Saturday, April 29, 2017

ಗೂಗಲ್ ಡೂಡಲ್ ನೋಡಣ್ಣ ಅಲ್ಲಿಗು ಬಂದ್ರು ರಾಜಣ್ಣ




ಅಮೂರ್ತ ರೂಪಗಳಿಗೆ ಮೂರ್ತ ರೂಪ ಕೊಡುವುದರಲ್ಲಿ ಕಲಾವಿದರನ್ನು ಬಿಟ್ಟರೆ ಬೇರೆ ಯಾರು ಸ್ಥಾನವನ್ನು ತುಂಬಲು ಸಾಧ್ಯವಿಲ್ಲ, ಯಾವೊದೋ ಒಂದು ಭಾವನೆ ನಮ್ಮಲಿ ಅಸ್ಪಷ್ಟವಾಗಿ ಆವೀರ್ಭವಿಸುತ್ತದೆ, ಆವೀರ್ಭವಿಸುವಿಕೆ ನಮ್ಮಲಿ ಹಾಗೆಯೆ ಉಳಿಯುತ್ತದೆ, ಹೇಳಬೇಕು ಹೇಳಲಾಗುವುದಿಲ್ಲ , ಸ್ವಲ್ಪ ಮಟ್ಟಿಗೆ ಕೆಲವರು ಹೇಳಬೇಕಾದ್ದನ್ನು ಹೇಳಾಗದೆ ಇದ್ದಾಗ ಬರೆಯುವ ಮೂಲಕ ಅದಕ್ಕೊಂದು ಮೂರ್ತ (ಸ್ಪಷ್ಟತೆ) ರೂಪ ಕೊಡಲು ಪ್ರಯ್ತ್ನಿಸುತ್ತಾನೆ, ಅದನ್ನು ಓದಿದ ಓದುಗನಿಗೆ ಮೂರ್ತತೆಯ ಕಲ್ಪನೆಯೊಂದು ಸ್ಮ್ರಿತಿ ಪಟಲದಲ್ಲಿ ಅಚ್ಚಳಿಯದೆ ಉಳಿಯುತ್ತದೆ ಆದರೆ ಏಕೋ ಒಂದು ಬಗೆಯ ಅಮೂರ್ತತೆ ಕಾಡುತ್ತಲೇ ಇರುತ್ತದೆ, ಅಮೂರ್ತತೆಗೆ ಇದು ಹೀಗೆ ಎಂದು ಮೂರ್ತ ರೂಪದ ಕಲ್ಪನೆ ಸಿಗುವುದು ಕೊನೆಗೆ ಕಲಾವಿದನಲ್ಲಿಯೇ ಅದು ಕಲಾವಿದನ ಕುಂಚದಲ್ಲಿರಬಹುದು, ನಟನೆಯಲ್ಲಿರಬಹುದು ಅಥವಾ ನವರಸ ಅಭಿನಯದ ತನ್ಮಯತೆಯಲ್ಲಿರಬಹದು, ಹೀಗೆ ಇಷ್ಟೆಲ್ಲ ಕಲಾವಿದನ ಶಕ್ತಿಯ ಬಗ್ಗೆ ವರದಿಯೊಪ್ಪಿಸಿದ ಮೇಲೆ ಕನ್ನಡ ಕುಲಕೋಟಿಗಳ ಹೃದಯ ಸಾಮ್ರಾಟ್ ಡಾ ರಾಜ್ ಅವರ ಬಗ್ಗೆ ಮಾತಾಡದೆ ಇದ್ದರೆ ಹೇಗೆ, ನೀವು ನಿಮ್ಮ ಮುಂದೆ ಕೃಷ್ಣದೇವರಾಯನನ್ನು ತಂದುಕೊಳ್ಳಿ ಆದರೆ ಕಣ್ಮುಂದೆ ಬರುವುದು ಡಾ ರಾಜ್ ರೂಪದ ಕೃಷ್ಣದೇವರಾಯ, ಭಕ್ತ ಕುಂಬಾರನನ್ನು ತಂದುಕೊಳ್ಳಿ ಕಣ್ ಮುಂದೆ ಬರುವುದು ಡಾ ರಾಜ್ ಹೀಗೆ ಡಾ ರಾಜ್ ನಾವೆಂದು ಪ್ರಸ್ತುತ ಕಾಲ ಘಟ್ಟದಲ್ಲಿ ನೋಡದ ಪಾತ್ರಗಳಿಗೆ ಒಂದು ಬಗೆಯ ಲವಲವಿಕೆ ತುಂಬಿ ಕೃಷ್ಣದೇವರಾಯನೆಂದರೆ ಹೀಗೆಯೇ ಇದ್ದನು ಅಥವಾ ಭಕ್ತ ಕುಂಬಾರ ಹೀಗೆ ಇದ್ದನೆಂದು ನಮ್ಮ ಮನದಲ್ಲಿ  ಚಿತ್ರಣವನ್ನು ಮೂಡಿಸುತ್ತಾರೆ, ಹೀಗೆ ಒಂದು ಚಿತ್ರಣವನ್ನು  ಮೂಡಿಸಿ ಅಸ್ಪಷ್ಟ ಚಿತ್ರಣಕ್ಕೆ ಸ್ಪಷ್ಟ ಚಿತ್ರಣವನ್ನು ಯಾವುದೇ ಪಾತ್ರಕ್ಕೆ ಕೊಡುವ ಶಕ್ತಿ ಕನ್ನಡವಷ್ಟೇ ಅಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಇದ್ದಿದ್ದರೆ ಅದು ಡಾ ರಾಜ್ ಮಾತ್ರ, ಇತ್ತ  ಪೊಲೀಸ್ ಅಧಿಕಾರಿಯಾಗಿಯೂ ಸೈ ಅತ್ತ ಪೌರಾಣಿಕ ಪಾತ್ರಕ್ಕೂ ಸೈ ಹೀಗೆ ನಾನಾ ಪಾತ್ರಗಳನ್ನು ಮಾಡಿ ಕನ್ನಡ ಕುಲಕೋಟಿಗಳ ಹೃದಯದಲ್ಲಿ ಶಾಶ್ವತ ಜಾಗ ಮಾಡಿ ಕೊಂಡ ರಾಜಣ್ಣ  ನ ೮೮ ನೇ ಜನ್ಮೋತ್ಸವ ಹಲವು ಕಾರಣಗಳಿಗೆ ನೆನಪಲ್ಲಿ ಉಳಿಯುವಂತಾಗಿದೆ.

ಮೊನ್ನೆ ಮೊನ್ನೆ ೨೪ ರಂದು ಡಾ ರಾಜ್ ರವರ ೮೮ ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇಡೀ ಕರುನಾಡೇ ಪಾಲ್ಗೊಂಡಿತ್ತು.  ಸಮಸ್ತ ಕನ್ನಡಿಗರಲ್ಲಿ ಸಾಹಿತಿಗಳನ್ನು ಹೊರತಾಗಿ,ಕನ್ನಡ ಪ್ರಜ್ಞೆಯನ್ನು ಬೆಳಗಿಸಿದ ಹರಿಕಾರನೊಬ್ಬನಿದ್ದರೆ  ಅದು ಡಾ ರಾಜ್ ಮಾತ್ರ ಸರಳ ವ್ಯಕ್ತಿತ್ವದ ಯುಗಪುರಷನ ಹುಟ್ಟು ಹಬ್ಬದೊಂದು ಸಂತಸವನ್ನು ಉಂಟು  ಮಾಡಿದ ಮತ್ತೊಂದು ವಿಷಯವೆಂದರೆ ಅಂದು ಗೂಗಲ್ ಡೂಡಲ್ ನಲ್ಲಿ ಡಾ ರಾಜ್ ರಾರಾಜಿಸಿದ್ದು.  ಟಿ , ಬಿ ಟಿ ಯಲ್ಲಿ ಕಾಯಕ ಕಂಡು ಕೊಂಡ ಕನ್ನಡಿಗರಂತೂ ಅಂದು ತಮ್ಮ ಚಿತ್ರವನ್ನೇ ಗೂಗಲ್ ಡೂಡಲ್ ನಲ್ಲಿ ಹಾಕಿದ್ದಾರೆ ಎಂಬಷ್ಟು ಸಂತಸಗೊಂಡಿದ್ದರು.ಗೂಗಲ್ ಡೂಡಲ್ ನಲ್ಲಿ ಪ್ರಕಟವಾದ ಚಿತ್ರವನ್ನು ತೆಗೆದು ವಾಟ್ಸಪ್, ಫೇಸ್ಬುಕ್ ಹೀಗೆ ಹಲವು ಸಾಮಾಜಿಕ ತಾಣದಲ್ಲಿ ಹೆಮ್ಮೆಯಿಂದ ಹರಿಯಬಿಟ್ಟಿದೆ ಬಿಟ್ಟಿದು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದ್ದರು ತಾವು ಕೆಲಸ ಮಾಡುವ ಜಾಗದಲ್ಲಿ ಒಂದೋ ತಮಿಳರ ಪ್ರಾಭಲ್ಯ, ಇಲ್ಲವೇ ತೆಲುಗರ ಪ್ರಾಭಲ್ಯ ಅದು ಇಲ್ಲದಿದ್ದರೆ ಗುಜರಾತಿಗಳ ಪ್ರಾಭಲ್ಯವನ್ನು ಕಂಡು ರೋಸಿ ಹೋಗಿದ್ದ ಕನ್ನಡಿಗ ಅಂದು ಡಾ ರಾಜ್ ಅಂದ್ರೆ ಏನು ತಿಳ್ಕೊಂಡಿದೀರಾ ಕಣ್ರೀ "ಈವನ್ ಗೂಗಲ್ ಮಾರ್ಕ್ ರೆಸ್ಪೆಕ್ಟ್ ಟು ಹಿಮ್ " ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು, ಕೆಲವರು ಅದ್ರಲ್ಲೇನಿದೆ ಮಹಾ ಎಂದು ಹೇಳಬಹದು ಆದರೆ ವಿಷಯಗಳು ನಿಮಗೆ ಗೊತ್ತಿರಬೇಕು ಇದುವರೆಗೆ ಕೆಲವೇ ಕೆಲವು ಹಿಂಧಿ ಸಿನಿ ತಾರೆಯರು ಗೌರವಕ್ಕೆ ಪಾತ್ರರಾದವರು ಅವರಲ್ಲಿ ನರ್ಗಿಸ್ ದತ್, ರಾಜ್ ಕಪೂರ್ ಹೀಗೆ ಕೆಲವೇ ಹೆಸರುಗಳು, ಮಧ್ಯೆ ಕೆಲವರ ಅತಿಉತ್ಸಾಹದಲ್ಲಿ ಇದು ನಿಮಗೆ ಗೊತ್ತಿರಲಿ ದಕ್ಷಿಣ ಭಾರತದ ಯಾವ ನಾಯಕನಿಗೂ ಇದುವರೆಗೆ ಸಿಕ್ಕಿಲ್ಲ, ಗೌರವಕ್ಕೆ ಭಾಜನವಾದವರು ನಾವೇ ಫಸ್ಟ್ ತಮಿಳಿನ ನಟನಿಗೂ ಸಿಕ್ಕಿಲ್ಲ , ತೆಲುಗಿನ ನಟನಿಗೂ ಸಿಕ್ಕಿಲ್ಲ ಎಂದು ಟ್ರೊಲ್ ಮಾಡಿದರು ಬಹುಷ್ಯ ಇದು ಬೇಕಾಗಿರಲಿಲ್ಲ ಡಾ ರಾಜ್ ನಮ್ಮೆಲ್ಲರ ಹೆಮ್ಮೆ ನಿಜ ಹಾಗು ಅವರೆಂದು ತಾನೇ ದೊಡ್ಡವನು ಅಂದುಕೊಂಡಿರಲಿಲ್ಲ ಆದ್ದರಿಂದ  ಬೇರೆಯವರ ಭಾವನೆಗಳನ್ನು ಘಾಸಿಗೊಳಿಸಿ ಟ್ರೊಲ್ ಮಾಡುವ ಅವಶ್ಯಕತೆ ಇರಲಿಲ್ಲವೇನೋ ಅದೇನೇ ಇರಲಿ ಅಭಿಮಾನಿಗಳ ಅಭಿಮಾನವೇ ಬಗೆಯದು ಆದ್ದರಿಂದಲೇ ಅಲ್ಲವೇ ಅಣ್ಣಾವ್ರು "ಅಭಿಮಾನಿ ದೇವರುಗಳೇ" ಎಂದು ಅಭಿಮಾನಿಗಳನ್ನು ಸಂಭೋದಿಸಿದ್ದು, ಹೀಗೆ ಅಂದು ಗೂಗಲ್ ಆಹ್ಲಾದಕರವಾದ ಕೊಡುಗೆ ಎಲ್ಲರನ್ನು ಸಂತಸಗೊಳಿಸಿತ್ತು.


ಇತ್ತ ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿ ಡಾ ರಾಜ್ ಜನ್ಮೋತ್ಸವವನ್ನು ಇನ್ನುಮುಂದೆ ಸರ್ಕಾರೀ ಕಾರ್ಯಕ್ರಮವಾಗಿ ಆಚರಿಸುತ್ತೇವೆ ಎಂದು ಘೋಷಿಸಿದೆ, ಈ ಘೋಷಣೆ ಕೇವಲ ತೋರುಗಾಣಿಕೆಯ ಸಂಭ್ರಮ ವಾಗದೆ ಆ ದಿನದಂದು ಕೇವಲ ಸರ್ಕಾರೀ ಕಚೇರಿಗಳಲ್ಲಿ ಡಾ ರಾಜ್ ಅವರ ಬಗ್ಗೆ ಒಂದು ಭಾಷಣ ಮಾಡಿ ಪುಷ್ಪ ಮಾಲೆ ಸಮರ್ಪಿಸಿ ಮುಗಿಯಿತು ಎನ್ನುವ ಮನೋಭಾವನೆ ಇರಬಾರದು ಏಕೆಂದರೆ ಈ ಕೆಲಸವನ್ನು ಸರ್ಕಾರ ಮಾಡದಿದ್ದರೂ ಅವರ ಅಭಿಮಾನಿಗಳು ಸೂರ್ಯ ಚಂದ್ರರಿರುವ ವರೆಗೂ ಮಾಡಿಯೇ ಮಾಡುತ್ತಾರೆ , ಕರುನಾಡು ಎಂಬ ಈ ನಾಡು ಭೂಪಟದಲ್ಲಿ ಅಸ್ಥಿತ್ವದಲ್ಲಿರುವ ವರೆಗೂ ಡಾ ರಾಜ್  ಒಂದಲ್ಲ ಒಂದು ಕಡೆ ಹಾಡುತಿರುತ್ತಾರೆ, ಜನ ಅವರ ಅಭಿನಯವನ್ನು ಕಂಡು ಕಣ್ ತುಂಬಿಸಿಕೊಳ್ಳುತ್ತಿರುತ್ತಾರೆ ಆದ್ದರಿಂದ ಡಾ ರಾಜ್ ಜನ್ಮದಿನೋತ್ಸವ ಕೇವಲ ಸರ್ಕಾರೀ ಪ್ರಾಯೋಜಿತ ಕಾರ್ಯಕ್ರಮವಾಗದೆ ಅಂದು ಒಂದು ದಿನವಾದರೂ ಪಕ್ಷಭೇದ ಮರೆತು ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆದು ಕನ್ನಡ ನಾಡಿನ ಒಳಿತು, ಕನ್ನಡ ಮತ್ತು ಕನ್ನಡ ನೆಲದ ಸಮಗ್ರ ಅಭಿವೃದ್ಧಿ ಹಾಗು ಕನ್ನಡ ಕೆಲಸಗಳ ಬಗ್ಗೆ ಚರ್ಚೆ ಮಾಡಿ ಆ ನಿಟ್ಟಿನಲ್ಲಿ ಸಕಾರಾತ್ಮಕ ನಿರ್ಣಯವನ್ನು ತೆಗೆದುಕೊಳ್ಳುವಂತಾದರೆ ಅದು ಡಾ ರಾಜ್ ಅವರಿಗೆ ಸಮರ್ಪಣೆ ಮಾಡಬಹುದಾದ ಅತಿ ದೊಡ್ಡ ಗೌರವ , ಡಾ ರಾಜ್  ಹೇಳುವ ಹಾಗೆ ಕಲಾವಿದನೊಬ್ಬ ಬಯಸುವುದು ಒಂದೊಳ್ಳೆ ಮಾತು ಮತ್ತು ಚಪ್ಪಾಳೆ ಎಂಬ ಪ್ರೋತ್ಸಾಹ , ಅದೇ ರೀತಿ ಡಾ ರಾಜ್ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆಶಯ ಅಂದಿಗೂ, ಇಂದಿಗೂ ಎಂದೆಂದಿಗೂ ಕರುನಾಡು ಮತ್ತು ಕರುನಾಡಿನ ಕಟ್ಟಕಡೆಯ ಪ್ರಜೆಯ ಸಮಗ್ರ ಅಭ್ಯುದಯ, ನೀವು ಅದನ್ನೇ ಬಯಸುತ್ತೀರೆಂದುಕೊಂಡಿದ್ದೇನೆ - ಜೈ ಭುವನೇಶ್ವರಿ.

Tuesday, April 18, 2017

ಕಿರು ತೆರೆಯ ಹಿರಿಯ ಮಾಂತ್ರಿಕ ಹಿರಿತರೆಯಲ್ಲೂ ಗೆಲ್ಲಲಿ, ಆ ಮೂಲಕ ದೊಡ್ಡ ಪರದೆಯಲ್ಲು ಮಾಯಾಮೃಗ ಮುಕ್ತವಾಗಿ ಓಡಾಡುತ್ತ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿ.

ನನಗಿನ್ನೂ ನೆನಪಿದೆ, ಅದು ಚಿಗುರು ಮೀಸೆಯ ಕಾಲೇಜು ದಿನಗಳಿಗೆ ಕಾಲಿಟ್ಟ ಘಳಿಗೆ, ಬೆಳಗ್ಗೆ ಪದವಿ ಕಾಲೇಜಿನ ತರಗತಿ ನಡೆಯುತ್ತಿದ್ದರೆ ಮಠ ಮಠ ಮಧ್ಯಾಹ್ನ ಪದವಿ ಪೂರ್ವ ತರಗತಿಗಳು ನಡೆಯುತ್ತಿದ್ದವು, ಆಗೆಲ್ಲ ಕಾಲೇಜು ಅಂದರೆ ಬೆಂಗಳೂರಿನಲ್ಲಿ  ಕಾಣ ಸಿಗುವ ೩೦* ೪೦ ಅಥವಾ ೬೦*೪೦ ಅಳತೆಯ ಜಾಗದ ಕಟ್ಟಡಗಳಲ್ಲಿ ಒಂದು ೨೦ ಕೋಣೆ ಅದ್ರಲ್ಲಿ ಹವಾನಿಯಂತ್ರಣ ಕೊಠಡಿಗಳು ಹೀಗಿರುತಿರಲಿಲ್ಲ, ಕಾಲೇಜು ಕೊಠಡಿಗಳೆಂದರೆ ಎಲ್ಲವು ಮುಕ್ತ ಮುಕ್ತ ಅಂದರೆ ಅತಿ ವಿಶಾಲವಾದ ಕೊಠಡಿಗಳು ಆದರೆ ಕೊಠಡಿಗಳಿಗೆ ಕಿಟಕಿ ಬಾಗಿಲುಗಳು ಇರುತ್ತಿರಲಿಲ್ಲ ಕಿಟಕಿಗಳಿಗೆ ಚೌಕಟ್ಟೇ ಇರುತ್ತಿರಲಿಲ್ಲ ಅಂದ ಮೇಲೆ ಬಾಗಿಲೆಲ್ಲಿಂದ, ಇಷ್ಟು ವಿವರ ಕೊಟ್ಟ ಮೇಲೆ ಹಾಜರಾತಿ ಹಾಕಿದ ಮೇಲೆ ಸುಸಂಕೃತ ಹುಡುಗರು ಏನು ಮಾಡುತ್ತಿದ್ದರೆಂದು ಹೇಳುವ ಅವಶ್ಯಕತೆಯಿಲ್ಲ ಎಂದು ಕೊಂಡಿದ್ದೇನೆ, ಅದಿರಲಿ ವಿಷಯವನ್ನು ಪ್ರಸ್ತಾಪಿಸುವ ಭರದಲ್ಲಿ ಪ್ರಾರಂಭಿಕ ಒಕ್ಕಣೆಯನ್ನು ನಿಮಗೊಪ್ಪಿಸಬೇಕಾಯಿತು, ಮಧ್ಯಾಹ್ನದ ತರಗತಿಗಳೆಂದರೆ ಹೇಗಿರುತ್ತದೆ ಎಂದು ಹೇಳುವ ಅವಶ್ಯಕತೆಯಿಲ್ಲ ಎಂದು ಕೊಂಡಿದ್ದೇನೆ, ತರಗತಿಗಳು ೧೨:೧೫ ಕ್ಕೆ ಪ್ರಾರಂಭವಾದರೆ :೧೫ ಕ್ಕೆ ಮುಕ್ತಾಯ, ಇಷ್ಟವಿದೆಯೋ ಇಲ್ಲವೋ ಕ್ಲಿಷ್ಟ ವಿಷಯಗಳಾದ ಅರ್ಥಶಾಸ್ತ್ರ, ಸ್ಟ್ಯಾಟಿಸ್ಟಿಕ್ಸ್, ಅಕೌಂಟೆನ್ಸಿ ತರಗತಿಗಳು ನಡೆಯುತ್ತಿದುದ್ದೇ ಕಾಲೇಜಿನ ಕೊನೆಯ ಅವಧಿಯಲ್ಲಿ ಆದ್ದರಿಂದ ಮೊದಲನೇ ಬೆಂಚಿನ ವಿದ್ಯಾರ್ಥಿಗಳೊಂದಿಗೆ ಲಾಸ್ಟ ಬೆಂಚಿನ ಸುಸಂಕೃತ ವಿದ್ಯಾರ್ಥಿಗಳೂ  ಹಾಜರ್.

       ಇಂತಹ ಸಂಧರ್ಭದಲ್ಲಿ ನನ್ನ ಒಬ್ಬ ಸ್ನೇಹಿತ ಉಮೇಶ ಅಥವಾ ರಘು ಇರಬಹದು ಸರಿಯಾಗಿ ನೆನಪಾಗುತಿಲ್ಲ ಬಹುಷ್ಯ ಮೂರು ಗಂಟೆಗೊ ನಾಲ್ಕು ಘಂಟೆಗೊ ಚಡಪಡಿಸಲು ಪ್ರಾರಂಭಿಸುತ್ತಿದ - ಹೋಗ್ಬೇಕಪ್ಪ ಹೋಗ್ಬೇಕು ಎಂದು, ಎಲ್ಲಿ ಹೋಗ್ಬೇಕು ಗುರುವೇ ಅಂದೇ ಮನೆಗೆ ಗುರು ಎಂಬ ಉತ್ತರ ಬಂತು, ಯಾಕಪ್ಪ ಮನೆಗೆ ಹೋಗೋ ಆತುರ ಎಂದರೆ, ಮಾಯಾಮೃಗ ಸೀರಿಯಲ್ ಶುರು ಆಗತ್ತೆ ಕಣಪ್ಪ ನೋಡ್ಬೇಕು ಎಂದಾಗ ನನ್ನನು ಒಡಗೂಡಿ ಸ್ನೇಹಿತರೆಲ್ಲರೂ ಬೇರೆಯ ಗ್ರಹದಿಂದ ಯಾವುದೊ ಜೀವಿಯೊಂದು ಬಂದಂತೆ ಅವನನ್ನ ದಿಟ್ಟಿಸಿ ನೋಡಿದೆವು, ಆಗ ಧಾರಾವಾಹಿಗಳೆಂದರೆ ಅದು ಕೇವಲ ಹೆಂಗಳೆಯರಿಗಷ್ಟೇ ಸೀಮಿತವಾದದ್ದು ಎಂದು ನಂಬಿದಂತಹ ಸಮಯ, ಕೊನೆಗೆ ಅವನು ನಮ್ಮಿಂದ ಹೇಗೋ ತಪ್ಪಿಸಿಕೊಂಡು ಹೋದ, ಆದ್ರೆ ಅವನು ಹೋದ ನಂತರ ಒಬ್ಬೊಬರಾಗಿ ಅವನು ಹೇಳಿದ್ದು ನಿಜ ನಮ್ಮ ಮನೇಲೂ ಎಲ್ರು ನೋಡ್ತಾರೆ , ಟೈಟಲ್ ಸಾಂಗ್ ಅಂತೂ ಸೂಪರ್ ಎಂದು ಬಾಯಿ ಬಿಡತೊಡಗಿದರು, ಸರಿ ಹಾಗಾದರೆ ನೋಡಿಯೇ ಬಿಡೋಣ ಎಂದು ಎಲ್ಲರು ಧಾರಾವಾಹಿಯನ್ನು ಚಕ್ಕರ್ ಹೊಡೆದಾದರೂ ಸರಿ ನೋಡಿಯೇ ಬಿಡುವುದೆಂದು ತೀರ್ಮಾನಿಸಿ ಮನೆಕಡೆ ಹೊರಟರೆ, ಮನೆಯ ಆಸು ಪಾಸು, ಓಣಿ ಗಳೆಲ್ಲ ಸ್ಥಬ್ಧ ಸ್ಥಬ್ಧ, ಬಗೆಯ ಕ್ರೇಝು, ಮನೆಗೆ ಹೋದರೆ ಟೀ ಬೇಕಾದ್ರೆ ಈಗಲೇ ಹೇಳಬೇಕು, ಮೇಲೆ ಸೀರಿಯಲ್ ಶುರುವಾದ ಮೇಲೆ ಅದು ಇದು ಕೇಳಬೇಡ ಎಂಬ ತಾಕೀತು, ಹೀಗೆ ಅಕ್ಕ ಪಕ್ಕದವರು, ಸ್ನೇಹಿತರು ಎಲ್ಲರು ಟೀ ವಿ ಮುಂದೆ ಹಾಜರ್, ಒಂದು ರೀತಿಯ ರಾಮಾಯಣ, ಮಹಾಭಾರತ್ ಪ್ರಸ್ರವಾಗುತ್ತಿದ್ದಾಗ ಇರುತ್ತಿದ್ದ ನಿಶಬ್ದ ವಾತಾವರಣವನ್ನು ನೆನಪಿಸುತ್ತಿತ್ತು, ಇದೆಲ್ಲದರ ನಡುವೆ ಮಾಯಾಮೃಗದ ಶೀರ್ಷಿಕೆ ಗೀತೆ   

"ಬಲು ದೂರದಿ ಹೊಳೆಯುತ್ತಿದೆ ಬಾನೀಲಿಯಾ ಕೆಳಗೆ, ಬಲು ದೂರದಿ ಹೊಳೆಯುತ್ತಿದೆ ಬಾನೀಲಿಯಾ ಕೆಳಗೆ
ಹೊಳೆಯುತ್ತಿದೆ ಕಣ್ಣಂತೂ ಗಿರಿವಜ್ರದ ಹಾಗೆ, ಹೊಳೆಯುತ್ತಿದೆ ಕಣ್ಣಂತೂ ಗಿರಿವಜ್ರದ ಹಾಗೆ
ಶರ ವೇಗದಿ ಚಲಿಸುತ್ತಿದೆ ಮಾಯಾಮೃಗವೆಲ್ಲಿ , ಶರ ವೇಗದಿ ಚಲಿಸುತ್ತಿದೆ ಮಾಯಾಮೃಗವೆಲ್ಲಿ
ಮಾಯಾ ಮೃಗ ಮಾಯಾ ಮೃಗ ಮಾಯಾ ಮೃಗ ವೆಲ್ಲಿ ಎಂದು ರಿಂಗಣಿಸಿತು ನೋಡಿನಾಡಗೀತೆಯೋ ಎಂಬಂತೆ ಎಲ್ಲರ ದನಿ ಟಿ ವಿ ದನಿಗೆ ಗೊತ್ತಿಲ್ಲದೆ ದನಿ ಗೂಡಿಸುತ್ತಿತ್ತು.

ಹೀಗೆ ಸೀತಾರಾಮ್ ಅವರ ಕಿರು ತೆರೆಯ ಮಾಂತ್ರಿಕತೆಗೆ ಹಿರಿಯರು ಕಿರಿಯರು ಎನ್ನದೆ ಎಲ್ಲ ಜನರು ಮಾರುಹೋಗಿದ್ದರು, ಮಾಯಾ ಮೃಗ , ಮುಕ್ತ , ಮುಕ್ತ ಮುಕ್ತ , ಮನ್ವಂತರ ದಂತ ಧಾರಾವಾಹಿಯಿಂದ ಕಿರು ತೆರೆಯ ನಿರ್ದೇಶಕರಿಗೂ ಒಂದು ಸ್ಟಾರ್ ವ್ಯಾಲ್ಯೂ ಸೀತಾರಾಮ್ ತಂದು ಕೊಟ್ಟರು, ಜನರಿಗೆ ಇಷ್ಟವಾಗುತಿದ್ದಿದ್ದು ಅವರ ಧಾರಾವಾಹಿಗಳಲ್ಲಿ ಆಯ್ಕೆ ಮಾಡಿಕೊಳ್ಳುತ್ತಿದ್ದ ವಸ್ತು ಮತ್ತು ಅದರ ಆಶಯಗಳು. ಮಧ್ಯಮ ವರ್ಗದ ದಿನ ನಿತ್ಯದ ಆಗು ಹೋಗುಗಳು, ಹಾಗು ಆಗು ಹೋಗುಗಳಲ್ಲಿ ಬಂದೆರಗುವ ಪ್ರಯಾಸಗಳು ಮತ್ತು ಪ್ರಯಾಸಗಳನ್ನುಂಟು ಮಾಡುವ ದುಷ್ಟ ಕೂಟ, ದುಷ್ಟ ಕೂಟದೊಡನೆ ಸೆಣಸಾಡುವ ಮಧ್ಯಮ ವರ್ಗ, ದುಷ್ಟ ಕೂಟವನ್ನು ಸದೆ ಬಡಿಯಲು ಕೋರ್ಟ್ ಸೀನ್ , ಹೀಗೆ ಮಧ್ಯಮ ವರ್ಗದಲ್ಲಿ ಕೆಲವು ಪಾತ್ರಗಳ ಮೂಲಕ, ನೈತಿಕ ಜವಾಬ್ಧಾರಿ , ಸ್ಥ್ಯರ್ಯ, ಆತ್ಮ ವಿಶ್ವಾಸ ಮತ್ತು ಒಂದು ಆಶಾಭಾವ ವನ್ನು ತುಂಬುವ ಪ್ರಯತ್ನ ಹಾಗು ಸಮಯೋಚಿತವಾಗಿ ಹಿರಿಯ ಕವಿಗಳ ಕವಿತೆಗಳ ಬಳಕೆ ಹೀಗೆ ಒಂದೇ ಎರಡೇ ಹೇಳುತ್ತಾ ಹೋದರೆ ಹಲವು ವ್ಯವಿಧ್ಯಗಳ ಸರಮಾಲೆ ಸೃಷ್ಟಿಸಿದ ಶಕ್ತಿ ಟಿ ಎನ್ ಸೀತಾರಾಮ್ ಅವರದು, ಅವರ ಸಿ ಎಸ ಪಿ ಎಂಬ ಪಾತ್ರವಂತೂ ಜನಮಾನಸದಲ್ಲಿ ಎಷ್ಟೊಂದು ಪ್ರಭಾವ ಬೀರಿತ್ತೆಂದರೆ ನನ್ನ ವಕೀಲ ಮಿತ್ರರ ಬಾಯಲ್ಲೇ ಕೇಳಬೇಕು, ಕೆಲವು ಕಕ್ಷಿದಾರರು ಬಂದು ಸರ್ ಬೇಕಾದ್ರೆ ಸಿ ಎಸ ಪಿ ಸೀರಿಯಲ್ ರೆಕಾರ್ಡ್ ಮಾಡ್ಕೊಂಡ್ ನೋಡ್ರಿ, ಬೇಕಾದ್ರೆ ನಿಮಿಗೆ ರೊಕ್ಕ ಕೊಡ್ತೀವಿ ಒಂದ್ ಸಲ ಭೇಟಿ ಮಾಡಿ ಬರ್ರಿ ಕೇಸ್ ಫೈಟ್ ಹ್ಯಾಂಗ ಮಾಡಬೇಕು ಅಂತ ಭಾಳ್ ಚಲೋ ಹೇಳ್ತಾರ್ ಎನ್ನುತ್ತಿದ್ದರಂತೆ, ಹೀಗೆ ತನ್ನದೇ ಆದ ಸಹೃದಯ ನೋಡುಗ ವೃಂದವನ್ನ ಸೃಷ್ಟಿಸಿಕೊಂಡ ಸಿ ಸ್ ಪಿ ಖ್ಯಾತಿಯ ಸೀತಾರಾಮ್ ಅವರಿಗೆ ಅವರೇ ಸಾಟಿ.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಯುವಕರನ್ನು ನಾಚಿಸುವಂತೆ ಹೆಚ್ಚು ಹೆಚ್ಚು ಕಾರ್ಯಶೀಲರಾಗಿರುವ ಅವರ ಹೊಸ ಹೊಸ ಯೋಜನೆಗಳನ್ನು ನೋಡಿದಾಗ ಇದನೆಲ್ಲ ನಿಮ್ಮ ಬಳಿ ಹಂಚಿ ಕೊಳ್ಳಬೇಕೆನಿಸಿತು, ಕಿರು ತೆರೆಯ ಮೋಡಿಗಾರ ಹಿರಿ ತೆರೆಯಲ್ಲೂ ಅವರ ನೂತನ ಚಿತ್ರ "ಕಾಫಿ ತೋಟ" ಮೂಲಕ ಮೋಡಿ ಮಾಡಲಿ ಎಂಬ ಹಾರೈಕೆ ,ಏಕೆಂದರೆ ಕಿರು ತೆರೆಯ ಮಾಯಾಮೃಗ, ಮುಕ್ತ , ಮನ್ವಂತರ ದಂತ ಸಾಲು ಸಾಲು ಯಶಸ್ಸು ನಾವು ದೊಡ್ಡ ಪರದೆಯಲ್ಲೂ ನೋಡಬೇಕು , ಸ್ರಜನಶೀಲ ವ್ಯಕ್ತಿತ್ವದ, ಸಮಾಜದೆಡೆಗೆ ಕಾಳಜಿ ಇಟ್ಟು ಕೊಂಡ ಮನಸ್ಸಿನ ಗೆಲುವು ಇಡೀ ಕನ್ನಡಿಗರ ಗೆಲುವು ಹೌದು ಎಂದು ಹೇಳುತ್ತಾ ಅವರಿಗೊಂದು ಬೆಸ್ಟ್ ಆಫ್ ಲಕ್.

Friday, April 14, 2017

ಈಶನೂರಲ್ಲಿ ಕೇಶವನಿಗೊಲಿದ ಮತದಾರ - ಪೊಲಿಟಿಕಲ್ ಕಮೆಂಟರಿ

 ಒಂದು ಕಡೆ ಸ್ವಾಭಿಮಾನಕ್ಕೆ ಪೆಟ್ಟಾಯಿತು ಹಾಗು ಅವಮಾನವಾಯಿತು ಎಂದು ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ರಾಜೀನಾಮೆಯಿಂದ ನಂಜನಗೂಡು ಶಾಸಕನಿಲ್ಲದೆ ತಬ್ಬಲಿಯಾದರೆ, ಗುಂಡ್ಲುಪೇಟೆಯಲ್ಲಿ ಸಚಿವ ಮಹಾದೇವ ಪ್ರಸಾದ್ ನಿಧನದಿಂದಾಗಿ ಶಾಸಕ ಸ್ಥಾನ ತೆರವಾಯಿತು, ಹೀಗೆ ಬೇಡದ ಚುನಾವಣೆ ನಂಜನಗೂಡು ಮತ್ತು ಗುಂಡ್ಲು ಪೇಟೆ ಜನರಿಗೆ ಬಂದೆರಗಿತು, ಗುಂಡ್ಲುಪೇಟೆಯದು ವಿಧಿಯಾಟವಾದರೆ ನಂಜನಗೂಡಿನದು ವ್ಯಕ್ತಿಗತ ಜಿದ್ದಿಗೆ ಬಿದ್ದು ಬರ ಮಾಡಿಕೊಂಡ ಬೇಡದ ಚುನಾವಣೆ ಎಂದು ಜನರೀಗ ಮಾತನಾಡುತ್ತಿದ್ದರೆ , ಶ್ರೀನಿವಾಸ ಪ್ರಸಾದ್ ಅವರೇ ಹೇಳುವ ಹಾಗೆ ಅವರದು ಇದು ಕೊನೆಯ ಚುನಾವಣೆ ಮತ್ತೆ ಚುನಾವಣಾ ಕಣಕ್ಕೆ ನಾನಿಲ್ಲ ಎಂದು ಘೋಷಿಸಿಕೊಂಡೇ ಕಣಕಿಳಿದಿದ್ದರು ಅಂದರೆ ೨೦೧೭ ರ ಉಪ ಚುನಾವಣೆಯೇ ಅಂತಿಮ ಹಾಗು ೨೦೧೮ರಲ್ಲಿ ಬರುವ ಚುನಾವಣೆಯಲ್ಲಿ ಅವರು ಸ್ಪರ್ದಿಸುವದಿಲ್ಲ ಎಂದು , ಹಾಗಾದರೆ ಕೇವಲ ವ್ಯಕ್ತಿಗತ ಜಿದ್ದಿಗೆ ಬಿದ್ದು ರಾಜೀನಾಮೆ ಕೊಡುವ ಅವಶ್ಯಕತೆಯೇನು ಎಂದು ಮತದಾರ ಅಂದು ಕೊಂಡನೋ ಏನು ಹಾಗೆ ಅಂದು ಕೊಂಡರೆ ಮತದಾರನ ಭಾವನೆ ಯಲ್ಲಿ ಯಾವ ದೋಷವು ಕಾಣದು, ಅದಿರಲಿ ಹಾಗೆ ಘೋಷಿಸಿಕೊಂಡ ಹೇಳಿಕೆಯೇ ಅವರಿಗೆ ಮುಳುವಾಯಿತೆ? ಏಕೆಂದರೆ ನೀವು ಯಾವುದೇ ಉಪ ಚುನಾವಣೆಯನ್ನು ತೆಗೆದುಕೊಳ್ಳಿ ಅಲ್ಲಿ ಭಾಗಷ ಅಳುವ ಪಕ್ಷದ್ದೇ ಮೇಲುಗೈ, ಮತದಾರ ಇಲ್ಲಿ ಇನ್ನುಳಿದ ಒಂದೋ ಎರಡೂ ವರ್ಷದಲ್ಲಿ ತನ್ನ ಕ್ಷೇತ್ರಕ್ಕೇನೂ ಲಾಭವಾಗುತ್ತದೆ ಎಂದು ನೋಡುತ್ತಾನೆಯೇ ಹೊರತು ಬೇರೇನೂ ಅಲ್ಲ,, ಅದರೊಂದಿಗೆ ಸ್ಥಳೀಯ ಸಮಸ್ಯೆಗಳು, ವಿಷಯಗಳು ಮುನ್ನೆಲೆಗೆ ಬಂದು ರಾಜ್ಯ ವ್ಯಾಪ್ತಿ ಹಾಗು ರಾಷ್ಟ್ರ ವ್ಯಾಪ್ತಿ ಚಾಲ್ತಿಯಲ್ಲಿದ್ದ ವಿಷಯಗಳು ಗೌಣವಾಗುತ್ತ ಹೋಗುತ್ತದೆ, ನಂಜನಗೂಡು ಹಾಗು ಗುಂಡ್ಲುಪೇಟೆಯಲ್ಲಾದದ್ದು ಅದೇ - ಇಲ್ಲದಿದ್ದರೆ ಎರಡು ದಶಕಗಳ ಹಿಂದೆ ಆದ ಬದನವಾಳು ಘಟನೆಯ ಕಹಿ ನೆನಪು ಚಾಲ್ತಿಗೆ ಬರುತ್ತಿತ್ತೇ? ಅದೇನೇ ಇರಲಿ ಶ್ರೀನಿವಾಸ ಪ್ರಸಾದ ಅವರ ಸೋಲು ವಯುಕ್ತಿಕ ಕಾರಣಗಳಿಗಾಗಿ ತೊಡೆ ತಟ್ಟಿ ಮುನ್ನಡೆದರೆ ಬಂದೆರಗುವ ಪರಿಣಾಮಕ್ಕೆ ಸಾಕ್ಷಿಯಾಗಿ ನಿಲ್ಲಲಿದೆ, ಹಾಗಾದರೆ ಶ್ರೀನಿವಾಸ ಪ್ರಸಾದರೆ ತಮ್ಮ ಸೋಲಿಗೆ ಹೊಣೆಯೇ ಎಂದು ನೋಡಲು ಹೊರಟರೆ ಉತ್ತರ ಕ್ಲಿಷ್ಟ ಏಕೆಂದರೆ, ಹಿರಿಯ ನಾಯಕರೊಬ್ಬರಿಗೆ ತೋರಬೇಕಾದ ಗೌರವ ಸಿಗಲಿಲ್ಲ ಎಂಬ ಅವರ ಅಳಲು ಸರಿಯಾಗಿಯೇ ಇದೆ ಆದರೆ ಕೇವಲ ಈ ಒಂದು ವಿಷಯಕ್ಕೆ ನಮ್ಮನ್ನೇಕೆ ಇನ್ನೊಂದು ಬೇಡದ ಚುನಾವಣೆಯ ಹೊಸ್ತಿಲಿಗೆ ತಂದು ನಿಲ್ಲಿಸುತ್ತೀರಿ ಎಂಬ ವಾದ ನಂಜನಗೂಡಿನ ಮತದಾರನದಿರಬಹುದು ಹಾಗು ರಾಜೀನಾಮೆ ಕೊಟ್ಟ ಸಂಧರ್ಭವು ಕೂಡ ಹಾಗೆ ಇದೆ ಗೆದ್ದರು ಮತ್ತೆ ಒಂದು ವರ್ಷದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತದೆ, ಹಾಗು ಕೊನೆಗೆ ಇವರು ಹೋಗಿ ಲ್ಯಾಂಡ್ ಆಗುವುದು ವಿರೋಧ ಪಕ್ಷದಲ್ಲಿ ಆದರಿಂದ ಇವರಿಗೇಕೆ ಮತ ಕೊಡುವ ಉಸಾಬರಿ ಎಂದು ಜಾಣ ಮತದಾರ ಯೋಚನೆ ಮಾಡಿರಬಹದು ಏಕೆಂದರೆ ಅಲ್ಲಿ "ನೋಟಾ" ಕ್ಕೆ ಚಾಲ್ತಿ ಯಾದ ೧೦೦೦ ಮತಗಳೇ ಮತದಾರನ ಜಾಣ್ಮೆ ಗೆ ಉದಾಹರಣೆ.

 ಇದೇನೇ ಇರಲಿ ಹಾಗಾದರೆ ಬಿ ಜೆ ಪಿ ಯಾ ಅಂಕ ಗಣಿತ ಉಲ್ಟಾ ಹೊಡೆದದ್ದೆಲ್ಲಿ ಎಂದು ನೋಡಲು ಹೊರಟರೆ, ಕೇವಲ ಅಂಕ ಗಣಿತದ ಬೆಂಬತ್ತಿ ಮೂಲ ನೆಲದ ಕೆಮೆಸ್ತ್ರಿಯೆಡೆ ಮುಖ ಮಾಡದೇ ಹೋಗಿದ್ದೆ ಸಮಸ್ಯೆಯ ಮೂಲ ಬಿ ಜೆ ಪಿ ಯು, ಬಿ ಯಸ್ ವೈ + ಶ್ರೀನಿವಾಸ ಪ್ರಸಾದ = ನಂಜನಗೂಡು ಈಸ್ ಈಸಿ ಕೇಕ್ ವಾಕ್ ಎಂದೆಣಿಸಿದರು, ಆದರೆ, ಈ ಅಂಕಗಣಿತದ ಕಾಂಬಿನೇಶನ್ ನೋಡಿದ ಕಾಂಗ್ರೆಸ್ ಮೊದಲು ಹಲವು ಹೆಸರನ್ನು ಹರಿಯಬಿಟ್ಟು, ಕೊನೆಗೆ ನಿಲ್ಲಿಸಿ ಗೆಲ್ಲಿಸಿದ್ದು ಕಳಲೆ ಕೇಶವ ಮೂರ್ತಿ ಯವರನ್ನು, ಹಾಗೆ ಕಾಂಗ್ರೆಸ್ ಈಶನೂರಿಗೆ ಕೇಶವನೇ ನಮ್ಮ ಕ್ಯಾಂಡಿಡೇಟ್ ಎಂದಾಗ ಪಂದ್ಯ ಹೆಚ್ಚು ರೋಚಕವಾಗುತ್ತ ಹೋಯಿತು, ಅದಕ್ಕೆ ಕಾರಣವಿಷ್ಟೇ ೨೦೧೩ ರ ವಿಧಾನಸಭೆಯ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ ಅವರಿಗೆ ಪ್ರಭಲ ಪೈಪೋಟಿಯನ್ನೊಡ್ಡಿ ಎರಡನೇ ಸ್ಥಾನಕ್ಕೆ ಸೀಮಿತವಾಗಿ, ಸತತ ಎರಡೆರಡು ಸೋಲಿನಿಂದ ಕಂಗೆಟ್ಟಿದ್ದ ಕಳಲೆ ಕೇಶವ ಮೂರ್ತಿ ಕೂಡ ಸರಿಯಾದ ಸಮಯಕ್ಕೆ ಕಾಯುತ್ತಿದ್ದರೇನೋ ಸಿಕ್ಕ ಅವಕಾಶವನ್ನು ಬಿಟ್ಟು ಕೊಡದೆ, ಹಾಗೆ ಕೇಶವ ಮೂರ್ತಿ ಯೇ ಅಭ್ಯರ್ಥಿ ಎಂದು ಘೋಷಣೆ ಯಾಗುತ್ತಿದಂತೆ ಕಾಂಗ್ರೆಸ್ ಅಂಕ ಗಣಿತದೊಂದಿಗೆ ಸ್ಥಳೀಯ "ಕೆಮಿಸ್ಟ್ರಿ" ಗು ಕೂಡ ಹೆಚ್ಚು ಒತ್ತು ಕೊಟ್ಟು ಒಂದು ವರ್ಗದ ಮತ ಹೆಚ್ಚು ದೃವೀಕರಣವಾಗುವಂತೆ ನೋಡಿಕೊಂಡಿತು, ಇದು ಅರ್ಥವಾಗಲು ಬಿ ಜೆ ಪಿ ಗಾಗಲಿ ಬಿ ಸ್ ವೈ  ಅವರಿಗಾಗಲಿ ಹೆಚ್ಚು ಸಮಯ ತೆಗೆದು ಕೊಳ್ಲಲಿಲ್ಲ

   ಇದೆಲ್ಲರ ಅರಿವಿದ್ದ ಬಿ ಸ್ ವೈ ಇನ್ನು ಸುಮ್ಮನಿದ್ದರಾಗದು ಎಂದು ೨೦೧೮ರಲ್ಲಿ ನನ್ನನು ಮುಖ್ಯಮಂತ್ರಿಯಾಗಿ ನೋಡಲಿಚ್ಚಿಸುವುದಾದರೆ ಈ ಚುನಾವಣೆಯಲ್ಲಿ ಪ್ರಸಾದ್ ಅವರನ್ನು ಬೆಂಬಲಿಸಿ ಎಂದು ಹೇಳಿ ಇದೆ ಫೈನಲ್ ಮ್ಯಾಚ್ ಎಂಬಂತೆ ಪ್ರಚಾರ ಮಾಡಿದರು, ಆದರೆ ಮತದಾರನ ಮನದಾಳದಲ್ಲಿ ಏನು ನಡೆಯುತ್ತಿತ್ತೋ ಬಲ್ಲವನ್ಯಾರು, ಅಥವಾ ಮತದಾರ ಎಂದೋ ಆದ ಘಟನೆಯನ್ನು ಮನದಾಳದಲ್ಲಿಟ್ಟುಕೊಂಡು ಶ್ರೀನಿವಾಸ್ ಪ್ರಸಾದ  ಎದುರಾಳಿಯಾಗಿ  ನಿಲ್ಲ ಬಲ್ಲ ಒಬ್ಬ ಪ್ರಭಲ ನಾಯಕನನ್ನು ಹುಡುಕುತ್ತಿತೋ ಏನೋ ಕೊನೆಗೆ ಈಶನೂರಿನ ಮತದಾರ ಒಲಿದದ್ದು ಕೇಶವನಿಗೆ


ಕೆಲವರು ಹೇಳುವ ಹಾಗೆ ಇನ್ನು ಮೇಲೆ ಒಂದು ವರ್ಗದ ಮತಗಳ ಧ್ರುವೀಕರಣ ನಡೆಯುವದಿಲ್ಲ ಎಂಬುದಕ್ಕೆ ಇದೇ ಚುನಾವಣೆ ಸಾಕ್ಷಿ ಎಂದು ಆದರೆ ಇದು ವರ್ಗ ವರ್ಗಗಳ ಮತಗಳ ಧ್ರುವೀಕರಣದ ಅಂತ್ಯವೋ ಪ್ರಾರಂಭವೋ?- ಅಂತ್ಯವಂತೂ ಅಲ್ಲ ಇದು ಪ್ರಾರಂಭವೇ, ಛೆ ನಮ್ಮ ನಾಯಕನಿಗೆ ಸೋಲಾಯಿತು ಎಂದು ಬಿ ಸ್ ವೈ ಬೆನ್ನಿಗೆ ನಿಂತಿರುವ ವರ್ಗ ನಿರ್ಧರಿಸಿದರೆ ಮತ್ತೊಂದು ಹಂತದ ಧ್ರುವೀಕರಣ ಪ್ರಾರಂಭಗೊಂಡಂತೆಯೇ ಲೆಕ್ಕ , ಇದೆಲ್ಲದರ ಮಧ್ಯೆ ಈ ಚುನಾವಣೆ ಪ್ರಭಲವಾಗಿ ಸ್ಥಾಪಿಸಿದ ಅಂಶವೆಂದರೆ ೨೦೧೮ ರ ಚುನಾವಣೆ ನಡೆಯುವುದು ಯಾರು ಏನೇ ಅಂದರು ಈ ಮೂರ್ವರಲಿ ನಿಮಗೆ ಹಿತ ಯಾರು ಎಂದು ಅಂದರೆ ಬಿ ಜೆ ಪಿ ಯಾ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿ ಸ್ ವೈ, ಜೆ ಡಿ ಯಸ್ ನಲ್ಲಿ "ಬ್ರದರ್" ಖ್ಯಾತಿಯ ಕುಮಾರಸ್ವಾಮಿ ಹಾಗು ಕಾಂಗ್ರೆಸ್ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಈ ಗೆಲುವಿನ ನಂತರ ನಡೆದ ಮುಖ್ಯಮಂತ್ರಿಯವರ ಪತ್ರಿಕಾ ಗೋಷ್ಠಿ ನೋಡಿದರೆ  ಪರೋಕ್ಷವಾಗಿ ಯಾದರು ಕಾಂಗ್ರೆಸ್ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ಎಂದು ಜನರ ಬಳಿ ಹೋಗಲಿದೆ ಎಂಬುವುದು ಸ್ಪಷ್ಟ ಆದ್ದರಿಂದ ಮುಂದಿನ ಚುನಾವಣೆಯ ಪಿಚ್ ಸಿದ್ಧವಿದೆ ಇನ್ನೇನಿದ್ದರೂ ಬ್ಯಾಟಿಂಗ್ ಹಾಗು ಬೌಲಿಂಗ್ ಬಾಕಿ ಯಾರು ಶತಕದ ಹೊಸ್ತಿಲನ್ನು ದಾಟಲಿದ್ದಾರೆ ಎಂದು ಕಾಡು ನೋಡಬೇಕು, ಕಾಂಗ್ರೆಸ್ ಹಿಂದೆಂದೂ ಇಲ್ಲದ ಆತ್ಮವಿಶ್ವಾಸದೊಂದಿಗೆ ಸಜ್ಜಾಗಿದೆ, ಆದರೆ ಎಲ್ಲರು ಇತಿಹಾಸವನೊಮ್ಮೆ ತಿರುಚಿ ತಿರುಚಿ ನೋಡುತ್ತಿರಬೇಕು, ಏಕೆಂದರೆ ಪ್ರತಿ ಉಪ ಚುನಾವಣೆಯನ್ನು ಲೀಲಾ ಜಾಲವಾಗಿ ಗೆದಿದ್ದ ಬಿ ಜೆ ಪಿ ೨೦೧೩ ರಲ್ಲಿ ಮುಗ್ಗರಿಸಿತ್ತು, ಅಷ್ಟೇ ಏಕೆ ಉತ್ತರ ಪ್ರದೇಶದಲ್ಲಿ ೨೦೧೬ ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಮಾಜವಾದಿ ಎಲ್ಲ ಸ್ಥಾನಗಳನ್ನು ಗೆದ್ದಿತ್ತು ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ಆದದ್ದೇನು? ಅದೇನೇ ಇರಲಿ ಈ ಚುನಾವಣೆ ಒಂದೊಂದು ಬಗೆಯಲ್ಲಿ ಎಲ್ಲ ಪಕ್ಷದವರನ್ನು ಸಾರ್ವತ್ರಿಕ ಚುನಾವಣೆಗೆ ಸಜ್ಜು ಗೊಳಿಸುತ್ತಿದೆ ಹಾಗು ತಮ್ಮ ತಂತ್ರ ಪ್ರತಿ ತಂತ್ರವನ್ನು ಮರು ಪರಿಶೀಲಿಸಲು ಒದಗಿಸಿ ಕೊಟ್ಟಿದೆ, ಆದರೆ ನಮ್ಮ ಗುರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಎಂದು ಹೇಳಿ ಕೊಂಡಿರುವ ಜೆ ಡಿ ಯಸ್  ನ ನಡೆ ಯಾಕೋ ಅನುಮಾನಕ್ಕೆ ಎಡೆ ಮಾಡಿ ಕೊಡುತ್ತಿದೆ, ಕಾರಣವಿಷ್ಟೇ ಹಳೆ ಮೈಸೂರು ಪ್ರಾಂತ್ಯ ವೇ ಜೆ ಡಿ ಯಸ್ ನ ಪ್ರಭಲ ಪ್ರಾಂತ್ಯ ಇಂಥಾ ಜಾಗದಲ್ಲೇ ಅಭ್ಯರ್ಥಿ ಯನ್ನು ಹಾಕದೆ ಇದ್ದರೆ ತಪ್ಪು ಸಂದೇಶ ಕಳಿಸಿದಂತಾಗಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಆಸೆಗೆ ಮುಳುವಾಗುವುದಿಲ್ಲವೇ? ಮೇಲ್ನೋಟಕ್ಕೆ ಬೇಡದ ಚುನವಾಣೆಯ ಗೊಡವೆ ನಮಗೇಕೆ ಎಂದರು ಕಾರ್ಯಕರ್ತರಲ್ಲಿ ಗೊಂದಲ ಮೂಡದೇ ಇರಲಾರದು ಹೀಗೆ ಯಾವುದು ಒಳಿತೋ ಕೆಡುಕೋ ಅವರವರೇ ತೀರ್ಮಾನಿಸಿಕೊಳ್ಳಬೇಕು ಹಾಗು ಪ್ರಚಾರದ ಅಬ್ಬರ ಮುಗಿದಿದೆ ಇನ್ನಾದರೂ ಬರದತ್ತ ಎಲ್ಲ ಪಕ್ಷಗಳು ಗಮನಹರಿಸುವರೇ? ಅಲ್ಲಿ ಅನ್ನದಾತ ಹನಿ ನೀರಿಗೂ ಕಾದು ಕುಳಿತಿದ್ದಾನೆ.  

Saturday, April 8, 2017

ದಾವಣಗೆರೆಯೆಂದರೆ ಕೇವಲ ಬೆಣ್ಣೆ ದೋಸೆಯಲ್ಲ

ಲೇಖನವನ್ನು ಒಂದು ಸ್ವಗತದಿಂದಲೇ ಪ್ರಾರಂಭಿಸುತ್ತಿದ್ದೇನೆ, ಏನ್ರಿ ಕಾರ್ತಿಕ್ ನೀವು ಮಂಗಳೂರಿನವ್ರ ಎಂದು  ನನ್ನ ಸಹದ್ಯೋಗಿಯೊಬ್ಬರು ಕೇಳಿದರು, ಮುಗುಳುನಗೆಯೊಂದಿಗೆ ನಮ್ಮ ತಾಯಿ ದಕ್ಷಿಣಕನ್ನಡವರು ಕಣ್ರೀ ಅಂದೇ, ಆಮೇಲೆ ನಿಮ್ಮ ವಿದ್ಯಾಭ್ಯಾಸ ಎಂದರು - ಹರಿಹರದ ಎಸ ಜೆ ವಿ ಪಿ ಕಾಲೇಜ್ನಲ್ಲಿ ಪದವಿ ತದನಂತರ ಬೆಂಗಳೂರಿನ PESIT ನಲ್ಲಿ ಸ್ನಾತಕೋತ್ತರ ಪದವಿ ಹೀಗೆ ಹೇಳಿ ಮುಗಿಸುವಶ್ಟರಲ್ಲಿ ಒಹೋ ಹರಿಹರ ದಾವಣಗೆರೆ , ಅದಕ್ಕ ನೋಡ್ರಿ ಒಳ್ಳೆ ಬೆಣ್ಣೆ ದೋಸೆ ಇದ್ದಂಗ ಇದ್ದೀರಾ ಎಂದು ಹೇಳಿದರು, ಆಗ ನಾನಂದು ಕೊಂಡದ್ದು ಹತ್ತು ಹಲವು ಯಶೋಗಾಥೆಗಳಿಗೆ ವೇದಿಕೆಯಾಗಬಲ್ಲ ಸಾಮರ್ಥ್ಯವಿರುವ ದಾವಣಗೆರೆ ಜನಮಾನಸದಲ್ಲಿ ಬೆಣ್ಣೆ ದೋಸೆಯಾಚೆಗೇಕೆ ಗುರುತಿಸಿಕೊಳ್ಳಲಿಲ್ಲವೇಕೆ ಎಂದು, ಅದೇನೇ ಇರಲಿ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ದಾವಣಗೆರೆ ಕಳೆದು ಹೋದ ಹಿರಿಮೆ ಗರಿಮೆ ಯನ್ನು ಮತ್ತೆ ಪ್ರತಿಷ್ಠಾಪಿಸಿಕೊಳ್ಳುವತ್ತ ಹೆಜ್ಜೆ ಇಡುತಿದ್ದೆ ಎಂದೆನಿಸಿದರೆ ಅತಿಶಯೋಕ್ತಿಯಲ್ಲ.

ಚಾಳುಕ್ಯರಾಳ್ವಿಕೆಯಲ್ಲಿ ಚಾಳುಕ್ಯರು ಆಗಾಗ ಸವಾರಿಗೆ ಬಂದಾಗ ದಣಿವಾರಿಸಿಕೊಳ್ಲಲು ದಾವಣಗೆರೆಯಲ್ಲಿ ತಂಗುತ್ತಿದ್ದರಂತೆ, ಹಾಗೆ ತಂಗುವಾಗ ದಣಿವಾರಿಸಿಕೊಳ್ಳಲು ಒಂದು ಕೆರೆಯನ್ನು ಕಟ್ಟಿಸಿದರು ಕೆರೆ ದಣಿವಿನ ಕೆರೆ ಎಂದು ಪ್ರಸಿದ್ಧಿ ಪಡೆಯಿತು ಕಾಲ ಕ್ರಮೇಣ ದಣಿವಿನ ಕೆರೆ ದಾವಣಗೆರೆಯಾಗಿರಬಹುದು ಎಂಬ ನಂಬಿಕೆ, ಆದರೆ ವಾದಕ್ಕೆ ಪುಷ್ಠಿ ನೀಡುವ ಕುರುಹುಗಳಿಲ್ಲ , ಇನ್ನೊಂದು ವಾದವೆಂದರೆ "ದೇವನಗರಿ" ಎಂದು ಕರೆಯಲ್ಪಡುತ್ತಿದ್ದ ಪ್ರದೇಶ ಕಾಲಕ್ರಮೇಣ ದಾವಣಗೆರೆಯಾಯಿತು ಎಂದು, ಹಾಗೆ ನೋಡಿದರೆ ದಾವಣಗೆರೆ ಯಾರು ಊಹೆಯು ಮಾಡದಿದ್ದ ಕಾಲದಲ್ಲಿಯೇ ಅಂದರೆ ೧೮೭೦ರಲ್ಲಿಯೇ ಪುರಸಭೆಯ ಸ್ಥಾನಮಾನ ಪಡೆದುಕೊಂಡಿತ್ತು ಎಂದರೆ ನೀವು ನಂಬಲೇಬೇಕು, ಭೂಗೋಳಿಕವಾಗಿ ದಾವಣಗೆರೆ ಕರ್ನಾಟಕದ ಕೇಂದ್ರಬಿಂದು, ಅಂದರೆ ಮಧ್ಯಭಾಗದಲ್ಲಿದೆ, ಇದೇ ಕಾರಣಕ್ಕಾಗಿ ಹಿಂದೊಮ್ಮೆ ದಾವಣಗೆರೆಯನ್ನು ಕರ್ನಾಟಕದ ರಾಜಧಾನಿಯನ್ನಾಗಿಸಬೇಕು ಎಂಬ ಪ್ರಯತ್ನ ನಡೆದಿತ್ತಂತೆ ಎಂದು  ಭಾರತೀಯ ಲೋಕ ಸೇವಾ ಅಧಿಕಾರಿಯೊಬ್ಬರು ಉಲ್ಲೇಖಿಸಿದ ನೆನಪು ಇನ್ನು ಹಸಿಯಾಗಿದೆ, ಆದ್ರೆ ಭಾಗ್ಯ ದಾವಣಗೆರೆಗೆ ಒಲಿಯಲಿಲ್ಲ, ದಿನಕ್ಕೂ ದಾವಣಗೆರೆಯ ಜನತೆ ದಾವಣಗೆರೆಯನ್ನು ಮುಂದೊಂದು ದಿನ ಕರ್ನಾಟಕದ ಎರಡನೇ ರಾಜಧಾನಿಯನ್ನಾಗಿಸಿಯಾರು ಎಂಬ ಪುಟ್ಟ ಭರವಸೆಯಲ್ಲಿದ್ದಾರೆ, ಹಾಗೆ ಮಾಡುವುದು ಸರಿಯೋ ತಪ್ಪೋ ಎನ್ನುವ ವಿಚಾರ ಬೇರೆ, ದಾವಣಗೆರೆ ಪ್ರಮುಖವಾಗಿ ಬಯಲು ಸೀಮೆಯಾಗಿ ಗುರುತಿಸಿಕೊಂಡರು ಅದರ ಪಕ್ಕದಲ್ಲಿ ಸಹ್ಯಾದ್ರಿಯ ತಪ್ಪಲಂಚಿನ ಮಲೆನಾಡಿನ ಶಿವಮೊಗ್ಗೆ, ಚಿಕ್ಕಮಗಳೂರು, ಇತ್ತ ಚಿತ್ರದುರ್ಗ, ಬಳ್ಳಾರಿ , ಹಾವೇರಿ ಹೀಗೆ ವಿವಿಧ ಸಂಸೃಕ್ತಿಯ ಜಿಲ್ಲೆಗಳನ್ನು ತನ್ ಸುತ್ತ ಸುತ್ತುವರಿಸಿಕೊಂಡು ತನ್ನದೇ ಸ್ವಂತ ಸಂಸೃಕ್ತಿಯನ್ನು ಬೆಳೆಸಿಕೊಂಡಿದೆ, ಹೀಗೆ ವ್ಯವಿಧ್ಯತೆಯಿಂದ ಸುತ್ತುವರಿದಿರುವುದರಿಂದಲೇ ಇಲ್ಲಿ ನಿಮಗೆ ಉತ್ತರದ ಭಕ್ರಿ (ರೊಟ್ಟಿ), ಎಣಗಾಯಿ ಪಲ್ಯ ಹಾಗು ದಕ್ಷಿಣದ ರಾಗಿ ಮುದ್ದೆಯು ಸಿಗುತ್ತದೆ.

   ಒಂದು ಕಾಲದಲ್ಲಿ ಮ್ಯಾಂಚೆಸ್ಟರ್ of ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ದಾವಣಗೆರೆಯಲ್ಲಿ ಇಂದು ಒಂದೇ ಒಂದು ಕಾಟನ್ ಮಿಲ್ ಇಲ್ಲ, ಪ್ರಖ್ಯಾತ ದಾವಣಗೆರೆ ಕಾಟನ್ ಮಿಲ್ ಇಂದು ಕೇವಲ ಇತಿಹಾಸವಷ್ಟೇ, ೧೯೮೦ ವರೆಗೂ ಉಚ್ಚ್ಪ್ರಯ ಸ್ಥಿತಿಯಲ್ಲಿದ್ದ ಬಟ್ಟೆ ಗಿರಣಿಗಳು ಹೇಳ ಹೆಸರಿಲ್ಲದಂತೆ ಹಿನ್ನಲೆಗೆ ಹೊರಟು ಹೋದವು, ಈಗ ದಾವಣಗೆರೆಎಂಬುದು ಕೇವಲ ಕೃಷಿ ಹಾಗು ವಾಣಿಜ್ಯ  ಕೇಂದ್ರವಾಗಿ ಬೆಳೆದಿದ್ದರು ಇತರೆ ನಗರಗಳನ್ನು ಮೀರಿಸಿ ಬೆಳೆಯುವ ತಾಕತ್ತಿದ್ದರು ಹಾಗೆ ಬೆಳೆಯಾಗಲಿಲ್ಲ ಎಂಬ ಕೊರಗು ದಾವಣಗೆರೆ, ಹರಿಹರ, ಹೊನ್ನಾಳಿ, ಚೆನ್ನಗಿರಿ, ಜಗಳೂರಿನ ಜನತೆಗೆ ಒಂದಿಲ್ಲ ಇನ್ನೊಂದು ರೂಪದಲ್ಲಿ ಸದಾ ಕಾಡುತ್ತದೆ, ಖಾರ್ಕಾನೆ ಗಳಿಗಂತೂ ಹೇಳಿ ಮಾಡಿಸಿದ ಜಾಗ ದಾವಣಗೆರೆ, ಇತರೆ ವಾಣಿಜ್ಯ ನಗರಗಳೊಂದಿಗೆ ಸಂಪರ್ಕಕ್ಕೆ ಕೂಡ ಹೇಳಿ ಮಾಡಿಸಿದ ತಾಣ  ದಾವಣಗೆರೆ , ದಾವಣಗೆರೆಯಿಂದ ಕೇವಲ ಹತ್ತು ಕಿ ಮೀ ಸಾಗಿ ಬಂದರೆ ತುಂಗಭದ್ರೆಯ ಸಮೃದ್ಧ ತಪ್ಪಲು, ತುಂಗಭದ್ರೆ ಹರಿಹರದಲ್ಲಿ ಹರಿದರು ಬೇಸಿಗೆಯಲ್ಲಿ ಹರಿಹರದ ಜನತೆಯ ನೀರಿನ ಆಹಾಕಾರ ಹೇಳಲಾತೀತ ಬರೆದರೆ ಅದೊಂದು ಪಿ ಎಚ್ ಡಿ ಗೆ ಯೋಗ್ಯ್ವದ ಪ್ರಭಂದ ವಾಗಬಹುದು , ಅದಿರಲಿ ಹೀಗೆ ಮ್ಯಾಂಚೆಸ್ಟರ್ of ಕರ್ನಾಟಕ ಎಂಬ ಹೆಗ್ಗಳಿಕೆ ಯನ್ನು ಕಳೆದುಕೊಂಡು ನಿಧಾನವಾಗಿ ದಾವಣಗೆರೆ ಮುಖ ಮಾಡಿದ್ದೂ ಕೃಷಿ ಹಾಗು ವಾಣಿಜ್ಯ ನಗರವಾಗುವತ್ತ, ಹೀಗೆ ಸಾಗುತ್ತ ಮುಂದೆ ಹೋಗಿ ಲಕ್ಷ್ಮಿ ಕಟಾಕ್ಷದೊಂದಿಗೆ ಸರಸ್ವತಿಯ ಕೃಪೆಯು ಇರಲಿ ಎಂದು ಹಲವು ಶಿಕ್ಷಣ ಸಂಸ್ಥೆಗಳು ಬೆಳೆಯಲು ಅನುಕೂಲವಾದ ವಾತಾವರಣವನ್ನು ಒದಗಿಸಿತು, ಅದರ ಫಲವಾಗಿ ವ್ಯದ್ಯಕೀಯ , ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಬೆಳೆದು ಹೆಮ್ಮರವಾಗಿ ಹಲವು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ.


  ಮೊನ್ನೆ ಮೊನ್ನೆಯಷ್ಟೇ ದಾವಣಗೆರೆಗೆ ಸ್ಮಾರ್ಟ್ ಸಿಟಿಯಾಗುವ ಯೋಗ ಒದಗಿ ಬಂದಾಗ ಹರಿಹರ ದಾವಣಗೆರೆಯಲ್ಲಿರುವವರಷ್ಟೇ ಅಲ್ಲದೆ, ಹರಿಹರ ದಾವಣಗೆರೆಯೊಂದಿಗೆ ಅವಿನಾಭಾವ ಸಂಭಂದವನ್ನಿಟ್ಟುಕೊಂಡವರೆಲ್ಲ ಹಿರಿ ಹಿರಿ ಹಿಗ್ಗಿದರು, ಅದೇ ರೀತಿ ಸ್ಮಾರ್ಟ್ ಸಿಟಿ ಯೊಂದಿಗೆ I T ಪಾರ್ಕ್ ಸ್ಥಾಪನೆಗೆ ಅವಕಾಶ ಒದಗಿ ಬಂದಿದೆ ಎಂದಾಗ   ಇದೆಲ್ಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದೆನಿಸಿತು, ಆದ್ರೆ I T ಪಾರ್ಕ್ ಹತ್ತರೊಳಗೆ ಮತ್ತೊಂದು ಎಂಬತಾಗದೆ, ಅಲ್ಲದೆ ಕೆಲವೊಂದು ಪ್ರದೇಶದಲ್ಲಿ ಉದ್ಘಾಟನೆಯಾಗಿ ಪಾಳು ಬಿದ್ದಿರುವ ಪಾರ್ಕ್ ನಂತಾಗಲು ಶತಾಯಗತಾಯ ಅವಕಾಶ ಕೊಡಬಾರದು, ಹೀಗೆ ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರದ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ of ಇಂಡಿಯಾದ ಪ್ರಭಂದಕರ ಬಳಿ   “ಎಜುಕೇಟಿಂಗ್ ಆನ್  ಡಿಜಿಟಲ್ ಇನಿಟಿಯೇಷನ್”  ಬಗ್ಗೆ ಮಾತನಾಡುವಾಗ ಅವರ ಕಾರ್ಯವ್ಯಖರಿ ಯನ್ನು ಕಂಡು ಸರ್ಕಾರೀ ಸಂಸ್ಥೆಯೊಂದು ಹೀಗೂ ಕೆಲಸ ಮಾಡಬಹುದೇ ಎಂದು ಕೇಳಿದಾಗ ಅವರಿಂದ ಬಂದ ಉತ್ತರ "ಎಜುಕೇಟಿಂಗ್ ಆನ್  ಡಿಜಿಟಲ್ ಇನಿಟಿಯೇಷನ್" ನಮ್ಮ ಪೂರ್ಣಾವಧಿ ಕೆಲಸವಲ್ಲ ಇದು ಕೇಂದ್ರ ಸರ್ಕಾರ ವಹಿಸಿರುವ ಹೆಚ್ಚುವರಿ ಕೆಲಸ ನಮ್ಮದೇನಿದ್ದರೂ I T ಪಾರ್ಕ್ ಸ್ಥಾಪಿಸಿ ಕುಂದು ಕೊರತೆಗಳಿಲ್ಲದಂತೆ ನೋಡಿಕೊಳ್ಳುವುದು ಎಂದರು, ಆಗ ಅನಿಸಿದ್ದು ಹೆಚ್ಚುವರಿ ಕೆಲಸವನ್ನೇ ಇಷ್ಟು ಅಚ್ಚು ಕಟ್ಟಾಗಿ ನಿಭಾಯಿಸುತ್ತಿದರೆ ಇನ್ನು ಇದನ್ನು ಬಿಟ್ಟೀಯಾರೆಯೇ? ಅದೇ ರೀತಿ ಸಂತಸದ ಸುದ್ದಿಯೆಂದರೆ ದಾವಣಗೆರೆಯಲ್ಲಿ ಸ್ಥಾಪನೆಯಾಗಲಿರುವ   I T ಪಾರ್ಕ್ ಮೇಲುಸ್ತುವಾರಿ "ಕೇಂದ್ರ ಸರ್ಕಾರದ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ of ಇಂಡಿಯದಡಿಯಲ್ಲಿಯೆಯೆ" ಇದಕ್ಕೆ ಪೂರಕವಾಗಿ ದಾವಣಗೆರೆಯ ಉಭಯ ಪಕ್ಷದ ನಾಯಕರುಗಳು ಯಾವ ಪಕ್ಷವೇ ಅಧಿಕಾರದಲ್ಲಿರಲಿ ದಾವಣಗೆರೆಗೆ ಸಂದ ಬೇಕಾದ ಅಭಿವೃದ್ಧಿ ಯೋಜನೆಗಳನ್ನು ಮಾಡಿಸಿಕೊಳ್ಳುವ ಕಲೆ ಕರಗತಗೊಳಿಸಿಕೊಂಡ್ದಿದಾರೆ, ಇವರೆಲ್ಲರೂ ಪಕ್ಷಭೇದ ಮರೆತು ಸಾಥ್ ಕೊಟ್ಟರೆ ದಾವಣಗೆರೆಯ ಜನರ ಕನಸು ನನಸಾಗುವ ಕಾಲ ಕೂಡಿ ಬಂದಿತೆಂದೇ ಲೆಕ್ಕ, ಆದ್ದರಿಂದಲೇ ನಾನು ಹೇಳಿದ್ದು ದಾವಣಗೆರೆಯೆಂದರೆ ಕೇವಲ ಬೆಣ್ಣೆ ದೋಸೆ,ಖಾರ ಮಂಡಕ್ಕಿ ಹಾಗು ಮಿರ್ಚಿ ಭಜಿ ಯೊಂದಿಗೆ ಅದರಾಚೆಗೂ ಬೆಳೆಯಬೇಕೆಂದು ನಿಮಗೂ ಹಾಗನ್ನಿಸಿರಬಹುದು ಅಲ್ಲವೇ?