ತಾಳಿದವನು ಫಡ್ನವಿಸ್ ಆದಾನು.
ಅದು ೨೦೧೯ ರ ಸಮಯ ಉದ್ಧವ್ ಠಾಕ್ರೆ ತನ್ನನು ಮುಖ್ಯ ಮಂತ್ರಿ ಮಾಡಲಿಲ್ಲ ಎಂದು ಬಿ ಜೆ ಪಿ ಯ ಬಹು ಕಾಲದ ಗೆಳೆತನಕ್ಕೆ ಸೋಡಾ ಚೀಟಿ ಕೊಟ್ಟು ಹೊರಟಿದ್ದರು. ಇತ್ತ ಫಡ್ನವಿಸ್ ಅಜಿತ್ ಪವಾರರೊಡನೆ ಸೇರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಅಜಿತ್ ದಾದಾ ಯು ಟರ್ನ್ ಹೊಡೆದು ಮತ್ತೆ ಶರದ್ ಪವಾರ್ ರೊಂದಿಗೆ ಸೇರಿ ದಂಗು ಬಡಿಸಿದ್ದರು. ಆಗ ಅಂದು ಫಡ್ನವಿಸ್ ತುಂಬಿದ ಶಾಸನ ಸಭೆಯಲ್ಲಿ "ತೊರೆಗಳು ಹಿಂದೆ ಸರಿಯುತ್ತಿವೆ ಎಂದು ಕಿನಾರೆಯಲ್ಲಿ ಮನೆ ಕಟ್ಟಬೇಡ ನಾನು ಸಾಗರ ಮತ್ತೆ ಅಪ್ಪಳಿಸುತ್ತೇನೆ " ಎಂದು ಅಬ್ಬರಿಸಿದ್ದರು. ಅಂತೆಯೇ ದೇವೇಂದ್ರ ಸರಿತಾ ಗಂಗಾಧರ ಫಡ್ನವಿಸ್ ಇದೀಗ ಮತ್ತೊಮ್ಮೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಮೂಲಕ ಮಹಾರಾಷ್ಟ್ರದ ಚಾಣಕ್ಯ ನಾನೆ ಎಂದು ಮತ್ತೆ ಸಾಬೀತು ಪಡಿಸಿದ್ದಾರೆ. ಫಡ್ನವಿಸ್ ತಂದೆ ಗಂಗಾಧರ ರಾವ್ ಫಡ್ನವಿಸ್ ವಿಧಾನ ಪರಿಷತ್ ಸದಸ್ಯರು ಹಾಗು ಜನಸಂಘದ ನೇತಾರರು ಆಗಿದ್ದರು ಅಲ್ಲದೆ ನಿತಿನ್ ಗಡ್ಕರಿ ಅವರ ರಾಜಕೀಯ ಗುರುಗಳು ಹೌದು. ಫಡ್ನವಿಸ್ ತನ್ನ ೧೭ ನೇ ವಯಸ್ಸಲ್ಲಿ ಅವರ ತಂದೆಯನ್ನು ಕಳೆದುಕೊಳ್ಳಬೇಕಾಯಿತು. ಹೀಗಾಗಿ ತಂದೆಯ ರಾಜಕೀಯ ಪಟ್ಟುಗಳನ್ನು ಗಮನಿಸುವ ಸೌಭಾಗ್ಯ ಅವರದಾಗಲಿಲ್ಲ, ಆದರೆ ಅವರ ಬಹುಮುಖಿ ವ್ಯಕ್ತಿತ್ವಕ್ಕೆ ಯಾರಿಂದಲೂ ತಡೆ ಒಡ್ಡಲಾಗಲಿಲ್ಲ. ೧೯ ನೇ ವಯಸ್ಸಿನಲ್ಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಸಂಪರ್ಕಕ್ಕೆ ಬಂದು ರಾಜಕೀಯದ ಒಳ ಮರ್ಮವನ್ನು ಅರಿಯುವ ಹೆಜ್ಜೆ ಇಟ್ಟಿದ್ದರು. ಪರಿಣಾಮವಾಗಿ ತನ್ನ ೨೨ ನೇ ವಯಸ್ಸಿನಲ್ಲೇ ನಾಗ್ಪುರ್ ಕಾರ್ಪೊರೇಟರ್ ೨೭ ನೇ ವಯಸ್ಸಿಗೆ ನಾಗ್ಪುರ್ ಮೇಯರ್ ಗಾದಿ ಅರಸಿ ಬಂದಿದ್ದವು. ಹಾಗು ೨೯ ನೇ ವಯಸ್ಸಿಗೆ ಶಾಸಕನಾಗಿ ಆರಿಸಿ ಬಂದಿದ್ದರು. ಹೀಗೆ ರಾಜಕೀಯದ ಒಂದೊಂದೇ ಪಟ್ಟುಗಳನ್ನು ಕಲಿಯುತ್ತಿದ್ದಾಗ ಅವರಿಗೆ ಗುರುವಾಗಿ ನಿಂತದ್ದು ಗಡ್ಕರಿ ಎಂಬುದು ಗಮನಾರ್ಹ ಅಂಶ.ಅದ್ಯಾರೋ
ಮಹಾನುಭಾವರು ಹೇಳಿದ ನೆನಪು ಒಂದು ಹಂತದ ನಂತರ ಬೆಳೆಯುವ ಹಂಬಲ ಇರುವವನು ಗುರುವೆಂಬ ಗುರುವಿನ ನೆರಳಿನಿಂದಲೂ
ದೂರ ಸಾಗಬೇಕಂತೆ ಬಹುಷಃ ಫಡ್ನವಿಸ್ ಇದನ್ನೇ ಮಾಡಿರಬಹುದು. ಮಹಾರಾಷ್ಟ್ರದಲ್ಲಿ ಗೋಪಿನಾಥ್ ಮುಂಡೆ ಹಾಗು
ಗಡ್ಕರಿ ಬಣ ಎಂಬಂತೆ ಎರಡು ಬಣಗಳಾಗಿದ್ದವು. ಆಗ ಫಡ್ನವಿಸ್ ಯಾವ ಮಡಿವಂತಿಕೆಯು ಇಲ್ಲದೆ ಗೋಪಿನಾಥ್
ಮುಂಡೆ ಬಣಕ್ಕೂ ಹತ್ತಿರವಾಗಿದ್ದರು. ಖುದ್ದು ವಾಜಪೇಯಿ ಫಡ್ನವಿಸ್ ಕಾರ್ಯವೈಖರಿಯನ್ನು ಹೊಗಳಿದ್ದರು.
ದಿನ ಕಳೆದಂತೆ ಫಡ್ನವಿಸ್ ಮಹಾರಾಷ್ಟ್ರದ ರಾಜ್ಯ ರಾಜಕೀಯದಲ್ಲಿ ಅವರಿಸಿಕೊಳ್ಳುತ್ತಿದ್ದರು, ಪರಿಣಾಮ
೨೦೧೪ ರಲ್ಲಿ ಮುಖ್ಯಮಂತ್ರಿ ಗದ್ದುಗೆ ತಾನಾಗಿಯೇ ಒಲಿದು ಬಂದಿತ್ತು. ಆದರೆ ೨೦೨೨ ರಲ್ಲಿ ಬದಲಾದ ಸನ್ನಿವೇಶದಲ್ಲಿ ಶಿಂಧೆ ನೇತ್ರತವಾದ ಶಿವಸೇನಾ
ಹಾಗು ಬಿ ಜೆ ಪಿ ಮೈತ್ರಿ ಸರ್ಕಾರ ರಚನೆ ಆದಾಗ ಶಿಂದೆ ಮುಖ್ಯಮಂತ್ರಿ ಆದರು ಆದರೆ ಆಗಾಗಲೇ ಐದು ವರುಷಗಳ
ಕಾಲ ಮುಖ್ಯ ಮಂತ್ರಿ ಆಗಿದ್ದ ಫಡ್ನವಿಸ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಉಪ್ಪಿಕೊಳ್ಳುವ ನಿರ್ದೇಶನ
ದೆಹಲಿಯಿಂದ ಬಂದಿತ್ತು. ಆಗ ದೆಹಲಿ ದೊರೆಗಳ ಆದೇಶವನ್ನು ಪಕ್ಷಕ್ಕಾಗಿ ರಾಜ್ಯಕ್ಕಾಗಿ ಮರು ಮಾತಾಡದೆ
ಒಪ್ಪಿ ಕೊಂಡಿದ್ದರು ಫಡ್ನವಿಸ್. ಆಗ ಹಲವು ಪತ್ರಿಕೆಗಳು , ಅಂಕಣಕಾರರು ಫಡ್ನವಿಸ್ ಉಪ ಮುಖ್ಯಮಂತ್ರಿ
ಪದವಿಯನ್ನು ಒಪ್ಪಿ ಕೊಳ್ಳ ಬಾರದಿತ್ತು ಎಂದು ಬರೆದಿದ್ದವು ಆದರೆ ದೆಹಲಿ ದೊರೆಗಳಿಗೆ ಫಡ್ನವಿಸ್ ಹೊರತಾದ
ಸರ್ಕಾರ ಕೇವಲ ಶಿಂಧೆ ಹಾಗು ಶಿವಸೇನಾ ಸರ್ಕಾರದ ವೈಭವೀಕರಣಕ್ಕೆ ಕಾರಣ ಆದೀತು ಎಂಬ ಭಯವಿತ್ತು. ೨೦೨೩
ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಹಾಯುತಿ ಸರಕಾರದ
ನೀರಸ ಪ್ರದರ್ಶನವನ್ನು ತಮ್ಮ ಹೆಗಲ ಮೇಲೆ ಯಾವ ಅಂಜಿಕೆಯೂ ಇಲ್ಲದೆ ಹೊತ್ತು ಕೊಂಡಿದ್ದ ಫಡ್ನವಿಸ್ ಕೆಲವೇ
ತಿಂಗಳಲ್ಲಿ ಲಾಡಕಿ ಬೆಹೆನ್ ಎಂಬ ವೋಟು ಬಾಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಾಳಿದವನು ಬಾಳಿಯಾನು
ಎಂಬ ಗಾದೆಗೆ ಉಪಮೆಯಂತೆ ಮಹಾಯುತಿಯ ಗೆಲುವಿಗೆ ಕಾರಣವಾಗಿದ್ದರೆ.
ಹಾಗೆ
ನೋಡಿದರೆ ತುರ್ತುಪರಿಸ್ಥಿತಿಯ ಸಂಧರ್ಭದಲ್ಲಿ ಹೇರಿದ ಸಂವಿಧಾನದ 42 ನೇ ತಿದ್ದುಪಡಿ ಕಾಯಿದೆಯನ್ನು
ಮಿನಿ-ಸಂವಿಧಾನ ಎಂದೇ ಕರೆಯುತ್ತಾರೆ. ಅಂದರೆ ತಿದ್ದುಪಡಿಗಳು
ಒಂದು ಮಿನಿ ಸಂವಿಧಾನದಷ್ಟೇ ಇದ್ದವು ಎಂದು ಅರ್ಥ.
ಆದ್ದರಿಂದ ಸಂವಿಧಾನ ಬದಲಾಯಿಸಿದ್ದು ಯಾರು ಎಂದು ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ. ಸಂವಿಧಾನ
ಬದಲಾವಣೆಗೂ ತಿದ್ದುಪಡಿಗೂ ಅಪಾರ ವ್ಯತಾಸವಿದೆ. ಇಲ್ಲಿಯವರೆಗೆ 106 ಬಾರಿ ಸಂವಿಧಾನದ ತಿದ್ದುಪಡಿಯಾಗಿದೆ,
ಹಾಗೆಂದ ಮಾತ್ರಕ್ಕೆ ಇಡೀ ಸಂವಿಧಾನವನ್ನೇ ಬದಲಾಯಿಸಿದ್ದಾರೆಂದಲ್ಲ. ಅಷ್ಟಾಗಿಯೂ ಪೇಜಾವರ ಶ್ರೀಗಳ ಬೇಡಿಕೆಯಲ್ಲಿ
ತಪ್ಪೇನಿದೆ? ವಕ್ಫ್ ಕಾಯ್ದೆ ತಿದ್ದುಪಡಿಗೆ ಬೆಂಬಲ ಎಂದಿದ್ದಾರೆ ಪ್ರಜಾಪ್ರಭುತ್ವದ ತಳಹದಿಯಲ್ಲಿ ರಚಿತವಾಗುವ
ನೀತಿ ನಿಯಮಗಳಲ್ಲಿ ಸರ್ಕಾರ ಹಾಗು ಉಚ್ಚ ನ್ಯಾಯಾಲಯಕ್ಕೂ ಮೀರಿದ ಮಂಡಳಿ ಇರಲು ಸಾಧ್ಯವೇ ? ಈ ಜಾಗ ನಮ್ಮದು ಎಂದು ನೋಟೀಸು
ಕೊಡುವ ಸಂಸ್ಥೆ ಹಾಗು ಆ ನೋಟೀಸ್ ಅನ್ನು ಪ್ರಶ್ನೆ ಮಾಡಬೇಕೆಂದು ಉದ್ದೇಶಿಸಿದರೆ ನ್ಯಾಯಾಲಯಕ್ಕೂ ಹೋಗದೆ
ಅದೇ ಸಂಸ್ಥೆ ಬಳಿಯೇ ನ್ಯಾಯ ಕೇಳಲು ಹೋಗಬೇಕೆಂದರೆ ಅದು ಎಷ್ಟು ಸರಿ? ಪೇಜಾವರ ಶ್ರೀಗಳ ಕುರಿತು ಈ ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ
ಹೊಸದಲ್ಲ ಕಳೆದ ಒಂದು ತಿಂಗಳ ಹಿಂದೆ ಶ್ರೀಗಳು ಪೂಜಿಸುವ
ಹರಿಯ ಹೆಸರಿಟ್ಟುಕೊಂಡ ಮಾಜಿ ಮಂತ್ರಿಯೊಬ್ಬರು ಶ್ರೀಗಳಿಗೆ ನೀವು ಕಾವಿ ಕಳಚಿ ರಾಜಕೀಯಕ್ಕೆ ಬನ್ನಿ
ಎಂದಿದ್ದರು. ತನ್ನ ಜೀವನವನ್ನೇ ಹರಿ ಸೇವೆಗಾಗಿ ಮುಡಿಪಾಗಿಟ್ಟಿರುವ ಶ್ರೀಗಳಿಗೆ ಈ ಪಾಟಿ ಸವಾಲು ಹಾಕುವುದು
ಎಷ್ಟು ಸರಿ. ಮಂತ್ರಿ ಮಾಗಧರು ಒಮ್ಮೆ ಖಾದಿ ತೆಗೆದು ಹೊರ ಬಂದು ಸಾಮಾನ್ಯ ಜನರ ಕಷ್ಟ ಕಾರ್ಪಣ್ಯದತ್ತ
ಗಮನ ಕೊಡಲಿ. ಕಳಚಿ ಬರಬೇಕಾದ್ದು ಕೇವಲ ಖಾದಿ ಹಾಗು ಅದಕಂಟಿಕೊಂಡ ಅಧಿಕಾರ. ಹಣ, ಐಶ್ವರ್ಯ ಆಸ್ತಿ ಅಂತಸ್ತು
ಎಲ್ಲವೂ ಹಾಗೆಯೇ ಇಟ್ಟುಕೊಳ್ಳಬಹುದು. ಆದರದು ಆಗದು ಅಲ್ಲವೇ ಅಂದ ಮೇಲೆ ಹರಿಯೇ ಸರ್ವಸ್ವ ಎಂದು ತಮ್ಮ
ಜೀವನವನ್ನೇ ಹರಿ ಸೇವೆಗೆ, ಧರ್ಮ ಪ್ರಚಾರಕ್ಕೆ ಮುಡಿಪಾಗಿಟ್ಟ ಶ್ರೀಗಳಿಗೆ ಖಾವಿ ಕಳಚಿಟ್ಟು ರಾಜಕೀಯ
ಮಾಡಿ ಎನ್ನುವುದು ಶೋಭೆ ತರುವ ಮಾತೆ ? ಒಂದು ಹಂತದಲ್ಲಿ ಮಹಾರಾಷ್ಟ್ರದಲ್ಲಿ ಸಾಧು ಸಂತರ ಬಗ್ಗೆ ಆಡಿದ
ಇಂತಹ ಮಾತುಗಳೇ ಇಂದು ಕಾಂಗ್ರೆಸ್ ಹಾಗು ಮಿತ್ರ ಪಕ್ಷವನ್ನು ದಯನೀಯ ಸ್ಥಿತಿಗೆ ತಂದು ನಿಲ್ಲಿಸಿದೆ.
ಇನ್ನಾದರೂ ಕಾಂಗ್ರೆಸ್ ಪಾಠ ಕಲಿಯಬೇಕು ಇಲ್ಲದಿದ್ದರೆ
ಮಹಾರಾಷ್ಟ್ರದಲ್ಲಾದ ಮತ ಪಂಥಗಳ ಧ್ರುವೀಕರಣ ಯಾವ ರಾಜ್ಯದಲ್ಲಾದರೂ ಆಗಬಹುದು.
ಕಾರ್ತಿಕ್
ಎಸ್ ಬಾಪಟ್





