿದರು ಮತ್ತೊಂದು ಚುನಾವಣೆಗೆ ಸಿದ್ಧರಾಗಬೇಕು ಹಾಗೇನಾದರೂ ಮತ್ತೆ ಚುನಾವಣೆ ಆಗುವುದಾದರೆ ಮ್ಯಾನ್ ಒಫ್ ದಿ ಮ್ಯಾಚ್ ಎಂದು ಘೋಷಿತರಾದರು ಕಪ್ ಪಡೆದುಕೊಳ್ಳಲಾಗದೆ ಚಡ ಪಡಿಸುತ್ತಿರುವ  ಅಖಿಲೇಶ್ ಕಪ್ ಹಾಗು  ಮ್ಯಾನ್ ಒಫ್ ದಿ ಮ್ಯಾಚ್ ಎರಡು  ನಿಮಗೆ ಬಂದು ಬಿಡಿ ಬೇಗ  ಎಂಬ ರೆಕಾರ್ಡೆಡ್ ಮೆಸೇಜ್ಅನ್ನು ಸದಾ ಕೇಳಿಸುವ ಸಂಭವವಿರುತ್ತದೆ. ಆದ್ದರಿಂದ  ಮನ್ ಕಿ ಬಾತ್ ಕೇಳುವ ಮುನ್ನ ಬಾಬುಗಳಿಬ್ಬರ ದಿಲ್ ಕಿ ಬಾತ್ ಕೇಳುವದು ಅನಿವಾರ್ಯ.

ಕಾರ್ತಿಕ್ ಎಸ್ ಬಾಪಟ್.







Tuesday, June 4, 2024

 ಕಳಿಂಗ ನಾಡಲ್ಲಿ ಮತ್ತೆ ಶಂಖನಾದ ?         
                                                                 ಕಾರ್ತಿಕ್ ಎಸ್ ಬಾಪಟ್.



ಒರಿಸ್ಸಾದ ರಾಜಕೀಯ ಹಲವು ಕಾರಣಗಳಿಗಾಗಿ ದೇಶದ ಗಮನ ಸೆಳೆಯುತ್ತಿದೆ, ಬಾರಿ  ನವೀನ ಪಾಟ್ನಾಯಕ್ ಆರನೇ ಬಾರಿ ಗೆದ್ದು ಗದ್ದುಗೆ ಏರಿದರೆ ಸತತ 24 ವರ್ಷ 165 ದಿನಗಳ ಕಾಲ  ಆಡಳಿತ ನಡೆಸಿದ ಸಿಕ್ಕಿಂ ಪವನ್ ಚಾಮ್ಲಿಂಗ್ ದಾಖಲೆಯನ್ನು ಮುರಿಯಲಿದ್ದಾರೆ. ಅದಲ್ಲದೆ  ಇನ್ನೊಂದು ಅಂಶ ಇತ್ತೀಚಿಗೆ ಕೆಲವು ವರುಷಗಳಿಂದ ನವೀನ ಬಾಬು ರೊಂದಿಗೆ ಪ್ರತಿ ಫ್ರೇಮ್ ನಲ್ಲೂ ಕಾಣಿಸಿಕೊಳ್ಳುತ್ತಿರುವ ವಿ ಕೆ ಪಾಂಡಿಯನ್ ಎಂಬ ನಿವೃತ್ತ  ಐಎಎಸ್ ಅಧಿಕಾರಿಯ ಬಗ್ಗೆ ಎಲ್ಲರೂ ಕುತೂಹಲದಿಂದ ನೋಡುವಂತಾಗಿದೆ , ಎಷ್ಟರ ಮಟ್ಟಿಗೆಂದರೆ ಭಾರತೀಯ ಜನತಾ ಪಾರ್ಟಿಯ ಘಟಾನುಘಟಿ ನಾಯಕರಾದ ಮೋದಿ, ಅಮಿತ್ ಶಾ ಹಾಗು ಸಂಬಿತ್ ಪಾತ್ರಾ ಇವರೆಲ್ಲರ  ಚುನಾವಣಾ ಪ್ರಚಾರ, ಹೇಳಿಕೆಗಳು ಮತ್ತು  ಸಂದೇಶಗಳು  ಪಾಂಡಿಯನ್  ಸುತ್ತಲೇ  ಗಿರಕಿ ಹೊಡೆಯುತ್ತಿವೆ.ಇತಿಹಾಸದುದ್ದಕ್ಕೂ ಗಮನಿಸಿದರೆ  ಹಲವು ಎಸ್ , ಪಿ ಎಸ್ ಹಾಗು ಏಫ್ ಎಸ್ ಅಧಿಕಾರಿಗಳು ತಮ್ಮ ಸೇವಾ ನಿವೃತ್ತಿಯ ನಂತರ ಅಥವಾ ಸ್ವಯಂ ನಿವೃತ್ತಿಯ ನಂತರ ರಾಜಕೀಯ ರಂಗ ಪ್ರವೇಶಿಸಿರುವುದು ಮತ್ತು ಕೆಲವರು ಅದರಲ್ಲಿ ಯಶಸ್ವಿಯಾಗಿರುವದನ್ನು ಕಂಡಿದ್ದೇವೆ ಆದರೆ ಪಾಂಡಿಯನ್ ಒರಿಸ್ಸಾದ ರಾಜಕೀಯ ರಂಗಕ್ಕೆ  ನಡೆದು ಬಂದ ಹಾದಿ ಹಾಗು ಅಲ್ಲಿನ ಜನರ ಮಧ್ಯೆ ಪಡೆಯುತ್ತಿರುವ ಖ್ಯಾತಿ ಕೆಲವರ ಕಣ್ಣು ಕೆಂಪಾಗಿಸಿದರೆ ಕೆಲವರನ್ನು ಚಕಿತಗೊಳಿಸುತ್ತಿದೆ .

ಹಾಗಾದರೆ ಯಾರೀ ವಿ ಕಾರ್ತಿಕೇಯ ಪಾಂಡಿಯನ್ ?

ಮೇ 29, 1974 ರಂದು ತಮಿಳುನಾಡಿನ ಮಧುರೈ ಜಿಲ್ಲೆಯ ಮೇಲೂರಿನ ಕೂತಪ್ಪನ್ಪಟ್ಟಿ ಗ್ರಾಮದಲ್ಲಿ ಸಾಧಾರಣ ಕುಟುಂಬದಲ್ಲಿ  ಜನಿಸಿದ ಪಾಂಡಿಯನ್ ಮೂಲತಃ ಕ್ರೀಡಾ ಪ್ರೇಮಿ.    ಕೃಷಿ ವಿಭಾಗದಲ್ಲಿ (ಬಿಎಸ್ಸಿ ಇನ್ ಅಗ್ರಿಕಲ್ಚರ್)   ಪದವಿಯನ್ನು ಪಡೆದು ನಂತರ ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ತಮ್ಮ ಸ್ನಾತಕೋತ್ತರ  ಪದವಿಯನ್ನು ಪಡೆದು ಆಯ್ದು ಕೊಂಡಿದ್ದು ಭಾರತೀಯ ಲೋಕ ಸೇವಾ ಆಯೋಗದ ಪರೀಕ್ಷೆ, 2000ಇಸವಿಯಲ್ಲಿ ಪರೀಕ್ಷೆಯಲ್ಲಿ ತೇರ್ಗಡೆ ಗೊಂಡು ಆಯ್ದು ಕೊಂಡಿದ್ದು   ಪಂಜಾಬ್ ಕೇಡರ್‌ ಆದರೆ ಬ್ಯಾಚ್‌ಮೇಟ್ ಸುಜಾತಾ ರೌತ್ ಅವರನ್ನು ವರಿಸಿದ ನಂತರ ಕಾರ್ಯ ಕ್ಷೇತ್ರವಾಗಿ  ಆಯ್ಕೆ ಮಾಡಿಕೊಂಡದ್ದು ಒರಿಸ್ಸಾ ಕೇಡರ್, ಹೀಗೆ ಒರಿಸ್ಸಾ ಕ್ಯಾಡೆರ್ ಆಯ್ಕೆ ಮಾಡಿ ಕೊಂಡ ನಂತರ ಪಾಂಡಿಯನ್ ಎಂತಹ ಸವಾಲುಗಳು ಎದುರಾದರು ಹಿಂತಿರುಗಿ ನೋಡಿದ್ದಿಲ್ಲ .ಮೊದಲಿಗೆ  ಕಾಲಹಂಡಿಯ  ಧರಮ್‌ಗಢದಲ್ಲಿ ಸಬ್-ಕಲೆಕ್ಟರ್ ಆಗಿ ನೇಮಕಗೊಂಡಾಗ ಕನಿಷ್ಠ ಬೆಂಬಲ ಬೆಲೆ ಕಾರ್ಯಕ್ರಮದಲ್ಲಿ ಇದ್ದ ತೊಡಕುಗಳನ್ನು ಯಶಸ್ವಿಯಾಗಿ ನಿರ್ವಹಿಸಿ  ಭತ್ತ  ಸಂಗ್ರಹಣೆ ಮತ್ತು ವಿತರಣೆಯನ್ನು ಅತ್ಯಂತ ಸುಗಮ ಗೊಳಿಸಿ ರೈಸ್ ಮಿಲ್ ಲಾಬಿ ಯನ್ನು ಪಾಂಡಿಯನ್ ಬಗ್ಗು ಬಡೆದಿದ್ದರು ಆದರೆ ಅಂದು ರೈಸ್ ಮಿಲ್ ಲಾಬಿ ಹೇಗಾದರೂ ಮಾಡಿ  ಪಾಂಡಿಯನ್ ಎತ್ತಂಗಡಿಗೆ ಇನ್ನಿಲದ ಪ್ರಯತ್ನ ಮಾಡಿತ್ತು. ಹಾಗು ಅಂದು ಆಡಳಿತದಲ್ಲಿ ಇದ್ದದ್ದು ಬಿ ಜೆ ಡಿ ಹಾಗು ಬಿ ಜೆ ಪಿ ಮೈತ್ರಿ ಸರ್ಕಾರ ಹಾಗು  ಆಹಾರ ಇಲಾಖೆಯ ಮಂತ್ರಿಯಾಗಿದ್ದು ಬಿ ಜೆ ಪಿ ಶಾಸಕ ಆದರೆ ಬಿ ಜೆ ಪಿ ಶಾಸಕ ಹೇಳಿದ್ದು ಒಂದೇ ಮಾತು ಇದು ನವೀನ ಬಾಬು ಸರ್ಕಾರ ಇಲ್ಲಿ ಇದು ನಡೆಯುವುದಿಲ್ಲ ಹೀಗೆ ನವೀನ ಬಾಬು ಆಡಳಿತ ವೈಖರಿ ಅಷ್ಟು ಪಾರದರ್ಶಕವಾಗಿರುತ್ತಿತ್ತು.  ಅದೇ ರೀತಿ  ಒಡಿಶಾದ ಅತಿದೊಡ್ಡ ಜಿಲ್ಲೆಯಾದ ಮಯೂರ್‌ಭಂಜ್‌ನ ಕಲೆಕ್ಟರ್ ಆಗಿ ನೇಮಕಗೊಂಡಾಗ  ಅಲ್ಲಿ ವಿಕಲಾಂಗರನ್ನು ಗುರುತಿಸಿ ಗ್ರಾಮ ಮತ್ತು ಬ್ಲಾಕ್ ಮಟ್ಟದಲ್ಲಿ ಪುನರ್ವಸತಿ ಕಲ್ಪಿಸುವ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು, ಒಂದು ವಿಕಲಾಂಗ ಪ್ರಮಾಣಪತ್ರ ಪಡೆಯಬೇಕೆಂದರೆ ವಿಕಲಾಂಗರು ಹತ್ತು ಹಲವು ಕಚೇರಿಗಳಿಗೆ ಅಲಿಯಬೇಕಾದ ಪರಿಸ್ಥಿತಿ ಇತ್ತು ಆಗ ಈ ಎಲ್ಲ ಕಚೇರಿಗಳ ಸೇವೆಯನ್ನು ಒಂದೇ ಸೂರಿನಡಿ ತಂದು ಒಂದೇ ಕಚೇರಿಯಲ್ಲೇ ವಿಕಲಾಂಗ ಪ್ರಮಾಣಪತ್ರ  ಪಡೆಯುವ ಪ್ರಕ್ರಿಯೆಯನ್ನು ಸರಳ ಗೊಳಿಸಿದಾಗ   ಹೆಲೆನ್ ಕೆಲ್ಲರ್ ನಂತಹ  ಪ್ರಶಸ್ತಿ ಪಾಂಡಿಯನ್ ಅರಸಿ ಬಂದಿತ್ತು.

2007 ರಲ್ಲಿ ಗಂಜಾಂ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಬ್ಯಾಂಕ್ ಖಾತೆಗಳ ಮೂಲಕ ಕಾರ್ಮಿಕರಿಗೆ ವೇತನ ಪಾವತಿಸುವ ಪ್ರಕ್ರಿಯೆಯನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವಲ್ಲಿ ಪಾಂಡಿಯನ್ ಪ್ರಮುಖ ಪಾತ್ರ ವಹಿಸಿದರು, ಇದಕ್ಕಾಗಿ ಗಂಜಾಂನ  (NAREGA  )  ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಅತ್ಯುತ್ತಮ ಜಿಲ್ಲೆ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.ಆಗಿನ್ನೂ ಜನಧನ್ ಸ್ಕೀಮ್ ಹಾಗು ಜೀರೋ ಬ್ಯಾಲೆನ್ಸ್ ಅಕೌಂಟ್ ನಂತಹ ಯೋಜನೆಗಳು ಇರಲಿಲ್ಲ ಮೋದಿ ಪ್ರಧಾನ ಮಂತ್ರಿಯು ಆಗಿರಲಿಲ ಅಂದರೆ ಒಂದು ನಿರ್ಧಾರ ಎಷ್ಟು ಮಹತ್ವದಾಗಿತ್ತು ಎಂದು ನೀವೇ ಊಹಿಸಿ. ಒಂದು ಬದಲಾವಣೆ  ಮುಂದೆ ರಾಷ್ಟ್ರ ಮಟ್ಟದಲ್ಲಿ ನರೇಗಾ ವೇತನವನ್ನು ಸಂಪೂರ್ಣವಾಗಿ  ಬ್ಯಾಂಕ್ ಖಾತೆಗಳ ಮೂಲಕ ಪಾವತಿಸುವ ಪ್ರಕ್ರಿಯೆಗೆ ನಾಂದಿ ಹಾಡಿತು.

ಈ ರೀತಿ ಪಾಂಡಿಯನ್ ಕೆಲಸ ಮತ್ತು ಆಡಳಿತ ವೈಖರಿಯಿಂದ ಮುಖ್ಯ ಮಂತ್ರಿ  ನವೀನ ಪಾಟ್ನಾಯಕ್ ಪ್ರಭಾವಿತರಾಗಿ  2011 ರಲ್ಲಿ ಪಾಂಡಿಯನ್ ಅವರನ್ನು  ಮುಖ್ಯಮಂತ್ರಿ ಕಚೇರಿಗೆ ತಮ್ಮ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಿದರು, ಅಂದಿನಿಂದ ನವೀನ ಬಾಬು ಹಾಗು ಪಾಂಡಿಯನ್ ಜುಗಲ್ಬಂದಿ ಒರಿಸ್ಸಾ ಜನರನ್ನು ಸಮ್ಮೋಹ ಗೊಳಿಸುತ್ತ ಸಾಗಿತು. 2012 ರಲ್ಲಿ ನವೀನ ಬಾಬು ಲಂಡನ್ ಪ್ರವಾಸದಲ್ಲಿದ್ದರು ಆಗ ನವೀನ ಬಾಬು ಆಪ್ತ ಸಲಹೆಗಾರ ದಿವಂಗತ ಪ್ಯಾರಿಮೋಹನ್ ಕೆಲವು ಬೆಂಬಲಿಗರೊಂದಿಗೆ  ನವೀನ ಬಾಬು ವಿರುದ್ಧ ಬಂಡೆದ್ದಾಗ ಈ ಬಂಡನ್ನು ಹತ್ತಿಕ್ಕಲು ಸಹಾಯ ಮಾಡಿದ್ದೂ  ಪಾಂಡಿಯನ್‌, ಈ ಪ್ರಸಂಗದ ನಂತರ ಪಾಂಡಿಯನ್ ಹಾಗು ನವೀನ ಬಾಬು ಸಂಬಂಧ ಮತ್ತಷ್ಟು ಗಟ್ಟಿ ಆಗುವತ್ತ ಸಾಗಿತು. ಪಾಂಡಿಯನ್ ನವೀನ ಬಾಬು ನಂಬಿಕಸ್ತ ಸಲಹೆಗಾರರಾಗಿ ರೂಪು ಗೊಳ್ಳುತ್ತ ಹೋದರು ಪಾಂಡಿಯನ್ ಪ್ರಾಮುಖ್ಯತೆ ಹೆಚ್ಚುತ್ತಾ ಹೋಯಿತು  ಇದು ಪಕ್ಷದಲ್ಲಿಯೇ ಕೆಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು ಆದರೆ ಶಾಸಕರಿಗೆ ಹಾಗು ನಾಯಕರಿಗೆ ನವೀನ ಬಾಬು ರೊಂದಿಗೆ ಸಹಕರಿಸುವುದರ ಹೊರತಾಗಿ ಬೇರೆ ಆಯ್ಕೆಯಿರಲಿಲ್ಲ. ನವೀನ ಬಾಬು ಇಚ್ಛಾ ಶಕ್ತಿ ಹಾಗು ನವೀನ ಬಾಬು ಕನಸನ್ನು ಇನ್ನಷ್ಟು ಮೌಲ್ಯವರ್ಧನೆ ಗೊಳಿಸಿ  ಕಾರ್ಯಗತ ಗೊಳಿಸುವ ಪಾಂಡಿಯನ್ ಕಾರ್ಯವೈಖರಿ  2014 ಹಾಗು 2019 ರಲ್ಲಿ ನಡೆದ ಒರಿಸ್ಸ ವಿಧಾನಸಭಾ ಚುನಾವಣೆಯಲ್ಲಿ ಅಪಾರವಾದ ರಾಜಕೀಯ ಯಶಸ್ಸನ್ನು ತಂದು ಕೊಟ್ಟಿದರಲ್ಲಿ ಅತಿಶೋಕ್ತಿಯಿಲ್ಲ. ಹೀಗೆ ಪಾಂಡಿಯನ್ ಗಳಿಸಿದ ಜನಪ್ರಿಯತೆ ಬಿ ಜೆ ಡಿ ಪಕ್ಷದಲ್ಲಿನ ಹಲವರಿಗೆ ಜೀರ್ಣಿಸಿಕೊಳ್ಳಲಾಗಲಿಲ್ಲ ಇದೆಲ್ಲವನ್ನು ಅರಿತ ನವೀನ ಪಾಟ್ನಾಯಕ್ 2019 ರಲ್ಲಿ ಪಾಂಡಿಯನ್ ರನ್ನು  5T ಮುಖ್ಯಸ್ಥರನ್ನಾಗಿ ನೇಮಿಸಿ ಆದೇಶ ಹೊರಡಿಸಿದರು.ಹಾಗೆ ನೋಡಿದರೆ 5 T ಎಂಬ ಯಾವುದೇ ಇಲಾಖೆಯೇ ಇರಲಿಲ್ಲ ಈಗಲೂ ಇಲ್ಲ ಆದರೆ 5 T ಪರಿಕಲ್ಪನೆ ಹೆಸರೇ ಹೇಳುವಂತೆ ಟೀಮ್ ವರ್ಕ್ , ಟೆಕ್ನಾಲಜಿ , ಟ್ರಾನ್ಸ್ಪರೆನ್ಸಿ, ಟೈಮ್ ಮತ್ತು ಟ್ರಾನ್ಸ್ಫಾರ್ಮೇಷನ್ ಅಂದರೆ ಯಾವುದೇ ಸಂಸ್ಥೆಯಿರಲಿ ಐದು ಅಂಶಗಳನ್ನೊಳಗೊಂಡ ದೃಷ್ಠಿಕೋನ ಹೊಂದಿರಬೇಕು ಆದ್ದರಿಂದ ಯಾವುದೇ ಇಲಾಖೆಯ ವರದಿಯಿರಲಿ ವರದಿ ಪಾಂಡಿಯನ್ ಕೈ ಸೇರಲೇಬೇಕು ಒಂದು ಯೋಜನೆಯಾಗಿ ಇದು ನಿಜಕ್ಕೂ ಅತ್ಯಂತ ಪರಿಣಾಮಕಾರಿ ಯೋಜನೆ ಯಾಗಿ ರೂಪು ಗೊಂಡಿದ್ದರಲ್ಲಿ ಎರಡು ಮಾತಿಲ್ಲ ಆದರೆ ಕೆಲವರು ವ್ಯವಸ್ಥೆಯನ್ನು ದೂಷಿಸಿದರು ಹಾಗು ಹೊಸ ವ್ಯವಸ್ಥೆ ಮುಖ್ಯ ಕಾರ್ಯದರ್ಶಿಯ ಅಧಿಕಾರವನ್ನೇ  ಕುಬ್ಜಗೊಳಿಸಿತು ಎಂಬ ಆರೋಪವನ್ನು ಎದುರಿಸಬೇಕಾಯಿತು.

2017 ರಲ್ಲಿ, ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಅನ್ನು ರಾಂಚಿಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಕ್ರೀಡಾ ಕೂಟಕ್ಕೆ ಕೇವಲ 90 ದಿನಗಳಿರುವಾಗ ಜಾರ್ಖಂಡ್ ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ನಿರ್ಧಾರದಿಂದ ಹಿಂದೆ ಸರಿಯಿತು, ಅವಕಾಶವನ್ನು ಪಾಂಡಿಯನ್ ಸಮರ್ಥವಾಗಿ ಬಳಸಿಕೊಂಡು ಒಡಿಶಾ ಆತಿಥೇಯರಾಗಲು ಒಪ್ಪಿಕೊಂಡಿತು ಮತ್ತು ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿತು ಅಲ್ಲದೆ 2018 ಮತ್ತು 2023 ರಲ್ಲಿ ಎರಡು ಪುರುಷರ ವಿಶ್ವಕಪ್ ಹಾಕಿ ಚಾಂಪಿಯನ್ಶಿಪ್ಗಳು 2019 ರಲ್ಲಿ FIH ಪುರುಷರ ಸರಣಿ ಫೈನಲ್ಗಳು ಮತ್ತು ಒಲಂಪಿಕ್ ಹಾಕಿ ಕ್ವಾಲಿಫೈಯರ್ಪಂದ್ಯಗಳಿಗೆ ಒರಿಸ್ಸಾ ಆತಿಥೇಯರಾಗಿ ಕಾರ್ಯ ನಿರ್ವಹಿಸಿ ಒರಿಸ್ಸಾ ರಾಜ್ಯಕ್ಕೆ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಗುರುತರ ಜಾಗವನ್ನು ಸೃಷ್ಟಿಸಿ ಒರಿಸ್ಸಾ ವನ್ನು  ಭಾರತದ ಕ್ರೀಡಾ ರಾಜಧಾನಿ ಎಂಬ ಖ್ಯಾತಿಗೆ ಪಾತ್ರವಾಗುವಂತೆ ಮಾಡಿದೆ  .ಅಷ್ಟಲ್ಲದೇ ಕಳೆದ ಕೆಲವು  ವರ್ಷಗಳಲ್ಲಿ ಕೈ ಗೊಂಡ  ಜಗನ್ನಾಥ ದೇವಾಲಯದ ಸುತ್ತ ಮುತ್ತಲಿನ ಅಭಿವೃದ್ಧಿ ಮತ್ತು  ಸುಂದರೀಕರಣದ ಕೆಲಸ, ಸರ್ಕಾರಿ ಶಾಲೆಗಳಿಗೂ  5T ಯೋಜನೆಯನ್ನು ವಿಸ್ತರಿಸಿ ಶಾಲೆಗಳಿಗೆ ಹೊಸ ಕಟ್ಟಡಗಳು ಮತ್ತು ಸ್ಮಾರ್ಟ್ ಡಿಜಿಟಲ್ ಬೋರ್ಡ್ ಗಳನ್ನೂ ಅಳವಡಿಸಿದ್ದಲ್ಲದೆ ಸರಿ ಸುಮಾರು 315 ಒಡಿಶಾ ಆದರ್ಶ ವಿದ್ಯಾಲಯ ಎಂಬ ಇಂಗ್ಲಿಷ್ ಶಾಲೆಗಳನ್ನು ತೆರೆದಿರುವುದು ಇವೆಲ್ಲವೂ ಜನಮಾನಸದಲ್ಲಿ ನವೀನ ಬಾಬು ಹಾಗು ಪಾಂಡಿಯನ್ ಬಗೆಗೊಂದು ಧನ್ಯತಾ ಭಾವ ಮೂಡಿಸಿದೆ. ಆದರೆ ಕೆಲವೊಮ್ಮೆ ಅತಿ ಉತ್ಸಾಹ ಆರೋಪಕ್ಕೂ ಕಾರಣವಾಗುತ್ತದೆ ಕೋವಿಡ್ ನಂತರದ ಕಾಲದಲ್ಲಿ ಪಾಂಡಿಯನ್ ಇನ್ನು ಎಸ್ ಹುದ್ದೆಯಲ್ಲಿ ಇದ್ದಾಗಲೇ ಸರಿ ಸುಮಾರು 30 ಕ್ಕೂ ಹೆಚ್ಚು ಪ್ರದೇಶಗಳಿಗೆ  ಸರ್ಕಾರದ ಪ್ರಾಯೋಜಕತ್ವದಲ್ಲಿ  ಹೆಲಿಕ್ಯಾಪ್ಟರ್ ಬಳಸಿ ಕುಂದು ಕೊರತೆ ಆಲಿಸಲು ಸಭೆಗಳಿಗೆ ತೆರಳಿದ್ದು ಚರ್ಚೆಯ ವಿಷಯವಾಗಿದೆ , ಒಬ್ಬ ಲೋಕ ಸೇವಾ ಆಯೋಗದ ಅಧಿಕಾರಿಯಾಗಿ  ಮಾಧ್ಯಮದ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳದೆ  ಸದ್ದಿಲ್ಲದೇ ಸಚಿವರುಗಳು ರೂಪಿಸಿದ ನೀತಿ ನಿಯಮಗಳನ್ನು ಕಾರ್ಯಗತ ಗೊಳಿಸಬೇಕೇ ಹೊರತು ತಾನೇ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಹಲವು  ಎತ್ತಿದ್ದರು, ಬಹುಷ್ಯ ಇದೆಲ್ಲವನ್ನು ಗಮನಿಸಿ ನವೀನ ಪಾಟ್ನಾಯಕ್ ಪಾಂಡಿಯನ್ ರನ್ನು ತಮ್ಮ ವೃತ್ತಿಗೆ ರಾಜೀನಾಮೆ ಕೊಡಿಸಿ ಸೀದಾ ರಾಜಕೀಯಕ್ಕೆ ಕರೆ ತಂದಿದ್ದಾರೆ.

ಹೀಗೆ ಪಾಂಡಿಯನ್ ಸಕ್ರಿಯವಾಗಿ ರಾಜಕಾರಣಕ್ಕೆ ಪ್ರವೇಶಿಸಿದ ಮೇಲೆ ಬಿ ಜೆ ಪಿ ಘಟಾನುಘಟಿ ನಾಯಕರು ಪಾಂಡಿಯನ್ ನವೀನ ಬಾಬು ಉತ್ತರಾಧಿಕಾರಿಯಂತೆ  ಕಾಣುತ್ತಿದ್ದಾರೆ ಅಷ್ಟೇ ಅಲ್ಲ ನವೀನ ಬಾಬು ಸಂಪ್ಪೂರ್ಣವಾಗಿ ಪಾಂಡಿಯನ್ ನಿಯಂತ್ರಣದಲ್ಲಿದ್ದಾರೆ, ಮುಂದಿನ ದಿನಗಳಲ್ಲಿ ಪಾಂಡಿಯನ್ ಮುಖ್ಯಮಂತ್ರಿ ಆದರೆ ಒರಿಸ್ಸಾದ ಜನತೆ ಅದ್ಹೇಗೆ ಸಹಿಸಿಕೊಳ್ಳುತ್ತೀರಿ ಆದ್ದರಿಂದ ಇದು ಒರಿಸ್ಸಾದ ಅಸ್ಮಿತೆಯ ಸವಾಲೆಂಬಂತೆ ಬಿ ಜೆ ಪಿ ಒಂದು ಕಾಲದ ಮಿತ್ರ ಬಿ ಜೆ ಡಿ ವಿರುದ್ಧ ಹರಿಹಾಯುತ್ತಿದೆ, ಹಾಗೆ ನೋಡಿದರೆ ವಾದದಲ್ಲಿ ಹುರುಳಿಲ್ಲ ಈ  ಹಿಂದೆ ಜಯಲಲಿತಾ , ಜಾರ್ಜ್ ಫೆರ್ನಾಂಡಿಸ್ ,  ಅಷ್ಟೇ ಏಕೆ ಬಿ ಜೆ ಪಿ ಯವರೇ ಆದ ಸುಷ್ಮಾ ಸ್ವರಾಜ್ , ಜಗನ್ನಾಥ್ ಜೋಶಿ ಇವರೆಲ್ಲರೂ ಪ್ರವರ್ಧಮಾನಕ್ಕೆ ಬಂದದ್ದು ತಮ್ಮ ರಾಜ್ಯದಲ್ಲಲ್ಲ ಅಷ್ಟೇ ಏಕೆ ಕಾಂಗ್ರೆಸ್ ನ ಇಂದಿರಮ್ಮ ರಾಜಕೀಯ ಪುನರ್ಜನ್ಮಕ್ಕಾಗಿ ಆಯ್ದು ಕೊಂಡ ಕ್ಷೇತ್ರ ಚಿಕ್ಕಮಗಳೂರು ಇದೀಗ   ಮೋದೀಜಿಯಂತಹ  ಮೋದಿಜಿ ಅವರೇ ಗುಜರಾತ್ ಬಿಟ್ಟು ಉತ್ತರ ಪ್ರದೇಶದ  ವಾರಾಣಸಿಯಲ್ಲಿ ಚುನಾವಣೆಗೆ ನಿಲ್ಲುವುದಾದರೆ ಪಾಂಡಿಯನ್ ಒರಿಸ್ಸಾದ  ರಾಜಕೀಯದಲ್ಲಿ ರಂಗ ಪ್ರವೇಶ ಬಯಸಿದರೆ ತಪಲ್ಲ , ಅದೇನೇ ಇರಲಿ ಈ ಬಾರಿ  ಪಾಂಡಿಯನ್ ವಿಧಾನ ಸಭೆಯಲ್ಲಿ ಆಗಲಿ ಲೋಕಸಭೆಯಲ್ಲಿ ಆಗಲಿ ಸ್ಪರ್ದಿಸಿಲ್ಲ ಆದರೆ ಒರಿಸ್ಸಾ ಉದ್ದಗಲಕ್ಕೂ ನವೀನ ಬಾಬು ಪರ ಮತ ಯಾಚಿಸಿ ಸಭೆಗಳನ್ನು ನಡೆಸುತ್ತಿದ್ದಾರೆ ಜನರ ಕಂಗಳಲ್ಲಿ ನವೀನ ಬಾಬುಗಿರುವ ಪ್ರೀತಿಯೇ  ಪಾಂಡಿಯನ್ ಪರವೂ ಪ್ರಜ್ವಲಿಸುತ್ತಿದೆ. ಇದು ಬಿ ಜೆ ಪಿ ಗರಿಗಷ್ಟೇ ಅಲ್ಲ ಖುದ್ದು  ಬಿಜು ಜನತಾದಳ ಪಕ್ಷದ ನಾಯಕರ ನಿದ್ದೆಯನ್ನು ಕೆಡಿಸಿದೆ ಒರಿಸ್ಸಾದ ಮತದಾರ ಸತತ ಆರನೇ ಬಾರಿ ಬಿಜು ಜನತಾದಳದ  ಶಂಖ ದ ಚಿಹ್ನೆಗೆ ಮತ ಕೊಟ್ಟು ಮತ್ತೊಮ್ಮೆ  ಕಳಿಂಗ ನಾಡಲ್ಲಿ  ಶಂಖನಾದ ಮೊಳಗಿಸುವನೇ?  ಎಲ್ಲದಕ್ಕೂ ನಾಳೆಯೇ ಉತ್ತರ ದೊರೆಯಲಿದೆ. 

ಕಾರ್ತಿಕ್ ಎಸ್ ಬಾಪಟ್