Monday, July 29, 2024

 ಬರಿಕೈಯಲ್ಲಿ ಹಿಂತಿರುಗಿದ  ಶೇಕ ಹಸೀನಾ ,ನೆತ್ತರು ಚೆಲ್ಲಿದ ಬಾಂಗ್ಲಾ..



ಮೊನ್ನೆ ಮೊನ್ನೆ ಪ್ರಧಾನಿ ಮೋದಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ ಬಾಂಗ್ಲಾದೇಶದ ಪ್ರಧಾನಿ ಶೇಕ ಹಸೀನಾ ನಂತರ ಪಯಣಿಸಿದ್ದು ಚೀನಾ ದೇಶಕ್ಕೆ, ಹಾಗೆಂದು ಭಾರತದೊಡನೆ ಕೋಪಗೊಂಡೋ ಅಥವಾ ಅಸಮಾಧಾನ ಗೊಂಡು ಹಸೀನಾ ಮೇಡಂ ಚೀನಾ ದೇಶಕ್ಕೆ ಹೋಗಿದ್ದಲ್ಲ. ಅದು ಎರಡು ದೊಡ್ಡ  ಶಕ್ತಿಯುತ ದೇಶಗಳ ನಡುವೆ ತೋರಬೇಕಾದ   ಸಮತೋಲಿತ ರಾಜತಾಂತ್ರಿಕತೆಯ ಅನಿವಾರ್ಯತೆ. ಹಾಗೆ ನೋಡಿದರೆ ಬಾಂಗ್ಲಾ ದೇಶಕ್ಕೆಚೀನಾ  ನೇಪಾಳ ಹಾಗು ಭೂತಾನ ನಂತೆ ಕೇವಲ ನೆರೆಯ ದೇಶ ಮಾತ್ರ, ಆದರೆ ಭಾರತಕ್ಕೆ ಹಾಗಲ್ಲ ಸರಿ ಸುಮಾರು 4,096 ಕಿಲೋಮೀಟರ್ (ಸುಮಾರು 2,500 ಮೈಲಿ) ಗಡಿಯನ್ನು ಬಾಂಗ್ಲಾದೇಶ ಭಾರತದ  ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ತ್ರಿಪುರ  ಹಾಗು ಮಿಜೋರಾಂ ರಾಜ್ಯಗಳೊಂದಿಗೆ ಹೊಂದಿದೆ. ಕಾರಣಕ್ಕಾಗಿಯೇ ಬಾಂಗ್ಲಾದೇಶದ ಅರ್ಥವ್ಯವಸ್ಥೆ, ಕಾನೂನು ವ್ಯವಸ್ಥೆ ಅಲ್ಲಿಯ ರಾಜಕೀಯ ಹೀಗೆ ಯಾವುದೇ ವಿಭಾಗದಲ್ಲಿ ಏನೇ ವ್ಯತ್ಯಾಸಗಳು ಕಂಡು ಬಂದರೆ ಭಾರತ ಜಾಗರೂಕತೆಯಿಂದ ಅಲ್ಲಿನ ಸ್ಥಿತಿ ಗತಿಗಳಿಗೆ ಸ್ಪಂದಿಸಬೇಕು ಹಾಗು ಬಾಂಗ್ಲಾದೊಂದಿಗೆ ಭಾರತದ ಸಂಬಂಧವು ಕೂಡ ಅಷ್ಟೇ ಗಟ್ಟಿಯಾಗಿಯೇ ಇದೆ. ನಾವು ಇಲ್ಲಿ ಕುಳಿತು ಬಾಂಗ್ಲಾ ದೇಶವೆಂದರೆ ಸಂಪೂರ್ಣವಾಗಿ    ಮೂಲಭೂತವಾದ ವನ್ನು  ಪೋಷಿಸುವ ದೇಶ ಎಂದು ಪಾಕಿಸ್ತಾನದೊಂದಿಗೆ ಹೋಲಿಸಿದರೆ ಅದು ನಮ್ಮ ತಪ್ಪಾದೀತು. ಅಲ್ಲಿನ ಕೆಲ ರಾಜಕಾರಣಿಗಳಿಗೆ  ಭಾರತ ಹಾಗು ಪಾಕಿಸ್ತಾನ ಎಂದು ಸೌಹಾರ್ದದಿಂದಿರುವುದು ಬೇಕಿಲ್ಲ. ಆದರೆ ಬಾಂಗ್ಲಾದ ಕಥೆ ಹಾಗಲ್ಲ ಬಾಂಗ್ಲಾ ವಿಮೋಚನಾ ಚಳುವಳಿಯನ್ನು ಬೆಂಬಲಿಸಿ ಬಾಂಗ್ಲಾದ ಮುಕ್ತಿ ವಾಹಿನಿ ಪಡೆಗೆ ಶಕ್ತಿ ತುಂಬಿ  ಬಾಂಗ್ಲಾ ದೇಶವನ್ನು  ಪಾಕಿಸ್ತಾನದಿಂದ ಮುಕ್ತಿ ಗೊಳಿಸಿದ್ದು ಭಾರತವೇ. ಇದನ್ನು  ಬಾಂಗ್ಲಾ ದೇಶ ಕೂಡ ಮರೆತಿಲ್ಲ. ಈಗಲೂ ಢಾಕಾದಲ್ಲಿ   ಜಗನ್ನಾಥನ ಉತ್ಸವವನ್ನು  ಬಹಳ ಯಶಸ್ವಿಯಾಗಿ ಢಾಕಾದ ಬೀದಿಗಳಲ್ಲಿ ಟ್ರಾಫಿಕ್ ಜಾಮ್ ಆಗುವಷ್ಟು ವಿಜೃಂಭಣೆಯಿಂದ ನಡೆಯುವುದನ್ನು ಖುದ್ದು ಕಣ್ಣಾರೆ ನಾನೆ ಕಂಡಿದ್ದೇನೆಆದರೆ ಬದಲಾದ ಸನ್ನಿವೇಶದಲ್ಲಿ ಕೆಲವು ಮೂಲಭೂತವಾದಿ ಸಿದ್ದಾಂತವನ್ನು ಬೆಂಬಲಿಸುವ ಪಟ್ಟಭದ್ರ ಹಿತಾಸಕ್ತಿಗಳು ಬಾಂಗ್ಲಾ ಜನರಲ್ಲಿ ಭಾರತದ ಬಗ್ಗೆ ಪ್ರಯತ್ನ ಪೂರ್ವಕವಾಗಿ ದ್ವೇಷ ಮನೋಭಾವನೆಯನ್ನು ಬಿತ್ತುವ ಕೆಲಸ ಮಾಡುತ್ತಿವೆ. ಕಾರಣಕ್ಕಾಗಿಯೇ ಚೀನಾ ದೇಶಕ್ಕೆ ಬಾಂಗ್ಲಾದೇಶದ ಮೇಲೆ ಎಲ್ಲಿಲ್ಲದ ಪ್ರೀತಿ   ಅದರಲ್ಲೂ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅಥವಾ ಭಾರತದೊಂದಿಗೆ ಗಡಿರೇಖೆ ಯನ್ನು ಹೊಂದಿರುವ ಯಾವುದೇ ದೇಶವಿರಲಿ ದೇಶದೊಂದಿಗೆ ವ್ಯವಹರಿಸಲು ಚೀನಾ ದೇಶಕ್ಕೆ ಎಲ್ಲಿಲ್ಲದ ಕುಟಿಲೋತ್ಸಾಹ. ಆದ್ದರಿಂದ ಕಾಲದಿಂದ ಕಾಲಕ್ಕೆ ಬಾಂಗ್ಲಾದ   ದೊಡ್ಡ ದೊಡ್ಡ ಸೇತುವೆಗಳನ್ನು ಕಟ್ಟಲು, ಆಸ್ಪತ್ರೆಗಳನ್ನು ಕಟ್ಟಲು ಹಾಗು ನಾನಾ  ಮೂಲಸೌಕರ್ಯ ಯೋಜನೆಗಳ ಮೇಲೆ ಹಣ ಸುರಿಯುತ್ತಲೇ ಇದೆ, ಹಾಗೆಂದು  ಭಾರತವೂ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ  ಭಾರತವು ಕೂಡ ಆಗಾಗ್ಗೆ ಹಣ ಸಹಾಯ ಮಾಡುತ್ತಲೇ ಇದೆ, ಹಾಗಿದ್ದರೂ ಆಂತರಿಕ ಸಮಸ್ಯೆ , ರಾಜಕೀಯ ಒತ್ತಡ ಇವೆಲ್ಲವೂ ಶೇಕ್ ಹಸೀನಾರನ್ನು ಚೀನಾ ದೇಶದ ಮುಂದೆ ಸಾಲಕ್ಕಾಗಿ ಕೈ ಚಾಚುವಂತೆ ಮಾಡಿತ್ತು. ಚೀನಾ ಕೂಡ ಮೊದ ಮೊದಲು ಹಣದ ಹರಿವನ್ನು ಸುಗಮ ಗೊಳಿಸಿತ್ತು , ಆದರೆ ಈಗ ಚೀನಾದ ಆರ್ಥಿಕತೆ ಉತ್ತರದಿಂದ ದಕ್ಷಿಣದ ಕಡೆ ಸಾಗುತ್ತಿದೆ ಇಂತಹ ಸಂಧರ್ಭದಲ್ಲಿ ಶೇಕ್ ಹಸೀನಾ ಚೀನಾದ  ಜಿನ್ ಪಿಂಗ್  ಬಳಿ  ಬಿಲಿಯನ್ ಡಾಲರ್ಗಳ ಸಹಾಯ ಕೇಳಿದ್ದರುಆದರೆ ಜಿನ್ ಪಿಂಗ್ ಭರವಸೆ ಕೊಟ್ಟಿದ್ದು ಕೇವಲ ಬಿಲಿಯನ್ ಡಾಲರ್ಗಳಿಗೆ, ಬೆಳವಣಿಗೆಯಿಂದ ಬೇಸೆತ್ತ ಶೇಕ ಹಸೀನಾ ಚೀನಾದ ಗೊಡವೆಯೇ ಬೇಡ ಎಂದು ಪ್ರವಾಸವನ್ನು ಅವಧಿಗೆ ಮುಂಚೆಯೇ  ಮೊಟಕುಗೊಳಿಸಿ ಬಾಂಗ್ಲಾದೇಶಕ್ಕೆ ಬರಿ ಕೈಯಲ್ಲಿ ಹಿಂದಿರುಗಿದ್ದಾರೆ.

 

ಇತ್ತ ಬರಿಗೈಯಲ್ಲಿ ಹಿಂತಿರುಗಿದ್ದ ಶೇಕ ಹಸೀನಾರನ್ನು  ಎದುರುಗೊಂಡಿದ್ದು  ಮೀಸಲು ಹೋರಾಟದ ಕಿಚ್ಚು. ಹಾಗೆ ನೋಡಿದರೆ ಹೋರಾಟ ಹೊಸದೇನಲ್ಲ 2018 ರಲ್ಲೂ ರೀತಿಯ ಹೋರಾಟ ಹುಟ್ಟಿ ಕೊಂಡಿತ್ತು,ಅದರ ಫಲವಾಗಿ ಅಂದೇ ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಲಾಗಿತ್ತು. ಆದರೆ ಇತ್ತೀಚಿಗೆ ಅಲ್ಲಿನ  ನ್ಯಾಯಾಲಯ   ಮೀಸಲಾತಿಯನ್ನು ಮತ್ತೆ ಜಾರಿಗೊಳಿಸಬೇಕೆಂದು ಆದೇಶಿಸಿತ್ತು, ಆದರೆ ಬಾಂಗ್ಲಾ ಯುವಕರಿಗೆ ಆದೇಶ ಸರಿ ಕಾಣಲಿಲ್ಲ ಯುವಕರ  ರೋಷಾವೇಶಕ್ಕೆ ಕಾರಣವೂ ಇತ್ತು, ಬಾಂಗ್ಲಾದೇಶದಲ್ಲಿ 2018 ಮುಂಚೆ ಇದ್ದ ಮೀಸಲಾತಿ ಪ್ರಮಾಣ  56 % ,ಅದರಲ್ಲಿ 30 % ಸ್ವತಂತ್ರ ಹೋರಾಟಗಾರರ ಕುಟುಂಬಕ್ಕೆ , 10 % ಮಹಿಳಾ ಮೀಸಲಾತಿ , 10 % ಹಿಂದುಳಿದ ಪ್ರದೇಶಗಳಿಗೆ , 5 % ಅಲ್ಪಸಂಖ್ಯಾತರು ಹಾಗು ಕೆಲವು ನಿರ್ಧಿಷ್ಟ ವರ್ಗಕ್ಕೆ  ಹಾಗು 1 % ವಿಶೇಷ ಚೇತನರಿಗೆ ಹೀಗೆ ವಿಭಜಿಸಲಾಗಿತ್ತುಸರಿ ಸುಮಾರು ಆರರಿಂದ ಏಳು ವರುಷಗಳ ಕಾಲ ಮೆರಿಟ್ ಆದರದ ಮೇಲೆ ಉದ್ಯೋಗ ಪಡೆದವರನ್ನು ನೋಡಿದ್ದ ಯುವ ಸಮೂಹ ಅವರ ಹಾದಿಯಲ್ಲೇ ತಮಗೂ ಒಳ್ಳೆಯ ಸರ್ಕಾರೀ ಕೆಲಸ ದೊರಕೀತು ಎಂದು ಕೊಂಡಿದ್ದರು. ಆದರೆ ಇದ್ದಕಿದ್ದ ಹಾಗೆ ಮತ್ತೆ ಮೀಸಲು ಅಂದಾಗ ಯುವಜನತೆ ಕಂಗಾಲಾಗಿ ಹೋಗಿದ್ದಾರೆ, ಮೊದ ಮೊದಲು ಯೂನಿವೆರ್ಸಿಟಿಯ ಕ್ಯಾಂಪಸುಗಳಲ್ಲಿಪ್ರತಿಭಟನೆ ಶಾಂತ ರೂಪದಲ್ಲೇ ಇತ್ತು. ಆದರೆ ಕಿಚ್ಚು ಫೇಸ್ಬುಕ್ ಸಹಾಯದಿಂದ ಎಲ್ಲೆಡೆ ಕಾಳ್ಗಿಚ್ಚಿನಂತೆ ಹಬ್ಬಿ ನೂರಾರು ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತಾಯಿತು, ವಿದ್ಯಾರ್ಥಿ ಸಮೂಹದೊಂದಿಗೆ ಅಲ್ಲಿಯ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿಯು ಚಳುವಳಿಗೆ ಧುಮುಕಿದಾಗ ಚಳುವಳಿ ಉಗ್ರ ರೂಪ ತಾಳಿದೆ. ಕಾರಣವಿಷ್ಟೇ ಬಾಂಗ್ಲಾದೇಶದಲ್ಲಿ  ಜನವರಿ 2024  ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಭಲ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಚುನಾವಣೆಯನ್ನೇ ಬಹಿಷ್ಕರಿಸುವ ಎಡವಟ್ಟು ಮಾಡಿ ಕುಳಿತಿತ್ತು, ಪರಿಣಾಮವಾಗಿ ಅವಾಮಿ ಲೀಗ್ ಶೇಖ ಹಸೀನಾ ಐದನೇ ಬಾರಿಗೆ ಪ್ರಧಾನ ಮಂತ್ರಿ ಯಾಗಿ ಆಯ್ಕೆಯಾದರು, ಹಾಗು ವಿರೋಧ ಪಕ್ಷ ತನ್ನ ಸ್ವಯಂಕೃತ ಅಪರಾಧದಿಂದಾಗಿ ಸಂಸತ್ನಲ್ಲಿ ತನ್ನ ಅಭಿಪ್ರಾಯ ಮಂಡಿಸುವ ಅವಕಾಶವನ್ನೇ ಕಳೆದು ಕೊಂಡಿತು. ಚಡಪಡಿಕೆ ಢಾಕಾದ ರಸ್ತೆ ರಸ್ತೆಗಳಲ್ಲಿ ಮೀಸಲು ಹೂರ್ತದಲ್ಲಿ ಉಗ್ರ ರೂಪದಲ್ಲಿ ಕಾಣಿಸಿಕೊಂಡಿತು ಎಂದರೆ ತಪ್ಪಾಗಲಾರದು. ಬಹುಶಃ ಬಾಂಗ್ಲಾದೇಶದ ಪರಿಸ್ಥಿತಿಯನ್ನು ನೋಡಿದವರಾರು ಇನ್ನೆಂದು ವಿರೋಧ ಪಕ್ಷಗಳನ್ನೇ ಇಲ್ಲದಂತೆ ಮಾಡುತ್ತೇವೆ ಎಂದು ಹೇಳಲಾರರು ಎಂದು ಭಾವಿಸುತ್ತೇನೆ. ಸಂಸತ್ ನಲ್ಲಿ ಪ್ರಭಲ ವಿರೋಧ ಪಕ್ಷ ಇರದೇ ಇದ್ದರೆ ಏನಾದೀತು ಎಂಬುದಕ್ಕೆ ಬಾಂಗ್ಲಾ ನಿದರ್ಶನವಾಗಿ ನಿಲ್ಲಲಿದೆ.

ಬಾಂಗ್ಲಾದ ಯುವಕರು ರೊಚ್ಚಿಗೆದ್ದಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ, ಅಲ್ಲಿಯ ಪರಿಸ್ಥಿತಿಯೇ ಹಾಗಿದೆ. ನೀವು ಹಾಗೆ ಸುಮ್ಮನೆ ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಢಾಕಾದ ಗಲ್ಲಿಗಳಲ್ಲಿ ನಡೆಯುತ್ತಾ ಹೋಗಿ ಅಲ್ಲಿನ ದೃಶ್ಯಗಳೇ ಅಲ್ಲಿನ ಶ್ರಮಿಕರ , ಕಾರ್ಮಿಕರ ಕಥೆಗಳನ್ನು ಹೇಳುತ್ತವೆ. ಢಾಕಾದ ಯಾವುದೇ ದಾರಿಯಲ್ಲಿ ಹೋದರು ನಿಮಗೆ ಪಕ್ಕನೆ ಸಿಗುವುದು ಸೈಕಲ್ ರಿಕ್ಷಾ ಅದು ನಡೆಯುವುದು ಪೆಟ್ರೋಲ್ , ಡೀಸೆಲ್ ನಿಂದಲ್ಲ , ಆದರೆ ಅದರ ಪೆಡಲ್ಗಳನ್ನು ತುಳಿಯುವುದರಿಂದ ಅಂದರೆ ನೀವೇ ಊಹಿಸಿ, ಇಂದು ಭಾರತದಲ್ಲಿ ಟಾಂಗಾ ಗಳೇ ಹಳೆಯ ಪಳೆಯುಳಿಕೆಯಂತೆ ಅಲ್ಲೊಂದು , ಇಲ್ಲೊಂದು ಕಾಣ ಸಿಗುತ್ತವೆ ಆದರೆ ಬಾಂಗ್ಲಾ ದೇಶದಲ್ಲಿ ಈಗಲೂ ಸೈಕಲ್ ರಿಕ್ಷಾಗಳು ಕಾಣ ಸಿಗುತ್ತವೆ, ಮತ್ತು ಅವು ಅಲ್ಲಿ ಅತ್ಯಂತ ಅಗ್ಗದ ಸಾರಿಗೆ ಸಾಧನ , ಹೀಗೆ ಬಡತನದ ದೃಶ್ಯಗಳು ಯಾವ ವಿವರಣೆಯು ಬೇಕಿಲ್ಲದೆ ಅಂಕೆಗೆ ಸಿಗುತ್ತವೆ. ಮತ್ತು ಅಲ್ಲಿಯ ಲೇಬರ್ ಇಸ್ ವೆರಿ ಚೀಪ್ ಹಾಗು ಅದೇ ಕಾರಣಕ್ಕೆ ಅಲ್ಲಿ ಹೆಚ್ಚು ಹೆಚ್ಚು ಜವಳಿ ಉದ್ಯಮಗಳು ಕಾಣ ಸಿಗುತ್ತವೆ ಹಾಗು ಬಾಂಗ್ಲಾದ ಬೆಳವಣಿಗೆಗೆ ಜವಳಿ ಉದ್ಯಮದ ಕೊಡುಗೆಯು ಅಪಾರ ಆದರೆ ಅಲ್ಲಿನ ಯುವಕರು ಎದುರಿಸುತ್ತಿರುವ ಸಮಸ್ಯೆ "ಅಂಡರ್ ಎಂಪ್ಲಾಯ್ಮೆಂಟ್ " ಅಂದರೆ ಹೆಚ್ಚು ಹೆಚ್ಚು ಕಲಿತ ಯುವಕರು  ಜವಳಿ ಕಾರ್ಖಾನೆಗಳಲ್ಲಿ ಕೇವಲ ಕಾರ್ಮಿಕ ನಾಗಿ ದುಡಿಯಲು ಸಿದ್ದರಿಲ್ಲ. ಕಲಿತ ಯುವ ಸಮೂಹದ ಕನಸು ಅದಕ್ಕಿಂತ ದೊಡ್ಡದು ಮೀಸಲು ಅದಕ್ಕೆ ಅಡ್ಡಿ ಉಂಟು ಮಾಡಿತು, ಸಮಯಕ್ಕೆ ಸರಿಯಾಗಿ ವಿರೋಧ ಪಕ್ಷದ ಬೆಂಬಲವು ದೊರಕಿ ಬೆಳಗಾಗುವುದರಲ್ಲಿ ನ್ಯಾಯಯುತವಾದ ಹಕ್ಕಿಗಾಗಿ ಶಾಂತಿಯುತವಾಗಿ ನಡೆಯಬೇಕಿದ್ದ ಚಳುವಳಿ ಉಗ್ರ ರೂಪ ತಾಳಿ ಯುವಕರ ಪ್ರಾಣ ತೆಗೆದಿದ್ದು ವಿಪರ್ಯಾಸ, ಹಾಗೆಂದು ಶೇಖ್ ಹಸೀನಾ ಆಡಳಿತ ಬಾಂಗ್ಲಾ ಪ್ರಜೆಗಳ ಒಳಿತನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದಾಗಿಯೋ ಅಥವಾ  ಶೇಕ್ ಹಸೀನಾ ಆಡಳಿತಾವಧಿಯಲ್ಲಿ ಬಾಂಗ್ಲಾ ಅಭಿವೃದ್ಧಿ ಕಂಡಿಲ್ಲವೆಂದಲ್ಲ. ಒಂದಾನೊಂದು ಕಾಲದಲ್ಲಿ ಪಾಕಿಸ್ತಾನದ ಅತ್ಯಂತ ಹಿಂದುಳಿದ  ಪ್ರಾಂತ್ಯಕ್ಕೆ ಸೇರಿದ್ದೇ ಬಾಂಗ್ಲಾದೇಶ 1971 ಪಾಕಿಸ್ತಾನದೊಂದಿಗಿನ  ಕದನದ ನಂತರ ಬಡತನ , ಕ್ಷಾಮ , ಆರ್ಥಿಕ ಹೊಡೆತ ಗಳೆಲ್ಲವನ್ನು ಮೆಟ್ಟಿ ನಿಂತು ದೇಶವೇ ನಿಬ್ಬೆರಗಾಗುವಂತೆ ಎದ್ದು ನಿಂತಿದೆ , ಇದರ ಕುರುಹುಗಳು 2005 ಮತ್ತು 2006 ರಲ್ಲೇ ಕಂಡು ಬಂದಿತ್ತು, ಆದರೆ ಆಗ ಇದು ಕೇವಲ ಕಾಕತಾಳೀಯ ಮತ್ತು ತಾತ್ಕಾಲಿಕ ಎಂದೇ ಬಣ್ಣಿಸಲಾಗಿತ್ತು. ಆದರೆ ಅಂದಿನಿಂದ, ಬಾಂಗ್ಲಾದೇಶದ ವಾರ್ಷಿಕ ಜಿಡಿಪಿ ಬೆಳವಣಿಗೆಯು ಪಾಕಿಸ್ತಾನಕ್ಕಿಂತ  ವರ್ಷಕ್ಕೆ ಸುಮಾರು 2.5 ಶೇಕಡಾ ಮೀರಿದೆಬಾಂಗ್ಲಾದೇಶದ ತಲಾ ಆದಾಯವು  ಪಾಕಿಸ್ತಾನದ ತಲಾ ಆದಾಯಕ್ಕಿಂತ   ವರ್ಷಕ್ಕೆ ಸುಮಾರು 3.3 ಶೇಕಡಾವಾರು ವೇಗವಾಗಿ ಬೆಳೆಯುತ್ತಿದೆಯಂತೆಹಾಗಾದರೆ ಒಂದು ಕಾಲಕ್ಕೆ ಪಾಕಿಸ್ತಾನದ ಅಂತ್ಯಂತ ಹಿಂದುಳಿದ ಪ್ರದೇಶವಾಗಿದ್ದ ಬಾಂಗ್ಲಾ ಹೇಗೆ ಪಾಕಿಸ್ತಾನವನ್ನು ಮೀರಿಸುತ್ತಿದೆ ಎಂದು ನೋಡಿದರೆ , ಬಾಂಗ್ಲಾದೇಶ ತನ್ನ ಬೆಳವಣಿಗೆಗಾಗಿ ತನ್ನ ಸಾಮಾಜಿಕ ಸ್ಥರಗಳಲ್ಲಿ  ಭಾರಿ ಬದಲಾವಣೆಯನ್ನು ಮಾಡಿ ಕೊಂಡಿತು ಅದು ಮಹಿಳೆಯರ ಸಬಲೀಕರಣದಿಂದ ಹಿಡಿದು ಇನ್ಕ್ಲ್ಯೂಸಿವ್ ಬ್ಯಾಂಕಿಂಗ್ ವರೆಗೆ (ಅಂದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಬ್ಯಾಂಕಿಂಗ್ ಸವಲತ್ತುಗಳನ್ನು ಹೊಂದುವುದು) ಅದರಲ್ಲಿ  ಬಹು ದೊಡ್ಡ ಕೊಡುಗೆ ಸರ್ಕಾರೇತರ ಸಂಸ್ಥೆ  ಗ್ರಾಮೀಣ ಬ್ಯಾಂಕ್ನಾದು ಹಾಗು ಹೆಚ್ಚು ಹೆಚ್ಚು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳುವಂತೆ ಶೇಕ್ ಹಸೀನಾ ಸರ್ಕಾರ ಮಾರ್ಪಾಟುಗಳನ್ನು ಮಾಡುತ್ತಲೇ ಇದೆ. ಒಂದು ಅಂದಾಜಿನ ಪ್ರಕಾರ ಕೇವಲ 10% ಬ್ಯಾಂಕ್ ಖಾತೆಗಳು ಬಾಂಗ್ಲಾ ದೇಶದಲ್ಲಿ ಡೊರ್ಮಂಟ್ ಅಕೌಂಟ್ಗಳು (ಡೊರ್ಮಂಟ್   ಅಕೌಂಟ್ ಅಂದರೆ ಒಂದು ಬ್ಯಾಂಕ್ ಖಾತೆಯನ್ನು ನಿರ್ದಿಷ್ಟ ಅವಧಿಯ ವರೆಗೆ ಉಪಯೋಗಿಸದೆ ಇದ್ದರೆ ಅದನ್ನು ಡೊರ್ಮಂಟ್ ಎಂದು ಕರೆಯುತ್ತಾರೆ ) ಅಂದರೆ ಬಾಂಗ್ಲಾದೇಶದಲ್ಲಿ ಬ್ಯಾಂಕ್ ಅಕೌಂಟ್ ಅನ್ನು ತೆರೆಯುವದಷ್ಟೇ ಅಲ್ಲ , ಅದನ್ನು ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಅಷ್ಟೇ ಹಾಸು ಹೊಕ್ಕಾಗಿ ಉಪಯೋಗಿಸುತ್ತಿದ್ದಾರೆ ಎಂದು ಅರ್ಥ. ಪ್ರಮಾಣ ಭಾರತಕ್ಕೆ ಹೋಲಿಸಿದರೆ ಭಾರತದಲ್ಲಿ Dormant ಅಕೌಂಟ್ ಗಳು 88% (ಭಾರತದ ಜನಸಂಖ್ಯೆ ಗೂ ಬಾಂಗ್ಲಾದೇಶದ ಜನಸಂಖ್ಯೆ ಗೂ ಹಾಗು ಭೂಗೋಳಿಕ ಪರಿದಿಗೂ ತಾಳೆ ಹಾಕುವುದು ಸರಿ ಇಲ್ಲದಿರಬಹುದು ಆದರೆ 88% ಎಂಬುದು ಬಹು ದೊಡ್ಡ ಅಂಕಿ) ಹಾಗು ಬಾಂಗ್ಲಾದೇಶ ತನ್ನ ನೆರೆಹೊರೆಯೊಂದಿಗೆ ಅಂತ್ಯಂತ ಸಕಾರಾತ್ಮಕವಾಗಿ ವ್ಯವಹರಿಸುತ್ತಿದೆ , ಮತ್ತು ಭಾರತವು ಕೂಡ ಬಾಂಗ್ಲಾದೇಶ ದೊಂದಿಗೆ ಮಿತ್ರತ್ವವನ್ನು ಪೋಷಿಸುತ್ತಲೇ ಬಂದಿದೆಬಹುಶಃ ಪಾಕಿಸ್ತಾನ  ತತಕ್ಷಣಕ್ಕೆ ಬಾಂಗ್ಲಾದೇಶವನ್ನು ಒಂದು ಕೇಸ್ ಸ್ಟಡಿ ಎಂಬಂತೆ ಅಳವಡಿಸಿಕೊಂಡು ಅಭಿವೃದ್ಧಿಯ ಪಥದತ್ತ ಸಾಗುವುದು ಹೇಗೆ ಎಂದು ಯೋಚಿಸಬೇಕು, ಏಕೆಂದರೆ ಎಂದಿಗಾದರೂ ನಮ್ಮ ನೆರೆಹೊರೆಯವರು ಕ್ಷೇಮವಾಗಿರಬೇಕು  ಆಗ ಅಲ್ಲಿ ಅರಾಜಕತೆ , ಹಾಗು ಕುಟಿಲತೆ ಇರುವುದಿಲ್ಲ ಹಾಗಾದಗ ಸುಮ್ಮನೆ ಕಾಲು ಕೆರೆದು ಜಗಳಕ್ಕೆ ಹೋಗುವ ಸಂಭವವೂ ಇರುವುದಿಲ್ಲ ಅದು ಪಾಕಿಸ್ತಾನಕ್ಕೆ ಅರ್ಥವಾಗಬೇಕು ಅದಾಗುವ ಲಕ್ಷಣಗಳೂ ಇಲ್ಲ. ಬಾಂಗ್ಲಾದೇಶದಲ್ಲಿ ಉಂಟಾದ  ಸಾವು ನೋವು  ಎಂದಿಗಾದರೂ ಖಂಡನೀಯವೇ ಆದರೆ ಶೇಕ ಹಸೀನಾ ಕೈಯಲ್ಲಿ ಬಾಂಗ್ಲಾದ ಚುಕ್ಕಾಣಿ  ಇದ್ದಷ್ಟು ದಿನ  ಬಾಂಗ್ಲಾ ಮತ್ತೊಂದು ಪಾಕಿಸ್ತಾನ ಅದೀತೆಂಬ ಆತಂಕ ಭಾರತಕ್ಕಿರುವುದಿಲ್ಲ, ಹಾಗಾಗ ಬೇಕೆಂದರೆ ಬಾಂಗ್ಲಾ ಮತ್ತೆ ಸಹಜ ಸ್ಥಿತಿಗೆ ಮರಳಬೇಕು ಬಾಂಗ್ಲಾದ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಮೀಸಲನ್ನು ತೆಗೆದು ಹಾಕಲು ಆದೇಶಿಸಿದೆ, ಬೆಳವಣಿಗೆಯೊಂದಿಗೆ  ಬಾಂಗ್ಲಾದಲ್ಲಿ ಮತ್ತೆ ಶಾಂತಿ ನೆಲೆ ನಿಲ್ಲುವ ಸೂಚನೆಗಳು ಕಾಣುತ್ತಿವೆ. ಶೇಕ್ ಹಸೀನಾ ಹಾಗು ಅವಾಮಿ ಲೀಗ್  ಅಹಂಕಾರ ಮರೆತು ಆತ್ಮಾವಲೋಕನ ಮಾಡಿ ಕೊಳ್ಳಲಿ, ವಿರೋಧ ಪಕ್ಷಗಳ ವಿಮರ್ಶೆಗೆ ಕಿವಿಯಾಗಿ ತನ್ನ ತಪ್ಪನು ತಿದ್ದಿಕೊಳ್ಳಲಿ. ಆಗಲಾದರೂ ಅಲ್ಲಿನ ಯುವ ಪೀಳಿಗೆ  ಶೇಕ್ ಹಸೀನಾ ಹಾಗು ಅವಾಮಿ ಲೀಗ್ ಪಕ್ಷವನ್ನು ಕ್ಷಮಿಸಲಾಗದಿದ್ದರು ಕ್ಷಮಿಸುವ ಆಲೋಚನೆ ಮಾಡೀತು.

 


ಕಾರ್ತಿಕ್ ಎಸ್ ಬಾಪಟ್.

 

 


Sunday, July 14, 2024

 ಆರೋಪಿಗಳ ನಿಲುವು , ಎಚ್ಚರಿಕೆಯ ಗಂಟೆ ಯಾರಿಗೆ ? 


ಇಂಜಿನಿಯರ್ ರಶೀದ್ (ಶೇಕ್ ಅಬ್ದುಲ್ ರಶೀದ್) ಹಾಗು ಅಮೃತ್ ಪಾಲ್ ಸಿಂಗ್ ಸಂಧು ಕಳೆದ ವಾರ 
ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಗೆದ್ದವರು ಪ್ರಮಾಣವಚನ ಸ್ವೀಕರಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ, ಆದರೆ ಇವರ ಗೆಲುವು , ಇವರ ಹಿನ್ನಲೆ ಇವರಿಬ್ಬರು ಪ್ರತಿ ಪಾದಿಸಿಕೊಂಡು ಬರುತ್ತಿರುವ ನಿಲುವುಗಳು ಎಂಥವರನ್ನು  ಆಶ್ಚರ್ಯ ಮತ್ತು ಆತಂಕಕ್ಕೆ ದೂಡುತ್ತವೆ. ಅದರಲ್ಲೂ ಇವರಿಬ್ಬರು ಗೆದ್ದಿರುವುದು ಪಕ್ಷೇತರ ಅಭ್ಯರ್ಥಿಗಳಾಗಿ ಎಂಬುದು ಇನ್ನಷ್ಟು ಆತಂಕಕ್ಕೆ ದೂಡುವ ವಿಷಯ. ಸಾಮಾನ್ಯವಾಗಿ ಸಂಸತ್ ಚುನಾವಣೆಗಳಲ್ಲಿ ಪಕ್ಷೇತರರಾಗಿ ಗೆಲುವು ಕಾಣುವುದು ಅತ್ಯಂತ ಕಷ್ಟಸಾಧ್ಯದ ಕೆಲಸ ಹಾಗೆ ಗೆಲುವು ಸಾಧಿಸಲೇ ಬೇಕಾದರೆ   ಜನಮಾನಸದಲ್ಲಿ ಆ ವ್ಯಕ್ತಿಯ ಬಗ್ಗೆ ಒಂದು ನಿರ್ವಿವಾದಿತವಾದ ಸ್ವೀಕಾರ ಮನೋಭಾವ ಇರಬೇಕು ಹಾಗು ಯಾವುದಾದರೊಂದು ಪ್ರಭಲ ಕಾರಣವಿರಬೇಕು, ಹಾಗಾದರೆ ಇವರಿಬ್ಬರ ಗೆಲುವಿಗೆ ಆ ಬಗೆಯ ಕಾರಣ ಅಥವಾ ಇವರಿಬ್ಬರಿಗೆ ಆ ಬಗೆಯ ವರ್ಚಸ್ಸಿತ್ತೇ ಎಂಬ ಪ್ರಶ್ನೆ ಮೂಡುತ್ತದೆ. ಏಕೆಂದರೆ ಇಂಜಿನಿಯರ್ ರಶೀದ್ ಹಾಗು ಅಮೃತ್ ಪಾಲ್ ಚುನಾವಣೆಗಳನ್ನು ಎದುರಿಸಿರುವುದು ಜೈಲಿನ ಸರಳುಗಳ ನೆರಳಿನಲ್ಲಿ. 

2019 ರಲ್ಲಿಯೇ  ಯುಎಪಿಎ (ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ) ಅಡಿಯಲ್ಲಿ  ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಒದಗಿಸಿದ ಆರೋಪದ ಮೇಲೆ  ಇಂಜಿನಿಯರ್ ರಶೀದ್ ಬಂಧನವಾಗಿತ್ತು. ಹಾಗೆ ನೋಡಿದರೆ  ರಶೀದ್ ರಾಜಕೀಯ ಪ್ರವೇಶ ಇದೇ ಮೊದಲಲ್ಲ 2013 ರಲ್ಲಿಯೇ ಅವಾಮಿ ಇತಿಹಾದ್ ಪಾರ್ಟಿ (AIP) ಯನ್ನು ಹುಟ್ಟು ಹಾಕಿದ್ದುಂಟು ಅದಕ್ಕೂ ಮುಂಚೆ 2008  ಹಾಗು 2014 ರಲ್ಲಿ ಲ್ಯಾನ್ಗಟೆ ಕ್ಷೇತ್ರದಿಂದ ಶಾಸಕರಾಗಿಯೂ ಆಯ್ಕೆಯಾಗಿದ್ದುಂಟು,  ಆದರೆ ಆಗ ಯುಎಪಿಎ ಅಡಿಯಲ್ಲಿ  ಜೈಲು ಸೇರಿರಲಿಲ್ಲ, ಹಾಗಾದರೆ ಬಾರಾಮುಲ್ಲಾಅಂತಹ ಕ್ಷೇತ್ರದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾರಂತಹ ನಾಯಕನ  ವಿರುದ್ಧ ಭಾರಿ ಅಂತರದಿಂದ ಗೆದ್ದಿದ್ದು ಹೇಗೆ ಎಂದು ನೋಡ ಹೊರಟರೆ ಕಾಣುವುದು ಅದೇ ಸಹಾನುಭೂತಿ ರಾಜಕಾರಣ. ಜೈಲಿನ ಸರಳುಗಳು ಕೆಲವೊಮ್ಮೆ ಎಂತೆಂತವರನ್ನು ಏನೇನೊ ಮಾಡಿ ಹಾಕುತ್ತವೆ. ಶೇಕ್ ಅಬ್ದುಲ್ ರಶೀದ್ (ರಶೀದ್ ಇಂಜಿನಿಯರ್) ಕಂಬಿಗಳ ಹಿಂದೆ ಇದ್ದರು ಚುನಾವಣೆಯನ್ನು ಸಂಪೂರ್ಣವಾಗಿ ನಡೆಸಿದ್ದು ರಶೀದ್ ಮಕ್ಕಳು. ಅಬ್ರಾರ ಹಾಗು ಅಸ್ರಾರ್ ರಶೀದ್ ಇಬ್ಬರು ಸೇರಿ "ಜೈಲ್ ಕೆ ಬದ್ಲಾ ವೋಟ್ ಸೆ " ಎಂಬ ಘೋಷವಾಕ್ಯಗಳನ್ನು ಹುಟ್ಟು ಹಾಕಿ ಜನರನ್ನು ಭಾವನಾತ್ಮಕವಾಗಿ ಕಟ್ಟಿ ಹಾಕಿದರು, ಅಲ್ಲದೆ ಅಲ್ಲಿನ ಜನರಿಗೆ ಒಮರ್ ಅಬ್ದುಲ್ಲಾ ವಿರುದ್ಧವಾಗಿ ಮತ ಚಲಾಯಿಸಬೇಕಾಗಿತ್ತು, ಹತ್ತು ಹಲವು ಅವಕಾಶಗಳಿದ್ದರೂ ಒಮರ್ ಅಬ್ದುಲ್ಲಾ ಸರ್ಕಾರ ಕಾಶ್ಮೀರದ ಅಭಿವೃದ್ಧಿಯ ಬಗ್ಗೆ ಚಿಂತಿಸಲಿಲ್ಲ,  ಅಂತಹ ಸಂದರ್ಭದಲ್ಲಿ ರಶೀದ್ ಇಂಜಿನಿಯರ್ ಯುಎಪಿಎ ಕಾಯ್ದೆಯಲ್ಲಿ ಬಂಧಿತರಾಗಿರುವುದು ಮುಖ್ಯ ವಿಷಯವಾಗಲೇ ಇಲ್ಲ, ಇದು ವಿಪರ್ಯಾಸ.  ಇಲ್ಲದ್ದಿದರೆ ಶತ್ರು ದೇಶದ ಭಯೋತ್ಪಾದಕರಿಗೆ ಹಣ ಒದಗಿಸಿದ ಆರೋಪವನ್ನು ಹೊತ್ತಿರುವ ವ್ಯಕ್ತಿಯನ್ನು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವುದೆಂದರೆ ಇದರ ತರ್ಕವೇನು? ತರ್ಕವಿಷ್ಟೇ ಒಮ್ಮೆ ಅಧಿಕಾರ ವಿರೋಧಿ ಅಲೆಯೆದ್ದರೆ ಆತನ ಮುಂದಿರುವ ವ್ಯಕ್ತಿ ಯಾರೆಂದು ಜನರು ನೋಡುವುದಿಲ್ಲ ಅವರಿಗೆ ಆಳುವ ಹಾಗು ಆಳಿದ  ಸರ್ಕಾರದ ಅಹಂಕಾರಕ್ಕೆ ಆ ಕ್ಷಣಕ್ಕೆ ಮತಗಳ ಮೂಲಕ ಮದ್ದರೆಯುವದೇ ಏಕೈಕ ಧ್ಯೇಯವಾಗುತ್ತದೆ ಹಾಗು ಕೆಲವೊಮ್ಮೆ ಕೆಲವು ಪಿತೂರಿಗಳನ್ನು ನಡೆಸಿ ನಡೆಯದೆ ಇದ್ದದನ್ನು ಇದೇ ನಡೆದದ್ದು ಎಂದು ಚಿಕ್ಕಂದಿನಿಂದಲೇ ತಲೆಯಲ್ಲಿ ತುಂಬ ತೊಡಗಿದರೆ ಸತ್ಯವು ಸುಳ್ಳಿನೆದರು ತಲೆ ಎತ್ತಲು ಅಂಜುತ್ತದೆ.

ಇನ್ನು ಅಮೃತಪಾಲ್‌ ಸಿಂಗ್‌  ಕೂಡ ಖಲಿಸ್ತಾನ್‌  ಪ್ರತ್ಯೇಕ ರಾಷ್ಟ್ರದ ಪರಿಕಲ್ಪನೆಯನ್ನು ಬೆಂಬಲಿಸುತ್ತಿರುವ ಪ್ರತ್ಯೇಕತಾವಾದಿ. ಸೌದಿ ಅರೇಬಿಯಾದಲ್ಲಿ  ಸಾರಿಗೆ   ವಹಿವಾಟು  ನಡೆಸುತ್ತಿದ್ದ ಅಮೃತಪಾಲ್‌ ವಾರಿಸ್‌ ಪಂಜಾಬ್‌ ದೇ ಸ್ಥಾಪಕ ಪಂಜಾಬಿ ನಟ- ಕಾರ್ಯಕರ್ತ ದೀಪ್‌ ಸಿಂಗ್‌ ಸಿಧು ಮರಣಾನಂತರ  ಈ ಸಂಸ್ಥೆಯ ಮುಖ್ಯಸ್ಥನಾದ, ಜೊತೆಜೊತೆಗೆ ಎಂಬತ್ತರ ದಶಕದಲ್ಲಿ ರಕ್ತದೋಕುಳಿ ಹರಿಸಿದ್ದ ಭಿಂದ್ರನ್ವಾಲೆಯ ಖಲಿಸ್ತಾನ್‌ ಪರಿಕಲ್ಪನೆಯನ್ನು ಮತ್ತೆ ಮುನ್ನೆಲೆಗೆ ತಂದ ಕುಖ್ಯಾತಿಗೊಳಗಾದ. ಸದ್ಯಕ್ಕೆ ಭಯೋತ್ಪಾದಕ ಚಟುವಟಿಕೆಗಳು ಹಾಗು ಪಂಜಾಬ್ ನ ಅಜನಾಳ  ಪೊಲೀಸ್ ಠಾಣೆ ಮೇಲೆ  ಅಮೃತಪಾಲ್‌ ಬೆಂಬಲಿಗರು ನಡೆಸಿದ ಹಲ್ಲೆಯ ಆರೋಪದ ಮೇಲೆ ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ ನಡಿಯಲ್ಲಿ ಆರೋಪಿಯಾಗಿ ಬಂಧಿತನಾಗಿದ್ದಾನೆ. ಇಂತಹ ವ್ಯಕ್ತಿ ಖಡುರ್ ಸಾಹಿಬ್ ಕ್ಷೇತ್ರದಿಂದ ಸರಿ ಸುಮಾರು ಹತ್ತಿರ ಹತ್ತಿರ ಎರಡು ಲಕ್ಷ ಮತಗಳ ಅಂತರದಿಂದ ಗೆದ್ದಿರುವುದು ನಿಜಕ್ಕೂ ಆಘಾತಕಾರಿ ವಿಷಯ, ಹಾಗಾದರೆ  ಅಮೃತಪಾಲ್‌ ಗೆದ್ದಿದೇಕೆ ಎಂದು ನೋಡ ಹೊರಟರೆ ಕಾಣುವುದು ಹತ್ತು ಹಲವು ವಿಷಯಗಳು  ನಾಯಕತ್ವದ ಕೊರತೆ , ತಾಂಡವವಾಡುತ್ತಿರುವ ಡ್ರಗ್ ದಂಧೆ ಹಾಗು ಮತ್ತದೇ ಸಹಾನುಭೂತಿ ರಾಜಕೀಯ. ಖಡುರ್ ಸಾಹಿಬ್ ಜನರನ್ನು ಅಮೃತಪಾಲ್‌ನನ್ನೇಕೆ ಗೆಲ್ಲಿಸಿದಿರಿ ಎಂದು ಕೇಳಿದಕ್ಕೆ ದೊರೆತ ಉತ್ತರ ಆತ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟ ನಡೆಸಿದ್ದ ಆದ್ದರಿಂದ ಗೆಲ್ಲಿಸಿದೆವು ಎಂದರು.  ಅಂದರೆ ಅಲ್ಲಿನ ಜನ ಪ್ರತ್ಯೇಕ ಖಲಿಸ್ತಾನ್‌ ಹೋರಾಟಕ್ಕೆ  ಬೆಂಬಲಿಸಿಲ್ಲ ಆದರೆ ಆತ ಖಲಿಸ್ತಾನ್‌ ದೊಂದಿಗೆ ಜೊತೆ ಜೊತೆಯಾಗಿ ಮುನ್ನೆಲೆಗೆ ತಂದ ವಿಷಯಗಳು  ಡ್ರಗ್ಸ್ ಮಾಫಿಯಾ, ನಿರುದ್ಯೋಗ , ರೈತರ ಸಮಸ್ಯೆ  ಹೀಗೆ ಸ್ಥಾಪಿತ ಸರ್ಕಾರಗಳು ಹಾಗು ಪಕ್ಷಗಳು  ಆಯಾ ಕಾಲಕ್ಕೆ ತತಕ್ಷಣಕ್ಕೆ  ಗಣನೆಗೆ ತೆಗೆದು ಕೊಳ್ಳದ ವಿಷಯಗಳನ್ನು ಮುನ್ನೆಲೆಗೆ ತಂದು ಈ ವಿಷಯಗಳ ಮೂಲಕ ಜನರಿಗೆ ಹತ್ತಿರ ಆಗುತ್ತಾ   ಖಲಿಸ್ತಾನ್‌ ಚಳುವಳಿಗೆ ರಹದಾರಿಯನ್ನು ಸೃಷ್ಟಿ ಮಾಡುತ್ತಿದ್ದ, ಜನರ ಕಣ್ಣಲ್ಲಿ ಉಳಿದೆಲ್ಲ ಸಮಸ್ಯೆಗಳ ಮುಂದೆ ಈ ಸಮಸ್ಯೆ ಗೌಣವಾಗಿ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ  . 

ಒಟ್ಟಾರೆಯಾಗಿ ಹೇಳುವದಾದರೆ ಇವರಿಬ್ಬರ ಜಯ ಇವರು  ಪ್ರತಿಪಾದಿಸುತ್ತಿರುವ ಪ್ರತ್ಯೇಕತಾವಾದದ  ಸಿದ್ಧಾಂತಗಳಿಗೆ ಸಿಕ್ಕ ಜಯವಲ್ಲ. ಇದು  ಪರಿಸ್ಥಿತಯ ಒತ್ತಡಕೆ ಪರವಶವಾದ ಮತದಾರ ಇನ್ಯಾರಿಗೋ ಪಾಠ ಕಲಿಸಲು ಹೋಗಿ ಇವರಿಬ್ಬರನ್ನು ಗೆಲ್ಲಿಸಿದ.   ಆದರೆ ಆಳುವ ಸರ್ಕಾರಗಳಿಗೆ ಇದರಲ್ಲಿ ಹಲವು ಪಾಠಗಳು ಅಡಗಿವೆ, ಕಾಲದಿಂದ ಕಾಲಕ್ಕೆ ನಮ್ಮನಾಳುವ ಸರ್ಕಾರಗಳು ಕೆಲವೊಮ್ಮೆ ಅಲ್ಲಿಂದೆಲ್ಲಿಗೆ ಸಾರಿಸುವುದು ಎಂಬಂತೆ ಆ ಕ್ಷಣಕ್ಕೆ ಆ ಸಮಸ್ಯೆ ಬಗೆ ಹರಿದರಾಯಿತು ಎಂಬಂತೆ ವರ್ತಿಸಿದ್ದೇ  ಇದೆಲ್ಲದಕ್ಕೂ ಮೂಲ ಕಾರಣ.  ಪಂಜಾಬ್ ಎಂಬತ್ತರ ದಶಕದ ನಂತರ  ಪ್ರತ್ಯೇಕತಾವಾದಿಗಳ ಸಂಕೋಲೆಯಿಂದ ಹೊರ ಬಂದಾದ ಮೇಲೆ ಸರ್ಕಾರಗಳು ಅಲ್ಲಿನ ಅಭಿವೃದ್ಧಿಯನ್ನೇ ಮರೆತವು, ತಾಂಡವ ವಾಡುತಿದ್ದ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲಿಲ್ಲ ಪರಿಣಾಮ ಇಂದು ಅಮೃತಪಾಲ್‌ ನಂತವರು ಸಂಸತ್ ನಲ್ಲಿ ಪ್ರಮಾಣ ವಚನ ತೆಗೆದು ಕೊಳ್ಳುವಂತಾಯಿತು. ಅದೇ ರೀತಿ ಕಾಶ್ಮೀರದಲ್ಲಿ 370 ವಿಧಿಯನ್ನು ತೆಗೆದು ಹಾಕುವ ನಿರ್ಣಯವಿರಲಿ ಆ ವಿಷಯದ ಬಗ್ಗೆ ಮಾತನಾಡುವುದೇ ತಪ್ಪು ಎಂಬಂತಾಡುತ್ತಿದರು ಆದರೆ ಇಂದು 370 ವಿಧಿ ರದ್ದಾಗಿದೆ ಹೀಗೆ ರಾಷ್ಟ್ರ ಹಿತ ಮತ್ತು ಭದ್ರತೆಯ ವಿಷಯ ಬಂದಾಗ ಯಾರೊಂದಿಗೂ ರಾಜಿಯಾಗಬೇಕಿಲ್ಲ. ಒಟ್ಟಿನಲ್ಲಿ ಇವರಿಬ್ಬರ ಗೆಲುವು ಆಳುವ ಸರ್ಕಾರಗಳಿಗೆ ಎಚ್ಚರಿಕೆಯ ಗಂಟೆ  ಜೊತೆಗೆ ಭಾರತದ ಭದ್ರತಾ ವ್ಯವಸ್ಥೆಯನ್ನು ಉತ್ತುಂಗಕ್ಕೇರಿಸಲು ಹಾಗು  ಗುಪ್ತಚರ ಇಲಾಖೆಗಳಿಗೆ ಇನ್ನಷ್ಟು ಬಲ ತುಂಬಲು ಇದು ಸಕಾಲ ಎಂದು ಮತ್ತೊಮ್ಮೆ ನೆನಪಿಸಿದಂತಿದೆ.

 ಕಾರ್ತಿಕ್ ಎಸ್ ಬಾಪಟ್.



 

 

ನೀಟ್ ಪೆ ಚರ್ಚಾ ಇಂದಿನ ತುರ್ತು ಅಗತ್ಯ.





ಕೆಲವು ತಿಂಗಳಿಂದ ನಾನಾ ರಾಜ್ಯಗಳಲ್ಲಿ ರಾಜ್ಯ ಮಟ್ಟದ ಪರೀಕ್ಷೆಗಳಲ್ಲಿ ಕಂಡು ಬಂದ ಪ್ರಶ್ನೆ ಪತ್ರಿಕೆ ಸೋರುವಿಕೆಯ ಪ್ರಹಸನಗಳು ಇದೀಗ ರಾಷ್ಟ್ರಮಟ್ಟದಲ್ಲಿಯು ಕಾಣಸಿಗುತ್ತಿದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಬಹುದೆಂದು ಗ್ರಹಿಸಿ ನೀಟ್ PG (NEET – PG ) ಯುಜಿಸಿ – ನೆಟ್ (UGC – NET ) ಸಿಯಸ್ ಐಆರ್‌ಯುಜಿಸಿ – ನೆಟ್ (CSIR -UGC NET ) ಈ ಪರೀಕ್ಷೆಗಳನ್ನು ಮುಂದೂಡಿದೆ. ರಾಜ್ಯ ಸರ್ಕಾರದ ಅಧೀನದಲ್ಲಿ ನಡೆಯುತ್ತಿದ್ದ ನಾನಾ ಬಗೆಯ ಪರೀಕ್ಷೆಗಳಲ್ಲಿ ಅಲ್ಲೊಂದು ಇಲ್ಲೊಂದು ಪ್ರಶ್ನೆ ಪತ್ರಿಕೆಗಳ ಸೋರುವಿಕೆ ಹಾಗೂ ಅಕ್ರಮಗಳು ಯಾವುದೂ ಹೊಸದಲ್ಲ. ಒಂದು ವ್ಯವಸ್ಥೆಯಲ್ಲಿ ಎಷ್ಟೇ ಜಾಗ್ರತೆ ವಹಿಸಿದರೂ ಈ ರೀತಿಯ ಘಟನೆ ನಡೆದೇ ನಡೆಯುತ್ತದೆ. ಆದರೆ ಇಂತಹ ಘಟನೆಗಳು ಪದೇ ಪದೇ ಜರುಗಿದಾಗ ಶ್ರೀಸಾಮಾನ್ಯನ ಸಹನೆಯ ಕಟ್ಟೆ ಒಡೆಯುತ್ತದೆ. 

ವೈದ್ಯಕೀಯ ಸೀಟುಗಳ ಪ್ರವೇಶಕ್ಕಾಗಿ ನಡೆಸುವ ನೀಟ್ ಪರೀಕ್ಷೆ ಪ್ರತಿ ಬಾರಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಆದರೆ, ಈ ಬಾರಿ ನೀಟ್ ಪರೀಕ್ಷೆ ನಡೆದ ರೀತಿ ಮತ್ತು ನಂತರದ ಬೆಳವಣಿಗೆಗಳು ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ (ಓಂಖಿ) ವಿಶ್ವಾರ್ಹತೆಯನ್ನೇ ಪ್ರಶ್ನೆ ಮಾಡುವಂತಿದೆ. ಈಗಾಗಲೇ ಈ ವಿಷಯ ಸುಪ್ರೀಂ ಮೆಟ್ಟಿಲೇರಿರುವುದರಿಂದ ಈ ಗೊಂದಲಕ್ಕೊಂದು ತಾರ್ಕಿಕ ಅಂತ್ಯವಂತೂ ಶತಃಸಿದ್ಧ. ಆದರೆ, ವೈದ್ಯಕೀಯ ಸೀಟುಗಳ ಪ್ರವೇಶಾತಿ ಪ್ರಕ್ರಿಯೆ ಹಾಗೂ ನೀಟ್ ಪರೀಕ್ಷೆ ಏಕೆ ಇಷ್ಟೊಂದು ಕ್ಲಿಷ್ಟಕರ ಹಾಗೂ ಮಕ್ಕಳೇಕೆ ಪೈಪೋಟಿಗೆ ಬಿದ್ದು ಕೋಟಾ, ವಿಶಾಖಪಟ್ಟಣ, ಬೆಂಗಳೂರು, ಮುಂಬೈ ಪುಣೆ ಅಂತಹ ಮಹಾನಗರಗಳಿಗೆ ಕೋಚಿಂಗ್ ಕ್ಲಾಸ್ ಸೇರಲು ಮುಗಿಬೀಳುತ್ತಾರೆಂದು ತಿಳಿದುಕೊಳ್ಳಲು ವೈದ್ಯಕೀಯ ಸೀಟುಗಳ ಲಭ್ಯತೆ ಮತ್ತು ಹಂಚಿಕೆಯನ್ನು ಗಮನಿಸಬೇಕಾಗಿದೆ.

ಇಡೀ ದೇಶದಲ್ಲಿರುವ ವೈದ್ಯಕೀಯ ವಿದ್ಯಾ ಸಂಸ್ಥೆಗಳು ೭೦೪. ಈ ಸಂಸ್ಥೆಗಳಲ್ಲಿರುವ ಸೀಟುಗಳು ೧೦೯೧೭೦ ಅವುಗಳಲ್ಲಿ ಸೆಂಟ್ರಲ್ ಯೂನಿವರ್ಸಿಟಿಯ ೭ ಕಾಲೇಜುಗಳಲ್ಲಿರುವುದು ೧೧೮೦ ಸೀಟಗಳು, ೩೮೨ ಸರ್ಕಾರಿ ಕಾಲೇಜುಗಳಲ್ಲಿರುವುದು ೫೫೨೨೫ ಸೀಟುಗಳು, ಇನ್ನುಳಿದ ಸೀಟುಗಳಲ್ಲಿ ೧೦೨೫೦ ಸೀಟುಗಳಿರುವುದು ೫೧ ಡೀಮ್ಡ್ ಯೂನಿವರ್ಸಿಟಿ ಕಾಲೇಜುಗಳಲ್ಲಿ. ಇನ್ನುಳಿದ ೪೨೫೧೫ ಸೀಟುಗಳಿರುವುದು ೨೬೪ ಖಾಸಗಿ ಕಾಲೇಜುಗಳಲ್ಲಿ. ಅಂದರೆ ಹತ್ತಿರ ಹತ್ತಿರ ಶೇ. ೪೮ ಸೀಟುಗಳಿರುವುದು ಖಾಸಗಿ ಕೃಪಾ ಕಟಾಕ್ಷದಲ್ಲಿ. ಶಿಕ್ಷಣ ತಜ್ಞ ಮಹೇಶ್ವರ್ ಅವರು ಅಂದಾಜಿಸಿದಂತೆ ಐದು ವರುಷಗಳ ಸರಾಸರಿ ಶಿಕ್ಷಣ ಶುಲ್ಕ ಸೆಂಟ್ರಲ್ ಯೂನಿವರ್ಸಿಟಿ ಕಾಲೇಜುಗಳಲ್ಲಿ ಮೂರರಿಂದ ನಾಲ್ಕು ಲಕ್ಷಗಳಷ್ಟಿದೆ, ಅದೇ ರೀತಿ ಸರ್ಕಾರೀ ಕಾಲೇಜುಗಳಲ್ಲಿ ಆರರಿಂದ ಏಳು ಲಕ್ಷ, ಖಾಸಗಿ ಕಾಲೇಜುಗಳಲ್ಲಿ ಎಪ್ಪತ್ತರಿಂದ ಎಂಬತ್ತು ಲಕ್ಷ ಹಾಗೂ ಡೀಮ್ಡ್ ಯೂನಿವರ್ಸಿಟಿಗಳಲ್ಲಿ ಅಂದಾಜು ಒಂದು ಕೋಟಿ ಅಂದರೆ ಸರ್ಕಾರಿ ಕಾಲೇಜುಗಳ ಶುಲ್ಕಕ್ಕೂ ಖಾಸಗಿ ಕಾಲೇಜುಗಳಲ್ಲಿ ನಿಗದಿ ಪಡಿಸಿದ ಶುಲ್ಕಕ್ಕೂ ಆಕಾಶ ಪಾತಾಳದ ಅಂತರ. ಇದೆಲ್ಲವೂ ಅಧಿಕೃತವಾಗಿ ನಿಗದಿಪಡಿಸಿದ ಶುಲ್ಕದ ವಿವರವಷ್ಟೇ. ಇನ್ನು ಬೇರೆ ರೀತಿಯ ಶುಲ್ಕಗಳಿಗೇನೂ ಬರವಿಲ್ಲ. ಅದು ಬಿಲ್ಡಿಂಗ್ ಫಂಡ್ ಎಂದಾಗಿಯೋ ಅಥವಾ ಇನ್ನಾವುದೋ ರೀತಿಯಲ್ಲಿ ಪಡೆಯುವ ಫಂಡ್‌ಗಳ ಲೆಕ್ಕಾಚಾರ ಇರಬಹುದು ಅವೆಲ್ಲವೂ ನಿಮ್ಮ ಊಹೆಗೆ ಬಿಟ್ಟದ್ದು. ಹಾಗಾದರೆ ಸರಿ ಸುಮಾರು ಶೇ. ೪೮ ಸೀಟುಗಳು ಕೇವಲ ಉಳ್ಳವರಿಗಾಗಿ ಮಾತ್ರವೇ? ಈ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ಬರುವುದು ನೀಟ್ ಪರೀಕ್ಷೆಯ ಒಟ್ಟಾರೆ ಫಲಿತಾಂಶದಲ್ಲಿ ಅರ್ಹತೆ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಫಲಿತಾಂಶದ ನಂತರದ ಸೀಟ್ ಹಂಚಿಕೆಯ ಪ್ರಕ್ರಿಯೆ . ಹೀಗೆ ಒಟ್ಟಾರೆಯಾಗಿ ಪರೀಕ್ಷಾ ಪದ್ಧತಿ ಹಾಗು ರ‍್ಯಾಂಕ್‌ಗಳನ್ನೂ ಗಮನಿಸಬೇಕು.

ನೀಟ್ ಪರೀಕ್ಷೆ ನಡೆಯುವುದು ೭೨೦ ಅಂಕಗಳಿಗೆ, ಈ ಬಾರಿ ಪರೀಕ್ಷೆ ಬರೆದವರು ಸರಿಸುಮಾರು ೨೩ ಲಕ್ಷ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ಗೆ ಅರ್ಹತೆ ಪಡೆದವರು ಅಂದಾಜು ೧೩ ಲಕ್ಷ ವಿದ್ಯಾರ್ಥಿಗಳು ಇರುವ ಸೀಟ್‌ಗಳು ೧೦೦೦೦೦ ಚಿಲ್ಲರೆ. ಹಾಗಾದರೆ ಆರೋ ಏಳೋ ಲಕ್ಷಕ್ಕೆ ಕಟ್ ಆಫ್ ಬರುವಂತೆ ನಿಲ್ಲಿಸಬಹುದಲ್ಲವೇ? ಆದರೆ ವ್ಯವಸ್ಥೆಯಲ್ಲಿ ಆ ಅವಕಾಶವಿಲ್ಲ ಉದಾಹರಣೆಗೆ ಇಬ್ಬರು ವಿದ್ಯಾರ್ಥಿಗಳಿದ್ದಾರೆಂದು ಇಟ್ಟುಕೊಳ್ಳಿ ಅದು ಯಾವುದೇ ವಿಭಾಗದಲ್ಲಿರಲಿ ಜನರಲ್, ಒಬಿಸಿ ಹೀಗೆ ಯಾವುದೇ ವಿಭಾಗದಲ್ಲಿರಲಿ ಒಬ್ಬ ವಿದ್ಯಾರ್ಥಿ ನಾಲ್ಕು ಲಕ್ಷ ಚಿಲ್ಲರೆಯಷ್ಟು ರ‍್ಯಾಂಕ್ ಪಡೆದಿದ್ದಾನೆ. ಇನ್ನೊಬ್ಬ ಒಂಬತ್ತು ಲಕ್ಷ ಚಿಲ್ಲರೆಯಷ್ಟು ರ‍್ಯಾಂಕ್ ಪಡೆದಿದ್ದಾನೆ ಎಂದಿಟ್ಟುಕೊಳ್ಳಿ. ನಾಲ್ಕು ಲಕ್ಷದಷ್ಟು ರ‍್ಯಾಂಕ್ ಪಡೆದ ವಿದ್ಯಾರ್ಥಿಗೆ ಸರ್ಕಾರಿ ಕಾಲೇಜಂತೂ ಮರೀಚಿಕೆಯೇ ಸರಿ. ಆದ್ದರಿಂದ ಲಕ್ಷಗಟ್ಟಲೆ ಕೋಟಿಗಟ್ಟಲೆ ಹಣ ಹೊಂದಿಸಲು ಸಾಧ್ಯವಾಗದೆ ಬಂದ ದಾರಿಗೆ ಸುಂಕವಿಲ್ಲ ಎಂದು ಮನಗೊಂಡು ಡಾಕ್ಟರ್ ಆಗುವ ಕನಸನ್ನು ಚಿವುಟಿ ಮುಂದೆ ಸಾಗಬೇಕಾಗುತ್ತದೆ, ಆದರೆ ಅದೇ ಒಂಬತ್ತು ಲಕ್ಷ ಚಿಲ್ಲರೆಯಷ್ಟು ರ‍್ಯಾಂಕ್ ಪಡೆದ ವಿದ್ಯಾರ್ಥಿ ತನ್ನಲ್ಲಿರುವ ಸಂಪತ್ತಿನ ಅನುಕೂಲದಿಂದ ಪ್ರವೇಶ ಗಿಟ್ಟಿಸಿಕೊಳ್ಳಬಹುದು. ಏಕೆಂದರೆ ಒಟ್ಟಾರೆ ವ್ಯವಸ್ಥೆಯಲ್ಲಿ ಅವಕಾಶವಿದೆ. ಅಂದರೆ ಒಬ್ಬ ಕಡು ಬಡವ ಅಥವಾ ಮಧ್ಯಮ ವರ್ಗದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿ ಸೀಟ್ ಗಿಟ್ಟಿಸಿಕೊಳ್ಳಬೇಕಾದರೆ ಟಾಪ್ ೫೦೦೦೦ ರ‍್ಯಾಂಕ್‌ನಲ್ಲಿಯೇ ಬರಬೇಕು. ಹಾಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಕೋಟಾ, ಪುಣೆ, ಡೆಲ್ಲಿ ಕೋಲ್ಕತ್ತಾ ನಗರಗಳ ಕೋಚಿಂಗ್ ಕ್ಲಾಸುಗಳಿಗೆ ತಡಕಾಡುತ್ತಾರೆ. ಒಮ್ಮೆ ಆಗದಿದ್ದರೆ ಮತ್ತೊಮ್ಮೆ, ಮತ್ತೊಮ್ಮೆ ಆಗದಿದ್ದರೆ ಪದೇ ಪದೇ ಪ್ರಯತ್ನಿಸುತ್ತಲೇ ಇರುತ್ತಾರೆ. ಒಂದೆಡೆ ವ್ಯವಸ್ಥೆಯೇ ಸಿರಿವಂತರ ಪರವಿದ್ದಾಗ ಶ್ರೀಸಾಮಾನ್ಯ ನಂಬಿ ಬರುವುದು ಸ್ಪರ್ಧಾತ್ಮಕ ಪರೀಕ್ಷೆಗಳತ್ತ. ಏಕೆಂದರೆ ವಿದ್ಯೆ ಯಾರ ಸೊತ್ತ್ತೂ ಅಲ್ಲ. ಇಲ್ಲಿ ಮೋಸವಾಗುವುದಿಲ್ಲ ಎಂದು ಆದರೆ ಇಂತಹ ಪರೀಕ್ಷೆಗಳಲ್ಲೂ ಅಕ್ರಮದ ವಾಸನೆ, ಪೇಪರ್ ಲೀಕ್‌ನಂತಹ ಪ್ರಸಂಗಗಳು ಬಂದಾಗ ಶ್ರೀಸಾಮಾನ್ಯ ಕೈ ಚೆಲ್ಲಿ ಕೂಡುತ್ತಾನೆ. ವ್ಯವಸ್ಥೆ ಮತ್ತೊಮ್ಮೆ ಸಿರಿವಂತರ ಪರವಿರುವುದನ್ನು ಕಂಡು ತನ್ನನ್ನು ತಾನೇ ದೂಷಿಸಿಕೊಳ್ಳುತ್ತಾನೆ. ಏಕೆಂದರೆ ಈ ಅಕ್ರಮ ಪೇಪರ್ ಲೀಕ್‌ನಂತಹ ಕೆಲಸಕ್ಕೆ ಕೈ ಹಾಕಲು ಹಣ ಬೇಕು. ಹೊಟ್ಟೆ ಬಟ್ಟೆಯನ್ನು ಕಟ್ಟಿ ಮಕ್ಕಳ ಆಸೆಗೆ ನೀರೆರೆದ ಪೋಷಕರು ಪೇಪರ್ ಲೀಕ್‌ನಂತಹ ಕೃತ್ಯಕ್ಕೆ ಕನಸಲ್ಲೂ ಯೋಚನೆ ಮಾಡಲಾರರು. ಒಟ್ಟಿನಲ್ಲಿ ಒಬ್ಬ ಅರ್ಹ ವಿದ್ಯಾರ್ಥಿಗೆ ಇದ್ದ ಒಂದೇ ಒಂದು ಆಸರೆಯ ಊರುಗೋಲು `ಸ್ಪರ್ಧಾತ್ಮಕ ಪರೀಕ್ಷೆ’ ಆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಅಕ್ರಮಗಳೇನಾದರೂ ನಡೆದಿದ್ದೇ ಆದರೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ವೈದ್ಯಕೀಯ ವೃತ್ತಿಗೆ ಪದಾರ್ಪಣೆ ಮಾಡುವ ಇದ್ದ ಒಂದು ಅವಕಾಶವನ್ನು ಪರೀಕ್ಷಾ ಅಕ್ರಮಗಳು ಕಸಿಯುತ್ತಿವೆ ಎಂದಾಯಿತು. ಇದು ಅಷ್ಟಕ್ಕೇ ನಿಲ್ಲುವುದಿಲ್ಲ. ಇಲ್ಲಿ ಅವಕಾಶ ಸಿಗಲಿಲ್ಲವಲ್ಲ ಹೊರ ದೇಶದಲ್ಲಿ ಹೋಗಿ ಅಲ್ಲಿ ವೈದ್ಯನಾಗುವ ಆಸೆಯಿಂದ ಹಲವಾರು ವಿದ್ಯಾರ್ಥಿಗಳು ಪರದೇಶಕ್ಕೆ ಹೋಗಿ ವೈದ್ಯಕೀಯ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ ಅಂತಹ ದೇಶಗಳಲ್ಲಿ ಉಕ್ರೇನ್, ರಷ್ಯಾ, ಫಿಲಿಪ್ಪೀನ್ಸ್, ಚೀನಾ, ಜಾರ್ಜಿಯಾ ಹಾಗೂ ಬಾಂಗ್ಲಾದೇಶ ಅಂತಹ ದೇಶಗಳು ಮುಂಚೂಣಿಯಲ್ಲಿವೆ. ಈ ದೇಶಗಳಲ್ಲಿ ಶುಲ್ಕಗಳು ಕಡಿಮೆಯೂ ಹೌದು, ಒಂದು ಅಂಕಿ ಅಂಶದ ಪ್ರಕಾರ ಭಾರತದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವಷ್ಟೇ ವಿದ್ಯಾರ್ಥಿಗಳು ಭಾರತದ ಹೊರಗೆ ವೈದ್ಯಕೀಯ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. ಆದರೆ, ಅಲ್ಲಿಯ ವಿದ್ಯಾಭ್ಯಾಸದ ಗುಣಮಟ್ಟ ನೋಡಿದವರಾರು? ಅಷ್ಟಲ್ಲದೇ ಭಾರತದಲ್ಲಿ ಮೆಡಿಕಲ್ ಕಾಲೇಜುಗಳು ಒಂದಲ್ಲ ಒಂದು ಆಸ್ಪತ್ರೆಗಳಿಗೆ ಸಂಯೋಜಿತಗೊಂಡಿರುತ್ತವೆ. ಅಂದರೆ ಕ್ಲಾಸ್ ರೂಮ್ ವಿದ್ಯಾಭ್ಯಾಸದೊಂದಿಗೆ ಪ್ರಾಕ್ಟಿಕಲ್ ಟ್ರೇನಿಂಗ್ ಹಾಗೂ ಅಭ್ಯಾಸಕ್ಕೂ ಇಲ್ಲಿ ಅಷ್ಟೇ ಮಹತ್ವವಿದೆ ಹಾಗೂ ಇದು ಪಠ್ಯಕ್ರಮದ ಭಾಗವೇ ಆಗಿ ಹೋಗಿದೆ. ಆದರೆ ಹೊರದೇಶಗಳಲ್ಲಿ ಅದರಲ್ಲೂ ಈ ಮೇಲೆ ಸೂಚಿಸಲ್ಪಟ್ಟ ದೇಶಗಳಲ್ಲಂತೂ ಅಷ್ಟಾಗಿ ಆಸ್ಪತ್ರೆಗಳಿಲ್ಲ. ಆದ್ದರಿಂದ ಅಲ್ಲಿ ಕಲಿತವರು ಕ್ಲಾಸ್ ರೂಮ್ ಟ್ರೇನಿಂಗ್ ಮಟ್ಟಕ್ಕೆ ಸೀಮಿತರಾಗಿರುವ ಸಾಧ್ಯತೆಗಳು ಬಹಳಷ್ಟಿವೆ, ಆದ್ದರಿಂದ ಹಾಗೆ ಹೊರ ದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದವರಿಗೆ ಭಾರತದಲ್ಲಿ ಮನ್ನಣೆ ಸಿಗಬೇಕೆಂದರೆ ಭಾರತದ ಎಫ್‌ಎಂಜಿಇ ಈಒಉಇ (ಫಾರಿನ್ ಮೆಡಿಕಲ್ ಗ್ರ‍್ಯಾಜುಯೆಟ್ ಎಕ್ಸಾಮಿನೇಷನ್) ಪರೀಕ್ಷೆಯನ್ನು ಬರೆದು ಪಾಸಾಗಬೇಕು. ಆದರೆ ಈ ಈಒಉಇ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿರುವ ಸಂಖ್ಯೆ ಕೇವಲ ಶೇಕಡಾ ೧೫ ರಿಂದ ೨೦ರಷ್ಟು ಮಾತ್ರ. ಅಂದರೆ ಹೊರ ದೇಶಕ್ಕೆ ಹೋಗಿ ವೈದ್ಯಕೀಯ ವಿದ್ಯಾಭ್ಯಾಸ ಹೊಂದಿದರು ಈಒಉಇ ಪರೀಕ್ಷೆಯಲ್ಲಿ ತೇರ್ಗಡೆ ಆಗದ ಹೊರತು ಭಾರತದಲ್ಲಿ ಮೆಡಿಕಲ್ ಪ್ರಾö್ಯಕ್ಟೀಸ್ ಮಾಡುವಂತಿಲ್ಲ. ಅಲ್ಲದೆ ಒಟ್ಟಾರೆಯಾಗಿ ಐದು ವರುಷಗಳ ಕಾಲ ಹೊರ ದೇಶದಲ್ಲಿದ್ದಷ್ಟು ಭಾರತಕ್ಕೆ ವಿದೇಶಿ ವಿನಿಮಯದ ಹೊಡೆತ. ಹೀಗೆ ಒಂದಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ಪ್ರತಿಯೊಬ್ಬರೂ ಸಿಲುಕಿದಂತಾಗುತ್ತದೆ. ಆದ್ದರಿಂದ ಈ ಸಮಸ್ಯೆಯ ಮೂಲಕ್ಕೆ ಹೋಗಿಯೇ ಬಗೆಹರಿಸಬೇಕು.

ಈ ಬಗ್ಗೆ ಸದನದ ಹೊರಗೂ ಒಳಗೂ ಚರ್ಚೆಯಂತೂ ಆಗಲೇ ಬೇಕು. ಮೋದಿಜಿ ಪರೀಕ್ಷಾ ಪೇ ಚರ್ಚಾಗೆ ಕೊಟ್ಟಷ್ಟೇ ಮಹತ್ವ ನೀಟ್ ಫೆ ಚರ್ಚಾಗೂ ಕೊಡಲೇಬೇಕು, ಇಲ್ಲವಾದಲ್ಲಿ ಇದು ನಮ್ಮ ಹಣೆಬರಹ. ಉಳ್ಳವರು ಮೆಡಿಕಲ್ ಮಾಡುವರು ನಾನೇನು ಮಾಡಲಿ ಅವರೇ ಕಟ್ಟುವ ಐಷಾರಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅಂಗಲಾಚುವೆನು. ನಾನೊಬ್ಬ ಬಡವ ಹಲುಬುವುದೇ ನನ್ನ ಭಾಗ್ಯ ಎಂದು ಯುವ ಸಮೂಹ ಕೈ ಕಟ್ಟಿ ಕುಳಿತೀತು, ಹಾಗಾಗಬಾರದು ಭರವಸೆ ಹಾಗೂ ಗುರಿಯಿಲ್ಲದ ಯುವ ಸಮೂಹ ದೇಶಕ್ಕೆ ಮಾರಕ.