Thursday, October 10, 2024

 ರ್ ಇಂಡಿಯಾ ಕನಸು ವಿಸ್ತರಿಸುವುದೇ ?



ಕೆಲವೊಂದು ಉದ್ಯಮಗಳಿರುತ್ತವೆ ಅವುಗಳಲ್ಲಿ ಕೆಲವೇ ಕೆಲವರು ಮಾತ್ರ ಪ್ರವೇಶ ಮಾಡಬಹುದು.ಅಂತಹ ಎರಡು ಉದ್ಯಮಗಳೆಂದರೆ ಒಂದು ವಿಮಾನಯಾನ ಮತ್ತೊಂದು ಸುದ್ದಿ ಚಾನಲಗಳು. ವಿಮಾನಯಾನ ಸಂಸ್ಥೆಗಳಿಗೂ ಸುದ್ಧಿ ಸಂಸ್ಥೆಗಳಿಗೂ ತಾಳೆ ಹಾಕುವುದು ಸರಿಯಲ್ಲ, ಆದರೆ ಆ ಸಂಸ್ಥೆಗಳನ್ನು ನಡೆಸುವುದೆಂದರೆ ಮುಳ್ಳಿನ ಮೇಲಿನ ನಡಿಗೆಯಲ್ಲ ಅದು ಕೆಂಡದ ಮೇಲಿನ ನಡಿಗೆಯೇ ಸರಿ. ಏಕೆಂದರೆ ಈ ಸಂಸ್ಥೆಗಳು ತಮ್ಮ ದಿನ ನಿತ್ಯದ ಬೇಕು ಬೇಡಗಳಿಗೆ ಬೇಡುವ ಬಂಡವಾಳ (working capital) ಹಾಗು ಅವುಗಳನ್ನು ಪೂರೈಸುವ ಸವಾಲು ಅದು ಎಷ್ಟೇ ದೊಡ್ಡ ಉದ್ಯಮಿಯಾಗಿರಲಿ ಆತನನ್ನು ಹಣ್ಣು ಹಣ್ಣಾಗಿಸುವುದರಲ್ಲಿ ಸಂಶಯವಿಲ್ಲ. ಅದಕ್ಕೆ  ಉದಾಹರಣೆಗಳೆಂದರೆ ಕಿಂಗ್ ಫಿಷರ್ ಹಾಗು ಜೆಟ್ ಏರ್ವೇಸ್  ಸಂಸ್ಥೆಗಳು. ಮೊದ ಮೊದಲು ಕಿಂಗ್ ಫಿಷರ್  ಸಂಸ್ಥೆ ಅತ್ಯಂತ ಯಶಸ್ವಿಯಾಗುವಂತೆ ಕಾಣುತಿತ್ತು ಆದರೆ ಕಾಲ ಸರಿದಂತೆ ಕಿಂಗ್ ಫಿಷರ್ ಎಲ್ಲ ನೀರಿಕ್ಷೆಗಳನ್ನು ಹುಸಿಗೊಳಿಸಿತು. ಅದೇ ರೀತಿ  ಜೆಟ್ ಏರ್ವೇಸ್ ಕೂಡ  ಕದ ಮುಚ್ಚಿತು. ಸಾವಿರಾರು ಸಿಬ್ಬಂದಿ ವರ್ಗ ಬೀದಿಗೆ ಬಂದರು. ಹಾಗಾದರೆ ವಿಮಾನ ಯಾನ ಸಂಸ್ಥೆಗಳ ಸಮಸ್ಯೆಗಳೇನು  ಎಂದು ನೋಡ ಹೊರಟಾಗ ತತಕ್ಷಣಕ್ಕೆ ಕಂಡು ಬಂದದ್ದು ಇಂಧನದ ದರ ಹಾಗು ವಿಮಾನಗಳ ಸವಕಳಿ ಮತ್ತು ಅವುಗಳ ನಿರ್ವಹಣೆ . ಇದಾಗ್ಯೂ ಕೂಡ ಇಂಡಿಗೋ ಹಾಗು ಸ್ಪೈಸ್ ಜೆಟ್ ಸಂಸ್ಥೆಗಳು ದೇಶಿಯ ವಿಮಾನ ಸಂಪರ್ಕದ ವ್ಯವಹಾರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಲೇ ಇದೆ.  ಏರ್ ಇಂಡಿಯಾ ಟಾಟಾ ತೆಕ್ಕೆಗೆ ಬಂದ ನಂತರ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಎದ್ದು ನಿಂತಿದೆ. ಏರ್ ಇಂಡಿಯಾ ಕಳೆದ ವರುಷಕ್ಕೆ ಹೋಲಿಸಿದರೆ ಈ ವರುಷದಲ್ಲಿ ಸುಮಾರು 60 % ನಷ್ಟವನ್ನು ತಗ್ಗಿಸಿಕೊಂಡು ತನ್ನ ಕನಸುಗಳನ್ನು ವಿಸ್ತಾರಗೊಳಿಸುವತ್ತ  ಹೆಜ್ಜೆ ಹಾಕಿದೆ . ಹೀಗೆ ವಿಮಾನ ಯಾನ ಸಂಸ್ಥೆಗಳ ಬೆಳವಣಿಗೆ ಅತ್ಯಂತ ಆಶಾದಾಯಕವಾಗಿ ಕಾಣುತ್ತಿವೆ, ಆದರೆ ಇವು ಇತಿಹಾಸದತ್ತ ಒಮ್ಮೆ ತಿರುಗಿ ಇತರೆ ಸಂಸ್ಥೆಗಳು ಮಾಡಿದ ಅಜಾಗರೂಕ ನಿರ್ಣಯಗಳನ್ನ ಗಮನಿಸಿ ಅಂತಹ ನಿರ್ಣಯಗಳಿಗೆ ಆಹುತಿಯಾಗದೆ ಮುನ್ನಡೆದರೆ ಒಳಿತು. ಅದರಲ್ಲೂ ಏರ್ ಇಂಡಿಯಾ ಹಾದಿಯಲ್ಲಿರುವ ಸವಾಲುಗಳು ನಾನಾ ವಿಧವಾದದ್ದು ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸಂಸ್ಥೆ ಮತ್ತೆ ತನ್ನ ತೆಕ್ಕೆಗೆ ತೆಗೆದು ಕೊಂಡಾಗ ಟಾಟಾ ಸಂಸ್ಥೆಯ ಪರಿಸ್ಥಿತಿ  ಸಂತೋಷ ಹಾಗು ದುಃಖ ಗಳ ಮಿಶ್ರಣದ ಹೂರಣದಂತಿದ್ದಿರಬೇಕು. ಏಕೆಂದರೆ   ಏರ್ ಇಂಡಿಯಾ ಗೂ ಟಾಟಾ ಸಂಸ್ಥೆ ಗೂ ಒಂದು ಕರಳು ಬಳ್ಳಿಯ ಸಂಬಂಧವಿದೆ. ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ವಿಮಾನಯಾನ ಸಂಸ್ಥೆ ಪ್ರಾರಂಭಿಸಿದ್ದೆ  ದಿ ಗ್ರೇಟ್  ಜೆ ಆರ್ ಡಿ ಟಾಟಾ. 1930 ರ ದಶಕದಲ್ಲಿ ಭಾರತದ ಮೊದಲ ವಾಣಿಜ್ಯ ವಿಮಾನಯಾನ ಸಂಸ್ಥೆಯನ್ನು  ಪ್ರಾರಂಭಿಸಿದ ಕೀರ್ತಿ ಟಾಟಾ ಏರ್ಲೈನ್ಸ್ ಗೆ ಸಲ್ಲುತ್ತದೆ. ಫೆಬ್ರವರಿ 1929 ರಲ್ಲಿ ಜೆಆರ್‌ಡಿ ತನ್ನ ಪೈಲಟ್‌ ಪರವಾನಗಿಯನ್ನು ಪಡೆದು 1932 ರಲ್ಲಿ ಕರಾಚಿಯ ಡ್ರಿಗ್ ರೋಡ್ ಏರೋಡ್ರೋಮ್‌ನಿಂದ ಅಹಮದಾಬಾದ್ ಮೂಲಕ ಮುಂಬೈನ ಜುಹು ಏರ್‌ಸ್ಟ್ರಿಪ್‌ಗೆ ಟಾಟಾ ಏರ್ ಸರ್ವಿಸಸ್‌ನ ಮೊದಲ ಹಾರಾಟವನ್ನು ಪ್ರಾಯೋಗಿಕವಾಗಿ ನಡೆಸುವ ಮೂಲಕ ಇತಿಹಾಸವನ್ನು ನಿರ್ಮಿಸಿ ಟಾಟಾ ಏರ್ಲೈನ್ಸ್ಗೆ ಚಾಲನೆ ನೀಡಿದರು. 1946 ರಲ್ಲಿ ಇದನ್ನು ಏರ್-ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. ಎರಡು ವರ್ಷಗಳ ನಂತರ, ಟಾಟಾ ಸರ್ಕಾರದ ಸಹಯೋಗದೊಂದಿಗೆ ಏರ್-ಇಂಡಿಯಾ ಇಂಟರ್ನ್ಯಾಷನಲ್ ಅನ್ನು ಸ್ಥಾಪಿಸಿತ್ತು.

ಐದೇ ಐದು ವರ್ಷಗಳ ನಂತರ  ಇತ್ತ ಸಮಾಜವಾದಿಯು ಅಲ್ಲದ  ಅತ್ತ ಬಂಡವಾಳ ಶಾಹಿಯು ಅಲ್ಲದ ಸರ್ಕಾರದ ಇಬ್ಬಗೆಯ ನೀತಿ ವಾಯುಯಾನ ಉದ್ಯಮವನ್ನು ರಾಷ್ಟ್ರೀಕರಣಗೊಳಿಸಲು ನಿರ್ಧರಿಸಿ ಟಾಟಾ ಕನಸಿಗೆ ತಣ್ಣೀರೆರಚಿತ್ತು, ಅಲ್ಲದೆ  ಟಾಟಾರವರನ್ನೇ ಏರ್-ಇಂಡಿಯಾದ ಅಧ್ಯಕ್ಷರಾಗುವಂತೆ ಸರ್ಕಾರ ಕೇಳಿಕೊಂಡಿತು.ಅವರು 1978 ರವರೆಗೆ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿಯೂ ಇದ್ದರು ಮತ್ತು ಸಣ್ಣ ಸಣ್ಣ ವಿಷಯಗಳ ಬಗ್ಗೆ ಅತ್ಯಂತ ಆಸ್ಥೆಯಿಂದ ತಮ್ಮ ಸಲಹೆಗಳನ್ನು ಕೊಟ್ಟು ಏರ್ ಇಂಡಿಯಾದ ಉನ್ನತಿಗಾಗಿ ಶ್ರಮಿಸಿದ್ದರು. ಆದರೆ ಅವರ ಸೇವೆಯನ್ನು ಅವರಿಗೆ ಒಂದು ಮಾತು ತಿಳಿಸದೇ ಅಂದಿನ ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿ ರದ್ದುಗೊಳಿಸಿದ್ದರು. ಕೆಲವೊಮ್ಮೆ ನಾವುಗಳು ಯಾರು ಸಂಸ್ಥೆಗಳ ಉನ್ನತಿಯನ್ನು ಬಯಸುತ್ತಾರೋ ಅಂತವರನ್ನೇ ಕೈ ಬಿಡುತ್ತೇವೆ ಇದು ನಮ್ಮ ದುರ್ದೈವವೇ ಸರಿ. 1980 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾ ಗಾಂಧಿ ಟಾಟಾ ಅವರನ್ನು ಪುನಃ ನೇಮಿಸಿಕೊಂಡರು. ಕಾಲನು ಕ್ರಮದಲ್ಲಿ ವಿಮಾನ ಯಾನ ಉದ್ಯಮದಲ್ಲಿ ಮತ್ತೆ ಖಾಸಗಿ ಸಂಸ್ಥೆಗಳು ಲಗ್ಗೆ ಇಟ್ಟವು ಕೆಲವು ಉಳಿದವು ಇನ್ನು ಕೆಲವು ದಿವಾಳಿಯಾದವು ಹೀಗೆ ಸಾಲು  ಸಾಲು ವಿಮಾನ ಯಾನ ಸಂಸ್ಥೆಗಳು ದಿವಾಳಿಯಾದಾಗ ಅವುಗಳ ಮೇಲೆ ಕಣ್ಣಿಟ್ಟ ಸರ್ಕಾರ ಅವುಗಳ ಸಂಸ್ಥಾಪಕರನ್ನೋ ಅಥವಾ ಸಂಸ್ಥೆಗಳಿಗೆ ಹಣಕಾಸು ಸಹಾಯ ಮಾಡಿದ ಸಂಸ್ಥೆಯನ್ನು ಕರೆದು ನಿಲ್ಲಿಸಿ ಹೀಗೇಕೆ ಮತ್ತು ಇದರಲ್ಲಿ ನಿಮ್ಮ ಪಾತ್ರವೇನು  ಎಂದು ಕೇಳಿದ ಉದಾಹರಣೆಗಳಿವೆ ಆದರೆ ತನ್ನ ಹಿತ್ತಲಿನಲ್ಲಿದ್ದ ಏರ್ ಇಂಡಿಯಾದ ಬಗ್ಗೆ ಮಾತ್ರ ಕಾಲದಿಂದ ಕಾಲಕ್ಕೆ ಬೇಲ್ ಔಟ್ ಪ್ಯಾಕೇಜುಗಳನ್ನು ಕೊಟ್ಟು  ದಿವ್ಯ ಮೌನಕ್ಕೆ ಶರಣಾಗುತ್ತಿತ್ತು. ಪರಿಣಾಮ ದಿವಾಳಿಯಾಗುವ ಹಂತಕ್ಕೆ ಬಂದಿದ್ದ ಏರ್ ಇಂಡಿಯಾವನ್ನು ಟಾಟಾ ಸಮೂಹ ಸಂಸ್ಥೆ 2022 ರಲ್ಲಿ ಸ್ವಾಧೀನ ಪಡಿಸಿಕೊಂಡು ಏರ್ ಇಂಡಿಯಾದ ರಕ್ಷಣೆಗೆ ಮುಂದಾಯಿತು. ಅದೇ 2022 ಅಂತ್ಯದಲ್ಲಿ ಆಕಾಸ್ ಏರ್ ಎಂಬ ಸಂಸ್ಥೆ  ವಿಮಾನ ಯಾನ  ಮಾರುಕಟ್ಟೆಯನ್ನು ಪ್ರವೇಶಿಸಿತು. ಅದರ ಅರ್ಥ ಸ್ಪಷ್ಟ ವಿಮಾನ ಯಾನ ಸಂಸ್ಥೆಗಳಲ್ಲಿ ಲಾಭ ಇದ್ದೆ ಇದೆ ಎಂದು ಆದರೆ ಸರ್ಕಾರಗಳು ಏರ್ ಇಂಡಿಯಾ ವಿಷಯದಲ್ಲಿ ನಿರ್ಲಕ್ಷ ವಹಿಸಿತು ಪರಿಣಾಮ ಏರ್ ಇಂಡಿಯಾ ನಷ್ಟದ ಸಂಕೋಲೆಯಿಂದ ಹೊರ ಬರಲಿಲ್ಲ. ಮತ್ತೊಮ್ಮೆ ಟಾಟಾ ಸಮೂಹ ಸಂಸ್ಥೆ ತನ್ನ ಕರಳು ಬಳ್ಳಿ   ಏರ್ ಇಂಡಿಯಾಗಾಗಿ  2013 ರಲ್ಲಿ  ತಾನೇ ಸ್ಥಾಪಿಸಿದ್ದ  "ವಿಸ್ತಾರ" ಎಂಬ ವಿಮಾನ ಯಾನ ಸಂಸ್ಥೆಯ ಕನಸನ್ನು ತನ್ನ ಕೈಯಾರೆ ತಾನೇ ಚಿವುಟಿ ಹಾಕುವ ಒಲ್ಲದ ನಿರ್ಧಾರಕ್ಕೆ ಬಂದಿತು ಪರಿಣಾಮ ವಿಸ್ತಾರ ಹಾಗು ಏರ್ ಇಂಡಿಯಾ ಇಲ್ಲಿಯವರೆಗೂ ಒಟ್ಟೊಟ್ಟಿಗೆ ಸಾಗುತ್ತ ಬಂದಿದೆ ಆದರೆ ಇನ್ನೊಂದು ತಿಂಗಳಲ್ಲಿ ವಿಸ್ತಾರವೆಂಬ ಬ್ರಾಂಡ್ ಏರ್ ಇಂಡಿಯಾದೊಂದಿಗೆ ವಿಲೀನ ಗೊಳ್ಳಲಿದೆ.

ವಿಸ್ತಾರದ ಗ್ರಾಹಕರು ಒಲ್ಲದ ಮನಸ್ಸಿನಿಂದ ವಿಸ್ತಾರದ ಮೆಟ್ಟಿಲಿಳಿಯುತ್ತಿದ್ದಾರೆ, ಕಾರಣವಿಷ್ಟೇ ವಿಸ್ತಾರ ತನ್ನ ಪಯಣದ ಹಾದಿಯಲ್ಲಿ ಹಲವಾರು  ಸವಾಲುಗಳನ್ನು ಎದುರಿಸಿದರು ಗ್ರಾಹಕರತ್ತ ತೋರುತ್ತಿದ್ದ ಉನ್ನತ ದರ್ಜೆಯ ಆತಿಥ್ಯದಲ್ಲಾಗಲಿ  ಅಥವಾ  ಸೌಲಭ್ಯಗಳತ್ತವಾಗಲಿ  ರಾಜಿ ಮಾಡಿಕೊಂಡಿರಲಿಲ್ಲ. ವಿಸ್ತಾರ ಹಾಗು ಏರ್ ಇಂಡಿಯಾ ಎರಡನ್ನು ಒಟ್ಟೊಟ್ಟಿಗೆ ಕೊಂಡೊಯ್ಯಬಹುದಾಗಿತ್ತು. ವಿಸ್ತಾರವನ್ನು ಪ್ರೀಮಿಯಂ ಗ್ರಾಹಕರಿಗಾಗಿ ಹಾಗು ಏರ್ ಇಂಡಿಯಾವನ್ನು  ಇಂಡಿಗೋದಂತೆ ಎಕನಾಮಿಕ್ ವಿಭಾಗದ ಗ್ರಾಹಕರಿಗಾಗಿ ಎಂಬ ತಂತ್ರ ಹೆಣೆಯಬಹುದಿತ್ತು, ಆದರೆ ಟಾಟಾ ಸಂಸ್ಥೆ ಎರಡು ದೋಣಿಯಲ್ಲಿ ಕಾಲಿಟ್ಟು ಸಾಗಲು ಆಸಕ್ತಿ ತೋರುತ್ತಿಲ್ಲ. ಕಾರಣ ಸ್ಪಷ್ಟ ಟಾಟಾ ಗುರಿ ಏನಿದ್ದರೂ  ಏರ್ ಇಂಡಿಯಾವನ್ನು ಪ್ರೀಮಿಯಂ ಬ್ರಾಂಡ್ ಮಾಡುವುದು. ಹಾಗಾದರೆ ವಿಸ್ತಾರದ ಗ್ರಾಹಕ ವಿಸ್ತಾರದ ಮೆಟ್ಟಿಲಿಳಿದು ಏರ್ ಇಂಡಿಯಾ ಮೆಟ್ಟಿಲು ಹತ್ತುವನೇ ? ಕಾದು ನೋಡಬೇಕು  ಕಾರಣ ಏರ್ ಇಂಡಿಯಾ ಬಾಬು ರಾಜ್ ನಿಂದ ಮುಕ್ತವಾಗಿರಬಹುದು ಆದರೆ ಅದರ ಛಾಯೆಯಿಂದಲ್ಲ ಎಲ್ಲದಕ್ಕೂ ಕಾಲವೇ ಉತ್ತರ ಕೊಡಬೇಕು. ವಿಸ್ತಾರದ ಗ್ರಾಹಕ ರನ್ನು ಸೆಳೆಯಲು ಆಕಾಸ್ ಏರ್ ಹೊಂಚು  ಹಾಕಿ ಕುಳಿತಿದೆ. ಟಾಟಾ ತನ್ನದಲ್ಲದ ತಪ್ಪಿಗೆ ಎರಡೆರಡು ಬಾರಿ ತನ್ನ ಕನಸಿನ ಪಯಣವನ್ನು ಅರ್ಧಕ್ಕೆ ಮೊಟಕುಗೊಳಿಸುವಂತಾಗಿದೆ. ಕಾರಣಕ್ಕಾದರೂ ಏರ್ ಇಂಡಿಯಾ ಗೆಲ್ಲಬೇಕು. ಪ್ರಪಂಚದಾದ್ಯಂತ ಗಗನದಲ್ಲಿ ಭಾರತದ ಲೋಹದ ಹಕ್ಕಿ "ಇಂಡಿಯಾ" ಎಂಬ ಹೆಸರನ್ನು ಹೊತ್ತು ಸದ್ದು ಮಾಡಬೇಕು.

 


ಕಾರ್ತಿಕ್ ಎಸ್ ಬಾಪಟ್

No comments:

Post a Comment