ಮಾಯಾ ನಗರಿ ಮುಂಬೈ ನಲ್ಲಿ ಗ್ಲೋಬಲ್ ಫ಼ಿನ್ ಟೆಕ್ ಹಬ್ಬ .
ಭಾರತ ವಿಶ್ವಗುರು ಆಗುವುದೋ ಇಲ್ಲವೋ ಎಂಬ ಪ್ರಶ್ನೆಯನ್ನು ಬದಿಗೊತ್ತಿ, ಭಾರತ ಟೆಕ್ ಗುರು ಆಗುವುದೇ ಎಂದು ಯಾರಾದರೂ ಕೇಳಿದರೆ ಮರುಮಾತಿಲ್ಲದೆ ಉತ್ತರ ಹೌದು ಎಂಬುದೇ ಆಗಿರುತ್ತದೆ, ಅದರಲ್ಲೂ ಮುಂಬೈನ ಬಿ ಕೆ ಸಿ ಯಲ್ಲಿ ನಡೆದ ಮೂರು ದಿನಗಳ ಟೆಕ ಉತ್ಸವ "ಗ್ಲೋಬಲ್ ಫಿನ್ಟೆಕ್ ಫೆಸ್ಟ್" ನಡೆದ ರೀತಿ ನೋಡಿದರೆ ಭಾರತದ ಮೇಲೆ ತಾಯಿ ಸರಸ್ವತಿಯ ವಿಶೇಷ ಅನುಗ್ರಹ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಸಾಮಾನ್ಯವಾಗಿ ಲೋಕ ರೂಢಿಯಾಗಿ ಹೇಳುವ ಮಾತು ಬೆಂಗಳೂರಿನ ಜನಸಂದಣಿಯಲ್ಲಿ ನಿಂತು ಒಂದು ಕಲ್ಲು ಎಸೆದರೆ ಅದು ಟೆಕ್ಕಿ ಯ ಮೇಲೆ ಬೀಳುವ ಸಂಭವವೇ ಹೆಚ್ಚು, ಅಂತೆಯೇ ಮೊನ್ನೆ ನಡೆದ ಫಿನ್ಟೆಕ್ ಉತ್ಸವದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನ ಸುತ್ತ ಮುತ್ತಲಿನ ಹೋಟೆಲ್ನಲ್ಲಿ ಹಾಗು ಜನಸಂದಣಿ ಯಲ್ಲಿ ನೀವು ಯಾರಿಗಾದರೂ ಸುಮ್ಮನೆ ಮಾತಾಡಿಸಿದರೆ ಅದು ದೇಶದ ವಿದೇಶದಿಂದ ಬಂದ CEO, CTO, ಪ್ರಾಡಕ್ಟ್ ಹೆಡ್, ಸ್ಟಾರ್ಟ್ -ಅಪ್ ಗಳ ಉದ್ಯೋಗಿಗಳು, ಮಾರ್ಕೆಟಿಂಗ್ ಮ್ಯಾನೇಜರ್ ಗಳು , ಐಟಿ ಸಲಹೆಗಾರರು, ಆರ್ಕಿಟೆಕ್ಟ್ ಗಳು ಹಾಗು ನಾನಾ ವಿಭಾಗಗಳಲ್ಲಿ ಪರಿಣಿತಿ ಹೊಂದಿದ್ದ ಪ್ರತಿನಿಧಿಗಳಾಗಿದ್ದರು. ಅದರಲ್ಲೂ ಮಾತಾಡಿಸಿದವರಲ್ಲಿ ಸಿಂಹ ಪಾಲಿನಷ್ಟು ಜನ ಹೇಳಿದ್ದು ನಾವು ಬೆಂಗಳೂರಿನಲ್ಲಿ ಡೆವಲಪ್ಮೆಂಟ್ ಸೆಂಟರ್ ಹೊಂದಿದ್ದೇವೆ ಎಂದು ಹಾಗು ಬಹಳಷ್ಟು ಕಂಪನಿಗಳು ಬೆಂಗಳೂರಿನದವೇ ಆಗಿದ್ದವು. ಅಷ್ಟರಮಟ್ಟಿಗೆ ಬೆಂಗಳೂರಿಗೆ ಬೆಂಗಳೂರೇ ಸಾಟಿ.ಪಿ ಸಿ ಐ (ಪೇಮೆಂಟ್ ಕೌನ್ಸಿಲ್ ಒಫ್ ಇಂಡಿಯಾ - PCI ), ಏನ್ ಪಿ ಸಿ ಐ (ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಒಫ್ ಇಂಡಿಯಾ NPCI ) ಹಾಗು ಎಫ್ ಸಿ ಸಿ ( ಫ಼ಿನ್ಟೆಕ್ ಕನ್ವರ್ಜೆನ್ಸ್ ಕೌನ್ಸಿಲ್ ಒಫ್ ಇಂಡಿಯಾ - FCC ) ಸಹಭಾಗಿತ್ವದಲ್ಲಿ ನಡೆದ ಫಿನ್ಟೆಕ್ ಉತ್ಸವದಲ್ಲಿ ಬರೋಬ್ಬರಿ 80000 ಜನ ಮೂರು ದಿನಗಳ ಕಾಲ ಪಾಲ್ಗೊಂಡಿದ್ದರು. ಇದೆಲ್ಲದರ ಶ್ರೇಯಸ್ಸುಪಿ ಸಿ ಐ , ಏನ್ ಪಿ ಸಿ ಐ ಹಾಗು ಎಫ್ ಸಿ ಸಿ ಯೊಂದಿಗೆ ಆರ್ ಬಿ ಐ ಗೂ ಸೇರಬೇಕು , ಸಾಮಾನ್ಯವಾಗಿ ಯಾವುದೇ ದೇಶದ ಸೆಂಟ್ರಲ್ ಬ್ಯಾಂಕ್ ಗಳೊಂದಿಗೆ ಮುಕ್ತವಾಗಿ ವ್ಯವಹರಿಸುವುದು ತುಸು ಕಷ್ಟ, ಆದರೆ ನಮ್ಮ ಆರ್ ಬಿ ಐ ಹಾಗಲ್ಲ ಭಾರತದ ಸಮಗ್ರ ಆರ್ಥಿಕತೆಯನ್ನು ನಿಯಂತ್ರಿಸುವುದಲ್ಲದೆ ಕಾಲದಿಂದ ಕಾಲಕ್ಕೆ ನವ ನವೀನ ಆವಿಷ್ಕಾರಗಳನ್ನು ಬಳಸಿಕೊಂಡು ಅದನ್ನು ಆರ್ಥಿಕತೆಯ ಅವಿಭಾಜ್ಯ ಅಂಗವಾಗಿ ಪೋಣಿಸುವ ಹಾಗು ಪ್ರೋತ್ಸಾಹಿಸುವ ಕೀರ್ತಿಯೂ ಸಹ ಆರ್ ಬಿ ಐ ಗೆ ಸಲ್ಲಬೇಕು . ಅಂತಹ ಪ್ರಯತ್ನದ ಭಾಗವೇ ಏನ್ ಪಿ ಸಿ ಐ. ಏನ್ ಪಿ ಸಿ ಐ ಅಂದರೆ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಒಫ್ ಇಂಡಿಯಾ ಹಾಗಂದರೆ ಪಕ್ಕನೆ ಗೊತ್ತಾಗಲಿಕ್ಕಿಲ್ಲ ಆದರೆ ಯು ಪಿ ಐ ಅಥವಾ ಭೀಮ್ ಅಪ್ಲಿಕೇಶನ್ (BHIM) ಅಂದರೆ ಎಲ್ಲರಿಗೂ ಅರ್ಥವಾಗುತ್ತದೆ. ಈ ಯು ಪಿ ಐ ಪೇಮೆಂಟ್ ಸಿಸ್ಟಮ್ ಎಂಬುವುದು ಏನ್ ಪಿ ಸಿ ಐ ಕೊಡುಗೆ, ಹಾಗೆ ನೋಡಿದರೆ ಏನ್ ಪಿ ಸಿ ಐ ಎಂಬ ಸಂಸ್ಥೆ 2007 ರಲ್ಲಿಯೇ ಅಸ್ಥಿತ್ವಕ್ಕೆ ಬಂದಿತ್ತು ಮೊದಲು ಈ ಸಂಸ್ಥೆ ಆರ್ ಬಿ ಐ ನ ಅಂಗ ಸಂಸ್ಥೆ ಐ ಡಿ ಆರ್ ಬಿ ಟಿ ಅಡಿಯಲ್ಲಿ ಕಾರ್ಯ ನಿರ್ವಹಿಸುತಿತ್ತು ಆದರೆ 2009 ರಲ್ಲಿ ಆರ್ ಬಿ ಐ ನ ನ ನೇರ ಅಂಗ ಸಂಸ್ಥೆಯಾಗಿ ಮಾರ್ಪಾಡಾದ ನಂತರ ಪೇಮೆಂಟ್ ಲೋಕದಲ್ಲಿ ಅಚ್ಚರಿಗಳ ಮೇಲೆ ಅಚ್ಚರಿಯನ್ನು ಸೃಷ್ಟಿಸುತ್ತ ಬಂದಿತು. ಅದರಲ್ಲೂ 2016 ರಲ್ಲಿ ಪರಿಚಯಿಸಿದ ಯು ಪಿ ಐ ಪೇಮೆಂಟ್ಸ್ ಸಿಸ್ಟಮ್ ಭಾರತದಲ್ಲಿ ಫ಼ಿನ್ ಟೆಕ್ ಕ್ರಾಂತಿಗೆ ನಾಂದಿ ಹಾಡಿತು ಎಂದರೆ ತಪಲ್ಲ, ಪರಿಣಾಮವಾಗಿ ಇಂದು ಭಾರತದ ಯು ಪಿ ಐ ಪೇಮೆಂಟ್ಸ್ ಸಿಸ್ಟಮ್ ದೇಶ ವಿದೇಶಗಳಲ್ಲಿ ಡಿಂಡಿಮ ಬಾರಿಸಿದೆ. ಇದೀಗ ಮೊನ್ನೆ ನಡೆದ ಮೂರು ದಿನಗಳ ಗ್ಲೋಬಲ್ ಫ಼ಿನ್ಟೆಕ್ ಫೆಸ್ಟಿವಲ್ ನಲ್ಲಿ ಭಾರತ್ ಬಿಲ್ ಪೆ ಫಾರ್ ಬಿಸಿನೆಸ್ ಹಾಗು ಯು ಪಿ ಐ ಸರ್ಕಲ್ ಎಂಬ ಎರಡು ಉತ್ಪನ್ನಗಳ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಮುಂದಿನ ದಿನಗಳಲ್ಲಿ ಯು ಪಿ ಐ ನಂತೆಯೇ ವ್ಯಾಪಾರಸ್ಥರಿಗೂ ಹತ್ತು ಹಲವು ಅನುಕೂಲವನ್ನು ಹಾಗು ಇದರ ಸುತ್ತಲೇ ಈ ವ್ಯವಹಾರಗಳಿಗೆ ಸಂಬಂಧ ಪಟ್ಟ ಪೆಟಿಎಂ , ಫೋನ್ ಪೆ , ಭಾರತ್ ಪೆ ಅಂತೆಯೇ ಇನ್ನಷ್ಟು ವ್ಯಾಪಾರ ವ್ಯವಹಾರ ಕೇಂದ್ರಿತ ಫ಼ಿನ್ಟೆಕ್ ಕಂಪನಿಗಳ ಉಗಮಕ್ಕೆ ನಾಂದಿ ಹಾಡಿದರೆ ಯಾರು ಆಶ್ಚರ್ಯ ಪಡಬೇಕಾಗಿಲ್ಲ.ಯು
ಪಿ ಐ ಪರಿಚಯದಿಂದ
ಆದ ಇನ್ನೊಂದು ಅತಿ ದೊಡ್ಡ ಉಪಕಾರವೆಂದರೆ,
ಬೇಕೋ ಬೇಡವೋ ಬೀದಿ ಬದಿಯ ವ್ಯಪಾರಿಯೂ
ಬ್ಯಾಂಕ್ನಲ್ಲಿ ಖಾತೆ ತೆರೆಯುವ ಅವಶ್ಯಕತೆಯನ್ನು
ಹುಟ್ಟು ಹಾಕಿದ್ದು, ಪರಿಣಾಮವಾಗಿ ಅಸಂಘಟಿತ ವ್ಯಾಪಾರಿಗಳು ಬ್ಯಾಂಕಿಂಗ್ ಪರಿಧಿಯ ಒಳಗೆ ಒಳಗೊಳ್ಳುವಂತಾಗಿ
ದಳ್ಳಾಳಿಗಳಿಂದ ಸಾಲ ಪಡೆಯುವ ಪರಿಪಾಠ
ಕೊಂಚ ಮಟ್ಟಕ್ಕೆ ತಗ್ಗಿದಂತಾಯಿತು. ಯು ಪಿ ಐ
ನ ವ್ಯಾಪಕತೆ ಎಷ್ಟರ ಮಟ್ಟಿಗಿದೆಯೆಂದರೆ ಪ್ರಪಂಚದಲ್ಲಿ ನಡೆಯುವ ಒಟ್ಟಾರೆ ರಿಯಲ್
ಟೈಮ್ ಅಂದರೆ ಆಗಿದ್ದಂಗೆ ನೈಜ ಸಮಯದಲ್ಲಿ ನಡೆಯುವ
ಡಿಜಿಟಲ್ ವಹಿವಾಟಿನಲ್ಲಿ ಭಾರತದ
ವಹಿವಾಟು ಅರ್ಧದಷ್ಟಿದೆಯಂತೆ, ಅಂದರೆ ಭಾರತದ
ಡಿಜಿಟಲ್ ಮೂಲಭೂತ
ಸೌಕರ್ಯಗಳು ಮುಂದುವರಿದ
ದೇಶದ ಡಿಜಿಟಲ್ ಕ್ಷಮತೆಯನ್ನೇ ಮೀರಿಸಿದೆ. ಅಲ್ಲದೆ ಭಾರತದ ಫಿನ್ಟೆಕ್ ಕ್ಷೇತ್ರದ
ಬೆಳವಣಿಗೆ ಕಳೆದ ಒಂದು ದಶಕದಲ್ಲಿಯೆ
ಸರಿ ಸುಮಾರು 500 ಪಟ್ಟು ಬೆಳೆದಿದೆ ಹಾಗು $31 ಶತಕೋಟಿ
ಹೂಡಿಕೆಗಳನ್ನು ಫಿನ್ಟೆಕ್ ಕ್ಷೇತ್ರ
ಆಕರ್ಷಿಸಿದೆ. ಇದೆಲ್ಲವನು ಗಮನಿಸಿದರೆ ಅತೀ ಶೀಘ್ರದಲ್ಲಿ
ಭಾರತ ಜಾಗತಿಕ
ಫಿನ್ಟೆಕ್ ಕ್ಷೇತ್ರದ
ಪವರ್ಹೌಸ್ ಆಗುವುದರಲ್ಲಿ ಯಾವುದೇ
ಅನುಮಾನ ಬೇಡ.
ಒಟ್ಟಾರೆಯಾಗಿ ಆಗಸ್ಟ್ 28 ,29 ಹಾಗು 30 ರಂದು ಮುಂಬೈ ನ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಫಿನ್ಟೆಕ್ ಹಬ್ಬ ಹಲವಾರು ಭರವಸೆಗಳನ್ನು ಹುಟ್ಟು ಹಾಕಿದೆ. ಕಾರ್ಯಕ್ರಮದಲ್ಲಿ ಆಧಾರ್ ಪರಿಕಲ್ಪನೆಯ ಹರಿಕಾರ ನಂದನ್ ನೀಲಕೇಣಿ ಮಾತನಾಡಿ ಫಿಂಟೆರ್ನೆಟ್ ಎಂಬ ಪರಿಕಲ್ಪನೆಯನ್ನು ಎಳೆಎಳೆಯಾಗಿ ವಿವರಿಸಿದರು. ಈ ಫಿಂಟೆರ್ನೆಟ್ ಪರಿಕಲ್ಪನೆ ಯೆಶಸ್ವಿಯಾಗಿ ಅಳವಡಿಸಿದ್ದೆ ಆದರೆ ಮುಂಬರುವ ದಿನಗಳಲ್ಲಿ ಹಣಕಾಸು ವ್ಯವಸ್ಥೆಯ ಭವಿಷ್ಯವನ್ನೇ ಬದಲಾಯಿಸಲಿದೆ, ಹಾಗಾದರೆ ಏನಿದು ಫಿಂಟೆರ್ನೆಟ್ ಅಂದರೆ ನೀವು ಒಂದು ಬ್ಯಾಂಕಿನಲ್ಲಿ ಹಣವನ್ನು ಡೆಪಾಸಿಟ್ ಮಾಡಿರುತ್ತೀರಿ ಎಂದಿಟ್ಟುಕೊಳ್ಳಿ ಅದಕ್ಕೊಂದು ಡಿಜಿಟಲ್ ಟೋಕನ್ ಅಳವಡಿಸುವುದು ಅಂದರೆ ನಾಳೆ ಆ ಟೋಕನ್ ಅನ್ನು ನೀವು ಎಲ್ಲಿ ಬೇಕಾದರೂ ವಿನಿಮಯ ಮಾಡಿಕೊಳ್ಳಬಹುದು. ಅಂತೆಯೇ ನಿಮ್ಮ ಆಸ್ತಿ ಪಾಸ್ತಿಗಳಿಗೂ ಒಂದು ಡಿಜಿಟಲ್ ಟೋಕನ್ ಮಾಡುವುದು , ಆ ಮೂಲಕ ಕೊಡು ಕೊಳ್ಳುವಿಕೆಯನ್ನು ಸರಳ ಮಾಡಿ ಯಾವುದೇ ರೀತಿಯ ಆಸ್ತಿ ಪಾಸ್ತಿ ಇರಲಿ ಅದನ್ನು ಟೋಕನೈಸ್ ಮಾಡಿ ಅದನ್ನು ಡಿಜಿಟಲ್ ವ್ಯಾಪ್ತಿಗೆ ಒಳಪಡಿಸುವುದು. ಮೇಲ್ನೋಟಕ್ಕೆ ಇದು ಸಾಧ್ಯವೇ ಎಂದು ಹಲವಾರು ಪ್ರಶ್ನೆಗಳು ಏಳಬಹುದು ಆದರೆ ಯು ಪಿ ಐ ಪ್ರಾರಂಭವಾದಗಲು ಇದೇ ರೀತಿಯ ಪ್ರಶ್ನೆಗಳೆದ್ದಿದ್ದವು, ಆಶ್ಚರ್ಯವೆಂದರೆ ಒಂದಾನೊಂದು ಕಾಲದಲ್ಲಿ ಕಾಂಗ್ರೆಸ್ನ ಕನಸಿನ ಕೂಸಾಗಿದ್ದ ಆಧಾರ ವ್ಯವಸ್ಥೆಯನ್ನು ಬಿ ಜೆ ಪಿ ವಿರೋಧಿಸಿತ್ತು. ಆದರೆ ಅದೇ ಆಧಾರ ಸೌಕರ್ಯವನ್ನು ಬಳಸಿ ಬಿ ಜೆ ಪಿ ಡಿಜಿಟಲ್ ಇಂಡಿಯಾ ಸೃಷ್ಟಿಸಲು ಮುಂದಾದಾಗ ಸಂಸತ್ತಿನಲ್ಲಿ ಅಂದಿನ ಮಾಜಿ ವಿತ್ತ ಸಚಿವ ಚಿದಂಬರಂ ಹಳ್ಳಿಗಳಲ್ಲಿ ವಿದ್ಯುತ ಸೌಕರ್ಯವೇ ಇರುವುದಿಲ್ಲ ಇದೆಲ್ಲ ಹೇಗೆ ಸಾಧ್ಯ ಎಂದು ಪ್ರಶ್ನೆ ಎತ್ತಿದ್ದರು, ಆದರೆ ಇಂದು ಅದು ಸಾಧ್ಯವಾಗಿದೆ ಅಷ್ಟೇ ಅಲ್ಲ ಇಡೀ ಜಗತ್ತೇ ಬೆರಗಾಗಿ ಭಾರತದತ್ತ ನೋಡುತ್ತಿದೆ, ಇಂದು ಜನರಿಗೆ ಆಧಾರ ಕಾಂಗ್ರೆಸ್ನ್ ಕೂಸು ಎಂಬುದು ಮರೆತು ಹೋಗಿದೆ, ಕಾರಣ ವಿರೋಧ ಮಾಡಲೆಂದೇ ವಿರೋಧ ಮಾಡಿದರೆ ಅದು ಹೀಗೆ ಆಗುವುದು.
ಫಿನ್ಟೆಕ್ ಹಬ್ಬದ ಕೊನೆಯ ದಿನ ಪ್ರಧಾನ ಮಂತ್ರಿಗಳು ಮಾತನಾಡಿ ಮಾತನಾಡಿ ನೆರೆದಿದ್ದ ಟೆಕ್ಕಿಗಳ ಕೆಲಸವನ್ನು ಕೊಂಡಾಡಿ ಟೆಕ್ಕಿಗಳಲ್ಲಿ ಇನ್ನಷ್ಟು ಉತ್ಸಾಹ ತುಂಬಿದ್ದು ವಿಶೇಷವಾಗಿತ್ತು. ಅಲ್ಲದೆ ಇದು ಐದನೇ ಫಿನ್ಟೆಕ್ಹಬ್ಬ ಇನ್ನು ಹತ್ತನೇ ಫಿನ್ಟೆಕ್ ಹಬ್ಬಕ್ಕೆ ನಾನು ಬರುತ್ತೇನೆ ಎಂದು ಮೋದಿ ಭರವಸೆ ಕೊಟ್ಟಾಗ ನೆರೆದಿದ್ದ ಟೆಕ್ಕಿಗಳು ಮೋದಿ ಹೈ ತೊ ಮುನ್ಕಿನ್ ಹೈ ಎಂದು ಜಯ ಘೋಷ ಕೂಗಿದರು. ಹತ್ತನೇ ಫಿನ್ಟೆಕ್ ಹಬ್ಬಕ್ಕೂ ನಾನು ಬರುತ್ತೇನೆ ಎಂದು ಪ್ರಧಾನ ಮಂತ್ರಿಗಳು ಹೇಳಿದ ಒಳ ಮರ್ಮ 2029 ಕ್ಕೂ ಮತ್ತೆ ಮೋದಿ ಎಂಬುದಾಗಿತ್ತು . ಅದೇನೇ ಇರಲಿ ನೆರೆದಿದ್ದ ಹಲವರಲ್ಲಿ ಏನಾದರೂ ಸಾಧಿಸುವ ಛಲ ಕಣ್ಣಲಿ ಪ್ರಜ್ವಲಿಸುತಿತ್ತು, ಅದೆಲ್ಲದಕ್ಕೂ ಮಾಯಾನಗರಿ ಮುಂಬೈ ಸಾಕ್ಷಿ ಆಗಿತ್ತು.https://epaper.samyukthakarnataka.com/editionname/Bangalore/SMYK_BANG/page/6/article/SMYK_BANG_20240902_06_1
ಕಾರ್ತಿಕ್
ಎಸ್ ಬಾಪಟ್.

