Monday, December 9, 2024

 ತಾಳಿದವನು ಫಡ್ನವಿಸ್ ಆದಾನು.

ಅದು ೨೦೧೯ ರ ಸಮಯ ಉದ್ಧವ್ ಠಾಕ್ರೆ ತನ್ನನು ಮುಖ್ಯ ಮಂತ್ರಿ ಮಾಡಲಿಲ್ಲ ಎಂದು ಬಿ ಜೆ ಪಿ ಯ ಬಹು ಕಾಲದ ಗೆಳೆತನಕ್ಕೆ ಸೋಡಾ ಚೀಟಿ ಕೊಟ್ಟು ಹೊರಟಿದ್ದರು. ಇತ್ತ ಫಡ್ನವಿಸ್  ಅಜಿತ್ ಪವಾರರೊಡನೆ ಸೇರಿ ಮುಖ್ಯಮಂತ್ರಿಯಾಗಿ  ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಅಜಿತ್ ದಾದಾ ಯು ಟರ್ನ್ ಹೊಡೆದು ಮತ್ತೆ ಶರದ್ ಪವಾರ್ ರೊಂದಿಗೆ ಸೇರಿ  ದಂಗು ಬಡಿಸಿದ್ದರು. ಆಗ ಅಂದು ಫಡ್ನವಿಸ್ ತುಂಬಿದ ಶಾಸನ ಸಭೆಯಲ್ಲಿ "ತೊರೆಗಳು ಹಿಂದೆ ಸರಿಯುತ್ತಿವೆ ಎಂದು ಕಿನಾರೆಯಲ್ಲಿ ಮನೆ ಕಟ್ಟಬೇಡ ನಾನು ಸಾಗರ ಮತ್ತೆ ಅಪ್ಪಳಿಸುತ್ತೇನೆ " ಎಂದು ಅಬ್ಬರಿಸಿದ್ದರು. ಅಂತೆಯೇ ದೇವೇಂದ್ರ ಸರಿತಾ ಗಂಗಾಧರ ಫಡ್ನವಿಸ್ ಇದೀಗ ಮತ್ತೊಮ್ಮೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಮೂಲಕ ಮಹಾರಾಷ್ಟ್ರದ ಚಾಣಕ್ಯ ನಾನೆ ಎಂದು ಮತ್ತೆ ಸಾಬೀತು ಪಡಿಸಿದ್ದಾರೆ. ಫಡ್ನವಿಸ್ ತಂದೆ ಗಂಗಾಧರ ರಾವ್ ಫಡ್ನವಿಸ್ ವಿಧಾನ ಪರಿಷತ್ ಸದಸ್ಯರು ಹಾಗು ಜನಸಂಘದ ನೇತಾರರು ಆಗಿದ್ದರು ಅಲ್ಲದೆ ನಿತಿನ್ ಗಡ್ಕರಿ ಅವರ ರಾಜಕೀಯ ಗುರುಗಳು ಹೌದು. ಫಡ್ನವಿಸ್ ತನ್ನ ೧೭ ನೇ ವಯಸ್ಸಲ್ಲಿ ಅವರ ತಂದೆಯನ್ನು ಕಳೆದುಕೊಳ್ಳಬೇಕಾಯಿತು. ಹೀಗಾಗಿ ತಂದೆಯ ರಾಜಕೀಯ ಪಟ್ಟುಗಳನ್ನು ಗಮನಿಸುವ ಸೌಭಾಗ್ಯ ಅವರದಾಗಲಿಲ್ಲ, ಆದರೆ ಅವರ ಬಹುಮುಖಿ ವ್ಯಕ್ತಿತ್ವಕ್ಕೆ ಯಾರಿಂದಲೂ ತಡೆ ಒಡ್ಡಲಾಗಲಿಲ್ಲ. ೧೯ ನೇ ವಯಸ್ಸಿನಲ್ಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಸಂಪರ್ಕಕ್ಕೆ ಬಂದು ರಾಜಕೀಯದ ಒಳ ಮರ್ಮವನ್ನು ಅರಿಯುವ ಹೆಜ್ಜೆ ಇಟ್ಟಿದ್ದರು. ಪರಿಣಾಮವಾಗಿ ತನ್ನ ೨೨ ನೇ ವಯಸ್ಸಿನಲ್ಲೇ ನಾಗ್ಪುರ್ ಕಾರ್ಪೊರೇಟರ್ ೨೭ ನೇ ವಯಸ್ಸಿಗೆ ನಾಗ್ಪುರ್ ಮೇಯರ್ ಗಾದಿ ಅರಸಿ ಬಂದಿದ್ದವು. ಹಾಗು ೨೯ ನೇ ವಯಸ್ಸಿಗೆ ಶಾಸಕನಾಗಿ ಆರಿಸಿ ಬಂದಿದ್ದರು. ಹೀಗೆ ರಾಜಕೀಯದ ಒಂದೊಂದೇ ಪಟ್ಟುಗಳನ್ನು ಕಲಿಯುತ್ತಿದ್ದಾಗ ಅವರಿಗೆ ಗುರುವಾಗಿ ನಿಂತದ್ದು ಗಡ್ಕರಿ ಎಂಬುದು ಗಮನಾರ್ಹ ಅಂಶ.

ಅದ್ಯಾರೋ ಮಹಾನುಭಾವರು ಹೇಳಿದ ನೆನಪು ಒಂದು ಹಂತದ ನಂತರ ಬೆಳೆಯುವ ಹಂಬಲ ಇರುವವನು ಗುರುವೆಂಬ ಗುರುವಿನ ನೆರಳಿನಿಂದಲೂ ದೂರ ಸಾಗಬೇಕಂತೆ ಬಹುಷಃ ಫಡ್ನವಿಸ್ ಇದನ್ನೇ ಮಾಡಿರಬಹುದು. ಮಹಾರಾಷ್ಟ್ರದಲ್ಲಿ ಗೋಪಿನಾಥ್ ಮುಂಡೆ ಹಾಗು ಗಡ್ಕರಿ ಬಣ ಎಂಬಂತೆ ಎರಡು ಬಣಗಳಾಗಿದ್ದವು. ಆಗ ಫಡ್ನವಿಸ್ ಯಾವ ಮಡಿವಂತಿಕೆಯು ಇಲ್ಲದೆ ಗೋಪಿನಾಥ್ ಮುಂಡೆ ಬಣಕ್ಕೂ ಹತ್ತಿರವಾಗಿದ್ದರು. ಖುದ್ದು ವಾಜಪೇಯಿ ಫಡ್ನವಿಸ್ ಕಾರ್ಯವೈಖರಿಯನ್ನು ಹೊಗಳಿದ್ದರು. ದಿನ ಕಳೆದಂತೆ ಫಡ್ನವಿಸ್ ಮಹಾರಾಷ್ಟ್ರದ ರಾಜ್ಯ ರಾಜಕೀಯದಲ್ಲಿ ಅವರಿಸಿಕೊಳ್ಳುತ್ತಿದ್ದರು, ಪರಿಣಾಮ ೨೦೧೪ ರಲ್ಲಿ ಮುಖ್ಯಮಂತ್ರಿ ಗದ್ದುಗೆ ತಾನಾಗಿಯೇ ಒಲಿದು ಬಂದಿತ್ತು. ಆದರೆ ೨೦೨೨  ರಲ್ಲಿ ಬದಲಾದ ಸನ್ನಿವೇಶದಲ್ಲಿ ಶಿಂಧೆ ನೇತ್ರತವಾದ ಶಿವಸೇನಾ ಹಾಗು ಬಿ ಜೆ ಪಿ ಮೈತ್ರಿ ಸರ್ಕಾರ ರಚನೆ ಆದಾಗ ಶಿಂದೆ ಮುಖ್ಯಮಂತ್ರಿ ಆದರು ಆದರೆ ಆಗಾಗಲೇ ಐದು ವರುಷಗಳ ಕಾಲ ಮುಖ್ಯ ಮಂತ್ರಿ ಆಗಿದ್ದ ಫಡ್ನವಿಸ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಉಪ್ಪಿಕೊಳ್ಳುವ ನಿರ್ದೇಶನ ದೆಹಲಿಯಿಂದ ಬಂದಿತ್ತು. ಆಗ ದೆಹಲಿ ದೊರೆಗಳ ಆದೇಶವನ್ನು ಪಕ್ಷಕ್ಕಾಗಿ ರಾಜ್ಯಕ್ಕಾಗಿ ಮರು ಮಾತಾಡದೆ ಒಪ್ಪಿ ಕೊಂಡಿದ್ದರು ಫಡ್ನವಿಸ್. ಆಗ ಹಲವು ಪತ್ರಿಕೆಗಳು , ಅಂಕಣಕಾರರು ಫಡ್ನವಿಸ್ ಉಪ ಮುಖ್ಯಮಂತ್ರಿ ಪದವಿಯನ್ನು ಒಪ್ಪಿ ಕೊಳ್ಳ ಬಾರದಿತ್ತು ಎಂದು ಬರೆದಿದ್ದವು ಆದರೆ ದೆಹಲಿ ದೊರೆಗಳಿಗೆ ಫಡ್ನವಿಸ್ ಹೊರತಾದ ಸರ್ಕಾರ ಕೇವಲ ಶಿಂಧೆ ಹಾಗು ಶಿವಸೇನಾ ಸರ್ಕಾರದ ವೈಭವೀಕರಣಕ್ಕೆ ಕಾರಣ ಆದೀತು ಎಂಬ ಭಯವಿತ್ತು. ೨೦೨೩ ರಲ್ಲಿ ಲೋಕಸಭಾ ಚುನಾವಣೆಯಲ್ಲಿ  ಮಹಾಯುತಿ ಸರಕಾರದ ನೀರಸ ಪ್ರದರ್ಶನವನ್ನು ತಮ್ಮ ಹೆಗಲ ಮೇಲೆ ಯಾವ ಅಂಜಿಕೆಯೂ ಇಲ್ಲದೆ ಹೊತ್ತು ಕೊಂಡಿದ್ದ ಫಡ್ನವಿಸ್ ಕೆಲವೇ ತಿಂಗಳಲ್ಲಿ ಲಾಡಕಿ ಬೆಹೆನ್ ಎಂಬ ವೋಟು ಬಾಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಾಳಿದವನು ಬಾಳಿಯಾನು ಎಂಬ ಗಾದೆಗೆ ಉಪಮೆಯಂತೆ ಮಹಾಯುತಿಯ ಗೆಲುವಿಗೆ ಕಾರಣವಾಗಿದ್ದರೆ.

ಹೀಗೆ ಫಡ್ನವಿಸ್ ರಾಜಕೀಯದ ಹಾದಿಯಲ್ಲಿ ತಾಳುವಿಕೆಯ ಮಹತ್ವವನ್ನು ಸಾರಿ ಸಾರಿ ಹೇಳುತಿದ್ದರೆ ಇತ್ತ ಕಾಂಗ್ರೆಸ್ ಮಾತ್ರ ಸಂವಿಧಾನ ಸಂಕಷ್ಟದಲ್ಲಿದೆ ಎಂಬ ಘೋಷ ವಾಕ್ಯವನ್ನೇ ವೇದ ವಾಕ್ಯ ಎಂದು ತಿಳಿದು ಲೋಕಸಭೆಯ ಫಲಿತಾಂಶ ವಿಧಾನಸಭೆಯಲ್ಲೂ ಮರುಕಳಿಸಬಹುದು ಎಂದು ನಂಬಿ ಕುಳಿತಂತಿತ್ತು. ಅದೇನೇ ಇರಲಿ ಭಾರತದ ಸಂವಿಧಾನ ಸಂಕಷ್ಟದಲ್ಲಿದೆಯೋ ಇಲ್ಲವೋ ಕಾಂಗ್ರೆಸ್ ನ ಸಂವಿಧಾನ ಸಂಕಷ್ಟದಲ್ಲಿರುವುದು ಸುಳ್ಳಲ್ಲ ಎಂಬುದು ಮಹಾರಾಷ್ಟ್ರದ ಚುನಾವಣೆಯ ನಂತರ ಮತ್ತೊಮ್ಮೆ ಸಾಬೀತಾಗಿದೆ. ಆದ್ದರಿಂದ ಕಾಂಗ್ರೆಸ್ ತನ್ನ ಪಕ್ಷದ ಸಂವಿಧಾನವನ್ನು ಮೊದಲು ಗಟ್ಟಿಗೊಳಿಸಬೇಕು. ತನಗಲ್ಲದ್ದಿದ್ದರು  ರಾಷ್ಟ್ರಕ್ಕಾಗಿ ರಾಷ್ಟ್ರದ ಹಿತ ದೃಷ್ಟಿಯಿಂದ ಪ್ರಭಲ ವಿರೋಧ ಪಕ್ಷವಿರುವುದು ರಾಷ್ಟ್ರಕ್ಕೆ ಒಳಿತು. ಆ ಕಾರಣಕ್ಕಾದರೂ ಕಾಂಗ್ರೆಸ್ ತನ್ನ ಕಾರ್ಯ ವೈಖರಿಯ ಬಗ್ಗೆ ಚುನಾವಣೆಗಳ ಬಗ್ಗೆ  ಗಮನ ಕೊಡಬೇಕು. ಹಾಗಾಗದಿದ್ದರೆ ಮತದಾರ ಮುಂದೊಂದು ದಿನ ಕಾಂಗ್ರೆಸ್    ಪಕ್ಷ ಖಾಯಂ ಸಂಕಷ್ಟದಲ್ಲಿರುವ  ಪಕ್ಷ ಎಂಬ ಫಲಕವನ್ನು ದಯಮಾಡಿಸುವ ಸಂಭವ ಅಲ್ಲ ಗೆಳೆಯುವಂತಿಲ್ಲ. ಇಲ್ಲದಿದ್ದರೆ ಹರಿಯಾಣದಲ್ಲಿ ಹರಿವಾಣದ ತಟ್ಟೆಯಲ್ಲಿ ಗೆಲುವೆಂಬ ಗಿಫ್ಟ್ ಅನ್ನು ಮತದಾರ ಕೊಡಬೇಕೆಂದಿದ್ದರು ಅದನ್ನು ಪಡೆದು ಕೊಳ್ಳುವ ಪರಿಯಲ್ಲಿ ವಿಫಲವಾಗುತ್ತಿರಲಿಲ್ಲ. ಕಾಂಗ್ರೆಸ್ ಅದೇ ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದು ಓಲೈಕೆ ರಾಜಕಾರಣದ ಹಿಂದೆ ಬೆನ್ನು ಬಿದ್ದಿದ್ದೆ. ಅದೇ ರಾಜಕಾರವನ್ನು ವಿರೋಧಿಗಳು ಮಾಡಿಯಾರು ಎಂಬುದನ್ನು ಮರೆತಂತಿದೆ..

ಕಾಂಗ್ರೆಸ್ ನಾಯಕರು ಚುನಾವಣೆಗಳು ಬಂದಾಗ ಟೆಂಪಲ್ ರನ್ ಗಳನ್ನೂ ಮಾಡಿ ತಾವು ಪ್ರತಿಪಾದಿಸುವುದು ಸಾಫ್ಟ್ ಹಿಂದುತ್ವ  ಎಂಬಂತೆ ತೋರ್ಪಡಿಸಿಕೊಳ್ಳಲು ಪ್ರಯತ್ನಿಸುವುದು. ಆದರೆ  ರಾಮ ಮಂದಿರದಂತಹ ವಿಷಯಗಳಲ್ಲಿ ನೆಲದ  ಭಾವನೆಯನ್ನು ಅರ್ಥ ಮಾಡಿಕೊಳ್ಳದೆ ಬಹುಸಂಖ್ಯಾತರ ಭಾವನೆಗಳಿಗೆ ವ್ಯತಿರಿಕ್ತವಾಗಿ ವರ್ತಿಸುವುದು. ಹೀಗೆ ತಮ್ಮಲೇ  ತಮ್ಮ ನಿಲುವಿನ ಬಗ್ಗೆ ವಿರೋಧಾಭಾಸಗಳನ್ನು ಹೊಂದುವುದು ಇದು ಮೊದಲಿನಿಂದಲೂ ನಡೆದು ಬಂದ ಪ್ರಕ್ರಿಯೆ. ಅಸಲಿಗೆ ಚುನಾವಣೆಗಳ ಮೇಲೆ ಜಾತಿಯ ಭೂತ ಹಾಗು ಸಂಪನ್ಮೂಲಗಳ ಸುರಿ ಮಳೆ ಆಗುವಾಗ ಮತದಾರನಿಗಾದರು ಯಾರು ಏನು ಮಾಡಿದರೆಂಬ ನೆನಪಿರುವುದಿಲ್ಲ.  ಆದರೆ ಕಾಂಗ್ರೆಸ್ ತನ್ನ ವರ್ತನೆಯಿಂದ ತಾನೊಬ್ಬ ಸನಾತನ ಧರ್ಮದ ಹಾಗು ಸಂತರ ವಿರೋಧಿಯೆಂದು ತನ್ನ ಕ್ರಿಯೆಗಳ ಮೂಲಕವೇ ಮತ್ತೆ ಮತ್ತೆ ಸಾಬೀತು ಪಡಿಸಿ ಮತದಾರರನ್ನು ತನ್ನ ಪಕ್ಷದ ನಿಲುವೇನು ಎಂದು  ಸದಾ ಜಾಗ್ರತಾವಸ್ತೆ ಯಲ್ಲಿ ಇಟ್ಟಿರುತ್ತದೆ. ಉದಾಹರಣೆಗೆ ಮೊನ್ನೆ ಮೊನ್ನೆ ಪೇಜಾವರದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರು ವಿಶ್ವ ಹಿಂದೂ ಪರಿಷದ್ ಏರ್ಪಡಿಸಿದ್ದ ಸಂತ ಮಾರ್ಗದರ್ಶಕ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದರು. ಆ ಸಭೆಯಲ್ಲಿ  ಕೆಲವು  ನಿರ್ಣಯಗಳನ್ನು ವಿಶ್ವ ಹಿಂದೂ ಪರಿಷದ್ ತೆಗೆದುಕೊಂಡಿತ್ತು. ಅವುಗಳಲ್ಲಿ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ  ತಿದ್ದುಪಡಿ ತರಲು ಉದ್ದೇಶಿಸಿರುವ ತಿದ್ದುಪಡಿ ಮಸೂದೆಯನ್ನು ಸಂಪೂರ್ಣವಾಗಿ ಬೆಂಬಲಿಸುವುದು, ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಿಗೊಳಿಸುವುದು ಹಾಗು ಪ್ರಚೋದಿತ   ಮತಾಂತರ ವನ್ನು ತಡೆಯುವುದು ಹೀಗೆ ಈ ಮೂರು ನಿರ್ಣಯಗಳನ್ನು ತೆಗೆದುಕೊಂಡು  ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಇಂಗಿತವನ್ನು ವ್ಯಕ್ತ ಪಡಿಸಿದ್ದರು . ಆದರೆ ಶ್ರೀಗಳು ಸಂವಿಧಾನವನ್ನೇ ಬದಲಾಯಿಸಬೇಕೆಂಬ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂಬಂತೆ ಬಿಂಬಿಸಲಾಯಿತು. ಇದು ಯಾವ ನ್ಯಾಯ ? ಅಸಲಿಗೆ ಶ್ರೀಗಳು ಹೇಳಿದ್ದು ನಮ್ಮನು ಗೌರವಿಸುವ ಸರ್ಕಾರ ಬರಬೇಕು. ಹಾಗೆ ನೋಡಿದರೆ ಶ್ರೀಗಳು ಎಲ್ಲೂ ಸಂವಿಧಾನವನ್ನು ಬದಲಾಯಿಸಬೇಕೆಂದು  ಹೇಳಲಿಲ್ಲ. ಅವರು ಕೊಟ್ಟ ವಿನಂತಿ ಪತ್ರದಲ್ಲಿದ್ದ ಬೇಡಿಕೆಗಳನ್ನು  ಶಾಸನ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಹೊರಡಿಸಿಯೂ ಜಾರಿ ಮಾಡಬಹುದು, ಹೀಗೆ ಆಡದ ಮಾತಿಗೆ ಶ್ರೀಗಳ ಮೇಲೆ ವೃಥಾ ಆರೋಪ ಮಾಡಲಾಯಿತು .

ಹಾಗೆ ನೋಡಿದರೆ ತುರ್ತುಪರಿಸ್ಥಿತಿಯ ಸಂಧರ್ಭದಲ್ಲಿ ಹೇರಿದ ಸಂವಿಧಾನದ 42 ನೇ ತಿದ್ದುಪಡಿ ಕಾಯಿದೆಯನ್ನು ಮಿನಿ-ಸಂವಿಧಾನ ಎಂದೇ ಕರೆಯುತ್ತಾರೆ. ಅಂದರೆ  ತಿದ್ದುಪಡಿಗಳು ಒಂದು ಮಿನಿ ಸಂವಿಧಾನದಷ್ಟೇ ಇದ್ದವು ಎಂದು ಅರ್ಥ.  ಆದ್ದರಿಂದ ಸಂವಿಧಾನ ಬದಲಾಯಿಸಿದ್ದು ಯಾರು ಎಂದು ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ. ಸಂವಿಧಾನ ಬದಲಾವಣೆಗೂ ತಿದ್ದುಪಡಿಗೂ ಅಪಾರ ವ್ಯತಾಸವಿದೆ. ಇಲ್ಲಿಯವರೆಗೆ 106 ಬಾರಿ ಸಂವಿಧಾನದ ತಿದ್ದುಪಡಿಯಾಗಿದೆ, ಹಾಗೆಂದ ಮಾತ್ರಕ್ಕೆ ಇಡೀ ಸಂವಿಧಾನವನ್ನೇ ಬದಲಾಯಿಸಿದ್ದಾರೆಂದಲ್ಲ. ಅಷ್ಟಾಗಿಯೂ ಪೇಜಾವರ ಶ್ರೀಗಳ ಬೇಡಿಕೆಯಲ್ಲಿ ತಪ್ಪೇನಿದೆ? ವಕ್ಫ್ ಕಾಯ್ದೆ ತಿದ್ದುಪಡಿಗೆ ಬೆಂಬಲ ಎಂದಿದ್ದಾರೆ ಪ್ರಜಾಪ್ರಭುತ್ವದ ತಳಹದಿಯಲ್ಲಿ ರಚಿತವಾಗುವ ನೀತಿ ನಿಯಮಗಳಲ್ಲಿ ಸರ್ಕಾರ ಹಾಗು ಉಚ್ಚ ನ್ಯಾಯಾಲಯಕ್ಕೂ ಮೀರಿದ  ಮಂಡಳಿ ಇರಲು ಸಾಧ್ಯವೇ ? ಈ ಜಾಗ ನಮ್ಮದು ಎಂದು ನೋಟೀಸು ಕೊಡುವ ಸಂಸ್ಥೆ ಹಾಗು ಆ ನೋಟೀಸ್ ಅನ್ನು ಪ್ರಶ್ನೆ ಮಾಡಬೇಕೆಂದು ಉದ್ದೇಶಿಸಿದರೆ ನ್ಯಾಯಾಲಯಕ್ಕೂ ಹೋಗದೆ ಅದೇ ಸಂಸ್ಥೆ ಬಳಿಯೇ ನ್ಯಾಯ ಕೇಳಲು ಹೋಗಬೇಕೆಂದರೆ ಅದು ಎಷ್ಟು ಸರಿ?  ಪೇಜಾವರ ಶ್ರೀಗಳ ಕುರಿತು ಈ ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಹೊಸದಲ್ಲ ಕಳೆದ ಒಂದು ತಿಂಗಳ ಹಿಂದೆ  ಶ್ರೀಗಳು ಪೂಜಿಸುವ ಹರಿಯ ಹೆಸರಿಟ್ಟುಕೊಂಡ ಮಾಜಿ ಮಂತ್ರಿಯೊಬ್ಬರು ಶ್ರೀಗಳಿಗೆ ನೀವು ಕಾವಿ ಕಳಚಿ ರಾಜಕೀಯಕ್ಕೆ ಬನ್ನಿ ಎಂದಿದ್ದರು. ತನ್ನ ಜೀವನವನ್ನೇ ಹರಿ ಸೇವೆಗಾಗಿ ಮುಡಿಪಾಗಿಟ್ಟಿರುವ ಶ್ರೀಗಳಿಗೆ ಈ ಪಾಟಿ ಸವಾಲು ಹಾಕುವುದು ಎಷ್ಟು ಸರಿ. ಮಂತ್ರಿ ಮಾಗಧರು ಒಮ್ಮೆ ಖಾದಿ ತೆಗೆದು ಹೊರ ಬಂದು ಸಾಮಾನ್ಯ ಜನರ ಕಷ್ಟ ಕಾರ್ಪಣ್ಯದತ್ತ ಗಮನ ಕೊಡಲಿ. ಕಳಚಿ ಬರಬೇಕಾದ್ದು ಕೇವಲ ಖಾದಿ ಹಾಗು ಅದಕಂಟಿಕೊಂಡ ಅಧಿಕಾರ. ಹಣ, ಐಶ್ವರ್ಯ ಆಸ್ತಿ ಅಂತಸ್ತು ಎಲ್ಲವೂ ಹಾಗೆಯೇ ಇಟ್ಟುಕೊಳ್ಳಬಹುದು. ಆದರದು ಆಗದು ಅಲ್ಲವೇ ಅಂದ ಮೇಲೆ ಹರಿಯೇ ಸರ್ವಸ್ವ ಎಂದು ತಮ್ಮ ಜೀವನವನ್ನೇ ಹರಿ ಸೇವೆಗೆ, ಧರ್ಮ ಪ್ರಚಾರಕ್ಕೆ ಮುಡಿಪಾಗಿಟ್ಟ ಶ್ರೀಗಳಿಗೆ ಖಾವಿ ಕಳಚಿಟ್ಟು ರಾಜಕೀಯ ಮಾಡಿ ಎನ್ನುವುದು ಶೋಭೆ ತರುವ ಮಾತೆ ? ಒಂದು ಹಂತದಲ್ಲಿ ಮಹಾರಾಷ್ಟ್ರದಲ್ಲಿ ಸಾಧು ಸಂತರ ಬಗ್ಗೆ ಆಡಿದ ಇಂತಹ ಮಾತುಗಳೇ ಇಂದು ಕಾಂಗ್ರೆಸ್ ಹಾಗು ಮಿತ್ರ ಪಕ್ಷವನ್ನು ದಯನೀಯ ಸ್ಥಿತಿಗೆ ತಂದು ನಿಲ್ಲಿಸಿದೆ. ಇನ್ನಾದರೂ ಕಾಂಗ್ರೆಸ್ ಪಾಠ ಕಲಿಯಬೇಕು ಇಲ್ಲದಿದ್ದರೆ  ಮಹಾರಾಷ್ಟ್ರದಲ್ಲಾದ ಮತ ಪಂಥಗಳ ಧ್ರುವೀಕರಣ ಯಾವ ರಾಜ್ಯದಲ್ಲಾದರೂ ಆಗಬಹುದು.

ಕಾರ್ತಿಕ್ ಎಸ್ ಬಾಪಟ್

Tuesday, December 3, 2024

 ಭಿಡೆ ಗುರೂಜಿ ಎಂಬ ತರುಣರ ಸಂತ.

       ಮಹಾ ಚುನಾವಣೆಯ ಗಣಿತ ಬದಲಾಯಿಸಿದ ಭಿಡೆ ಗುರೂಜಿಯ ಅನುಯಾಯಿಗಳು.

ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರ ಗೆದ್ದು ಇತಿಹಾಸ ನಿರ್ಮಿಸಿದೆ . ಇತ್ತ ಮಹಾ ಅಘಾಡಿಯ ಮಿತ್ರ ಪಕ್ಷಗಳು ಮತ್ತು ಇತರೆ ಸಣ್ಣ ಪುಟ್ಟ ಪಕ್ಷಗಳು ಸೋಲಿಗೆ  ಇ ವಿ ಎಂ ಕಾರಣ ಎಂದು ವಿನಾಕಾರಣ ದೂರುತ್ತಿವೆ. ಆದರೆ ಬಿ ಜೆ ಪಿ ಹಾಗು ಆರ್ ಎಸ್ ಎಸ್ ಈ ಗೆಲುವಿನ ರೂವಾರಿಗಳಾದ ವಿಠ್ಠಲನ ಭಕ್ತ ಮಂಡಳಿ ವಾರ್ಕರಿಗಳು, ಕೀರ್ತನಕಾರರು ಹಾಗು ಛತ್ರಪತಿ ಭಕ್ತ, ತರುಣರ ಸಂತ ಭಿಡೆ ಗುರೂಜಿ ಇವರಿಗೆ ಧನ್ಯತಾ ಭಾವದಿಂದ ಕೈ ಮುಗಿಯುತ್ತಿದೆ.  ಲೋಕಸಭಾ ಚುನಾವಣೆಯಲ್ಲಿ ಬಿ ಜೆ ಪಿ ನಿರ್ದಿಷ್ಟ ಸಂಖ್ಯೆಗಳನ್ನು ಪಡೆದು ಗುರಿ ತಲುಪಲು ಪಟ್ಟ ಪರಿ ಪಾಡು ನಾವೆಲ್ಲರೂ ನೋಡಿದ್ದೇವೆ. ಒಂದು ಹಂತದಲ್ಲಿ ನಡ್ಡಾಜಿ ಅತಿಯಾದ ಆತ್ಮವಿಶ್ವಾಸದಿಂದ ಈಗ ಆರ್ ಎಸ್ ಎಸ್ ಅವಶ್ಯಕತೆ ನಮಗಿಲ್ಲ ಎಂಬುವಂತೆ ಬಿಂಬಿಸುವ ಹೇಳಿಕೆಯನ್ನು ಕೊಟ್ಟು ಪೇಚಿಗೆ ಸಿಲುಕಿದ್ದು ನಂತರ ಬಿ ಜೆ ಪಿ ಯ ಗಳಿಕೆ ಇಳಿಕೆ ಆದದ್ದು ಎಲ್ಲವೂ ಜಗಜ್ಜಾಹಿರವಾದ ಸಂಗತಿ. ಅಂದರೆ ಆರ್ ಎಸ್ ಎಸ್ ಎಂಬ ಸಂಘಟನೆ ಚುನಾವಣಾ ಹೊಸ್ತಿಲಲ್ಲಿ  ಶಸ್ತ್ರ ತ್ಯಾಗ ಮಾಡಿದರೆ  ಏನಾದೀತು ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಅದೇ ರೀತಿ ಇನ್ನೇನು ಬಿ ಜೆ ಪಿ ಯ ಸೋಲು ಸರ್ವ ಸಿದ್ಧ ಎಂದಾಗ ಆರ್ ಎಸ್ ಎಸ್ ರಂಗ ಪ್ರವೇಶಿಸಿದರೆ ಏನಾದೀತು ಎಂಬುದಕ್ಕೆ ಹರಿಯಾಣ ಹಾಗು ಮಹಾರಾಷ್ಟ್ರದ ಗೆಲುವು ತಾಜಾ ಉದಾಹರಣೆ. ಹರಿಯಾಣದಲ್ಲಂತೂ ಇನ್ನೇನು ಕಾಂಗ್ರೆಸ್ ಗೆದ್ದೇ ಬಿಟ್ಟಿತು ಎಂಬ ವಾತಾವರಣವಿದ್ದಾಗ ಕಾಂಗ್ರೆಸ್ ನಿಂದ ಗೆಲುವನ್ನು ಕಸಿದು ಕೊಂಡಿದ್ದು ಇದೇ ಆರ್ ಎಸ್ ಎಸ್ ನ ಚುನಾವಣಾ ನಿರ್ವಹಣೆ ಹಾಗು ನಡೆಸಿದ ಹದಿನಾರು ಸಾವಿರ ಸಣ್ಣ ಪುಟ್ಟ ಸಭೆಗಳು.ಇತ್ತೀಚಿಗೆ  ನಡೆದ ಮಹಾರಾಷ್ಟ್ರದ ಚುನಾವಣೆಯಲ್ಲಾದದ್ದು ಇದೇ. ಒಂದು ವರದಿಯ ಪ್ರಕಾರ ಆರ್ ಎಸ್ ಎಸ್ ಅರವತ್ತು ಸಾವಿರಕ್ಕೂ ಹೆಚ್ಚು ಸಣ್ಣ ಪುಟ್ಟ ಸಭೆಗಳನ್ನು ನಡೆಸಿತ್ತಂತೆ. ಅದಲ್ಲದೆ ಈ ಬಾರಿ ಬಿ ಜೆ ಪಿ ಯ ಕೈ ಹಿಡಿದದ್ದು ವಿಠ್ಠಲನ ಭಕ್ತ ಮಂಡಳಿ ವಾರ್ಕರಿಗಳು , ಕೀರ್ತನಕಾರರು ಹಾಗು ವಿಶೇಷವಾಗಿ ಪಶ್ಚಿಮ ಮಹಾರಾಷ್ಟ್ರ ದಲ್ಲಿ ಬಿ ಜೆ ಪಿ ಯನ್ನು ಕೈ ಹಿಡಿದೆತ್ತಿದ್ದು ಒಂದು ಕಾಲದ   ಆರ್ ಎಸ್ ಎಸ್ ಸ್ವಯಂ ಸೇವಕರು ಹಾಗು ಇಂದು ಲಕ್ಷಾಂತರ ತರುಣರಿಗೆ ಛತ್ರಪತಿ  ಶಿವಾಜಿ ಮಹಾರಾಜರ  ವೀರಗಾಥೆಯನ್ನು ಭೋದಿಸಿ ತರುಣರಲ್ಲಿ ದೇಶ, ದೇವ ಹಾಗು ಧರ್ಮದೆಡೆ ಭಕ್ತಿಯ ಜ್ಯೋತಿ ಬೆಳಗಿಸುತ್ತಿರುವ ಬರಿಕಾಲ ಸಂತ "ಭಿಡೆ ಗುರೂಜಿ". ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಕೈ ತಪ್ಪಬಹುದಾಗಿದ್ದ ಮರಾಠ ಮತಗಳು  ಭಿಡೆ ಗುರೂಜಿ ಅವರ ಪ್ರಭಾವದಿಂದ ಬಿ ಜೆ ಪಿ ತೆಕ್ಕೆಗೆ ಸೇರಿವೆ, ಹಾಗಾದರೆ ಯಾರಿವರು ಭಿಡೆ ಗುರೂಜಿ.

ತೊಂಬತ್ತರ ರ ಹೊಸ್ತಿಲಲ್ಲಿರುವ ಸಂಭಾಜಿರಾವ್ ವಿನಾಯಕ ರಾವ್ ಭಿಡೆ ಅವರನ್ನು  ಅವರ ಅನುಯಾಯಿಗಳು  ಭಕ್ತಿಯಿಂದ  ಭಿಡೆ ಗುರೂಜಿ ಎಂದು ಕರೆಯುತ್ತಾರೆ. ಭಿಡೆ ಗುರೂಜಿ "ಶಿವಪ್ರತಿಷ್ಠಾನ ಹಿಂದುಸ್ತಾನ"  ಎಂಬ ಸಂಘಟನೆಯ ಅಧ್ಯಕ್ಷರು. ಈ ಸಂಸ್ಥೆಯಡಿಯಲ್ಲಿ ಲಕ್ಷಾಂತರ ತರುಣರಿಗೆ ದೇಶದ ಬಗ್ಗೆ , ಶಿವಾಜಿ ಮಹಾರಾಜರ ಹಾಗು ಸಂಭಾಜಿ ಮಹಾರಾಜರ ಧ್ಯೇಯದ ಬಗ್ಗೆ , ತ್ಯಾಗದ ಬಗ್ಗೆ ತಿಳಿ ಹೇಳಿ ಒಂದಿಡೀ ದೇಶ ಭಕ್ತರ ಪಡೆಯನ್ನೇ ರಚಿಸಿದ್ದಾರೆ. ಇವರು ಕರೆ ಕೊಟ್ಟರೆ ಮುಗಿಯಿತು ಅದು ಎಷ್ಟೇ ಕಷ್ಟ ಸಾಧ್ಯದ ವಿಷಯವಾಗಿರಲಿ ತರುಣರ ಪಡೆ ಹಿಂದೆ ಸರಿಯುವುದಿಲ್ಲ ಅದನ್ನು ಸಾಧಿಸಿಯೇ ಸಿದ್ದ. ಅಂದರೆ ಭಿಡೆ ಗುರೂಜಿ ಯ ಮಾತು ತರುಣರಿಗೆ ವೇದ ವಾಕ್ಯ. ಅವರ ಜೀವನ ಶೈಲಿ ಕೂಡ ಅಷ್ಟೇ ಸರಳ ನೀವು ಕೊಲ್ಹಾಪುರದ ಕೆಂಪು ಬಸ್ಸನ್ನು ಹತ್ತಿ ಸಾಂಗ್ಲಿಗೆ ಪ್ರಯಾಣ ಬೆಳಿಸುತ್ತಿದರೆ ಅವರು ನಿಮ್ಮ ಪಕ್ಕಕ್ಕೆ ಬಂದು ಸಾಮಾನ್ಯ ನಾಗರಿಕರಂತೆ ಕುಳಿತರು ಕುಳಿತು ಕೊಂಡಿರಬಹುದು. ಶ್ವೇತ ವರ್ಣದ ಧೋತ್ರ ಮೇಲೊಂದು ಶ್ವೇತ ವರ್ಣದ ಅಂಗಿ ತಲೆಗೊಂದು ಬಿಳಿ ಟೊಪ್ಪಿ ಕೆಲವೊಮ್ಮೆ ಕೆಂಪು ಹಾಗು ಕೇಸರಿ ಪಗಡ. ಯಾವುದೇ ಕಾರಣಕ್ಕೂ ಪಾದ ರಕ್ಷೆಗಳನ್ನು ಧರಿಸುವುದಿಲ್ಲ, ಇಂದಿಗೂ ಬೆಳಗಾಗುವುದು ಸೂರ್ಯ ನಮಸ್ಕಾರ ಹಾಗು ಸಾವಿರ ದಂಡಗಳಿಂದ. ಅದು ಯಾವುದೇ ಪರಿಸ್ಥಿತಿ ಇರಲಿ ಕಾಡು ಮೇಡಿನ, ಕೋಟೆ ಕೊತ್ತಲೆಗಳ ದಾರಿ ಇರಲಿ ಕಾಲಿಗೆ ಪಾದ ರಕ್ಷೆಗಳನ್ನು ಮೆಟ್ಟಿದ್ದೆ ಇಲ್ಲ. ಇನ್ನು ಇರುವ ಆಸ್ತಿ ಎರಡು ಜೊತೆ ಬಟ್ಟೆಗಳು ಅಷ್ಟೇ. ಹೀಗೆ ಭಿಡೆ ಗುರೂಜಿ ಎಂದರೆ ನುಡಿದಂತೆ ನಡೆಯುವ ಬರಿಕಾಲಿನ ಸಂತ. ಇವರಿಗೆ ತಲೆದೂಗದ ರಾಜಕೀಯ ನಾಯಕರಿಲ್ಲ ಮೋದಿಜಿ , ಉದಯನರಾಜೆ ಭೋಸಲೆ (ಶಿವಾಜಿ ಮಹಾರಾಜರ ವಂಶಸ್ಥರು)   ಎನ್‌ಸಿಪಿ ನಾಯಕ ಆರ್‌ಆರ್ ಪಾಟೀಲ್, ಎಕೆನಾಥ್ ಶಿಂದೆ , ದೇವೇಂದ್ರ ಫಡ್ನವಿಸ್,  ಠಾಕ್ರೆ ಪರಿವಾರ ಎಲ್ಲರೂ ಇವರಿಗೆ ತಲೆಬಾಗುವವರೇ. ಹೀಗೆ ಭಿಡೆ ಗುರೂಜಿ ಅವರಿಗೆ ರಾಜಕಾರಣಿಗಳ ಒಡನಾಟವಿದ್ದರೂ ಕೂಡ ಇವರು ಸಕ್ರಿಯ ರಾಜಕಾರಣದಿಂದ ಗಾವುದ ಗಾವುದ ದೂರ. ಆದರೆ ದೇಶ ದೇವ ಹಾಗು ಧರ್ಮದ ವಿಷಯ ಬಂದಾಗ ಇಂತಹವರು ಎನ್ನದೆ ಯಾರನ್ನಾದರೂ ತರಾಟೆಗೆ ತೆಗೆದು ಕೊಳ್ಳುವ ಸ್ವಭಾವ. ಸೋಶಿಯಲ್ ಮೀಡಿಯಾ ಗಳು ದಾಂಗುಡಿ ಇಡುವ ಮುನ್ನವೇ ಭಿಡೆ ಗುರೂಜಿ ಬಸ್ಸಿನಲ್ಲಿ , ಕೆಲವೊಮ್ಮೆ ಕಾಲ್ನಡಿಗೆಯಲ್ಲಿಯೇ ಸಂಚರಿಸಿ ಶಿವಾಜಿ ಹಾಗು ಸಂಭಾಜಿ ಮಹಾರಾಜರ ಕನಸಿನ ಭಾರತವನ್ನು ಕಟ್ಟಲು ಹಳ್ಳಿಗಳಿಗೆ , ಪಟ್ಟಣಗಳಿಗೆ ಹಾಗು ನಗರಗಳಿಗೆ ಸಂಚರಿಸಿ ತರುಣರ ಬ್ರಹತ್ ಪಡೆಯನ್ನೇ ಸೃಷ್ಟಿಸಿದ್ದರು. ಆದರೆ ಆ ತರುಣ ಪಡೆಯನ್ನು ಯಾವುದೇ ವೈಯಕ್ತಿಕ ಲಾಭಕ್ಕಾಗಿ ಆಗಲಿ ಅಥವಾ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡವರಲ್ಲ.ಕೆಲ ರಾಜಕೀಯ ವ್ಯಕ್ತಿಗಳು ಸೆಕ್ಯುಲರ್ ಮುಖವಾಡದಡಿ ಇವರ ಮೇಲೆ ಕೆಲವೊಮ್ಮೆ ಹಲ್ಲೆಗೂ ಮುಂದಾಗಿದ್ದರು ಎಂಬುದು ವಿಪರ್ಯಾಸ . ಆದರೆ ಭಿಡೆ ಗುರೂಜಿ ಮಾತ್ರ ತಮ್ಮ ತರುಣ ವರ್ಗಕ್ಕೆ ಭೋದಿಸುತ್ತಿರುವುದು  ದೇವ , ದೇಶ, ಧರ್ಮಕ್ಕಾಗಿ ಜೀವನವನ್ನು ಮುಡುಪಾಗಿಟ್ಟ ಜೀವನ ಶೈಲಿಯಲ್ಲಿ ಇಂತಹವುದು ಸಹಜ ಇಂತಹವರನ್ನು ನಿರ್ಲಕ್ಷಿಸಿರಿ ಎಂದು. ಅಲ್ಲದೆ ಗುರೂಜಿ ಬ್ರಹತ್ ಸಂಕಲ್ಪವನ್ನು ಮಾಡಿದ್ದಾರೆ ಛತ್ರಪತಿ ಶಿವಾಜಿ ಮಹಾರಾಜರಿಗೆ ಅಂದಾಜು 1280 ಕೆಜಿ ಚಿನ್ನದ ಸಿಂಹಾಸನವನ್ನು ಅವರ ಪಟ್ಟಾಭಿಷೇಕವಾದ ಜಾಗ ರಾಯಘಡದಲ್ಲಿಯೇ ಮರು ಪ್ರತಿಷ್ಠಾಪಿಸುವ ಪಣ ತೊಟ್ಟಿದ್ದಾರೆ, ಈ ಮಹತ್ ಕಾರ್ಯಕ್ಕೆ ಹಣ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ರಾಜಕೀಯ ನಾಯಕರನ್ನು ಸಂಪೂರ್ಣವಾಗಿ ದೂರವಿಟ್ಟಿರುವುದು ಮತ್ತೊಂದು ವಿಶೇಷ.

ಹೀಗೆ ಭಿಡೆ ಗುರೂಜಿ  ಅವರ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ತರುಣರಲ್ಲಿ ಶಿವ ಭಕ್ತಿ, ದೇಶ ಭಕ್ತಿ ಹಾಗು ಧರ್ಮ ಭಕ್ತಿಯ ಬೀಜ ಬಿತ್ತುತಿದೆ, ಪರಿಣಾಮವಾಗಿ ಅಸಂಖ್ಯತ ತರುಣರು ಶಿವಾಜಿ ಹಾಗು ಸಂಭಾಜಿ ಮಹಾರಾಜರು ನಡೆದ ಸನ್ಮಾರ್ಗದಲ್ಲಿ ನಡೆಯುವ ಸಂಕಲ್ಪ ತೊಟ್ಟಿದ್ದಾರೆ. ಹಿಂದೂ ರಾಷ್ಟ್ರ ದೇವೋ ಭವ ಎಂಬ ವಿಶೇಷವಾದ ವೃತದ ದೀಕ್ಷೆ ತೊಟ್ಟಿದ್ದಾರೆ. ವೃತದಿಂದ ವೃತ್ತಿ ಹಾಗು ವೃತ್ತಿಯಿಂದ ರಾಷ್ಟ್ರಹಿತಕ್ಕಾಗುವ ಕೃತಿ ಸೃಷ್ಟಿಸಲು ಸಾಧ್ಯ ಎಂಬ ನಂಬಿಕೆ ಭಿಡೆ ಗುರೂಜಿ ಅವರದು. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಶಿವ ಪ್ರತಿಷ್ಠಾನ ಹಮ್ಮಿಕೊಂಡಿದೆ. ಅವುಗಳಲ್ಲಿ ದುರ್ಗಾ ಮಾತಾ ದೌಡ, ಬಲಿದಾನ್ ಮಾಸ್ ಹಾಗು ಗಡ್ಕೋಟ್ ಮೋಹಿಮ್ ಅಂತಹ ಕಾರ್ಯಕ್ರಮಗಳು ವಿಶೇಷವಾದುದು.

ಪ್ರತಿ ನವರಾತ್ರಿಯಂದು, ಮಹಾರಾಷ್ಟ್ರದಾದ್ಯಂತ ಶಿವಪ್ರತಿಷ್ಠಾನದ ಸದಸ್ಯರು ತಮ್ಮ ತಮ್ಮ ಪಟ್ಟಣಗಳಲ್ಲಿ  ಸೇರಿ  ದೇವಸ್ಥಾನದ ಕಡೆಗೆ ದುರ್ಗೆಯನ್ನು ಭಜಿಸುತ್ತ ಓಡುವ ವಿಶಿಷ್ಟ ಪರಂಪರೆ ಹುಟ್ಟು ಹಾಕಿ ಈ ಉತ್ಸವಕ್ಕೆ ದುರ್ಗಾ ಮಾತಾ ದೌಡ್ ಎಂದು ನಾಮಕರಣ ಮಾಡಿದ್ದಾರೆ. ಅಷ್ಟೇ ಆಗಿದ್ದರೆ ಏನು ವಿಶೇಷ ಅನ್ನುತ್ತಿದಿರಿ ಆದರೆ ಶಿವ ಪ್ರತಿಷ್ಠಾನದ ತರುಣರು ಅಂದು  ದೇಶದ ಹಿತಕ್ಕಾಗಿ ಉಪವಾಸವನ್ನು ಆಚರಿಸುತ್ತಾರೆ, ತರುಣರ ಉಪವಾಸ  ವೈಯಕ್ತಿಕ ಬೇಡಿಕೆಗಳಿಗಲ್ಲ.ಅವರ ಪ್ರಾರ್ಥನೆ ದೇಶಕ್ಕಾಗಿ,  ಆದ್ದರಿಂದ ದುರ್ಗಾ ಮಾತಾ ದೌಡ್ ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಮಹಾರಾಷ್ಟ್ರದಲ್ಲಿ   "ರಾಷ್ಟ್ರೀಯ ನವರಾತ್ರಿ" ಎಂಬಂತೆ ಆಚರಿಸಲ್ಪಡುತ್ತಿದೆ.  ಅದೇ ರೀತಿ ಛತ್ರಪತಿ ಸಂಭಾಜಿ ಮಹಾರಾಜ್ ತನ್ನ ಜೀವವನ್ನು ದೇಶಕ್ಕಾಗಿ ತ್ಯಾಗ ಮಾಡಿದ ದಿನವನ್ನು ಗುರೂಜಿ ಅನುಯಾಯಿಗಳು ಬಲಿದಾನ ದಿವಸ್ ಎಂದು  ಆಚರಿಸುತ್ತಾರೆ. ಸಂಭಾಜಿ ಮಹಾರಾಜ್ ರನ್ನು ದುರಳ ಔರಂಗಜೇಬ ಸರಿ ಸುಮಾರು ಒಂದು ತಿಂಗಳು ಬಂಧನದಲ್ಲಿಟ್ಟು ಕಿರುಕುಳ ಕೊಟ್ಟಿದ್ದನು. ಈ ನಿಟ್ಟಿನಲ್ಲಿ  ಸಂಭಾಜಿ ಮಹಾರಾಜರಿಗೆ ಗೌರವ ಸಲ್ಲಿಸಲು ಫಾಲ್ಗುಣದ ಮೊದಲ ದಿನದಿಂದ ಫಾಲ್ಗುಣ ಅಮವಾಸ್ಯೆಯವರೆಗೆ ದಿನಂ ಪ್ರತಿ ತರುಣರೆಲ್ಲರೂ ಸೇರಿ ಭಿಡೆ ಗುರೂಜಿ ಅವರೇ ರಚಿಸಿದ ಸ್ವರಾಜ್ಯ ಶ್ಲೋಕಗಳನ್ನು ಪಠಿಸಿ ಆ ಮೂವತ್ತು ದಿನಗಳ ಕಾಲ ಸ್ವರಾಜ್ಯಕ್ಕಾಗಿ ಸಿಹಿತಿಂಡಿಗಳು ಮತ್ತು ಮನರಂಜನೆಯನ್ನು ತ್ಯಜಿಸಿ ಉಪವಾಸವನ್ನು ಕೈಗೊಳ್ಳುತ್ತಾರೆ.

ಇನ್ನು "ಗಡ್ಕೋಟ್ ಮೋಹಿಮ್" ಇದು ಶಿವಪ್ರತಿಷ್ಠಾನ ಆಯೋಜಿಸುವ ಮತ್ತೊಂದು ವಿಶಿಷ್ಟ ಕಾರ್ಯಕ್ರಮ. ಶಿವಾಜಿ ಮಹಾರಾಜರ ನೆನಪಿನಲ್ಲಿ ಶಿವಾಜಿಯ ದೇಶ ಪ್ರೇಮದ ಪ್ರತೀಕವಾಗಿ ಸಾವಿರಾರು ಯುವಕರು ಪ್ರತಿಕೂಲ ವಾತಾವರಣದಲ್ಲಿ ಕಾಡು ಮೇಡಿನ ಕೋಟೆ ಕೊತ್ತಲೆಗಳ ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ,  ಪ್ರಯಾಣಿಸುತ್ತಿರುವ ಸ್ಥಳದ ಐತಿಹಾಸಿಕ  ಮಹತ್ವವನ್ನು ಇತಿಹಾಸಕಾರ ಮೂಲಕ ಪರಿಚಯಿಸುವ ಕೆಲಸವನ್ನು ಭಿಡೆ ಗುರೂಜಿ ತನ್ಮಯತೆಯಿಂದ ನಡೆಸಿಕೊಡುತ್ತಾರೆ. ಆಶ್ಚರ್ಯದ  ವಿಷಯವೆಂದರೆ  ಗುರೂಜಿ ಅವರು  ವೃದ್ಧಾಪ್ಯದ ಹೊರತಾಗಿಯೂ ಪ್ರಾರಂಭದಿಂದ ಕೊನೆಯವರೆಗೆ ಎಲ್ಲಿಯೂ ವಿಶ್ರಾಂತಿ ಪಡೆಯದೆ ತರುಣ ಸಾಗರದೊಂದಿಗೆ ನಾಲ್ಕರಿಂದ ಐದು ದಿನಗಳ ಕಾಲ ನಡಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ಭಿಡೆ ಗುರೂಜಿ  ದೇಶಕ್ಕಾಗಿ , ಶಿವಾಜಿಯ ಧ್ಯೇಯಕ್ಕಾಗಿ  ಚಂದನದ ಕೊರಡಿನಂತೆ ತಮ್ಮ ಜೀವನವನ್ನೇ ತೇಯುತ್ತಿದ್ದಾರೆ.  ಇಂತಹ ಗುರೂಜಿ ಅವರ ಬಗ್ಗೆ ಮಹಾ ಅಘಾಡಿಯ ಮಿತ್ರ ಪಕ್ಷಗಳ ಹೇಳಿಕೆಗಳು ಹಾಗು ಪವಾರ್ ಅವರ ಕೃಪಾ ಪೋಷಿತ ಬ್ರಿಗೇಡ್ ಅಡಿಯಲ್ಲಿ ಸ್ವಾಮಿ ಸಮರ್ಥರ ಬಗ್ಗೆ ಆಡಿದ ಉಘಡ ಬಾಬಾ ಅಂದರೆ ಬರಿ ಮೈಯಲ್ಲಿ ಅಡ್ಡಾಡುವವರನ್ನು ಹೇಗೆ ನಮಿಸುವುದು ಎಂಬಂತ ಅರ್ಥ ಬರುವಂತಹ  ಹೇಳಿಕೆಗಳು ಭಕ್ತರನ್ನು ರೊಚ್ಚಿಗೆಬ್ಬಿಸಿತು. ಈ ಕೃತ್ಯವನ್ನು ಕಾಳ್ಗಿಚ್ಚಿನಂತೆ ಮನೆ ಮನೆಗೆ ತಲುಪಿಸಿ “ಏಕ್ ಹೈ ತೊ ಸೇಫ್ ಹೈ” ಎಂಬ ಅಭಂಗ ಹಾಡಿದ್ದುವಿಠ್ಠಲನ ಭಕ್ತ ಮಂಡಳಿ ವಾರ್ಕರಿಗಳು ಹಾಗು ಕೀರ್ತನಕಾರರು. ಹೀಗಾಗಿ ಜಾತಿಯ ಸಂಕೋಲೆಯಲ್ಲಿ  ಛಿದ್ರವಾಗಲಿದ್ದ ಮರಾಠ ಮತಗಳು ಒಟ್ಟಾಗಿ ಸೇರಿ ಅಘಾಡಿಯ ಲಗಾಡಿ ತೆಗೆದಿದೆ.

ಕಾರ್ತಿಕ್ ಎಸ್ ಬಾಪಟ್