Saturday, December 23, 2023

ಅಟಲ್ ಜಿ ಜನ್ಮದಿನದಂದು ಅವರ ನೆನಪಿನಲ್ಲಿ  - ಅಟಲ್ ಜಿ ಹಾಕಿ ಕೊಟ್ಟ ಮಾರ್ಗದಲ್ಲಿ ಒಂದಿಡೀ ದಾರಿಯನ್ನು ಕ್ರಮಿಸಲು ಆಗದಿದ್ದರೂ ಕೆಲ ಹೆಜ್ಜೆಗಳನ್ನಾದರೂ  ಪ್ರತಿಯೊಬ್ಬ ರಾಜಕೀಯ ನಾಯಕನು ಕ್ರಮಿಸಲಿ ಎಂಬ ಹೆಬ್ಬಯಕೆಯೊಂದಿಗೆ ಕಾರ್ತಿಕ್ ಎಸ್ ಬಾಪಟ್

ಅದು ಆಗಸ್ಟ್ 16, 2018  ಇಡೀ ದೇಶಕ್ಕೆ ದೇಶವೇ ಅಟಲ್ ಜೀ ಅವರ ಅಗಲುವಿಕೆಗೆ ಮುಮ್ಮರು ಮುಲುಗಿತ್ತು, ಅದು ಅವರಿಗೆ ಮತ್ತು ಅವರ ವ್ಯಕ್ತಿತ್ವಕ್ಕಿರುವ ತಾಕತ್ತು ಮತ್ತು ಆ ಒಂದು ಮಗು ಹೃದಯದ ವ್ಯಕ್ತಿತ್ವದ ಓಝಸು ಕೂಡ , ತನಗೆ ಬೇಕಾದನ್ನು ರಾಷ್ಟ್ರದ ಹಿತ ದೃಷ್ಟಿಯಿಂದ  ಮುಚ್ಚು ಮರೆಯಿಲ್ಲದೆ  ಪ್ರತಿಪಾದಿಸಿ , ಅವೆಲ್ಲವನ್ನು  ಪ್ರಭಲ ವಿರೋಧಾಭಾಸಗಳ ನಡುವೆಯು ಮಂಡಿಸಿ , ಯಾವುದೇ ವಿರೋಧಿಗಳನ್ನು ಸಂಪಾದಿಸದೆ ಇರುವುದಿದೆಯಲ್ಲ  ಇದೊಂದು ದೊಡ್ಡ ಸವಾಲು ಮತ್ತು ಯಾವುದೇ ನಾಯಕನಿರಲಿ ಅವನನ್ನು ಇಷ್ಟ ಪಡುವಷ್ಟೇ ಇಷ್ಟ ಪಡದವರು ಇರುತ್ತಾರೆ, ಆದರೆ ಇದೆಲದ್ದಕ್ಕೂ ಅಪವಾದವಾಗಿ ನಿಲ್ಲುವವರು "ಅಟಲ್ ಬಿಹಾರಿ ವಾಜಪೇಯೀ".

ಕೆಲವೊಬ್ಬರ ನೆನಪುಗಳು ಹಾಗೆ ರಸ್ತೆ ರಸ್ತೆಗಳಿಗೆ ಹಾಗು  ಸರ್ಕಾರದ  ನಾನಾ ಕಾರ್ಯಕ್ರಮಗಳಿಗೆ ಹೆಸರಿಟ್ಟರಷ್ಟೇ ನೆನಪಿರುತ್ತದೆ ಆದರೆ ಅಟಲ್ ಜಿ ಆ ಸಾಲಿನಲ್ಲಿ ಕಾಣುವ ಪ್ರಧಾನಿಗಳಲ್ಲ ಬಿಡಿ ಕವಿ ಹೃದಯದ ದೇಶ ಕಂಡ ಬೆರಳೆಣಿಕೆಯಷ್ಟು ಮುತ್ಸದಿಗಳ ಸಾಲಿನಲ್ಲಿ ಅಟಲ್ ಅವರ ಹೆಸರು ಸೂರ್ಯ ಚಂದ್ರರಿರುವವರೆಗೂ ಸ್ಥಾಯಿಯಾಗಿ ಉಳಿಯಲಿದೆ. ಅವರ ವ್ಯಕ್ತಿತ್ವ , ಮಾತು , ರಾಜತಾಂತ್ರಿಕ ನಿಪುಣತೆ ,ಮುತ್ಸದ್ದಿತನ ಹಾಗು  ಹಿಂದುತ್ವವನ್ನು ಅಪ್ಪಿಕೊಂಡು ಅದನ್ನೇ ಪಕ್ಷದ ನಿತ್ಯದ ಉಸಿರಾಗಿಸಿಕೊಂಡಿದ್ದಾಗಿಯೂ ಕೂಡ ಅವರಲ್ಲಿ ಸಮಾಜವಾದ ಚಿಂತನೆ ಮಾಸಿರಲಿಲ್ಲ ವಿರೋಧ ಪಕ್ಷದಲ್ಲಿಯೇ ಇರಲಿ, ಆಡಳಿತ ಪಕ್ಷದಲ್ಲಿಯೇ ಇರಲಿ , ಎಂದಿಗೂ ತಮ್ಮೊಂದಿಗೆ ನಗುಮುಖದ ಆತ್ಮಗೆಲುವನ್ನು ಹೊದ್ದು ಕೊಂಡೆ ಇದ್ದರು, ಅಟಲ್ ಜೀ ಬಹುವಾಗಿ ನಮ್ಮನು ಕಾಡುವುದು ಅವರ ಅಮತ್ಸರದ ಗುಣಗಳಿಂದ, ಅವರು ಎಂದಿಗೂ ಮತ್ಸರದ ರಾಜಕೀಯವನ್ನು ಮಾಡಲಿಲ್ಲ ಎಂಬುದು.ಸಂಸತ್ತಿನಲ್ಲಿ ಅವರೆದ್ದು ಮಾತನಾಡಲು ನಿಂತರೆ ಅದು ಝಲಲ ಝಲಲ ಝಾಲಧಾರೆ, ಅವರ ಮಾತಿಗೆ ಯಾರ ಮರುಉತ್ತರವಿಲ್ಲ, ಹಾಗೆಂದು ವಿರೋಧವಿಲ್ಲವೆಂದಲ್ಲ, ಆದರೆ ಮರುಉತ್ತರದ ಮಾತಿಲ್ಲ ,

ಅಟಲ್ ಜೀ , ಮಾತು ಶುರು ಮಾಡಿದರೆಂದರೆ ಎಲ್ಲವು ಸ್ಥಬ್ದ ಸ್ಥಬ್ದ, ಅವರ ವಾಗ್ಜರಿಯ ಮಧ್ಯೆ ಅವರ ಬತ್ತಳಿಕೆಯಿಂದ ಹೊರ ಹೊಮ್ಮುತ್ತಿದ್ದ ಕವಿತೆಗಳು ಅವರ ಇನ್ನೊಂದು ಮಗ್ಗುಲನ್ನು ತೋರಿಸುತ್ತಿತ್ತು, ಹೀಗೆ ಅಟಲ್ ಜೀ ಅವರನ್ನು ಕೇವಲ ರಾಜಕಾರಣಿಯಾಗಿ ನೋಡಿದರೆ ತಪ್ಪಾದೀತು, ಹೀಗೆ ಅವರು ಏನು ಹೌದು, ಏನು ಅಲ್ಲ ಎಂದು ಪ್ರಖರ ಗೆರೆ ಎಳೆಯುವುದಿದೆಯಲ್ಲ ಅದು ವ್ಯರ್ಥ.

ಇಂತಹಾ ವ್ಯಕ್ತಿತ್ವದ ಪ್ರಾಮಾಣಿಕತೆಯನ್ನೇ ಹೊದ್ದು ಜೀವಿಸುತ್ತಿದ್ದ ಪ್ರಖರ ಸೂರ್ಯನನ್ನು ಹತ್ತಿರದಿಂದ ನೋಡಿದ ಸೌಭಾಗ್ಯ ನನ್ನದಾಗಿತ್ತು , ಅದು ೧೯೯೭ , ೧೯೯೮ ರ ಆಸು ಪಾಸು , ನನ್ನದು ದಾವಣಗೆರೆಗೆ ತಾಗಿಕೊಂಡಿರುವ ಪುಟ್ಟ ಊರು ಹರಿಹರ, ನಾವೆಲ್ಲ ಆಗ ತಾನೇ ಕಾಲೇಜು ರಂಗಕ್ಕೆ ಕಾಲಿಟ್ಟ ಘಳಿಗೆ, ಊರಲೆಲ್ಲಾ ಜನತಾ ದಳ ಹಾಗು ಕಾಂಗ್ರೆಸ್ಸಿನ ವಾತಾವರಣ , ಸ್ವಲ್ಪ ಮಟ್ಟದಲ್ಲಿ ಓದು ನಮ್ಮೆಲ್ಲರನ್ನೂ ಕಮ್ಯುನಿಸ್ಟ್ ಸೆಳೆತದಲ್ಲೂ ಒಮ್ಮೊಮ್ಮೆ ಕರೆದೊಯುತ್ತಿತ್ತು , ಇದೆಲ್ಲದರ ನಡುವೆಯು ಇವತ್ತು ವಾಜಪೆಯೆ ಬರ್ತಾರಂತೆ ಎಂಬ "ಮೌತ್ ಟು ಮೌತ್ ಪಬ್ಲಿಸಿಟಿ" ನಮ್ಮೆಲರಲ್ಲಿ ಸಂಚಲನ ಮೂಡಿಸಿತ್ತು, ನಾವಾಗಲೇ ಅವರ ವಾಕ್ ಪಟುತ್ವವನ್ನು ದೂರ ದರ್ಶನದಲ್ಲಿ ಕೇಳಿ ಆಕರ್ಷಿತರಾಗಿದ್ದೆವು, ನಾನು  ನನ್ನ ಅಣ್ಣ ಮತ್ತು ನನ್ನ ಸ್ನೇಹಿತರು ಅಟಲ್ ಅವರ ಭಾಷಣ ಕೇಳಲು ಹರಿಹರದ ಗಾಂಧಿ ಮೈದಾನಕ್ಕೆ ನಡೆದೆವು , ಆ ಮೈದಾನದಲ್ಲಿ ನನಗೆ ಕಂಡು ಬಂದಿದ್ದೆಂದರೆ ಅಲ್ಲಿ ನೆರೆದಿದ್ದ ಜನರಲ್ಲಿ ಒಂದು ಬಗೆಯ ರೋಮಾಂಚನ , ಅಲ್ಲಿ ಅಸಲಿಗೆ ಭಾ ಜ ಪ ಎಂದಲ್ಲ ಪಕ್ಷ ಭೇದ ಮರೆತು ಜನ ಅವರ ಭಾಷಣಕ್ಕೆ ಕಿವಿಯಾಗಲು ಸೇರಿದ್ದರು, ವಿರೋಧ ಪಕ್ಷದವರ ಗಾಡಿಗಳಿಗೂ ಬರವಿರಲಿಲ್ಲ ಅದರ ಮೇಲೆ ಅವರ ಪಕ್ಷದ ಬಾವುಟ ಅತ್ತಿಂದಿತ್ತ ಅಡ್ಡಾಡಿದೆ ಆಡದಿದ್ದು, ಬಹುಷ್ಯ ಅಂದು ಅವರ ಆಗಮನದ ಪರಿಣಾಮವನ್ನು ನೋಡಲು ಆ ರೀತಿ ಮಾಡುತ್ತಿದ್ದರೇನೋ,

ಹೀಗೆ ಅಟಲ್ ಜೀ ಅಂದು ಹರಿಹರದ ಮೈದಾನದಲ್ಲಿ ಮಾತಿನ ಓಘವನ್ನು ಹರಿಯ ಬಿಟ್ಟರೆ ಇಡೀ ಹರಿಹರದ ಕಣ ಕಣದಲ್ಲೂ ದೇಶಭಕ್ತಿ ಪಸರಿಸಿಬಿಟ್ಟಿತ್ತು, ಉತ್ತರ ಕರ್ನಾಟಕ ದಲ್ಲಿ ಮೊನ್ನೆ ಮೋದಿ ಬಂದಾಗ ಹೇಗೆ ನಮಗೆ "ಅನುವಾದಕರ" ಅವಶ್ಯಕತೆಯಿಲ್ಲಎಂದು  ಜನ ಬಯಸಿದ್ದರೋ ಅದೇ ರೀತಿ ಅಟಲ್ ಜೀ ಅವರ ಮಾತಿನ ಓಘಕ್ಕೆ ತಡೆ ಒಡ್ಡಲು ಯಾರಿಗೂ ಮನಸಾಗಲಿಲ್ಲ , ಹರಿಹರದ ಜನತೆಗೆ ಅಂದು ಭಾಷೆ ಎಂಬುದು ಒಂದು ಅಡ್ಡಿ ಯಾಗಲೇ ಇಲ್ಲ , ತುಂಗಾ ಭದ್ರ ಪವಿತ್ರ ತಟಕೆ ನಿವಾಸಿಯೋ ಎಂದು ಶುರು ಮಾಡಿದರೆಂಬ ನೆನಪು ನೋಡಿ , ಅವರ ಮಾತಿಗೂ , ಅವರ ಪ್ರಖರ ಶೈಲಿಗೂ , ಅದೇನೋ ಪ್ರತಿ ವಾಕ್ಯದಲ್ಲೂ ಹರಿಹರದ ಜನರೊಂದಿಗೆ ಎಷ್ಟೋ ಜನುಮದ ಸಂಬಂಧವೇನೋ ಎಂಬ ಆಪ್ತತೆ , ದೇಶ ಪ್ರೇಮದ ಭಾವುಕತೆ ,ಇದೆಲ್ಲವೂ ಒಂದಿಡೀ ಹರಿಹರ , ದಾವಣಗೆರೆ ಸೀಮೆಯ ಜನರನ್ನು ಮಂತ್ರ ಮುಗ್ಧರನ್ನಾಗಿಸಿತ್ತು.

ಹಾರ್ ನಹಿ ಮೇ ಮಾನೂಂಗ , ಗೀತ್ ನಯಾ ಮೇ ಗಾವೋನ್ಗ , ಎಂದು ಕತ್ತರಳಿಸಿ, ಕೈ ಎತ್ತಿ ಕವಿತೆಯನ್ನು ಹರಿಯಬಿಟ್ಟರೆ ಜನೋತ್ಸಮಕ್ಕೆ ಅದೇನನ್ನೋ ಪಡೆದ ಧನ್ಯತಾ ಭಾವ. ವಂದನ್ ಕಿ ಧರ್ತಿ ಹೇ, ಅಭಿನಂದನ್ ಕಿ ಧರ್ತಿ ಹೇ ಎಂದು ನುಡಿದಾಗ ನೀವು ಕೇವಲ ಅವರ ಹಾವ ಭಾವವನ್ನು ನೋಡದೆ ಮಾತಿಗಷ್ಟೇ  ಕಿವಿಯಾದರೆ ನೀವು ಏನೇನನ್ನೋ ಕಳೆದು ಕೊಂಡಂತೆ, ಅವರ ನುಡಿಯನ್ನು ಅವರ ಆಂಗಿಕ ಚಲನೆಯೊಂದಿಗೆ ಕೇಳಿಸಿಕೊಳ್ಳಬೇಕು, ಅಮೂರ್ತ ಅಕ್ಷರಗಳಿಗೆ ಮೂರ್ತ ರೂಪ ಕೊಟ್ಟು ಆಂಗಿಕ ಚಲನೆಯ ಮೂಲಕ ಭಾವನೆಯ ಭಾವ ಭಿತ್ತಿಯನ್ನು ಹರಿಯ ಬಿಡುತ್ತಿದರೆ ಬೆರಗಾಗದ ಜೀವವಿಲ್ಲ.

ಇದೆಲ್ಲವನ್ನು ನೆನಸಿಕೊಂಡರೆ ಇಂದಿಗೂ , ರೋಮಾಂಚನಗೊಳ್ಳುತ್ತದೆ , ಆದರೆ ಇಂದು ಅವರಿಲ್ಲ, ಅವರಿಲ್ಲದ ಜಾಗವನ್ನು ಹಲವಾರು ನಾಯಕರು ಬಂದು ತುಂಬಿರುವುದು ನಿಜ ಆದರೆ ಆ ಹಿರಿಯ ಜೀವಿಯಯಲ್ಲಿದ್ದ ಕೆಲವು ಗುಣಗಳಿಗೆ ವ್ಯಕ್ತಿತ್ವಕ್ಕೆ ಸಾಟಿ ಯಾಗಿ ನಿಲ್ಲ ಬಲ್ಲ ಶಕ್ತಿ ಇನ್ನು ಆ ಬಗೆಯಲ್ಲಿ ಬೆಳೆದು ನಿಂತಿಲ್ಲವೆಂದೇ ಹೇಳಬಹುದು ಅವರಿದ್ದ ಜಾಗದಲ್ಲಿ   ಒಂದು ಬಗೆಯ  ನಿರ್ವಾತ ಭಾವ  ಅಥವಾ  ಶೂನ್ಯಕ್ಕೂ ಮಿಗಿಲಾದದ್ದು ಏನಾದರು ಇದೆಯೋ ಇದ್ದರೆ ಅಂತಹ ಭಾವನೆಯು ಎಲ್ಲರಲ್ಲೂ ಕಾಡುತ್ತಲೇ ಇದೆ ಎಂದರೆ ಅಚ್ಚರಿಯಲ್ಲ,  ಅವರಂತಹ  ಜನನಾಯಕ, ಹೃದಯ ಕವಿಯ ಅವಶ್ಯಕತೆ  ಭಾರತಕ್ಕಿದೆ , ಅವರು  ಮತ್ತೆ ಹುಟ್ಟಿ ಬರಬೇಕು, ಆದರೆ ಅಟಲ್ ಜೀ ಮತ್ತೊಮ್ಮೆ ಬನ್ನಿ ಎಂದು ಹೇಳಲಾ ಬೇಡವಾ ಎಂಬ ಜಿಜ್ಞಾಸೆ , ಏಕೆಂದರೆ ಎಲ್ಲೆಡೆ ದ್ವೇಷ, ಅಸೂಯೆ ಮತ್ತು ಮತ್ಸರ ಭಾವನೆಗಳು ತಾಂಡವವಾಡುತ್ತಿದೆ, ಆದರೆ ಅವರು  ನಡೆದ ಹಾದಿಯಲ್ಲಿ ಸಾಗುವ ನಾಯಕನೊಬ್ಬನಿದ್ದಾನೆ ಎಂಬ ಅಲ್ಪ ತೃಪ್ತಿಯ ಭಾವವು ಹಾದು ಹೋಗುತ್ತದೆ ಆದರೆ ಒಂದಂತೂ ಸತ್ಯ  ವಂದನ್ ಕಿ ಧರ್ತಿ ಹೇ ಅಭಿನಂಧನ್ ಕಿ ಧರ್ತಿ ಹೇ ಎಂದು ಅವರ ಧಾಟಿಯಲ್ಲಿ  ಮಾತಿಗೆಳೆವರು ಮತ್ತೆ ಮತ್ತೆ ಸಿಗಲಾರರು ಹಾರ್ ನಹಿ ಮಾನೂಂಗ , ಗೀತ ನಯಾ ಮೇ ಗಾವುನ್ಗ್  ಎಂದು ಹುರಿದುಂಬಿಸುವವರು ಮತ್ತೆ ಬರಲಾರರು , ಕಟ್ಟ ಕಡೆಯದಾಗಿ ಅಟಲ್ ಜಿ ಹಾಕಿ ಕೊಟ್ಟ ಮಾರ್ಗದಲ್ಲಿ ಒಂದಿಡೀ ದಾರಿಯನ್ನು ಕ್ರಮಿಸಲು ಆಗದಿದ್ದರೂ ಕೆಲ ಹೆಜ್ಜೆಗಳನ್ನಾದರೂ  ಪ್ರತಿಯೊಬ್ಬ ರಾಜಕೀಯ ನಾಯಕನು ಕ್ರಮಿಸಲಿ ಎಂಬುದು ಹೆಬ್ಬಯಕೆ . 

ಕಾರ್ತಿಕ್ ಎಸ್ ಬಾಪಟ್

Saturday, November 11, 2023

 ಮ್ಯಾನೇಜ್ಮೆಂಟ್ ಅಂದು ಇಂದು - ಕರ್ಮವೀರ ದೀಪಾವಳಿ ವಿಶೇಷಾಂಕ (2023 ನವೆಂಬರ್)



ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಎದುರಾದ ಕೋವಿಡ ಸಂಕಟ, ಅದರ ಪರಿಣಾಮವಾಗಿ ಉಂಟಾದ ಆರ್ಥಿಕ ಕುಸಿತ ದೇಶ ದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳು ಹಾಗು ಯುದ್ಧೋನ್ಮಾದ ಪ್ರಸಂಗಗಳು , ಸತತವಾಗಿ ಏರುತ್ತಿರುವ ಬಡ್ಡಿದರ ಹೀಗೆ ಒಂದರ ಮೇಲೆ ಒಂದರಂತೆ ಸಮಸ್ಯೆಗಳ ಮಹಾಪೂರವೇ ಬಂದೆರಗುತ್ತಿದೆ ಹೀಗಿದ್ದಾಗ್ಯೂ ಇಂತಹ ಕ್ಲಿಷ್ಟ  ಸನ್ನಿವೇಶಗಳ ಹೊರತಾಗಿಯೂ ಜಾಗತಿಕ ಮಟ್ಟದಲ್ಲಿ ಹಾಗು ಭಾರತದಲ್ಲಿಯೂ ಅನೇಕ ಉದ್ಯಮಗಳು ಹೆಚ್ಚು ಹೆಚ್ಚು ಲಾಭಗಳತ್ತ ಮುಖ ಮಾಡಿದ ಉದಾಹರಣೆ ಹಲವಾರಿವೆ.

ಸಣ್ಣ ಪುಟ್ಟ ಸ್ಟಾರ್ಟ್ಸ್ಪ್ಅಪ್ ಗಳು ದಿನ ಬೆಳಗಾಗುವುದರೊಳಗೆ ದೈತ್ಯ ಉದ್ಯಮಗಳಾಗಿ ಬೆಳೆಯುವ  ಲಕ್ಷಣಗಳನ್ನು ತೋರಿಸಿವೆ ಅದರಲ್ಲೂ ತಂತ್ರಜ್ಞಾನ ಅವಲಂಬಿತ ಸ್ಟಾರ್ಟ್ಸ್ಪ್ಅಪ್ ಗಳು ಕೊಡು ಕೊಳ್ಳುವಿಕೆಯ ಅಥವಾ ಬೇಡಿಕೆ ಮತ್ತು ಉತ್ಪಾದನೆಯ ಭಾಷ್ಯವನ್ನು ಬದಲಿಸಿವೆ ಎಂದರೆ ತಪಿಲ್ಲ, ಅಷ್ಟೇ ಅಲ್ಲ ಈ ಸ್ಟಾರ್ಟ್ಸ್ಪ್ಗಳೇ ಆಧುನಿಕ ಭಾರತದ ಆರ್ಥಿಕ ಪುನರುಜ್ಜೀವನದ ವಾಹಕಗಳಾಗುವ ಲಕ್ಷಣಗಳು ಕಾಣುತ್ತಿವೆ . ಹೀಗೆ ವ್ಯಾಪಾರ ಜಗತ್ತಿನಲ್ಲಿನ ಆಗುತ್ತಿರುವ ಬದಲಾವಣೆಗಳು , ಸ್ಥಿತ್ಯಂತರ್ಯಗಳು ನಮ್ಮ ಮ್ಯಾನೇಜ್ಮೆಂಟ್ ಶಿಕ್ಷಣದತ್ತ ಹೆಚ್ಚು ಒತ್ತು ಕೊಡುವಂತೆ ಮಾಡಿದೆ ಅಷ್ಟೇ ಅಲ್ಲ ಹೆಜ್ಜೆ ಹೆಜ್ಜೆಗೂ ಕಾಡುತ್ತಿರುವ ಅನಿಶ್ಟತೆಯ ಸನ್ನಿವೇಶದಲ್ಲಿ ಮ್ಯಾನೇಜ್ಮೆಂಟ್ ಶಿಕ್ಷಣದ ಮಹತ್ವ ಇನ್ನಷ್ಟು ಹೆಚ್ಚಾಗುತ್ತಿದೆ.

ಮೇಲ್ನೋಟಕ್ಕೆ ಮ್ಯಾನೇಜ್ಮೆಂಟ್ ಎಜುಕೇಷನ್ ಎಂಬುವುದು 1950 ರ ನಂತರ ಭಾರತದಲ್ಲಿ ಹೆಚ್ಚು ಹೆಚ್ಚು ಪ್ರವರ್ಧಮಾನಕ್ಕೆ ಬಂತೆಂದು ಕಾಣುತ್ತದೆ , ಟೆಕ್ನಿಕಲ್ ವಿಭಾಗದಲ್ಲಿ IIT ಯ ಕಾರ್ಯಾರಂಭವಾದ ಮೇಲೆ ಮ್ಯಾನೇಜ್ಮೆಂಟ್ ವಿಭಾಗದಲ್ಲಿಯೂ ಈ ರೀತಿಯ ಸಂಸ್ಥೆಯ ಅವಶ್ಯಕತೆ ಇದೆ ಎಂದು ಸರ್ಕಾರ IIM ಗಳ ಸ್ಥಾಪನೆಗೆ ಮುನ್ನುಡಿ ಬರೆಯಿತು , ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸರಿ ಸುಮಾರು 3000 ಕ್ಕೂ ಹೆಚ್ಚು MBA ಡಿಗ್ರಿಯನ್ನು ನೀಡುವ ಹಾಗು 300 ಕ್ಕೂ ಹೆಚ್ಚು PGDM ಡಿಗ್ರಿ ಯನ್ನು ನೀಡುವ ಶಿಕ್ಷಣ ಸಂಸ್ಥೆಗಳಿವೆ

ಹಾಗಾದರೆ ಮ್ಯಾನೇಜ್ಮೆಂಟ್ ಎಜುಕೇಷನ್ ಎಂಬುದು ತೀರಾ ಇತ್ತೀಚೆನದೆಂದು ಗ್ರಹಿಸುವುದು ತಪ್ಪು , ಹಲವಾರು ವರುಷಗಳಿಂದ ಕೇವಲ ಮ್ಯಾನೇಜ್ಮೆಂಟ್ ಎಂದಲ್ಲ ನಮ್ಮ ಕಲೆ , ಸಾಂಸ್ಕೃತಿಕ , ವಿಜ್ಞಾನ ಹೀಗೆ ಹತ್ತು ಹಲವು ವಿಷಯಗಳ ಪ್ರಸ್ತಾಪವಾದಾಗ ಎಲ್ಲರೂ ಪಾಶಿಮಾತ್ಯ ದೇಶಗಳತ್ತ ನೋಡುವುದು ಒಂದು ಪರಿ ಪಾಠವೇ ಆಗಿ ಹೋಗಿತ್ತು ಅಂದರೆ ಇಂಡಿಯನ್ ನಾಲೆಜ್ ಸಿಸ್ಟಮ್ ಹಾಗು ಇದರ ಅಘಾದತೆಯ ಬಗ್ಗೆ ಹೆಚ್ಚಿನ ಗಮನ ಹರಿಸಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರವೃತ್ತಿ ಕೊಂಚ ಕಡಿಮೆಯಾಗಿ ನಮ್ಮ ಪೂರ್ವಜರಲ್ಲಿ ಹಾಗು ಗ್ರಂಥಗಳಲ್ಲಿನ ಜ್ಞಾನದ ಸಂಪತ್ತಿನ ಅರಿವಿನ ಮಹತ್ವ ಅರಿತು ಈ ಬಗ್ಗೆ ಹೆಚ್ಚು ಹೆಚ್ಚು ಸಂಶೋದನೆಗಳು ಹಾಗು ಅಧ್ಯಯನಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ , ಈ ನಿಟ್ಟಿನಲ್ಲಿ ನಮ್ಮ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲೂ ಕೂಡ ವೇದೋಪನಿಷತ್ಗಳ ಹಾಗು ಭಗವದ್ಗೀತೆಯ ಕೊಡುಗೆಗಳು ಅಪಾರವಾದದ್ದು.

ಭಾರತೀಯ ಇತಿಹಾಸದ ಮೂಲ ವೈದಿಕ ಸಾಹಿತ್ಯ ನಮ್ಮ ವೇದಗಳು ಪ್ರತಿಯೊಬ್ಬ ವ್ಯಕ್ತಿಗೂ ಆಧ್ಯಾತ್ಮಿಕ ಜೀವನವನ್ನು ನಡೆಸಲು ಸ್ಫೂರ್ತಿ ನೀಡುತ್ತವೆ ಅದೇ ಕಾಲಕ್ಕೆ  ಲೌಕಿಕ ಜಗತ್ತಿನ ದಿನ ನಿತ್ಯದ ಜೀವನಕ್ಕೂ  ಕೂಡ  ದಾರಿ ದೀಪವಾಗಿ ನಿಲ್ಲುತ್ತದೆ .ಆಧುನಿಕ  ಜಗತ್ತಿನ ಮ್ಯಾನೇಜ್ಮೆಂಟ್ ಮಂತ್ರಗಳಾದ ಯೋಜನೆ (Planning ), ಸಮನ್ವಯ ( Coordination ) , ಸಂವಹನ (communication ) ನಾಯಕತ್ವ (Leadership ),   ಗ್ರಾಹಕರ ಒಳಿತು/ಕ್ಷೇಮ (Customer  Satisfaction ), ಸುಸ್ಥಿರ ಅಭಿವೃದ್ಧಿ  (Sustainable development ) ಇವೆಲ್ಲ ಅಂಶಗಳನ್ನು ವೇದಗಳು ಸಾವಿರ ಸಾವಿರ ವರುಷಗಳ ಹಿಂದೆಯೇ ಭೋದಿಸಿದೆ. ನಾಲ್ಕು ವೇದಗಳಲ್ಲಿ ಋಗ್ವೇದವು ಅತ್ಯಂತ ಪ್ರಾಚೀನ ಸಾಹಿತ್ಯವಾಗಿದೆ, ಇದು   ವಿವಿಧ ದೇವತೆಗಳಿಗೆ ಸಮರ್ಪಿತವಾದ ಸ್ತೋತ್ರಗಳು ಮತ್ತು ಪ್ರಾರ್ಥನೆಗಳನ್ನು ಒಳಗೊಂಡಿದೆ ಋಗ್ವೇದದಲ್ಲಿ ಸರಿ ಸುಮಾರು  1028 ಸ್ತುತಿಗೀತೆಗಳು ಹಾಗೂ 10,600 ಪದ್ಯಗಳಿವೆ.  ಇಂದಿಗೂ ಕೂಡ ಏಷ್ಯಾದ ವಿವಿಧ ಭಾಗಗಳಲ್ಲಿ ದೇವರನ್ನು ಋಗ್ವೇದದಲ್ಲಿನ ಸ್ತೋತ್ರಗಳನ್ನು ಬಳಸಿ ಪೂಜಿಸಲಾಗುತ್ತದೆ. 

ಮ್ಯಾನೇಜ್ಮೆಂಟ್ನ ವಿದ್ಯಾರ್ಥಿಯಾಗಿ  ಋಗ್ವೇದವನ್ನು ಗಮನಿಸಿದಾಗ  ಋಗ್ವೇದ ನಾಯಕತ್ವದ ಮಹತ್ವವನ್ನು ಸಾರುತ್ತದೆ  ಎಂದರೆ ತಪಿಲ್ಲ . ಋಗ್ವೇದದಲ್ಲಿ, ನಾಯಕರನ್ನು "ರಾಜನ್" ಎಂದು ಕರೆಯುತ್ತಿದ್ದರು , ಅಂದರೆ "ರಾಜ" ಅಥವಾ "ಆಡಳಿತಗಾರ". ರಾಜನ್ ತನ್ನ ಜನರನ್ನು ಮುನ್ನಡೆಸುವ ಮತ್ತು ಅವರ ಯೋಗಕ್ಷೇಮವನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ಹೊಂದಿದ್ದನು, ಜನಸಾಮಾನ್ಯರ ಅಪಾರ ಪ್ರೀತಿಗೆ ಪಾತ್ರನಾಗಿದ್ದ ಜನಕ ರಾಜನ ಕಥೆಯಲ್ಲಿ ಈ ಎಲ್ಲ ನಾಯಕತ್ವದ ಗುಣಲಕ್ಷಣಗಳನ್ನು  ಕಾಣಬಹುದು. ಜನಕನು ಪ್ರಾಚೀನ ಭಾರತದಲ್ಲಿ ಸಮೃದ್ಧ ಸಾಮ್ರಾಜ್ಯವಾದ ಮಿಥಿಲೆಯ ಆಡಳಿತ ನಡೆಸಿದ ರಾಜನಾಗಿದ್ದನು . ಅವನ ನ್ಯಾಯ ಸಮ್ಮತವಾದ ಆಡಳಿತಕಕ್ಕಾಗಿ ಹಾಗು ಆತನ ಬುದ್ಧಿವಂತಿಕೆಗಾಗಿ ಪ್ರಜೆಗಳು ಅವನನ್ನು ಗೌರವಿಸುತ್ತಿದ್ದರು . ಜನಕ ಮಹಾರಾಜನ ಆಡಳಿತದಲ್ಲಿ ಪ್ರಜೆಗಳು ಅಪಾರ ನಂಬಿಕೆ ಉಳ್ಳವರಾಗಿದ್ದರು   ಮತ್ತು  ರಾಜ್ಯವು ಸದಾ  ಸಮೃದ್ಧಿಯತ್ತ  ಸಾಗಲು ಜನಕ ಮಹಾರಾಜಾ ಕೈಗೊಂಡ ಹಲವು  ಉಲ್ಲೇಖಗಳನ್ನು ನಾವು ಇಲ್ಲಿ  ಕಾಣಬಹುದು ಅಲ್ಲದೆ ಮಿಥಿಲೆಯನ್ನು ಬೌದ್ಧಿಕ ಆವಿಷ್ಕಾರದ ಕೇಂದ್ರವನ್ನಾಗಿ ಬೆಳಸುವಲ್ಲಿ ಜನಕ ಮಹಾರಾಜನ ಕೊಡುಗೆ ಅಪಾರವಾದುದು ಹೀಗಾಗಿ  ಇಂದಿಗೂ ಜನಕ ಮಹಾರಾಜನನ್ನು ನೇಪಾಳದ  ರಾಷ್ಟ್ರೀಯ ಭಿಬೂತಿ ಅಂದರೆ ರಾಷ್ಟೀಯ ನಾಯಕ ಎಂದು ಕರೆಯುತ್ತಾರೆ.

ಅದೇ ರೀತಿ  ಯಜುರ್ವೇದವನ್ನು ಸಂವಹನದ ಸಾರ ತಿಳಿಸುವ ಹಿನ್ನೆಲೆಯಲ್ಲಿ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಅವಲೋಕಿಸುವುದು ಉತ್ತಮ, ಯಜುರ್ವೇದವು ನಾಲ್ಕು ವೇದಗಳಲ್ಲಿ ಎರಡನೆಯದು. ಋಗ್ವೇದವು ಜ್ಞಾನ ಪ್ರಧಾನವಾದರೆ, ಯಜುರ್ವೇದವು ಕರ್ಮಪ್ರಧಾನ್ಯ ವಾಗಿದೆ ,  ಒಂದು  ತಂಡವಾಗಿ ಕೆಲಸ ಮಾಡುವಾಗ ಉಂಟಾಗುವ ಸವಾಲುಗಳು ಹಾಗು ಆಗ  ಬೇಕಾಗುವ ಸಂವಹನದ  ಅಗತ್ಯತೆಯನ್ನು ಇಲ್ಲಿ ಕಾಣಬಹುದು ಇದಕ್ಕೆ ಸೂಕ್ತ ಉದಾಹರಣೆ ಅಂದರೆ   ರಾಮ ಮತ್ತು ಹನುಮಂತ ರಿಬ್ಬರ ಭಕ್ತಿ ಪೂರ್ವಕ ಪ್ರಸಂಗಗಳು. ರಾಮಾಯಣದಲ್ಲಿ ನಾವು ಕಂಡು ಕೊಂಡಂತೆ ಹನುಮಂತ ಅತ್ಯಂತ ಯಶಸ್ವಿಯಾಗಿ  ಪರಿಣಾಮಕಾರಿಯಾಗಿ ಸಂವಹನ ಮಾಡುವ ಸಾಮರ್ಥ್ಯವನ್ನು ಹೊಂದಿದ್ದನು  ಮತ್ತು  ರಾವಣನಿಂದ ರಾಮನು ತನ್ನ ಶ್ರೀಮತಿ  ಸೀತೆಯನ್ನು ರಕ್ಷಿಸಲು ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದನು. ಹನುಮಂತನ ಸಂವಹನ ಕೌಶಲ್ಯವು ಅವನ ಅನ್ವೇಷಣೆಯಲ್ಲಿ ರಾಮನಿಗೆ ಸಹಾಯ ಮಾಡಿದ ವಾನರ ಸೈನ್ಯದ ಟೀಮ್ ವರ್ಕ್ , ಸಂವಹನ ಕೌಶಲ್ಯತೆ ಎಲ್ಲವೂ ಒಂದು ಪಾಠವೇ ಸರಿ

ಟೀಮ್ ವರ್ಕ್ನ ಕೌಶಲ್ಯತೆಗೆ ಸಾಮವೇದವು ಮತ್ತೊಂದು ಉದಾಹರಣೆ  ನಾಲ್ಕು ವೇದಗಳಲ್ಲಿ ಮೂರನೆಯದು ಸಾಮವೇದ.  ನಿರ್ವಾಹಕರಿಗೆ ಸಾಮವೇದದ ಪ್ರಮುಖ ಪಾಠವೆಂದರೆ ಟೀಮ್ ವರ್ಕ್‌ನ ಮಹತ್ವ. ಸಾಮವೇದವು  ಗುರಿ  ಸಾಧಿಸುವುದು  ಮತ್ತು ಆ ಗುರಿ ಸಾಧಿಸುವಲ್ಲಿ ಒಂದು ತಂಡವಾಗಿ ಯಶಸ್ಸಿಗೆ ಹೇಗೆ ಕೆಲಸಮಾಡಬೇಕೆಂದು ಸಾರುತ್ತದೆ  ಹಿಂದೂ ಮಹಾಕಾವ್ಯ ಮಹಾಭಾರತದ ನಾಯಕರಾದ ಪಾಂಡವರ ಕಥೆಯೇ ಇದಕ್ಕೆ ಉದಾಹರಣೆ . ಪಾಂಡವರು ತಮ್ಮ ಶತ್ರುಗಳನ್ನು ಸೋಲಿಸಲು ಮತ್ತು ತಮ್ಮ ರಾಜ್ಯವನ್ನು ಮರಳಿ ಪಡೆಯಲು ಹೇಗೆ  ಒಟ್ಟಾಗಿ ಕೆಲಸ ಮಾಡಿದರು . ಪ್ರತಿಯೊಬ್ಬ ಸಹೋದರರು ತಮ್ಮದೇ ಆದ  ಸಾಮರ್ಥ್ಯ ಮತ್ತು ದೌರ್ಬಲ್ಯಗಳೆರಡನ್ನು ಹೊಂದಿದ್ದರು , ಆದರೆ ಅವರೆಲ್ಲರೂ ಒಟ್ಟಿಗೆ ಬಂದಾಗ ಹೇಗೆ  ಅವರು ಅಸಾಧಾರಣ ತಂಡವಾಗಿ ಹೊರಹೊಮ್ಮುತ್ತಿದ್ದರು  ಮತ್ತು ಹೇಗೆ ತಮ್ಮ  ಗುರಿಗಳನ್ನು ಸಾಧಿಸಲು ಸಾಧ್ಯವಾಯಿತು ಎಂಬುದಕ್ಕೆ ಸೂಕ್ತ ಉದಾಹರಣೆ , ಈ HUF ಫ್ಯಾಮಿಲಿ ರನ್ ಬಿಸಿನೆಸ್ ಗಳ ಯಶಸಿಗ್ಗೋ ಇದೇ ಕಾರಣವೆಂಬುದನ್ನು ನಾವಿಲ್ಲಿ ಕಂಡು ಕೊಳ್ಳಬಹುದು HUF

 ರನ್ ಬಿಸಿನೆಸ್ ಗಳಲ್ಲಿ ಅಣ್ಣ ಹಣಕಾಸಿನಲ್ಲಿ ಪ್ರವೀಣನಾಗಿದ್ದರೆ ತಮ್ಮ  ವ್ಯವಹಾರದ ದಿನ ನಿತ್ಯದ ಆಗು ಹೋಗುಗಳಲ್ಲಿ ಪ್ರವೀಣರಾಗಿರಬಹುದು ಹೀಗೆ ಒಬ್ಬರಿಗೊಬ್ಬರ ಕೌಶಲ್ಯಗಳು ಒಟ್ಟಿಗೆ ಮೇಳೈಸಿದಾಗ ಯಶಸ್ವಿ ಸಂಸ್ಥೆಗಳನ್ನು ಕಟ್ಟುವದಕ್ಕೆ ಸಾಧ್ಯವಾದ ಹಲವು ಉದಾಹರಣೆಗಳಿವೆ  .

ಇನ್ನೋವೆಟಿವೇನೆಸ್ಸ್ ಅಥವಾ ನಾವಿನ್ಯತೆಯ ಅಗತ್ಯತ್ಯೆಯನ್ನು ಅಥರ್ವವೇದ ಸಾರುತ್ತದೆ ಅಥರ್ವವೇದದಲ್ಲಿ, ಸಮಸ್ಯೆಗಳನ್ನು ಪರಿಹರಿಸಲು ಮತ್ತು ಬದಲಾಗುತ್ತಿರುವ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ನಾವೀನ್ಯತೆಯು ಮೊರೆ ಹೋಗುವುದು ಅಂದರೆ innovation ಮೊರೆ ಹೋಗುವುದು ಎಷ್ಟು ಅತ್ಯಗತ್ಯವೆಂದು ತೋರಿಸಿಕೊಡುತ್ತದೆ  ಉದಾಹರಣೆಗೆ ಪ್ರಾಚೀನ ಭಾರತದ ಋಷಿಮುನಿಗಳಾಗಿದ್ದ  ವಿಶ್ವಾಮಿತ್ರರ  ಕಥೆಯಲ್ಲಿ ಈ ಅಂಶವನ್ನು ಕಾಣಬಹುದು  . ವಿಶ್ವಾಮಿತ್ರ ಋಷಿ ಹೊಸತನವನ್ನು ಕಂಡುಕೊಳ್ಳುವ ಮತ್ತು ಕಷ್ಟಕರವಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದ ಮಹಾನ್ ಋಷಿಗಳಾಗಿದ್ದರು .ಆಕಾಶದಲ್ಲಿ ಹೊಸ ನಕ್ಷತ್ರ ಪುಂಜವನ್ನು  ರಚಿಸಲು ಋಷಿ ಮುನಿಯೊಬ್ಬ ಸವಾಲೆಸೆದಾಗ ವಿಶ್ವಾಮಿತ್ರ ಋಷಿಗಳು  ಆ ಸವಾಲನ್ನು ಎದುರಿಸಿ   ತನ್ನ ಜ್ಞಾನ ಮತ್ತು ಸೃಜನಶೀಲತೆಯನ್ನು ಬಳಸಿಕೊಂಡು ಹೊಸ ನಕ್ಷತ್ರ ಪುಂಜವನ್ನೇ ಸೃಷ್ಟಿಸಿದರು , ಹೀಗೆ ಸತತ ಪರಿಶ್ರಮದಿಂದ ಏನಾನ್ನಾದರೂ ಸಾದಿಸಿ ತೋರಿಸಬಹೌದು ಆ ಮೂಲಕ ಬೇಡಿಕೆ ಇಲ್ಲದಿದ್ದರೂ ಹೇಗೆ  ಬೇಡಿಕೆಯನ್ನು ಸೃಷ್ಟಿಸಬಹುದೆಂದು ತೋರಿಸಿಕೊಟ್ಟಿದನ್ನು ನಾವು ಕಾಣಬಹುದು.

ವೇದಗಳಂತೆಯೇ  ಭಗವದ್ಗೀತೆಯಲ್ಲೂ ಕೂಡ ಶ್ರೀ ಕೃಷ್ಣ ಅರ್ಜುನನಿಗೆ ಮಾತ್ರವಲ್ಲದೆ ಒಂದಿಡೀ ಮನುಕುಲಕ್ಕೆ ಜೀವನದಲ್ಲಿ  ವಿಧಿ ಹಾಗು ನಿಷೇಧಗಳ ಮೂಲಕ ಸತ್ಯವನ್ನು ಅರಸುವ ಮಾರ್ಗವನ್ನು ಭೋದಿಸುತ್ತ ಹೋಗುತ್ತಾನೆ . ಅರ್ಜುನ ತನ್ನ ಬಂಧುಗಳೊಡನೆಯೇ ಯುದ್ಧ ಮಾಡಬೇಕಲ್ಲ   ಎಂದು ಮಾನಸಿಕವಾಗಿ ನೊಂದು ಪರಿತಪಿಸುತ್ತಿರುತ್ತಾನೆ, ಆಗ ಅರ್ಜುನನನ್ನು ಪ್ರೇರೇಪಿಸಲು ಶ್ರೀಕೃಷ್ಣನು ಭಗವದ್ಗೀತೆಯನ್ನು ಕುರುಕ್ಷೇತ್ರದ ಯುದ್ಧದಲ್ಲಿ ಭೋದಿಸುತ್ತಾನೆ ಅಷ್ಟೇ ಅಲ್ಲ ಏನು ಮಾಡಬೇಕು, ಏನು ಮಾಡಬಾರದು- ಇವೆರಡನ್ನೂ  ಸೂಕ್ಷ್ಮವಾಗಿ ಮತ್ತು ಖಡಕ್ಕಾಗಿ ಹೇಳುತ್ತಾನೆ ಈ ರೀತಿ ಹೇಳುವವನನ್ನೇ ನಾವು  ಅತ್ಯುತ್ತಮ ಸಲಹೆಗಾರ, ತಂತ್ರಗಾರ, ಮ್ಯಾನೇಜರ್, ಗುರು, ಎಂದು ಇಂದು ಕರೆಯುತ್ತೇವೆ . ಒಬ್ಬ ಸಮರ್ಥ ಗುರು ಈ ಎರಡನ್ನೂ ಕಲಿಸಬೇಕು. ಶ್ರೀಕೃಷ್ಣ ವಿಧಿ ಹಾಗು ನಿಷೇಧಗಳೆರಡನ್ನೂ ಸಾವಿರಾರು ವರ್ಷಗಳ ಹಿಂದೆಯೇ  ಹೇಳಿದ ಮಹಾನುಭಾವ. ವಿಧಿ ಅಂದರೆ ಮಾಡಬೇಕಾದ್ದು. ನಿಷೇಧವೆಂದರೆ ಮಾಡಬಾರದ್ದು.

ಬಹುತೇಕ ಪ್ರತಿಯೊಬ್ಬ ಕಾರ್ಯ ನಿರ್ವಾಹಕರಿಗೆ   ವ್ಯವಸ್ತಾಪಕರಿಗೆ , ನಾಯಕರಿಗೆ ಕಾಡುವ ಪ್ರಶ್ನೆ ಅವರವರ ಕೆಲಸದಲ್ಲಿ ಹೇಗೆ ಪರಿಣಾಮಕಾರಿಯಾಗಿರಬೇಕೆಂಬುದು . ಈ ಮೂಲಭೂತ ಪ್ರಶ್ನೆಗೆ ಉತ್ತರವು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅತ್ಯಂತ ಪರಿಣಾಮಕಾರಿಯಾಗಿ ಹೇಳಿದ್ದಾನೆ ಮೊದಲು  "ನೀವು ನಿಮ್ಮನ್ನು ನಿರ್ವಹಿಸಲು ಪ್ರಯತ್ನಿಸಬೇಕು" ಆಗ ಮಾತ್ರ  ಒಬ್ಬನಾಯಕ ಅಥವಾ  ನಿರ್ವಾಹಕ ಪರಿಣಾಮಕಾರಿಯಾಗಿ ಕೆಲಸವನ್ನು ನಿರ್ವಹಿಸಲು ಸಾಧ್ಯ ಆಗ ಮಾತ್ರ ಆ ವ್ಯಕ್ತಿ ಒಂದಿಡೀ ತಂಡದ ಬಗ್ಗೆ ಅಥವಾ ತನ್ನ ವ್ಯಾಪಾರ ವಹಿವಾಟಿನ ಜೊತೆಗೂಡಿರುವ ಸಮಸ್ತ ಜೀವರಾಶಿಗಳ ಒಳಿತಿನ ಬಗ್ಗೆ ಪರಿಣಾಮಕಾರಿಯಾಗಿ ಚಿಂತಿಸಲು ಸಾಧ್ಯ ಎಂಬುದು  ಇಲ್ಲದಿದ್ದಲ್ಲಿ ಅವನು ಅಥವಾ ಅವಳು ತಂಡದಲ್ಲೊಬರಾಗುತ್ತಾರೆಯೇ ಹೊರತು ತಂಡವನ್ನು ಮುನ್ನಡೆಸಲಾರ ಅಥವಾ ಒಂದು ಕಂಪನಿಯ ಸಾಮಾನ್ಯ ಉದ್ದೇಶಕ್ಕಾಗಿ ( ಕಾಮನ್ ಆಬ್ಜೆಕ್ಟಿವ್) ಕೆಲಸ ಮಾಡಲಾರ. 

ಇಂತಹ ಕ್ಲಿಷ್ಟ ವಿಷಯಗಳನ್ನು ಅತ್ಯಂತ ಸರಳವಾಗಿ ಎಲ್ಲರಿಗೂ ತಲುಪುವಂತೆ ಮಾಡಿ ಮನದಲ್ಲಿನ ಗೊಂದಲಗಳ್ಳನು ಪರಿಹರಿಸಿ ಸರಿಯಾದ ಮಾರ್ಗದಲ್ಲಿ ನಡೆಯುವ ದಾರಿ ತೋರಿಸಿದವನು ಶ್ರೀ ಕೃಷ್ಣ , ಆದ್ದರಿಂದಲೇ  ಶ್ರೀ ಕೃಷ್ಣನ್ನು ದೇವರೆಂದು ಪೂಜಿಸಿ ಆರಾಧಿಸಿದರು ಲೌಕಿಕದ ಆಯಾಮದಲ್ಲಿ ಸರ್ವಕಾಲಿಕ ಮ್ಯಾನೇಜ್ಮೆಂಟ್ ಗುರು ಎಂದು ಒಬ್ಬ ಶ್ರೇಷ್ಠ  ತತ್ವಜ್ಞಾನಿ , ಶಿಕ್ಷಕ, ವ್ಯಸ್ಥಾಪಕ ಹಾಗು ಅನುಕರಣೀಯ ನಾಯಕನೆಂದು ಜಗ್ಗತೇ ಒಪ್ಪಿಕೊಂಡಿದೆ. ಹಾಗು ಶ್ರೀ ಕೃಷ್ಣ ಭೋದಿಸಿದ  ಭಗವದ್ಗೀತೆಯಲ್ಲಿ ಇಂತಹ ವಿಷಯ ಇಲ್ಲ ಎಂಬುವಂತಿಲ್ಲ, ವ್ಯಕ್ತಿಯೊಬ್ಬನ ಮನೋವಿಕಾಸ, ಏಕಾಗ್ರತೆ, ಸ್ವಯಂ ನಿಯಂತ್ರಣ, ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು, ಜ್ಞಾನ, ಮೌಲ್ಯಗಳು, ಕರ್ತವ್ಯ, ಕೆಲಸ, ಕ್ರಿಯೆ, ಅರ್ಪಣೆ, ನಾಯಕತ್ವ, ಅಂತಿಮ ಲಕ್ಷ್ಯ- ಯಶಸ್ಸಿನ ಇಷ್ಟೂ ಮೂಲಭೂತ ಸಂಗತಿಗಳನ್ನು ಭಗವದ್ಗೀತೆ ಕಲಿಸುತ್ತದೆ. ಆದ್ದರಿಂದಲೇ ಇಂದು ಜಗತ್ತಿನ ಪ್ರಸಿದ್ಧ ಮ್ಯಾನೇಜ್‌ಮೆಂಟ್ ಶಾಲೆಗಳಲ್ಲಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ  ಭಗವದ್ಗೀತೆಯಿಂದ ಆಯ್ದ ಭಾಗಗಳನ್ನು ಪಠ್ಯವಾಗಿ ಅಳವಡಿಸಲಾಗಿದೆ .

ಶ್ರೀ ಕೃಷ್ಣ ಧರ್ಮ , ಕರ್ಮಗಳ ಪರಮೋಚ್ಚ ಜ್ಞಾನವನ್ನು ಕುರುಕ್ಷೇತ್ರದಲ್ಲಿ  (ಮಹಾಭಾರತ ) ಮಹಾಕಾವ್ಯದ ಮೂಲಕ ಅರ್ಜುನನನ್ನು ನೆಪವಾಗಿಟ್ಟುಕೊಂಡು ಎಲ್ಲರಿಗೂ ತಲುಪುವಂತೆ ಮಾಡಿದನು.  ಶ್ರೀಕೃಷ್ಣ ಯೋಧನ ಕರ್ತವ್ಯವನ್ನು ನಿರ್ವಹಿಸಲು ಅರ್ಜುನನಿಗೆ ಮಾರ್ಗದರ್ಶನ ನೀಡುತ್ತಾನೆ ಮತ್ತು ಒಳ್ಳೆಯ ಆಳ್ವಿಕೆಯನ್ನು ಸ್ಥಾಪಿಸಲು ನ್ಯಾಯಯುತ ಯುದ್ಧವನ್ನು ಮಾಡುವ ಅವಶ್ಯಕೆತೆಯನ್ನು ಹೇಳುತ್ತಾನೆ . ಹೀಗೆ ಭಗವಾನ್ ಶ್ರೀ ಕೃಷ್ಣನ ಭೋದನೆಗಳಲ್ಲಿ ಹಾಗು ತನ್ನ ಜೀವನದುದ್ದಕ್ಕೂ ಕೈಗೊಂಡ ಕೆಲಸ ಕಾರ್ಯಗಳಲ್ಲಿ ಒಂದಲ್ಲ ಒಂದು  ಸಂದೇಶ , ಚಾಣಕ್ಯತೆ ಇದ್ದದನ್ನು ನಾವು ಕಾಣಬಹುದು  ನಾಯಕನಾಗಬೇಕೆಂದು ಹೊರಟವರಿಗಂತೂ ಅದು ಯಾವುದೇ ಕ್ಷೇತ್ರದಲ್ಲಿರಲಿ  ಇಂತಹ ನಿರ್ವಹಣಾ ತಂತ್ರಗಳು ಇಂದಿಗೂ ಅನುಕರಣೀಯ

ಸ್ಪಷ್ಟ ಉದ್ದೇಶ ಮತ್ತು ಜ್ಞಾನ ವಿನಿಮಯ  : ನಿಜವಾದ ನಾಯಕ  ಅಥವಾ ನಿರ್ವಾಹಕ (ಮ್ಯಾನೇಜರ್) ತಮ್ಮಲಿರುವ ಜ್ಞಾನವನ್ನು  ಇತರರೊಂದಿಗೆ ಹಂಚಿಕೊಳ್ಳಬೇಕು. ‘knowledge grows when shared with others’, ಎಂಬಂತೆ ಶ್ರೀ ಕೃಷ್ಣ ಎಂದಿಗೂ ತನ್ನಲ್ಲಿರುವ ಮೂಡುವ ಆಲೋಚನೆಗಳನ್ನೂ  ಬೇರೆಯವರೊಡನೆ ಹಂಚಿಕೊಳ್ಳಲು ಹಿಂದೆ  ನೋಡಲಿಲ್ಲ ಆದ್ದರಿಂದಲೇ ಶ್ರೀ ಕೃಷ್ಣನಿಗೆ ಎಲ್ಲವನ್ನು ಬಲ್ಲ  ಸರ್ವಜ್ಞ ಎಂದು ಸಂಬೋಧಿಸುವುದು. ಅರ್ಜುನನು ತನ್ನ ಸಹೋದರರೊಂದಿಗೆ ಹೋರಾಡಬೇಕೆ ಅಥವಾ ಬೇಡವೇ ಎಂಬ ಸಂಧಿಗ್ದ  ಪರಿಸ್ಥಿತಿಯಲ್ಲಿ ಇದ್ದಾಗ , ಶ್ರೀ ಕೃಷ್ಣ ಅವನಿಗೆ ತನ್ನ ಉದ್ದೇಶವನ್ನು ನೆನಪಿಸುತ್ತಾನೆ  ಮತ್ತು ಅವನ  ಅನುಮಾನಗಳನ್ನು ಹೋಗಲಾಡಿಸಿ ; ತನ್ಮೂಲಕ ತನ್ನ ಕರ್ತವ್ಯದತ್ತ ಗಮನ ಹರಿಸುವಂತೆ ಮಾಡುತ್ತಾನೆ.

ಅಚಲ ಗುರಿ : ಶ್ರೀ ಕೃಷ್ಣ ತನ್ನ ಜೀವನದಲ್ಲಿ  ಮೂರು ನಿರ್ದಿಷ್ಟ ಗುರಿಗಳನ್ನು ಹೊಂದಿದ್ದನು.  ‘ಪರಿತ್ರಾಯಣ ಸಾಧೂನಾಂ ಅಂದರೆ ಒಳ್ಳೆಯವರ ರಕ್ಷಣೆ. ಧನಾತ್ಮಕ ಹಾದಿಯಲ್ಲಿ ನಡೆಯುವ ಮೂಲಕ ಇದನ್ನು ಸಾಧಿಸುವುದು; ಎರಡನೆಯದು, ‘ವಿನಾಶಯ ದುಷ್ಕೃತಂ ಎಂದರೆ ಕೆಟ್ಟದ್ದನ್ನು (ಕೆಟ್ಟ ಚಿಂತನೆಗಳನ್ನೂ ) ನಾಶಮಾಡುವುದು ಮತ್ತು ಮೂರನೆಯದು, ‘ಧರ್ಮ ಸಂಸ್ಥಾಪನೆ ಎಂದರೆ ಒಳ್ಳೆಯ ತತ್ವಗಳನ್ನು ಸ್ಥಾಪಿಸುವುದು ಮತ್ತು ಬಲಪಡಿಸುವುದು. ಎಲ್ಲೆಡೆ ಒಳ್ಳೆಯದನ್ನು ಸ್ಥಾಪಿಸಲು ಪದೇ ಪದೇ ಪ್ರಯತ್ನಿಸುವುದು. ಗೆಲ್ಲಲು ಅವಿರತವಾಗಿ ಕೆಲಸ ಮಾಡಲೇಬೇಕಲ್ಲವೇ? ಇದು ಶ್ರೀ ಕೃಷ್ಣನ ಜೀವನದ ಗುರಿ ಅದೇ ರೀತಿ  ನಿರ್ವಾಹಕನಾದವನಿಗೆ  ಅವನ   ಸಂಸ್ಥೆಯ ಗುರಿಗಳ ಬಗ್ಗೆ ಅರಿವಿರಬೇಕು  ಮತ್ತು ಆ ಗುರಿ ತಲುಪಲು ಬೇಕಾಗುವ ಸಿದ್ಧತೆಯ ಅರಿವು ಇರಬೇಕು

ನಿರ್ಧಿಷ್ಟ ಕಾರ್ಯತಂತ್ರ ಹಾಗು ವಿಧಾನ: ಶ್ರೀಕೃಷ್ಣ ತನ್ನ ಜೀವನದುದ್ದಕ್ಕೂ ಹಲವಾರು  ಸಮಸ್ಯೆಗಳನ್ನು ಪರಿಹರಿಸುವ ವಿಧಾನವನ್ನು ಕಂಡುಕೊಂಡ  ನುರಿತ  ತಂತ್ರಜ್ಞಾನಿ ಎಂದರೆ ತಪಿಲ್ಲ . ತನ್ನ ಯುದ್ಧತಂತ್ರದ ಕೌಶಲ್ಯದಿಂದ ಪಾಂಡವರಿಗಾಗಿ ಮಹಾಭಾರತ ಯುದ್ಧವನ್ನು ಗೆಲ್ಲಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದನು. ಅಂದರೆ ಯಾವೊಬ್ಬ ವ್ಯಕ್ತಿ  ಯೋಜನಭದ್ದವಾಗಿ  ಯುದ್ಧ   ನೀತಿಯನ್ನು ರೂಪಿಸುವನೋ ಆ ವ್ಯಕ್ತಿ ಯುದ್ಧ ಮತ್ತು ರಾಜಕೀಯದಲ್ಲಿ ಖಚಿತವಾಗಿ ಗೆಲ್ಲುತ್ತಾನೆ ಎಂದು ಅವನು ಸಾಬೀತುಪಡಿಸುತ್ತಾನೆ. ದೀರ್ಘ ಮತ್ತು ಅಲ್ಪಾವಧಿಯ ಗುರಿಗಳನ್ನು ಸಾಧಿಸುವುದು ಹೇಗೆಂದು ನಿರ್ಧರಿಸಿ ಅದನ್ನು ಕಾರ್ಯಗತಗೊಳಿಸುವುದ ಇಲ್ಲಿ ನಾವು ಗಮನಿಸಬೇಕಾದ ಅಂಶ.

ನುರಿತ ಸಂವಹನಕಾರ: ಕೃಷ್ಣನು ತನ್ನ ವಾಕ್ ಶಕ್ತಿ ಮತ್ತು ವಾಕ್ ಕೌಶಲ್ಯದ ಮೂಲಕ ಪಾಂಡವರನ್ನು ಹಲವಾರು ಬಾರಿ ಪ್ರೇರೇಪಿಸುತ್ತಿದನ್ನು. ಅವರು ಒಳ್ಳೆಯದನ್ನು ಮಾಡಲು ಪ್ರೇರೇಪಿಸಿದನು, ಅಂತೆಯೇ  ನ್ಯಾಯಯುತ ಮಾರ್ಗದಲ್ಲಿ ನಡೆಯುವತ್ತಲೂ  ಪ್ರೇರೇಪಿಸಿದನು ಅಂದರೆ ಒಬ್ಬ  ನಿಜವಾದ ನಾಯಕ ಅಥವಾ ಮ್ಯಾನೇಜರ್ ಯಾವಾಗಲೂ ತನ್ನ ಸಹೋದ್ಯೋಗಿಗಳು ಮತ್ತು ಸಹೋದ್ಯೋಗಿಗಳನ್ನು ಪ್ರೇರೇಪಿಸಿ ಗುರಿ ತಲುಪುವಂತೆ ನೋಡಿಕೊಳ್ಳುವುದು ಅಷ್ಟೇ ಅಲ್ಲ ಗುರಿ ತಲುಪುವ ಮಾರ್ಗವು ಕೂಡ ನ್ಯಾಯ ಸಮ್ಮತವಾಗಿರುವಂತೆ ನೋಡಿಕೊಳ್ಳುವುದು  ಇಲ್ಲಿ ಮುಖ್ಯವಾಗುತ್ತದೆ ಎಂದು ತೋರಿಸಿಕೊಟ್ಟನು .

ಹೀಗೆ ವೇದಗಳು ಹಾಗು ಗೀತೆಯಲ್ಲಿರುವ  ಅಂಶಗಳನ್ನು ಮ್ಯಾನೇಜ್ಮೆಂಟ್ ಎಂಬ ಚಾಳೀಸು ಧರಿಸಿ   ನೋಡಿದಾಗ ಇದು ನಮ್ಮದೇ ನೆಲದಲ್ಲಿ ಹಲವು ಸಾವಿರ ಸಾವಿರ ವರುಷಗಳ ಹಿಂದೆಯೇ ಅಳವಡಿಸಿಕೊಂಡಿರುವುದನ್ನು ನಾವು ಕಾಣಬಹುದು ಅಷ್ಟರ ಮಟ್ಟಿಗೆ ಮ್ಯಾನೇಜ್ಮೆಂಟ್ ಎಂಬುವುದು ಹೊಸದಲ್ಲ ಹಾಗು ಎಲ್ಲಿಂದಲೋ ಎರವಲು ತಂದಿದಲ್ಲ  ಎಂಬ ತೃಪ್ತಿ ನಮ್ಮಲಿ ಮೂಡುತ್ತದೆ  ಇದಕ್ಕೆ ಪುಷ್ಟೀಕರಿಸುವಂತೆ ಇತ್ತೀಚಿಗೆ CSR - ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಎಂಬ ಪರಿಕಲ್ಪನೆಎಲ್ಲೆಡೆ ಸದ್ದು ಮಾಡಿ ಹಲವು  ಸಂಸ್ಥೆಗಳು ಈ  ಪರಿಕಲ್ಪನೆಯನ್ನು ಕಾರ್ಯಗತಗೊಳಿಸಿರುವುದನ್ನು ನಾವು ಕಾಣಬಹುದು.    ಮೂಲತಃ ಈ CSR ನ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದು ಅಮೆರಿಕಾದ ಅರ್ಥಶಾಸ್ತ್ರಜ್ನ್ಯಾ  Howard Browen  ಎಂಬುವಾತ ಎಂಬುದು  ತಿಳಿದ ವಿಷಯವೇ ಸರಿ ಆದರೆ ಧರ್ಮ ಕರ್ಮಗಳ ಮಾರ್ಗದ ಮೂಲಕ CSR ನ ಪರಿಕಲ್ಪನೆ ವೇದೋಪನಿಷತ್ಗಳು , ಕೌಟಿಲ್ಯನ ಅರ್ಥಶಾಸ್ತ್ರ ಹಾಗು ಗೀತೆ ಗಳಲ್ಲಿ ಈ ಹಿಂದೆಯೇ ಇದು ಕೇವಲ ವ್ಯಾವಹಾರಿಕ ಸಂಸ್ಥೆಗಳಲ್ಲಷ್ಟೇ  ಅಲ್ಲದೆ  ಪ್ರತಿಯೊಬ್ಬ ಮನುಷ್ಯನು ಪಾಲಿಸಬೇಕಾದ ಪ್ರಮುಖ ಕರ್ತ್ಯವ ಸಾರ ಎಂದು  ಸಾರಿ ಸಾರಿ ಹೇಳಿವೆ. 

 

ಹೀಗೆ ಮೇಲ್ನೋಟಕ್ಕೆ ಮ್ಯಾನೇಜ್ಮೆಂಟ್ ಎಜುಕೇಶನ್ ಕೇವಲ ಕಳೆದ 70 ವರ್ಷಗಳಿಂದೀಚೆಗೆ  ಒಂದು ಅಭ್ಯಾಸದ ವಿಷಯವಾಗಿ ಪ್ರವರ್ಧಮಾನಕ್ಕೆ ಬಂದರು ಇಂದಿನ ಮ್ಯಾನೇಜ್ಮೆಂಟ್ನ ಪರಿಧಿಗೆ ಒಳ ಪಡುವ ವಿಷಯಗಳ ಉಲ್ಲೇಖ ಹಾಗು ಅಭ್ಯಾಸ  ಸಹಸ್ರಾರು ವರುಷಗಳ ಹಿಂದೆಯೇ  ವೇದೋಪನಿಷತ್ಗಳ ಮೂಲಕ , ಗೀತೆಯ ಮೂಲಕ ನಮ್ಮ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿತ್ತು ಎಂಬುದು ಅಷ್ಟೇ ಸತ್ಯ. ಅದೇನೇ ಇದ್ದರು 1991 ರ ಆರ್ಥಿಕ  ಉದಾರೀಕರಣದ ನಂತರ ಮ್ಯಾನೇಜ್ಮೆಂಟ್ ಒಂದು ಅಧ್ಯಯನ ವಿಷಯವಾಗಿ  ಹೆಚ್ಚು ಸ್ವೀಕೃತ ಗೊಳ್ಳುತ್ತಾ ಹೋಯಿತು ಇದು ದೇಶದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ   ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು  ಎಂಬಿಎ ಕೋರ್ಸಗಳನ್ನು  ನೀಡಲು ತಾ ಮುಂದು ನೀ ಮುಂದು ಎಂಬಂತೆ ಪೈಪೋಟಿಯಲ್ಲಿ ಮುಂದೆ ಬರುವಂತೆ ಮಾಡಿತು. ಆ ನಿಟ್ಟಿನಲ್ಲಿ ಯೋಚಿಸಿದರೆ ಇದೊಂದು ಸಕಾರಾತ್ಮಕ ಬೆಳವಣಿಗೆಯೇ ಸರಿ  ಕಾಲ ಕಳೆದಂತೆ MBA ಕೋರ್ಸ್ಗಳ್ ಬೇಡಿಕೆಯು ಹೆಚ್ಚಾಗಿ ಇದೊಂದು ಗ್ಲಾಮರಸ್ ಕೋರ್ಸ್ ಎಂಬಂತೆ ಬಿಂಬಿತವಾಗಲು ಪ್ರಾರಂಭವಾಯಿತು ಆದರೆ ಹೀಗೆ ಪ್ರಾರಂಭ ಗೊಂಡ ಈ ಕೋರ್ಸಗಳು ಕಾಲಕ್ರಮೇಣ ತನ್ನ ಮೌಲ್ಯವನ್ನು ಕಳೆದು ಕೊಂಡಿತು ಹೀಗೇಕೆ ಎಂದು ನೋಡಿದರೆ ಸವಾಲುಗಳು ಹತ್ತು ಹಲವಾರು.

ಉತ್ತಮ ಗುಣಮಟ್ಟದ ಅಧ್ಯಾಪಕರ ಕೊರತೆ, ಹಾಗು ಉನ್ನತ ಶ್ರೇಣಿಯ ಅಧ್ಯಾಪಕರನ್ನು ಆಕರ್ಷಿಸುವಲ್ಲಿ ವಿದ್ಯಾ ಸಂಸ್ಥೆಗಳು ವಿಫಲವಾಗಿರುವುದು,  ವಿದ್ಯಾರ್ಥಿಗಳ ದಾಖಲಾತಿಗಳ ಕೊರತೆ , ಧಾಖಲಾದ ವಿದ್ಯಾರ್ಥಿಗಳಲ್ಲಿ ಮ್ಯಾನೇಜ್ಮೆಂಟ್ ಎಜುಕೇಶನ್ ಬಗ್ಗೆ ಆಸಕ್ತಿ ಇಲ್ಲದೆ ಇರುವುದು , ಶೈಕ್ಷಣಿಕ-ಉದ್ಯಮ ಸಂಪರ್ಕ ಕಡಿತ, ನವೀಕರಿಸದ ಪಠ್ಯಕ್ರಮ ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ ಹಾಗು ಈ ಎಲ್ಲ ಸವಾಲುಗಳ ನಡುವೆ ಪದವಿ ಪಡೆದ ವಿದ್ಯಾರ್ಥಿಗಳು ಕಾರ್ಪೊರೇಟ್ ವಲಯದ ನೈಜ್ಯ ಸವಾಲುಗಳನ್ನು ಎದುರಿಸಲು ಸಿದ್ಧರಾಗಿಲ್ಲದಿರುವುದು ಇದೆಲ್ಲದರ  ಪರಿಣಾಮವಾಗಿ ಗುಣಮಟ್ಟದ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಕೊರತೆ ಕಾರ್ಪೊರೇಟ್ ವಲಯಗಳಲ್ಲಿ ತೀವ್ರವಾಗಿ ಕಾಡುತ್ತಿದೆ .  ಕಾರ್ಪೊರೇಟ್ ವಲಯದ ಮಾನದಂಡಗಳಿಗನುಗುಣವಾಗಿ ನುರಿತ ಪ್ರತಿಭೆಗಳು ಸಿಗದ ಕಾರಣ ಕಾರ್ಪೊರೇಟ್ ಕಂಪನಿಗಳು ಉತ್ತಮ ಪ್ರತಿಭೆಯನ್ನು ಅರಸಿ ಮತ್ತೆ ಮತ್ತೆ IIM ಹಾಗು ISB ಯಂತಹ ಉನ್ನತ ಶ್ರೇಣಿಯ ಸಂಸ್ಥೆಗಳಿಗೆ ಆದ್ಯತೆ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ  ಆಗ ಸಹಜವಾಗಿ ಟಾಪ್ ಬಿ ಸ್ಕೂಲ್ ಅಥವಾ ಪ್ರೇಮಿಯೆರೆ ಬಿ ಸ್ಕೂಲ್ ಆವರೇಜ್ ಬಿ ಸ್ಕೂಲ್ ಎಂಬ ವ್ಯತ್ಯಾಸಗಳು ಪ್ರಾರಂಭವಾಗುತ್ತದೆ.

ಅದೇನೇ ಇದ್ದರು ಬದಲಾದ ಈ ಸನ್ನಿವೇಶದಲ್ಲಿ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳ ಬೇಡಿಕೆ ಹೆಚ್ಚುತ್ತಲೇ ಇದೆ  ಬಿ ಸ್ಕೂಲ್ಗಳು ಕೂಡ ಭವಿಷ್ಯದಲ್ಲಿ ತಮ್ಮ ವಿದ್ಯಾರ್ಥಿಗಳು ನೈಜ್ಯ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುವಂತೆ ತಮ್ಮ ಪಠ್ಯ ಕ್ರಮದಲ್ಲಿ ಅಲ್ಪ ಸ್ವಲ್ಪ ಬದಲಾವಣೆಯನ್ನು ಕೈ ಗೊಂಡು ತಂತ್ರಜ್ಞಾನಕ್ಕೂ ಹೆಚ್ಚಿನ ಮಹತ್ವ ಕೊಟ್ಟಿದೆ .ಈ ನಿಟ್ಟನಲ್ಲಿ ಮುಂಬರುವ ದಿನಗಳಲ್ಲಿ ಮ್ಯಾನೇಜ್ಮೆಂಟ್ ಶಿಕ್ಷಣದಲ್ಲಿ ಕೆಲವು ಅಮೂಲಾಗ್ರ ಬದಲಾವಣೆಗಳನ್ನು ಕಾಣಲಿದ್ದೇವೆ ಮುಖ್ಯವಾಗಿ

ಡಿಜಿಟಲ್ ಮಾರ್ಕೆಟಿಂಗ್ : ರಿಮೋಟ್ ವರ್ಕಿಂಗ್ ಬಗ್ಗೆ  ಜನ ಹಾಗು ಜಗತ್ತು  ಹೆಚ್ಚು ಹೆಚ್ಚು ಮೊರೆ ಹೋಗುತ್ತಿದ್ದೆ , ಬ್ರಿಕ್ಸ್ ಅಂಡ್ ಮೋಟಾರ್ ಅಂದರೆ ಅಂಗಡಿಯನ್ನು ತೆರೆದು ಅಲ್ಲಿ ವ್ಯಾಪಾರ ವಹಿವಾಟು ಮಾಡುವುದರೊಂದಿಗೆ ಪ್ರತಿ ವ್ಯಾಪಾರ ಹಾಗು ವಹಿವಾಟು ಇ - ಕಾಮರ್ಸ್ನ ಮೂಲಕವು ಜನರಿಗೆ ತಲುಪುವಂತೆ ನೋಡಿಕೊಳ್ಳಲಾಗುತ್ತಿದೆ, ಹೀಗೆ ವ್ಯಾಪಾರ  ವ್ಯವಹಾರಗಳು ಡಿಜಿಟಲ್ ರೂಪಕ್ಕೆ ಮೊರೆಹೋದಂತೆಲ್ಲ ಬಿ ಸ್ಕೂಲ್ಗಳು ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿ ಪಡಿಸುವ ಅಥವಾ ಡಿಜಿಟಲ್ ಮಾರ್ಕೆಟಿಂಗ್ , ಕ್ರಾಸ್ ಮೀಡಿಯಾ ಮಾರ್ಕೆಟಿಂಗ್ ನಂತಹ ಪರಿಣಿತಿಯನ್ನು ಅಭ್ಯಸಿಸುವ ಕೋರ್ಸಗಳ ಅಳವಡಿಕೆಯಲ್ಲಿ ದಿಟ್ಟ ಹೆಜ್ಜೆಯನ್ನಿಡುತ್ತಿವೆ.

ಉದ್ಯಮಶೀಲತೆ: ಕೋವಿಡ್ನ ನಂತರ ಉದ್ಯಮ ವಲಯದಲ್ಲಿ ಇದ್ದ  ಅನಿಶ್ಚಿತತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ಮತ್ತೆ ಸ್ಟಾರ್ಟ್ ಅಪ್ ಏಕೋ ಸಿಸ್ಟಮ್ ಗೆ ವೇಗ ತುಂಬುತ್ತಿದೆ. ಕೋವಿಡ್ ಕಾಲದಲ್ಲಿ   ಉಂಟಾದ ಒಂದು ಬಗೆಯ ನಿರ್ವಾತಾವೇ ಇನ್ನಷ್ಟು ಆವಿಷ್ಕಾರಕ್ಕೆ ಉದ್ದಿಮೆದಾರರನ್ನು ದೂಡುತ್ತಿವೆ ಹಾಗು ದೊಡ್ಡ ದೊಡ್ಡ ವಿದ್ಯಾ ಸಂಸ್ಥೆಗಳು ಎಂಟ್ರೆಪ್ರೆನುರ್ಶಿಪ್ ನೊಂದಿಗೆ  ಇಂಟ್ರಾಪ್ರೆನಿಯರ್‌ಶಿಪ್ಗು ಹೆಚ್ಚು ಮಹತ್ವ ಕೊಟ್ಟಿವೆ ಹಾಗು ಕಾಲೇಜುಗಳಲ್ಲಿ ಇನ್‌ಕ್ಯುಬೇಶನ್ ಸೆಂಟರ್ಗಳ ಚಟುವಟಿಕೆಗಳು ಹೆಚ್ಚಾಗುತ್ತಿವೆ ಆ ಮೂಲಕ ವಿದ್ಯಾರ್ಥಿಗಳಲ್ಲಿ ಒಂದು ಬಗೆಯ ಉದ್ಯಮ ಶೀಲತೆಯನ್ನು ಪ್ರೋತ್ಸಾಹಿಸಿ ಹೊಸ ಹೊಸ ಆವಿಷ್ಕಾರಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಡುತ್ತಿದೆ.

ಸುಸ್ಥಿರ ಹಣಕಾಸು: Covid-19 ತಂದಿಟ್ಟ ಸವಾಲುಗಳು ಒಂದೆರಡಲ್ಲ ಸುಸ್ಥಿರತೆ, ಸಾಮಾಜಿಕ ಜವಾಬ್ದಾರಿ ಮತ್ತು ಹವಾಮಾನ ಬದಲಾವಣೆ ಈ ಅಂಶಗಳು  ಇಂದು ಕಾರ್ಪೊರೇಟ್  ವಲಯದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಲಾರಂಭಿಸಿದೆ ಹಾಗು ಬಿ ಸ್ಕೂಲ್ಗಳು ಕೂಡ  ತಮ್ಮನು ತಾವು ಹೆಚ್ಚು ಹೆಚ್ಚು ತೊಡಗಿಸಿಕೊಂಡು ಈ ನಿಟ್ಟಿನಲ್ಲಿ ಕಾರ್ಯಕ್ಷೇತ್ರದಲ್ಲಿ ನಾಳೆಯ ಸವಾಲುಗಳನ್ನು ಎದುರಿಸಲು ಸಿದ್ದರಾಗುವಂತೆ ತರಬೇತಿ ನೀಡುತ್ತಿದೆ , ಈ ನಿಟ್ಟಿನಲ್ಲಿ  ESG(Environmental, social, and governance (ESG) investing ) ಇನ್ವೆಸ್ಟ್ಮೆಂಟ್ಗೆ ಹೆಚ್ಚು ಪ್ರಾಮುಖ್ಯತೆ ಬಂದಿದೆ ಅಂದರೆ ಒಂದು ಕಂಪನಿಯ ಸಾಮರ್ಥ್ಯವನ್ನು ಕೇವಲ ಹಣಕಾಸಿನ ಆಧಾರದ ಮೇಲೆ ಮಾತ್ರ ಅಂದಾಜಿಸದೆ  ಒಟ್ಟಾರೆ ಆ ಸಂಸ್ಥೆಯು ಈ ಮೂರು ಅಂಶಗಳ ಬಗ್ಗೆ(ಪರಿಸರ , ಸಾಮಾಜಿಕ ಮತ್ತು ಆಡಳಿತ ) ಎಷ್ಟರ ಮಟ್ಟಿಗೆ ಕಾಳಜಿಯನ್ನು ಹೊಂದಿದೆ ಹಾಗು ಎಷ್ಟು ಮಹತ್ವವನ್ನು ಕೊಟ್ಟಿದೆ ಎಂದು ತಿಳಿದು ಈ ಅಂಶಗಳ ಆಧಾರದ ಮೇಲೆ ಸಂಸ್ಥೆಗಳಲ್ಲಿ ಹೂಡಿಕೆಯನ್ನು ಮಾಡುವುದು ಅಥವಾ ಅಂತಹ ಸಂಸ್ಥೆಗಳೊಂದಿಗೆ ಹೂಡಿಕೆಗಳಲಿ ತೊಡಗಿಕೊಳ್ಳುವುದು ಹೀಗೆ ಹೂಡಿಕೆಯ ಮಾನದಂಡವೇ ಬುಡಮೇಲಾಗುವಂತಹ ಸನ್ನಿವೇಶಕ್ಕೆ ಸಿದ್ಧರಾಗುವ ಹಾಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದು.

ಡೇಟಾ ಅನಾಲಿಟಿಕ್ಸ್: ಡೇಟಾ ಈಸ್  ನ್ಯೂ ಆಯಿಲ್ ಎನ್ನುವಷ್ಟರ ಮಟ್ಟಿಗೆ ಇಂದು ಡೇಟಾ ಪ್ರಾಮುಖ್ಯತೆಯನ್ನು   ನಾವು ಕಾಣಬಹುದು, ಕಾರ್ಪೊರೇಟ್ ವಲಯಗಳಲ್ಲಿ ತಮ್ಮ ಸಂಸ್ಥೆಗಳ ನಿಖರ ಸಾಧನೆಯನ್ನು ( ಪರ್ಫಾರ್ಮೆನ್ಸ್) ಕಂಡು ಕೊಳ್ಳಲು ತಮ್ಮಲಿರುವ ಡೇಟಾ (ಮಾಹಿತಿ) ಗಳ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ ಎಂಬುದು ತಿಳಿದ ವಿಷಯವೇ ಸರಿ ಆದರೆ ಈ ತಮ್ಮಲಿರುವ ಮಾಹಿತಿಯನ್ನು ಅನಲಿಟಿಕ್ಸ್ ನ ಚಾಳೀಸು ಹಾಕಿ ಅವಲೋಕಿಸುವುದು ಈಗ ಸರ್ವೇ ಸಾಮಾನ್ಯವಾಗುತ್ತಿದೆ ಆ ಮೂಲಕ ಸಣ್ಣ ಪುಟ್ಟ ವಿಷಯಗಳಿಗೂ ಕೂಡ ಹೆಚ್ಚು ಮಹತ್ವ ಸಿಗುತ್ತಿವೆ  ಆ ಮೂಲಕ ಗ್ರಾಹಕನಿಗೆ ಪೆರ್ಸನಲೈಜ್ಡ್ ಸರ್ವಿಸ್ ಹಾಗು ಇಂಡಿವಿಜುಯಲ್  attension ಕೊಡಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಬಿ ಸ್ಕೂಲಗಳು ಕೂಡ ತಮ್ಮ ವಿದ್ಯಾರ್ಥಿಗಳನ್ನು ಅಂತಹ ಜಾಬ್ ಪ್ರೊಫೈಲ್‌ಗಳಿಗಾಗಿ ಸಿದ್ಧಪಡಿಸುತ್ತಿವೆ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಈ ಕಾರಣದಿಂದಾಗಿಯೇ ಇಂದು ಡೇಟಾ ಅನಲಿಟಿಕ್ಸ್ ,Quantitative ಟೆಕ್ನಿಕ್ ಹಾಗು  AI ಪರಿಣಿತರಿಗೆ ಅದರ ವ್ಯಾಖ್ಯಾನಕಾರರಿಗೆ  ಎಲ್ಲಿಲದ ಪ್ರಾಮುಖ್ಯತೆ ಬಂದಿದೆ.

ಕನ್ಸಲ್ಟಿಂಗ್ ಹಾಗು ಅಂತಾರಾಷ್ಟ್ರೀಯ ಮಾನ್ಯತೆ::  ಸಲಹೆಗಾರರ ಕೆಲಸವು ಅತ್ಯಂತ ಕ್ಲಿಷ್ಟಕರವಾಗಿದ್ದು ಕೇವಲ ವಿದ್ಯಾರ್ಜನೆಯ ಮೂಲಕ ಮಾತ್ರ ಒಬ್ಬ ಪರಿಣಿತ ಸಲಹೆಗಾರರಾಗುವುದು ಕಷ್ಟಕರ ಆದ್ದರಿಂದ ಬಿ ಸ್ಕೂಲಗಳು ಹಾಗು ಕಾರ್ಪೊರೇಟ್ ವಲಯ ಹೆಚ್ಚೆಚ್ಚು ಇಂಟರ್ನ್ಶಿಪ್ ಹಾಗು ಆನ್ ದಿ ಜಾಬ್ ಟ್ರೇನಿಂಗ ವ್ಯವಸ್ಥೆಗೆ  ಹೆಚ್ಚು ಮಹತ್ವ ಕೊಡುತ್ತಿದೆ ಮತ್ತು ಇಂದಿನ  ಬಿ ಸ್ಕೂಲ್  ಪದವೀಧರರು ಜಗತ್ತಿನಾದ್ಯಂತ ಉದ್ಯೋಗಾವಕಾಶಗಳನ್ನು ಹುಡುಕುವ ಅವಕಾಶವನ್ನು ಹೊಂದಿದ್ದಾರೆ, ಆದ್ದರಿಂದ  ಬಿ  ಸ್ಕೂಲ್ಗಳು ಇಂದು   ಅಂತರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ (ಉದಾಹರಣೆಗೆ  AACSB, Equis ಮತ್ತು EMBA ) ಸಂಸ್ಥೆಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು  ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ನೀಡುವತ್ತ ಗಮನ ಹರಿಸಿವೆ

ಹೀಗೆ ಭಾರತದಲ್ಲಿ ಮ್ಯಾನೇಜ್ಮೆಂಟ್ ಶಿಕ್ಷಣವು ಹಲವು ಮಜುಲುಗಳನ್ನು ಕಂಡಿದೆ ಅದರಲ್ಲೂ  ಉದಾರೀಕರಣ ಮತ್ತು ಜಾಗತೀಕರಣ ಮ್ಯಾನೇಜ್ಮೆಂಟ್ನಿ ಶಿಕ್ಷಣದ ಹರಿವನ್ನು ಇನ್ನಿಲದಂತೆ ಬದಲಾಯಿಸಿತು ಎಂದರೆ ತಪಿಲ್ಲ ಇದೀಗ ಅದೇ ರೀತಿಯ ಇನ್ನೊಂದು ಮಜುಲಿಗೆ ನಾವೆಲ್ಲರೂ ಸಿದ್ಧರಾಗುತ್ತಿದ್ದೇವೆ ಎಲ್ಲೆಡೆ ಮೇಕ್ ಇನ್ ಇಂಡಿಯಾ ಕಹಳೆ ಮೊಳಗುತ್ತಿದೆ ಅದೇ ಸಮಯದಲ್ಲಿ ಜಾಗತಿಕ ಮಟ್ಟದಲ್ಲಿ  ಮೇಕ್ಇನ್ ಇಂಡಿಯಾ ದೊಂದಿಗೆ ಮ್ಯಾನೇಜ್ಡ್ ಬೈ ಇಂಡಿಯನ್ಸ್ ಎಂಬ ಕೀರ್ತಿಯು ಕೂಡ ಭಾರತದ ಪಾಲಾಗುತ್ತಿದೆ ಅಂದರೆ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರನ್ನು ಮಾಡಿರುವ corporate  ಸಂಸ್ಥೆಗಳ ಸಿಇಓ ಗಳು ಹಾಗು ಮ್ಯಾನೇಜಿಂಗ್ ಡೈರೆಕ್ಟರ್ ಗಳು ಭಾರತದವರು ಇಲ್ಲವೇ ಭಾರತದ ಮೂಲದವರು ಇಂತಹ  ಬೆಳವಣಿಗೆಯು ನಿಜಕ್ಕೂ ಸ್ವಾಗತಾರ್ಹ. ಈ ಬದಲಾವಣೆಗಳು ವಿದ್ಯಾರ್ಥಿಗಳು, ನೇಮಕಾತಿದಾರರು, ಸಂಸ್ಥೆಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ರಾಷ್ಟ್ರಕ್ಕೆ ಪ್ರಯೋಜನವನ್ನು ಉಂಟು ಮಾಡುವಲ್ಲಿ ಯಾವುದೇ ಅನುಮಾನವಿಲ್ಲ.

ಸರ್ಕಾರವು ಕೂಡ ಮುಂದಿನ ದಿನಗಳಲ್ಲಿ MBA ಅಂತಹ ಪದವಿಯನ್ನು ಕೊಡುವಾಗ ಕೆಲವೊಂದು ನಿರ್ದಿಷ್ಟ ಮಾನದಂಡಗಳನ್ನು ಸೃಷ್ಟಿಸುವತ್ತ ಗಮನ ಹರಿಸಬೇಕು , ಕ್ಲಾಸ್ ರೂಮ್ನಪಾಠಗಳಿಗಿರುವಷ್ಟೇ ಮಹತ್ವವನ್ನು ಇಂಟರ್ನ್ಶಿಪ್ , ಪ್ರಾಕ್ಟಿಕಲ್ ಲರ್ನಿಂಗ್ಗಳಿಗೂ ಕೊಡಬೇಕು ಮ್ಯಾನೇಜ್ಮೆಂಟ್ ಕಾಲೇಜುಗಳ ಮಧ್ಯೆ  ಸ್ಪರ್ಧಾ ಮನೋಭಾವಕ್ಕಿಂತ ಪಾಲುದಾರಿಕೆ ಹಾಗು ಪರಸ್ಪರ ವಿಚಾರ ವಿನಿಮಯಕ್ಕೆ ಪ್ರೋತ್ಸಾಹಿಸುವುದರ ಮೂಲಕ ಸಮಗ್ರ  ಸಂಪನ್ಮೂಲ ಅಭಿವೃದ್ಧಿಯ ಗುರಿಯನ್ನು ಸಾಧಿಸುವತ್ತ ಗಮನ ಹರಿಸಿದರೆ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲೂ ಭಾರತ ಹೊಸ ಭಾಷ್ಯ ಬರೆಯಬಲ್ಲದು.

 

ಕಾರ್ತಿಕ್ ಎಸ್ ಬಾಪಟ್

Tuesday, October 31, 2023

ರಾಷ್ಟೀಯ ಏಕತಾ ದಿವಸ್ -  ಪಟೇಲರ ನೆನಪಿನಲ್ಲಿ  

ವಲ್ಲಭರೆಂದರೆ ಸುಮ್ಮನೆಯಲ್ಲ ಅವರಿಗೆ ಸರಿಸಾಟಿಯಾಗುವ ಹೆಸರೊಂದಿಲ್ಲ - ಕಾರ್ತಿಕ್ ಎಸ್ ಬಾಪಟ್


ಅದು  ಅಕ್ಟೋಬರ್ ೩೧ 2018 ರ ಸಮಯ  ವಲ್ಲಭರ ಮೂರುತಿ "The Statue of Unity " ಮೇಲೆದ್ದು ನಿಂತಿತ್ತು  , ಅಷ್ಟ್ರಲ್ಲಿ ಕೆಲವು ಅತೃಪ್ತ ಆತ್ಮಗಳು ಇದೆಲ್ಲ ಬೇಕಿತ್ತಾ ಇಷ್ಟೊಂದು ಖರ್ಚು ಅದು  ೩೦೦೦ ಕೋಟಿ ಖರ್ಚು ಮಾಡುವ ದರ್ದೆನಿತ್ತು ಎಂದು ಪ್ರಶ್ನಿಸಿದ್ದವು , ಹಾಗೆ ನೋಡಿದರೆ  ನಾವು ಮಾಡುವ ಪ್ರತಿಯೊಂದು ಕೆಲಸಗಳು ಅದರ ಕಾರ್ಯಶೈಲಿ ಎಲ್ಲವು ದುಂದುವೆಚ್ಚವೆನೋ ಎಂಬಂತೆ ಭಾಸವಾಗುತ್ತದೆ ಆದರೆ ಕೆಲವು ಕಾರ್ಯಕ್ರಮಗಳನ್ನು ಆರ್ಥಿಕ ನೆಲೆಯಲ್ಲಿ ನೋಡದೆ, ಕಟ್ಟಿಕೊಟ್ಟ ಮೌಲ್ಯಗಳ ಹಿನ್ನಲೆಯಲ್ಲಿ ನೋಡಬೇಕು , ಅದಿರಲಿ ಇಂದು ವಲ್ಲಭರು ನಮ್ಮೊಂದಿಗಿಲ್ಲ ವಲ್ಲಭರೇನಾದರೂ ಇಂದು ನಮ್ಮೊಂದಿಗಿದ್ದಿದ್ದರೆ ಆ ತ್ಯಾಗ ಜೀವಿಯ ಮನಸು ಎಷ್ಟು ನೊಂದುಕೊಳ್ಳುತ್ತಿತ್ತೋ ಏನೋ, ಅಂದು ಸ್ವತಂತ್ರಾ ನಂತರ ಪಟೇಲರು ಏಕೀಕೃತ ಭಾರತಕ್ಕೆ ಪಣತೊಡದಿದ್ದರೆ ಇಂದು ಭಾರತದ ಪರಿಸ್ಥಿತಿ ಊಹಿಸಲು ಅಸಾಧ್ಯ.

ಪಟೇಲರ ಕಾರ್ಯಶೈಲಿಯನ್ನುಹಾಗು ಅವರ ದೇಶ ಸೇವೆಯನ್ನು ನಾವು ಎರಡು ನೆಲೆಗಳಲ್ಲಿ ನೋಡಬೇಕಾಗುತ್ತದೆ , ಸ್ವಾತಂತ್ರಸಂಗ್ರಾಮದಲ್ಲಿ ಅವರ ದೇಶ ಸೇವೆ ಒಂದು ತೂಕದದ್ದಾರೆ , ಅದಕ್ಕೂ ಮೀರಿದ್ದು ಸ್ವಾತಂತ್ರಾನಂತರದ ದೇಶ ಸೇವೆ ಮತ್ತು ಕೊಡುಗೆ, ಭಾರತದ ಏಕೀಕರಣದ ಶಿಲ್ಪಿ ಸರ್ದಾರ್ ಪಟೇಲರು ೫೫೦ಕ್ಕೂ ಹೆಚ್ಚು ಸಣ್ಣ ಸಣ್ಣ ಹಿರಿಯ ಕಿರಿಯ ಬ್ರಿಟಿಷ್ ಆಧೀನದಲ್ಲಿದ್ದ ರಾಜರಸುಗಳಅಧೀನದಲ್ಲಿ ಚದುರಿ ಛಿದ್ರವಾಗಿದ್ದ ಭಾರತದ ಪ್ರಾಂತ್ಯವನ್ನು ಸ್ವಾತಂತ್ರಾ ಭಾರತದತೆಕ್ಕೆಗೆ ಸೇರಿಸಿದ ಕೀರ್ತಿ ಸರ್ದಾರ್ ಪಟೇಲರಿಗೆ ಸೇರಬೇಕು , ಬಹುಷ್ಯ ಸ್ವಾತಂತ್ರಾಸಂಗ್ರಾಮದಲ್ಲಿ ಗಾಂಧೀಜಿ ಅವರೊಡನೆ ಅವರಷ್ಟೇ ಸರಿ ಸಮಾನರಾಗಿ ಅವರ ನೆರಳಿನಂತೆಸ್ವಾತಂತ್ರಾ ಹೋರಾಟಕ್ಕೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಸಿದ ಉದಾತ್ತ ಜೀವ ಪಟೇಲರದು ಎಂದರೆ ತಪ್ಪಾಗಲಾರದು.ಗಾಂಧೀಜಿ ಅಂದಿಗೂ , ಇಂದಿಗೂ ಮಹಾತ್ಮರೇ ಅದರಲ್ಲಿ ಎರಡು ಮಾತಿಲ್ಲ ಆದರೆ ನಾವುಗಳು, ಗಾಂಧೀಜಿ , ಜವಾಹರ್ ಲಾಲ್ ನೆಹರು ಅವರನ್ನು ವಿಜೃಂಭಿಸಿ ಬರೆದಷ್ಟು ಪಟೇಲರ ಬಗ್ಗೆ ಬರೆಯಲಿಲ್ಲ , ಕಡೆಗೆ ವಿಜೃಂಭಿಸಿ ಬರೆಯದಿದ್ದರೂ ಅವರ ಏಕೀಕರಣದ ಕೊಡುಗೆಗೆ ತಕ್ಕನಾದ ಗೌರವ ಕೊಟ್ಟಿದ್ದೇವೆಯೇ? ಎಂದು ಆತ್ಮಸಾಕ್ಷಿಯಾಗಿ ಕೇಳಿ ಕೊಳ್ಳಬೇಕು ,ಕೊಟ್ಟೀಲವೆಂದಲ್ಲ ಆದರೆ ಸ್ವಂತಂತ್ರಾ ನಂತರ ನಾವುಗಳು ಪ್ರಧಾನ ಮಂತ್ರಿಯೊಬ್ಬರಿಗೆ ಕೊಟ್ಟಷ್ಟು ಪ್ರಚಾರವನ್ನು ಸ್ವಾತಂತ್ರಾ ಸಂಗ್ರಾಮದಿಂದಾದಿಯಾಗಿ ಹಿಡಿದು ಭಾರತದಏಕೀಕರಣವಾಗುವವರೆಗೂ ಶ್ರಮಿಸಿ , ನಿಭಾಯಿಸಿದ ವಲ್ಲಭಾಯಿ ಪಟೇಲರಿಗೆ ನಾವು ತಕ್ಕದಾದಗೌರವ ಕೊಟ್ಟಿದ್ದೇವೆಯೇ? , ಅವರ  ಸೇವಾ ಕೈಕರ್ಯವನ್ನು ಮನೆ ಮನಗಳಿಗೆ ತಲುಪಿಸಿದ್ದೇವೆಯೇ ಎಂದು ಪಕ್ಷಾತೀತವಾಗಿ ಕೇಳಿಕೊಳ್ಳಬೇಕು, ನೀವು ಕೂತುಹಲಕ್ಕಾಗಿ"ನ್ಯಾಷನಲ್ ಬುಕ್ ಟ್ರಸ್ಟ್" ಹೊರತರುವ "ಇಂಡಿಯಾ ಇಯರ್ ಬುಕ್ " ಅನ್ನು ಗಮನಿಸಬೇಕು  ಸುಮಾರು ಐವತ್ತರಿಂದ,  ನೂರು ಯೋಜನೆಗಳಿಗೆ ಹೆಸರು ಒಂದೋ ಜವಾಹರ್ ಲಾಲ್ ನೆಹರು  ಹಾಗು ಇಂದಿರಾ ಗಾಂಧಿ ಯವರದು ಇಲ್ಲವೋ ರಾಜೀವ್ ಗಾಂಧಿಯವರ ಹೆಸರಲ್ಲಿರುತ್ತದೆ  , ಅವರ ಹೆಸರಿಡಬಾರದೆಂದಲ್ಲ ಈ ದೇಶ ಕಂಡ ಪ್ರಧಾನ ಮಂತ್ರಿಗಳವರು ಆದರೆ ಎಷ್ಟು ಯೋಜನೆಗಳಿಗೆ ? ಎಷ್ಟು ವರ್ಷ ? ಅವರಷ್ಟೇ ಅಥವಾ ಅವರಿಗಿಂತ ಹೆಚ್ಚು ದೇಶ ಸೇವೆಯಲ್ಲಿ ತೊಡಗಿಸಿಕೊಂಡ ಮಹಾನ್ ಚೇತನಗಳ ಹೆಸರು ಮುನ್ನೆಲೆಗೆ ಬರಬೇಕಲ್ಲವೇ? ಆ ಮೂಲಕವಾದರೂ ಇಂದಿನ , ಮುಂದಿನ ಪೀಳಿಗೆಯವರಿಗೆ ಅವರ ಹೆಸರನ್ನು ಪರಿಚಯಿಸುವ ಆದ್ಯ ಕೆಲಸವನ್ನು   ಪಕ್ಷಾತೀತವಾಗಿ ಹಾಗು ಜಾತ್ಯತೀತವಾಗಿ ಮಾಡುವುದು ಸರ್ಕಾರದ ಕೆಲಸವಾಗಬೇಕು.

ಹಾಗೆ ನೋಡಿದರೆ ಸ್ವಾತಂತ್ರ್ಯ ನಂತರ ಪ್ರಧಾನ ಮಂತ್ರಿಯ ಪದವಿ ತನ್ನಿಂದ ತಾನೇ ಪಟೇಲರಿಗೆ ಒಲಿದು ಬರಬೇಕಿತ್ತು , ಆದರೆ ಅದು ಆಗಲಿಲ್ಲ, ಹೀಗೇಕೆ? ಗಾಂಧೀಜಿವರಿಗೆ ಪಟೇಲರ ಮೇಲೆ ಪ್ರೀತಿ ವಿಶ್ವಾಸವಿರಲಿಲ್ಲ ಎಂದಲ್ಲ ಹಾಗು ಪಟೇಲರಿಗೆ ದೇಶದ ಮಹತ್ವದ ಹುದ್ದೆ ನಿರ್ವಹಿಸುವ ಚಾಕಚಕ್ಯತೆ ಇರಲಿಲ್ಲವೆಂದಲ್ಲ , ಖೇಡಾ ಸತ್ಯಾಗ್ರಹ , ಬಾರ್ದೋಲಿಯ ಸತ್ಯಾಗ್ರಹ ಹಾಗು ಇತರೆ ಚಳುವಳಿಗಳಲ್ಲಿ ಪಟೇಲರ ಚಾಕಚಕ್ಯತೆಯನ್ನುಗಾಂಧೀಜಿ ಬಹಳ ಹತ್ತಿರದಿಂದ ನೋಡಿ ಬಲ್ಲವರಾಗಿದ್ದರು, ಬಾರ್ದೋಲಿಯ ಸತ್ಯಾಗ್ರಹವಂತೂ ಪಟೇಲರಿಗೆ "ಸರ್ದಾರ್" ಎಂಬ ಬಿರುದನ್ನೂ ಕೊಟ್ಟಿತ್ತು , ಅದಲ್ಲದೆ ಗುಜರಾತ್ನ ಜನತೆ ಪಟೇಲರಿಗೆ ಪ್ರೀತಿಯಿಂದ "ಸುಬ" ಎಂದು ಕರೆಯುತ್ತಿದ್ದರು, "ಸುಬ" ಅಂದರೆ ರಾಜ ಮತ್ತು ಉತ್ತಮ ಆಡಳಿತಗಾರ ಎಂದು ಇದೆಲ್ಲವೂ ಕಣ್ ಮುಂದೆ ರಾಚುವಂತಿದ್ದರು ಅಂದು ಪ್ರಧಾನಿಯಾಗಬೇಕೆಂದು ಗಾಂಧೀಜಿ ಬಯಸಿದ್ದು ಜವಾಹರ್ಲಾಲ್ ರನ್ನು, ಇದಕ್ಕಕಾರಣವೇನೆಂದು ಹುಡುಕಲು ಹೊರಟರೆ ಇಂದು ಮಹಾತ್ಮರು ಇಲ್ಲ ಮಹಾತ್ಮರ ನೆರಳಿನಂತೆ ಹಗಳಿರಲು ಶ್ರಮಿಸಿದ ಪಟೇಲರು ಇಲ್ಲ , ಆದರೆ ಗಾಂಧಿ  ಕೂಡ ಒಬ್ಬ ಹುಲುಮಾನವ ಎಂದು ಮರೆಯಬಾರದು ಈ ಮಾತನ್ನು ಏಕೆ ಹೇಳಿದೆನೆಂದರೆ , ತಪ್ಪುಗಳು ಮನುಷ್ಯರಿಂದಲೇ ಆಗುವುದೇ ಹೊರತು ಮರಗಳಿಂದಲ್ಲ , ಗಾಂಧೀಜಿವರಿಗೆ ಅಂದಿದ್ದ ಸಂಧಿಗ್ಧ ಪರಿಸ್ಥಿತಿಗಳೇನೋ ಬಲ್ಲವ್ರ್ಯಾರು , ಗಾಂಧೀಜಿಯವರ ಹೆಸರು ಸೂರ್ಯ ಚಂದ್ರರಿರುವವರೆಗೂ ಸ್ಥಾಯಿಗಾಗಿರಲಿದೆ ಅದು ಅವರ ದೇಶಸೇವೆ ಮತ್ತು ಪ್ರತಿಪಾದಿಸಿದ ಅಹಿಂಸಾ ನಿಲುವಿಗೆ ಸಲ್ಲಬೇಕಾದ ಗೌರವ ಕೂಡ ಹೌದು , ಆದರೆ ಗಾಂಧಿ ನೆಹರುರಂತೆಯೇ , ಪಟೇಲ್ ,ಶಾಸ್ತ್ರೀಜಿ , ಭಗತ್ ಸಿಂಗ್ , ಚಂದ್ರಶೇಖರ್ ಆಜ್ಹಾದ್, ಸಾವರ್ಕರ್ , ಬಲವಂತ ಫಡಕೆ  ಇವರ ಹೆಸರುಗಳು ಸ್ಥಾಯಿಯಾಗಿರಬೇಕಲ್ಲವೇ?  ಮೇಲ್ನೋಟಕ್ಕೆ ಅಂದು  ೩೦೦೦ ಕೋಟಿ ರೂಪಾಯಿಯ ಪ್ರಾಜೆಕ್ಟ್ (ಪಟೇಲರ ಮೂರುತಿ ) ಎಂದರೆ ತುಸು ಹೆಚ್ಚಾಯಿತೇನೋ ಅನಿಸುವುದು ಸಹಜವೇಎಂದು ಯಾರು ಬೇಕಾದರೂ ಹೇಳಬಹುದು ಆದರೆ ಎಕನಾಮಿಕ್ಸ್ನ ಗೊಡವೆಗೆ ಹೋಗದೆ ಒಂದು ಕ್ಷಣ ಯೋಚನೆ ಮಾಡಬೇಕು , ಬಹುಶ ಅಂದು ಭಾರತದ  ಏಕೀಕರಣದ ಸಂಕಲ್ಪ ಪಟೇಲರು ಮಾಡದಿದ್ದರೆ ನಮ್ಮ ಭಾರತದ ನಕ್ಷೆಯನ್ನು ನಾವು ಊಹಿಸಲು ಅಸಾಧ್ಯವಾಗುತ್ತಿತು,  ಕಾಶ್ಮೀರದ ವಿಷಯದಲ್ಲಿ ಆದ ಅಚಾತುರ್ಯದ ನಡೆ ಸ್ವಾತಂತ್ರ ಸಿಕ್ಕ ನಂತರವೂ ಮಗ್ಗುಲ ಹುಣ್ಣಿನಂತೆ ಎಡೆಬಿಡದೆ ನಮ್ಮನು ಕಾಡುತ್ತಿದೆ , ಅದಕ್ಕೆ ವ್ಯಯಿಸಿದ ಕೋಟಿಗಳೆಷ್ಟೋ? ಹೀಗೆ ಕೆಲವೊಂದು ವಿಷಯವನ್ನು ಹಾಗು ಕೆಲವರ ವ್ಯಕ್ತಿತ್ವವನ್ನು ಆರ್ಥಿಕ ಹಿನ್ನಲೆಯಲ್ಲಿ ನೋಡುವುದು ತಪ್ಪಾಗಬಹುದು ಅವರ ವ್ಯಕ್ತಿತ್ವ ನಡೆ ನುಡಿ ಬಿಟ್ಟು ಹೋದ ಮೌಲ್ಯಗಳು ಎಂದೆಂದಿಗೂ ಬೆಲೆ ಕಟ್ಟಲಾಗದು ಸರ್ದಾರ್ ಪಟೇಲರ ಜೀವನದ ಕೆಲವು ನಿರ್ಧಿಷ್ಟ ಸನ್ನಿವೇಶಗಳನ್ನು ಸೂಕ್ಷ್ಮವಾಗಿಅವಲೋಕಿಸಿದರೆ ನಮಗೆ  ಅವರ ಯೋಚನಾ ಲಹರಿ ಮತ್ತು  ಆಡಳಿತ ವ್ಯಕರಿ ಹೇಗಿತ್ತೆಂದು ತಿಳಿಯಲು ಸಹಾಯ ಮಾಡುತ್ತದೆ.

ಅದು ೧೯೧೫ ರ ಸಮಯ ಗಾಂಧಿ ಮತ್ತೆ ಭಾರತಕ್ಕೆ ಹಿಂತಿರುಗಿದ್ದರು, ಸೌತ್ ಆಫ್ರಿಕಾದಲ್ಲಿ ಅವರ ಸತ್ಯಾಗ್ರಹ ಹೋರಾಟದ ಮೂಲಕ ದೇಶದೆಲ್ಲೆಡೆ ಹೆಸರು ಮಾಡಿದ್ದರು, ಇಡೀ ದೇಶಕ್ಕೆದೇಶವೇ ಗಾಂಧಿ ಗುಣಗಾನ ಮಾಡುತಿತ್ತು , ಗಾಂಧೀಜಿ ಅವರ ಸರಳತೆ ಸತ್ಯಾಗ್ರಹದಲ್ಲಿದ್ದನಂಬಿಕೆ ಹೀಗೆ ಎಲ್ಲವನ್ನು ಜನರು ಬೆರಗು ಕಣ್ಣಲ್ಲಿ ನೋಡುತ್ತಿದ್ದರು , ಆದರೆ ವಲ್ಲಭರಿಗೆ ಇದ್ಯಾವದು ಅಷ್ಟಾಗಿ ಆಕರ್ಷಿಸಿರಲಿಲ್ಲ ಮತ್ತು ಅವರ ಧೋರಣೆಗಳನ್ನು ಅಷ್ಟಾಗಿ ಅಪ್ಪಿಕೊಂಡಿರಲಿಲ್ಲ , ಬಹುಷ್ಯ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಧೋರಣೆಯ ಮನೋಸ್ಥಿತಿಯಿಂದ ಹಾಗಾಗಿರಬೇಕು , ಆದರೆ ಮುಂದೆ ಚಂಪಾರಣ್ಯದ ಗಾಂಧೀಜಿಯವರ ಹೋರಾಟ ವಲ್ಲಭ್ ಭಾಯ್ ಪಟೇಲರ ಮೇಲೆ ಘಾಡವಾಗಿ ಪರಿಣಾಮ ಬೀರಿತು, ತದ ನಂತರ ವಲ್ಲಭಭಾಯ್ ಪಟೇಲರು ಗಾಂಧಿಯವರೊಡನೆ ಒಡಗೂಡಿ ಖೇಡಾ ಚಳುವಳಿ, ರೌಲತ್ ಕಾಯಿದೆಯ ವಿರುದ್ಧ ಹೋರಾಟ, ಅಸಹಕಾರ ಚಳುವಳಿ ಹೀಗೆ ಹತ್ತು ಹಲವು ಚಳುವಳಿಗಳಲ್ಲಿ ಗಾಂಧಿ ನೆರಳಿನಂತೆ ಭಾಗವಹಿಸಿದರು,

ಸ್ವತಂತ್ರ ಸಂಗ್ರಾಮದಲ್ಲಿ ಅವರ ದೇಶ ಪ್ರೇಮ ಅವರ ರೋಮ ರೋಮಗಳಲ್ಲಿ ಹರಡಿತ್ತು, ಸರ್ದಾರ್ ಪಟೇಲರು ಯಾವುದನ್ನೂ ಅಷ್ಟು ಸೂಕ್ಷ್ಮವಾಗಿ ಅಳೆದು ತೂಗಿ ನೋಡದೆ ಒಪ್ಪಿಕೊಳ್ಳುತ್ತಿರಲಿಲ್ಲ, ಸರ್ದಾರ್ ಎಂದರೆ ತಾಳ್ಮೆ ಮತ್ತು ಸರ್ದಾರ್ ಎಂದರೆ ಪ್ರಶ್ನೆ , ಯಾವುದನ್ನೂ ಮತ್ತು ಯಾರನ್ನಾದರೂ ಪ್ರಶ್ನಿಸಲು ಹಿಂದೆ ಮುಂದೆ ನೋಡುತ್ತಿರಲಿಲ್ಲ , ಬ್ರಿಟಿಷ್ ಅಧಿಕಾರಿಗಳಂತೂ ಅವರ ಪ್ರಶ್ನೆಗಳಿಗೆ ಕಂಗಾಲಾಗಿಬಿಡುತ್ತಿದ್ದರಂತೆ, ಒಬ್ಬ ಬ್ರಿಟಿಷ್ ಅಧಿಕಾರಿಯಂತು ಪಟೇಲರಿಗೆ ಶಿಕ್ಷೆ ಕೊಡಬೇಕಾಗಿ ಬಂದಾಗ ಪಟೇಲರ ಮುಂದೆ ಅವರಿಗೆ ಕೊಡಮಾಡುವ ದಂಡನೆಯನ್ನು ಓದಲಾಗದೆ , ಹಾಳೆಯಲ್ಲಿ ಬರೆದು ಎದ್ದು ಹೋಗಿದ್ದನಂತೆ , ಅದು ಪಟೇಲರಿಗಿದ್ದ ವರ್ಚಸ್ಸು ಮತ್ತುಶಕ್ತಿ.

ಇನ್ನೊಂದು ಘಟನೆ ೧೯೪೭ರಲ್ಲಿ ಇನ್ನೇನು ಸ್ವತಂತ್ರ ಬಂದೆ ಬಿಟ್ಟಿತು, ಎಂಬ ಅಭಿಪ್ರಾಯಎಲ್ಲೆಡೆ ಕಾಣುತ್ತಿತ್ತು. ಆಗ ಸ್ವತಂತ್ರ ಹೋರಾಟಗಾರರು ಹಾಗು ಮುತ್ಸದ್ಧಿಗಳಾದ ಹಾರ್ನಳ್ಳಿ ರಾಮಸ್ವಾಮಿಗಳು ದೆಹಲಿಗೆ ಸೇವಾದಳ ಶಿಬಿರಕ್ಕೆ ಹೋಗಿದ್ದರಂತೆ ಅಲ್ಲಿ ನಡೆದಎರಡು ಘಟನೆಗಳನ್ನು ಅವರು ಹೀಗೆ ವಿವರಿಸುತ್ತಾರೆ ,  ಲಕ್ಷಾಂತರ ನಿರಾಶ್ರಿತರು ದೆಹಲಿಯ ಹಾದಿ ಬೀದಿಗಳಲ್ಲಿ ಓಡಾಡುತ್ತಿದ್ದರು, ನೆಹರು ಒಂದು ಬೀದಿಯಲ್ಲಿ ಹಾಗೆ ಹಾದುಹೋಗುತ್ತಿದ್ದರಂತೆ, ಒಂದು ಹೆಣ್ಣು ಮಗು ರಸ್ತೆಯಲ್ಲಿ ಹರಕಲು ಬಟ್ಟೆ ಹಾಕಿಕೊಂಡು ಅಳುತ್ತ ನಿಂತಿತ್ತು, ನೆಹರುಅವರಿಗೆ ಈ ದ್ರಶ್ಯ ಕಂಡು ಸಂಕಟವಾಗಿ , ಆ ಹುಡುಗಿಯನ್ನುಕರೆದು ಕಾರಿನಲ್ಲಿ ಕುಳ್ಳಿರಿಸಿ ಮನೆಗೆ ಹೋಗಿ , ಊಟ ಬಟ್ಟೆ ಕೊಡಿಸಿ ಕಳುಹಿಸಿದರಂತೆ ಮತ್ತೊಂದು ರಸ್ತೆಯಲ್ಲಿ ಹಾದು ಹೋಗುತಿದ್ದ ಪಟೇಲರ ಕಣ್ಣಿಗೂ ಅಂತಹುದೇ ದೃಶ್ಯ ಕಂಡು ಬಂದಿತಂತೆ , ಆದರೆ ಪಟೇಲರು ಒಬ್ಬರನ್ನು ಮಾತಾಡಿಸಲಿಲ್ಲ , ನೇರ ಅವರ ಕಚೇರಿಗೆ ಹೋಗಿಸೈನ್ಯದ ಕಮಾಂಡೆಂಟ್ ಅವರನ್ನು ಕರೆದು ನಾಳೆ ಬೆಳಗ್ಗೆ ಒಳಗೆ ಹತ್ತು ಸಾವಿರವಿರಲಿ, ಇಪ್ಪತ್ತು ಸಾವಿರವಿರಲಿ ಎಷ್ಟು ಬೇಕು ಅಷ್ಟು ಅಗತ್ಯವಿದ್ದ ಟೆಂಟುಗಳನ್ನು ಹಾಕಿ , ಆ ಅನಾಥರ ತಲೆಯ ಮೇಲೆ ನೆರಳಿರಬೇಕು , ಪ್ರತಿಯೊಬ್ಬರಿಗೂ ಊಟ ಒದಗಿಸಬೇಕು , ನಾಳೆ ಹತ್ತು ಗಂಟೆಯ ಒಳಗೆ ನನಗೆ ಇದರ ವರದಿ ಬರಬೇಕು ಎಂದು ಆದೇಶಿಸದ್ದರಂತೆ , ಹೀಗೆ ಈ ಸನ್ನಿವೇಶವೇ ಸಾಕು ಪಟೇಲರ ಯೋಚನಾ ಲಹರಿ ವ್ಯಕ್ತಿತ್ವ ಹೇಗಿತ್ತೆಂದು ತಿಳಿದು ಕೊಳ್ಳಲು ಹೀಗೆ ಅಪಾರ ತಾಳ್ಮೆಯ , ಕಠೋರ ನಡೆ ನುಡಿಯ ಮತ್ತು ಅಪಾರ ರಾಜತಾಂತ್ರಿಕ ಗುಣಗಳನ್ನು ಮೈಗೂಡಿಸಿಕೊಂಡ ಪಟೇಲರಿಗೆ ಆಗಿದ್ದು ಹೆಜ್ಜೆ ಹೆಜ್ಜೆಗೆ ದೊಡ್ಡ ಹುದ್ದೆಯ ಮರೀಚಿಕೆ, ಇನ್ನೇನು ಕಾಂಗ್ರೆಸ್ ಪಕ್ಷದ (ಸ್ವತಂತ್ರ ಪೂರ್ವದಲ್ಲಿ ) ಅಧ್ಯಕ್ಷರಾಗಬೇಕು ಎನ್ನುವಶ್ಟರಲ್ಲಿ ಅಧ್ಯಕ್ಷರಾದವರು ಮೋತಿಲಾಲ್ ನೆಹರು, ಇನ್ನೇನು ಯಾರ ವಿರೋಧವು ಇಲ್ಲದೆ ಸ್ವತಂತ್ರ ಭಾರತದ ಪ್ರಧಾನಿಯಾಗಬೇಕು ಎಂದು ಕೊಂಡಾಗ ಪ್ರಧಾನಿಯಾದದ್ದು  ನೆಹರು , ಒಮ್ಮೆ ಹಾಗೆ ಊಹಿಸಿಕೊಳ್ಳಿ ಈ ಪರಿಸ್ಥಿತಿ ಇಂದೇನಾದರೂ ಇದ್ದಿದ್ದರೆ ಕ್ಷಣ ಕ್ಷಣಕ್ಕೂ ಹೊಸ ತಿರುವು , ರೆಸಾರ್ಟ್ ರಾಜಕೀಯಕ್ಕೆ ಕ್ಷಣ ಗಣನೆ ಎಂಬ ವಾರ್ತೆ ,

ಅಂದಿಗೂ ಇಂದಿಗೂ ಇರುವ ವ್ಯತಾಸವಿದೆ , ಇಂಥಹವರೊಬ್ಬರಿದ್ದರು ಮತ್ತು ಅವರ ಚಾಣಾಕ್ಷ ನಡೆಗಳಿಂದಲೇ ಛಿದ್ರ ಛಿದ್ರವಾಗಿ ಹರಿದು ಹೋಗಬಹುದಾಗಿದ್ದ ಭಾರತದ ಭೂಪಟವು  ಯಾರಿಂದಲೂ ಛಿದ್ರ ಗೊಳಿಸಲಾಗದಷ್ಟು ಘಟ್ಟಿಯಾದ ತಳಪಾಯದ ಮೇಲೆ ನಿಂತುಕೊಂಡಿದೆ ಎಂಬುದನ್ನು ಮುಂದೆ ಹುಟ್ಟುವ ಪ್ರತಿ ಮಗುವಿಗೂ ತಿಳಿಯಬೇಕಲ್ಲವೇ, ಇಂತಹ ಮಹಾನ ಮುತ್ಸದ್ದಿಗಳು ಕೂಡ ರಾಜಕೀಯದ ಅಂಗಳದಲಿದ್ದರು ಎಂದು ಮುಂದಿನ ಪೀಳಿಗೆಗೆ ಸಾರಿ ಸಾರಿ ಹೇಳಬೇಕಲ್ಲವೇ, ಈಗ ಹೇಳಿದರೆ ಆಳಿಗೊಂದು ಕಲ್ಲು ಎಂಬಂತೆ ಬಿಡ್ರಿ ಅವರ ಕೈಯಲ್ಲಿ ಪವರ್ ಇತ್ತು ಬರಲ್ಲ ಅಂದರೆ ಮಿಲಿಟರಿ ಕಳುಹಿಸ್ತೀನಿ ಅಂತಿದ್ರು ಆಮೇಲೆ ರಾಜಾರು ಹೆದರಿ ಭಾರತದ ಒಕ್ಕೂಟಕ್ಕೆ ಸೇರಿಕೊಳ್ಳುತ್ತಿದ್ದರು ಎಂದು ಆದರೆ ಇಂದು ಸುಸಜ್ಜಿತವಾದ ಪೊಲೀಸ್ ಪಡೆ, ಬೇಹುಗಾರಿಕೆ ಎಲ್ಲವನ್ನು ಇಟ್ಟುಕೊಂಡು ಗ್ರಹ ಇಲಾಖೆಯನ್ನು ಮುನ್ನಡೆಸುವುದೆಂದರೆ ಕಾಯ್ದ ಕಬ್ಬಿಣದ ಸಲಾಕೆಯ ಮೇಲೆ ಹೆಜ್ಜೆಯಿಟ್ಟಂತೆ ಎಂಬುದು ಕಹಿ ಸತ್ಯ.

ಆದರೆ ಪಟೇಲರು ದೇಶದ ಪ್ರಪ್ರಥಮ ಗ್ರಹ ಮಂತ್ರಿಯಾದಾಗ ದೇಶದೆಲ್ಲೆಡೆ ತಂಡವವಾಡುತ್ತಿದದು ಅರಾಜಕತೆ, ಮತೀಯ ಗಲಭೆ , ಗಾಂಧೀಜಿ ಸಾವು, ಏಕೀಕರಣದ ಸಮಸ್ಯೆ , ಆಂತರಿಕ ಭದ್ರತೆ ಹೀಗೆ ಇಂತಹ ಹತ್ತು ಹಲವು ಸವಾಲುಗಳಿದ್ದರು ಭಾರತವನ್ನು ದಡ ಸೇರಿಸಿದ ಸರದಾರ ಸರ್ದಾರ್ವ ಲ್ಲಭ್ ಭಾಯ್ ಪಟೇಲ್ , ಅಸಲಿಗೆ ಜನಸಾಮಾನ್ಯರಲ್ಲಿ ವಲ್ಲಭರಿಗೆ ಅನ್ಯಾಯವಾಗಿದೆ ಎಂದು ಅಭಿಪ್ರಾಯ ಬರಲು ಈ ಒಂದು ಸರಳ ಘಟನೆಯೇ ಸಾಕು ೧೯೫೪ ರಲ್ಲಿ ಭಾರತ್ ಸರ್ಕಾರವು "ಭಾರತ ರತ್ನ" ಎಂಬ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸ್ಥಾಪಿಸಿತು , ಆದರೆ ಅದನ್ನು ಕೊಡ ಮಾಡುವ ಸರ್ಕಾರಮಾಡಿದ್ದೇನು? ೧೯೫೫ ರಲ್ಲಿ ನೆಹರು ತಮಗೆ ತಾವೇ ಆ ಪ್ರಶಸ್ತಿ ಕೊಟ್ಟು ಕೊಂಡರು, ಆಗಅವರಿಗೆ ಗತಿಸಿ ಹೋದ ಭಾರತದ ಬಿಸ್ಮಾರ್ಕ್ ಪಟೇಲರು ಕಾಣಲಿಲ್ಲವೇ? ಹೋಗಲಿ ೧೯೭೧ ರಲ್ಲಿ ಇಂದಿರಮ್ಮನ್ನು ಕೂಡ ಭಾರತರತ್ನವನ್ನು ತಮಗೆ ತಾವೇ ಕೊಡ ಮಾಡಿ ಕೊಂಡರು ಅಂದರೇನು ಅರ್ಥ ? ಆದರೆ ನರಸಿಂಹ ರಾಯರು ಕೊಂಚ ಮಟ್ಟಿಗೆ ಸಮಾಧಾನ ಪಡುವಂತೆ ೧೯೯೧ ರಲ್ಲಿ ಸರದಾರ್ಪ ಟೇಲರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಿದರು ಅದೇನೋ ಸರಿ ಆದರೆ ರಾಯರಿಗೆಯಾರ ಒತ್ತಡವಿತ್ತೋ ಕಾಣೆ ರಾಜೀವ್ ಗಾಂಧಿಯವರಿಗೂ ಭಾರತ್ ರತ್ನ ಪ್ರಶಸ್ತಿ ಕೊಡಬೇಕಾಗಿಬಂತು, ಹೀಗೆ ಸದ್ದಿಲ್ಲದೇ ನಮ್ಮ ಸ್ವತಂತ್ರ ಸಂಗ್ರಾಮದ ನಿಜ ನಾಯಕರನ್ನು ಮುನ್ನೆಲೆಗೆತರುವ ಪ್ರಯತ್ನಕ್ಕೆ ಎಳ್ಳು ನೀರು ಬಿಡುವ ಪ್ರಯತ್ನ ಮೊದಲಿನಿಂದಲೂ ಸಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ  ಅದು  ಬದಲಾಗಿದೆ. ಈ ರೀತಿಯ ಬದಲಾವಣೆ ಅವಶ್ಯವು ಹೌದು ಇಲ್ಲವಾದಲ್ಲಿ ಮುಂದಿನ ಪೀಳಿಗೆಗಳಿಗೆ ಭರವಸೆಯ ಬೆಳಕನ್ನು ತೋರಿಸಲು "ಐಕಾನ್" ಗಳೇ ಇಲ್ಲದಂತಾಗುತ್ತದೆ , ಆದ್ದರಿಂದ ಕೆಲವೊಮ್ಮೆ ಇಂತಹ ಮಹಾನ್  ನಾಯಕರ  ಬಗ್ಗೆ ಯಾವುದಾದರು ಕಾರ್ಯಕ್ರಮ ಹಮ್ಮಿಕೊಂಡಾಗ ಇಂತಹ ಕಾರ್ಯಕ್ರಮವನ್ನು ಕೇವಲ ಆರ್ಥಿಕ ನೆಲೆಯಲ್ಲಿ ನೋಡದೆ, ಕಟ್ಟಿಕೊಟ್ಟ ಮೌಲ್ಯಗಳ ಹಿನ್ನಲೆಯಲ್ಲಿ ನೋಡಬೇಕು , ಅದು ಮುಂಬರುವ ದಿನಗಳಲ್ಲಿ ಪ್ರಾಮಾಣಿಕತೆ, ದೇಶಪ್ರೇಮ, ತ್ಯಾಗ, ಬಲಿದಾನದ ಮೌಲ್ಯಗಳ ಬೀಜಬಿತ್ತಲು ಸಹಕಾರಿಯಾದೀತು...

ಕಾರ್ತಿಕ್ ಎಸ್ ಬಾಪಟ್