Saturday, May 4, 2024

ಬಿ ಜೆ ಪಿ  ಡಬಲ್ ಎಂಜಿನ್ ಮೈಲೇಜಿಗಿಂತ ಹಾನಿ ಹೆಚ್ಚು                                                                           ಕಾರ್ತಿಕ್ ಎಸ್ ಬಾಪಟ್.


ಸಾಮಾನ್ಯವಾಗಿ ಭಾ ಜ ಪ ನಾಯಕರಿಗೆ ನೀವೆಷ್ಟು ಸೀಟು ಗೆಲ್ಲುತ್ತೀರಿ ಎಂದು ಕೇಳಿದರೆ ಅವರ ಗಣತಿ ಪ್ರಾರಂಭವಾಗುವುದೇ 100 ರಿಂದ ಅಂದರೆ ಈ ಬಾರಿ 80 ಕ್ಕೆ 80 ಸೀಟು ಉತ್ತರ ಪ್ರದೇಶದಿಂದ ಹಾಗು ಗುಜರಾತಿನ 26 ಎರಡು ಸೇರಿ 106 ಆದ್ದರಿಂದ ನಮ್ಮ ಗಣತಿ ಪ್ರಾರಂಭವಾಗುವುದು 100 ರಿಂದ ಎಂಬ ಸಿದ್ದ ಉತ್ತರ  ಭಾ ಜ ಪ ನಾಯಕರಲ್ಲಿ ಕಾಣಬಹುದು   , ಅದೇ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ನೀವೆಷ್ಟು ಸೀಟು ಗೆಲ್ಲುತ್ತೀರೆಂದು ಕೇಳಿದರೆ ಅವರ ಗಣತಿ ಪ್ರಾರಂಭವಾಗುವುದು 50 ರಿಂದ ಅದರಲ್ಲಿ ತಮಿಳ್ನಾಡಿನ 39 , ಕೇರಳ ದ 20 ಸೀಟುಗಳು ಆದರೆ ಇದರಲ್ಲಿ ಕಾಂಗ್ರೆಸ್ ನ ಸೀಟುಗಳೆಷ್ಟು ಎಂದು ನೋಡಿದರೆ ಸಿಂಗಲ್ ಡಿಜಿಟ್ , ಹೀಗಾಗಿ ಭಾ ಜ ಪ ನಾಯಕರಲ್ಲಿರುವ ಆತ್ಮವಿಶ್ವಾಸ ಸಾಮಾನ್ಯವಾಗಿ ಕಾಂಗ್ರೆಸ್ ನಾಯಕರಲ್ಲಿ  ಕಂಡು ಬಂದಿದ್ದು ವಿರಳ , ಆದರೆ ಮೊನ್ನೆ ನಡೆದ ಎರಡು ಚರಣಗಳ ಮತದಾನದ ನಂತರ ಕಾಂಗ್ರೆಸ್ ಹಾಗು ಇಂಡಿಯಾ ಮಿತ್ರಕೂಟಗಳ  ಕಾರ್ಯಕರ್ತರಲ್ಲಿ ಮನೆ ಮಾಡಿರುವ  ಆತ್ಮವಿಶ್ವಾಸ   ಭಾ ಜ ಪ ನಾಯಕರನ್ನು ಚಿಂತೆಗೆ ದೂಡಿದೆ , ಹೀಗಾಗಲು ಕಾರಣವೇನು ಎಂದು ಹುಡುಕ ಹೊರಟರೆ ಕಾಣ ಸಿಗುವುದು  ಭಾ ಜ ಪ ದ ಡಬಲ್ ಎಂಜಿನ್ ಸರ್ಕಾರಗಳು.

ಕೇಂದ್ರದಲ್ಲಿ ಹಾಗು ರಾಜ್ಯಗಳಲ್ಲಿ ಒಂದೇ  ಸರ್ಕಾರವಿದ್ದರೆ ಹೆಚ್ಚು ಹೆಚ್ಚು  ಮತ ಶಿಕಾರಿಗೆ  ಸಹಾಯ ಮಾಡುವುದರಲ್ಲಿ ಆಶ್ಚರ್ಯವಿಲ್ಲ ಅದರೊಂದಿಗೆ ಮೋದಿ ಮೇನಿಯಾ ಸೇರಿದರೆ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬುದು ಭಾ ಜ ಪ ಲೆಕ್ಕಾಚಾರವಾಗಿತ್ತು ಈಗಲೂ ಭಾ ಜ ಪ ನೆಚ್ಚಿಕೊಂಡಿರುವುದು ಮೋದಿಯ ಮೇಲೆ ಆದರೆ ಚುನಾವಣೆ ಹತ್ತಿರವಾಗುತ್ತಿಂದಂತೆ ಪ್ರತಿ ಚರಣದಲ್ಲಿ ಹೊಸ ಹೊಸ ಸವಾಲನ್ನು ತಂದೊಡ್ಡುತ್ತಿದೆ. ರಾಷ್ಟೀಯ ವಿಷಯಗಳು ಗೌಣವಾಗಿ ಸ್ಥಾನೀಯ ವಿಷಯಗಳೇ ಮುನ್ನೆಲೆಗೆ ಬರಲಾರಂಭಿಸಿದೆ  ಉದಾಹರಣೆಗೆ ಮಹಾರಾಷ್ಟ್ರ ಎಷ್ಟೇ ಕಷ್ಟವಾದರೂ ಡಬಲ್ ಎಂಜಿನ್ ಸರ್ಕಾರವಿದ್ದರೆ ಒಳ್ಳೆಯದು ಅಂದು ಕೊಂಡು ಭಾ ಜ ಪ  ಶಿವಸೇನೆಯನ್ನೇ  ತನ್ನ ತೆಕ್ಕೆಗೆ ತೆಗೆದು ಕೊಂಡು ಸರ್ಕಾರ ರಚಿಸಿತು , ಪ್ರಾರಂಭದಲ್ಲಿ ಇದೊಂದು ಮಾಸ್ಟರ್ ಸ್ಟ್ರೋಕ್ ನಂತೆ ಕಂಡು ಬಂದಿತ್ತು, ಶಿಂದೆಯನ್ನು  ಮುಖ್ಯಮಂತ್ರಿ ಮಾಡುವ ಮೂಲಕ  ಸಮಸ್ತ ಮರಾಠ ಸಮುದಾಯದ ಮತ ಬ್ಯಾಂಕ್ ತಮ್ಮ ತೆಕ್ಕೆಗೆ ಬರಲಿದೆ ಎಂದು ಭಾ ಜ ಪ ಭಾವಿಸಿತ್ತು, ಹಾಗು ಸ್ವಲ್ಪ ಮಟ್ಟಿಗೆ ಫಡ್ನವಿಸ್ ತಂತ್ರ ಫಲಿಸಿಯೂ ಫಲಿಸಿತ್ತು ಆದರೆ ಚುನಾವಣೆಗೆ ಇನ್ನೇನು ೮ ರಿಂದ ೯ ತಿಂಗಳಿವೆ ಅನ್ನುವಾಗ  ಶರದ್ ಪವಾರ್ NCP ಯನ್ನು  ಅಜಿತ್ ಪವಾರ್ ಮೂಲಕ   ಭಾ ಜ ಪ ತನ್ನ ಆಡಳಿತ ಪಕ್ಷದ ಮಿತ್ರ ಪಕ್ಷವನ್ನಾಗಿಸಿತು, ಬಹುಷ್ಯ ಈ ಬಗೆಯ ನಡೆ ಮಹಾರಾಷ್ಟ್ರದ ಜನತೆ ಎಣಿಸಿರಲಿಲ್ಲ ಒಟ್ಟಿನಲ್ಲಿ ಇದು ಒಂದು ರೀತಿ ಕಿಚಡಿ ಸರ್ಕಾರದ ರೀತಿ ಕಾಣಲಾರಂಭವಾಯಿತು ಮಹಾರಾಷ್ಟ್ರದ ಜನತೆ ಇದು ಅಸ್ಮಿತೆಯ ಸವಾಲು ಎಂಬಂತೆ ನೋಡಲಾರಂಭಿಸಿದರು , ಮಹಾ ಆಗಾಡಿ (ಮಹಾರಾಷ್ಟ್ರದಲ್ಲಿ India ಮಿತ್ರ ಕೂಟದ ಹೆಸರು) ಉದ್ಧವ್ ಠಾಕ್ರೆ ಯನ್ನೇ ಮಹಾರಾಷ್ಟ್ರದ ಮಣ್ಣಿನ ಅಸ್ಮಿತೆಯಂತೆ ಬಿಂಬಿಸತೊಡಗಿತು , ಅದರೊಟ್ಟಿಗೆ ಮನೋಜ್ ಜಾರಂಗೆ ಪಾಟೀಲ್ ನೇತೃತ್ವದ ಮರಾಠ ಮೀಸಲು ಹೋರಾಟ ಭಾ ಜ ಪ ದ ಮಹತ್ವಾಕಾಂಕ್ಷೆಗೆ ದೊಡ್ಡ ಮಟ್ಟದಲ್ಲಿ ಪೆಟ್ಟು ಕೊಟ್ಟಿದೆ ಇದೆಲ್ಲದರ ಪರಿಣಾಮವಾಗಿ ಮಹಾರಾಷ್ಟದಲ್ಲಿ ಭಾ ಜ ಪ ಹಾಗು ಮಿತ್ರ ಪಕ್ಷಗಳು ಅಂದು ಕೊಂಡದ್ದಕಿಂತ ಹೆಚ್ಚು ಶ್ರಮವಹಿಸಬೇಕಾಗಿದೆ. 

ಇನ್ನು ರಾಜಸ್ತಾನದಲ್ಲಿ ಭಾ ಜ ಪ ಗೆ ಖಂಡಿತ ಬಂಪರ್ ಎಂದು ಹೇಳಲಾಗುತ್ತಿತ್ತು ಆದರೆ ವಸುಂದರಾ ರಾಜೇ ಗೆ  ಅಲ್ಲಿ ಮತ್ತೆ ಮಣೆ ಹಾಕಲಿಲ್ಲವೆಂದು  ವಸುಂದರಾ ರಾಜೇ  ಅವರ ಬೆಂಬಲಿಗರು ಶಸ್ತ್ರ ತ್ಯಾಗ ಮಾಡಿರಬಹುದು ಎಂಬ ಅನುಮಾನ ಭಾ ಜ ಪ ನಾಯಕರಲ್ಲಿ ಮನೆ  ಮಾಡಿದೆ, ಅದರೊಂದಿಗೆ ಗೆಹಲೋಟ ಸೋಲಿಸಬಾರದಿತ್ತು ಲೋಕಸಭೆಯಲ್ಲಾದರೂ ಗೆಹಲೋಟ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸೋಣ ಎಂಬ ಸಣ್ಣ ಸಿಂಪಥಿ ಕಾಣುತ್ತಿದೆ   ಅದೇ ರೀತಿ ಮಧ್ಯ ಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಗೆ ಮಣೆ ಹಾಕಲಿಲ್ಲವೆಂಬ ಕೂಗು  ಒಂದಿಷ್ಟು ಸೀಟುಗಳಿಗೆ ಸಂಚಕಾರ ತಂದರೆ ಆಶ್ಚರ್ಯ ಪಡಬೇಕಾಗಿಲ್ಲ, ಅದೇ ರೀತಿ ಜೇ ಡಿ ಯು  (ಜನತಾ ದಾಳ್ ಯುನೈಟೆಡ್ ) ನೊಂದಿಗಿನ ಮೈತ್ರಿ ಬಿಸಿ ತುಪ್ಪವಾಗೇ ಪರಿಣಮಿಸಿದೆ , ಇದು ಭಾ ಜ ಪ ಪಕ್ಷಕ್ಕೆ ಗೊತ್ತಿರಲಿಲ್ಲವೆಂದಲ್ಲ ಮುಂದೆ ಬರುವ ಬಿಹಾರದ ವಿಧಾನಸಭಾ ಚುನಾವಣೆಯನ್ನು ಕೇಂದ್ರೀಕರಿಸಿ ಈ ಮೈತ್ರಿ ಮುಂದಡಿಯಿಟ್ಟಿತ್ತು , ಅಷ್ಟೇ ಅಲ್ಲ ಇಂಡಿಯಾ ಮೈತ್ರಿ ಕೂಟಕ್ಕೊಂದು ಮಾನಸಿಕ ಆಘಾತವನ್ನುಂಟು ಮಾಡಿ ಇಂಡಿಯಾ ಕೂಟದ ಜಂಘಾ ಬಲವನ್ನು ಅಡಗಿಸುವುದು ಭಾ ಜ ಪ ದ ಉದ್ದೇಶವಾಗಿತ್ತು , ಆಗ  ಅದು ಸರಿಯೆಂದೇ ಭಾಸವಾಗುತ್ತಿತ್ತು ಆದರೆ ಬದಲಾದ ಸನ್ನಿವೇಶದಲ್ಲಿ ತೇಜಸ್ವಿಯ ಭಾಷಣಗಳು ಹಾಗು ಸೇರುತ್ತಿರುವ ಜನೋತ್ಸಮ ಭಾಜಪ ಗೆ ನುಂಗಲಾರದ ತುತ್ತಾಗಿ  ಪರಿಣಮಿಸಿದೆ. 


ಇನ್ನು ಉತ್ತರ ಪ್ರದೇಶದ ವಿಷಯಕ್ಕೆ ಬಂದರೆ ಅಲ್ಲಿ ಬೆಹನ್ ಮಾಯಾವತಿ ಮತ್ತೆ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಕೊಂಡಿರುವುದು ಭಾ ಜ ಪ ಗೆ ತಲೆ ಬಿಸಿಯಾಗಿದೆ , ಕಾರಣವಿಷ್ಟೇ ಹಾತಿ ನಹಿ ಗಣೇಶ ಹೈ ಬ್ರಹ್ಮ ವಿಷ್ಣು ಮಹೇಶ ಹೈ ಎಂದು ಸ್ಲೋಗನ್ ಕೊಟ್ಟು ದಲಿತ,ಬ್ರಾಹ್ಮಣ ಹಾಗು ಮುಸ್ಲಿಂ   ಕಾಂಬಿನೇಶನ್ ಅನ್ನು ಹುಟ್ಟು ಹಾಕಿ ಗದ್ದುಗೆ ಏರಿದ್ದ ಬೆಹನ್ ಮಾಯಾವತಿ ಇಂದಿಗೂ ಒಂದಿಷ್ಟು ತನ್ನದೇ ಆದ ವೋಟ್ ಬ್ಯಾಂಕ್ ಹೊಂದಿರುವುದು ತಿಳಿದ ವಿಷಯವೇ ಸರಿ , ಕಳೆದೆರಡು ಚುನಾವಣೆಯಲ್ಲಿ ಅಷ್ಟಾಗಿ ಸಕ್ರಿಯವಾಗಿರದ ಬೆಹನ್ ಮಾಯಾವತಿ ಈ ಬಾರಿ ಅಳೆದು ತೂಗಿ ಕೆಲ ಪ್ರದೇಶಗಳಲ್ಲಿ  ಭಾ ಜ ಪ ದ ಸಕ್ರಿಯ ಕಾರ್ಯಕರ್ತರನ್ನೇ  ತನ್ನ ಪಕ್ಷಕ್ಕೆ ಸೆಳೆದು ಅಭ್ಯರ್ಥಿಯಾಗಿರಿಸಿರುವುದು ಭಾ ಜ ಪ ಗೆ ಒಂದಿಷ್ಟು ಪೆಟ್ಟು ಕೊಡಲಿದೆ , ಬಿ ಯಸ್ ಪಿ ಯ ಶಕ್ತಿ ಏನೆಂದು ಗಮನಿಸಬೇಕಾದರೆ ಕಳೆದ ಬಾರಿಯ ಲೋಕಸಭಾ ಚುನಾವಣೆಯ  ಸಮಾಜವಾದಿ ಪಾರ್ಟಿ ಹಾಗು  ಬಿ ಯಸ್ ಪಿ ಯ ಮೈತ್ರಿಯನ್ನು ಗಮನಿಸಬೇಕು , ಆಗ ಕಾಂಗ್ರೆಸ್ ಒಬ್ಬಂಟಿಯಾಗಿ ಸ್ಪರ್ದಿಸಿತ್ತು , ಅಂದು ಸಮಾಜವಾದಿ ಪಾರ್ಟಿಯ ಮತಗಳು ಮೈತ್ರಿಯ ಹಿನ್ನಲೆಯಲ್ಲಿ  ಬಿ ಯಸ್ ಪಿ ಗೆ ವರ್ಗಾವಣೆ ಯಾಗಿತ್ತು ಆದರೆ ಬಿ ಯಸ್ ಪಿ ಮತಗಳು ಸಮಾಜವಾದಿ ಪಕ್ಷಕ್ಕೆ ವರ್ಗಾವಣೆ ಆಗದೆ ವರ್ಗಾವಣೆ ಆಗಿದ್ದು ಭಾ ಜ ಪ ಪಕ್ಷಕ್ಕೆ, ಈ ವಾದವನ್ನು ಪುಷ್ಟಿಕರಿಸುವ ಇನ್ನೊಂದು ಉದಾಹರಣೆ ಎಂದರೆ ಅಮೇಠಿಯಲ್ಲಿ  ಬಿ ಯಸ್ ಪಿ ಸ್ಪರ್ದಿಸಿರಲಿಲ್ಲ ಅಮೇಠಿಯಲ್ಲಿ ಯಾರೇ ಬಿ ಯಸ್ ಪಿ ಯಿಂದ ನಿಂತರು ಸುಮಾರು 50000 ವೋಟುಗಳನ್ನು ಬಿ ಯಸ್ ಪಿ ಪಡೆಯುತಿತ್ತು , ಕಳೆದ ಬಾರಿಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪರಾಭವಗೊಂಡಿದ್ದು ಅಷ್ಟೇ ವೋಟುಗಳಿಂದ ,ಇದನ್ನು ಅಂದೇ ಅರಿತಿದ್ದ ಅಹ್ಮದ್ ಪಟೇಲ್ ಬಿ ಯಸ್ ಪಿ ಗೆ  ಕ್ಯಾಂಡಿಡೇಟ್ ಹಾಕುವಂತೆ ಹೇಳೋಣ ಎಂದು ರಾಹುಲ್ ಗೆ ಹೇಳಿದ್ದರಂತೆ , ಆದರೆ ರಾಹುಲ್ ನಹಿ ನಹಿ ಸಬ ಕುಚ್ ಟೀಕ್ ಹೈ ಅಂದಿದ್ದರಂತೆ , ಆದರೆ ಇಂದು ಅಳೆದು ತೂಗಿ ಕಾಂಗ್ರೆಸ್  ರಾಯ ಬರೇಲಿಯಿಂದ ರಾಹುಲ್ ಗಾಂಧಿಯನ್ನು ಕಣಕ್ಕಿಳಿಸಿದೆ ಅದೇ ಸಮಯಕ್ಕೆ  ಅಮೇಥಿಯಿಂದ ಗಾಂಧಿ ಹಾಗು ಕಾಂಗ್ರೆಸ್ ಪರಿವಾರದ ನಂಬಿಕಸ್ತ ಕೆ ಎಲ್ ಶರ್ಮರನ್ನು ಕಣಕ್ಕಿಳಿಸಿದೆ , ಆದರೆ ಈ ಬಾರಿ ಅಹ್ಮದ್ ಪಟೇಲ್ ಸೂತ್ರವನ್ನು ರಾಹುಲ್ ಮರೆತಿಲ್ಲ .

     

 
ಹಿಂದೊಮ್ಮೆ ಈರುಳ್ಳಿ ಬೆಲೆ ಗಗನಕ್ಕೇರಿ ದೆಹಲಿಯ   ಶೀಲಾ ದೀಕ್ಷಿತ್ ಸರ್ಕಾರವನ್ನು    ಕೆಡವಿತ್ತು. ಅಂತೆಯೇ ಒಂದು ಹಿಡಿ ಸಕ್ಕರೆ ಹಾಗು ಸಕ್ಕರೆಯ ಆ ಸುಳ್ಳು ವಾಗ್ಧನ  ಸ್ಮೃತಿ ಇರಾನಿಯನ್ನು ಸೋಲಿನಂಚಿಗೆ ತಂದು ನಿಲ್ಲಿಸಿದರೆ ಆಶ್ಚರ್ಯವಿಲ್ಲ , ಅದೇನೇ ಇರಲಿ ಭಾ ಜ ಪ ಆಳದಲ್ಲಿ  ಬಯಸಿದ್ದು ರಾಹುಲ್ ಹಾಗು ಪ್ರಿಯಾಂಕ್  ಅಮೇಥಿ ಹಾಗು ರಾಯ ಬರೇಲಿಯಿಂದ  ಸ್ಪರ್ದಿಸಲಿ ಎಂದು ಹಾಗೆ ಮಾಡುವುದರ ಮೂಲಕ ರಾಹುಲ್ ಹಾಗು ಪ್ರಿಯಾಂಕಾ ಇಬ್ಬರನ್ನು ಆ ಕ್ಷೆತ್ರದಲ್ಲಿಯೇ ಕಟ್ಟಿ ಹಾಕಿ ದೇಶದ ನಾನಾ ಪ್ರದೇಶಗಳಿಗೆ ಹೋಗದಂತೆ ತಡಿಯುವುದು ಭಾ ಜ ಪ ದ ಉದ್ದೇಶವಾಗಿತ್ತು, ಆದ್ದರಿಂದಲೇ ಈ ನಡೆಯನ್ನು ಅರಿತ ಕಾಂಗ್ರೆಸ್ ೧೦೦ ಕ್ಕೆ ೧೦೦ % ಗೆಲ್ಲಬಹುದಾದ  ರಾಯ್ ಬರೇಲಿಯಿಂದ ರಾಹುಲ್ ಗಾಂಧಿಯನ್ನು ಇಳಿಸಿ , ಸ್ಮೃತಿ  ಇರಾನಿಗೆ ಸಿಗಬಹುದಾದ ಪ್ರಚಾರಕ್ಕೆ ತಡೆಯೊಡ್ದಿದಾರೆ   ಯಾರು ಏನೆ ಹೇಳಲಿ ಸದ್ಯದ ಮಟ್ಟಿಗೆ ರಾಹುಲ್ ಹಾಗು ಪ್ರಿಯಾಂಕ್ ಅದರಲ್ಲೂ ಪ್ರಿಯಾಂಕಾ ಗಾಂಧಿಯೇ ಕಾಂಗ್ರೆಸ್ಸಿನವರಿಗೆ ಸ್ಟ್ರಾಂಗ್ ಸ್ಟಾರ್  ಕ್ಯಾಂಪೈನೆರ್ ಎನ್ನುವುದರಲ್ಲಿ ಎರಡು ಮಾತಿಲ್ಲ  . 

ಅದಷ್ಟೇ ಅಲ್ಲ ಈ  ಹಿಂದೆ ವಾಟ್ಸಪ್ ಯೂನಿವೆರ್ಸಿಟಿಯ ಕಪೋಕಲ್ಪಿತ  ಮೆಸೇಜುಗಳು ಭಾ ಜ ಪ ಕ್ಕೆ ಬೇಕೋ ಬೇಡವೋ  ಒಂದಿಷ್ಟು ಸಹಾಯ ಮಾಡಿದ್ದೂ ನಿಜ  ಆದರೆ ಈ ಬಾರಿ ಅದೇ ವಾಟ್ಸಪ್ ಯೂನಿವೆರ್ಸಿಟಿಯ ಕಪೋಕಲ್ಪಿತ ಮೆಸೇಜುಗಳು ಭಾ ಜ ಪ ಗೆ ಒಂದಿಷ್ಟು ಡ್ಯಾಮೇಜ್ ಮಾಡುತ್ತಿವೆ , ಪರಿಣಾಮವಾಗಿ  ಯೋಗಿ ಬ್ರಿಗೇಡ್ ಮೊದಲೆರಡು ಚುನಾವಣಾ  ಚರಣಗಳಲ್ಲಿ ಕೈ ಕಟ್ಟಿ ಕುಳಿತಿತ್ತಂತೆ.

ಅದೇನೇ ಇರಲಿ ಉತ್ತರ ಪ್ರದೇಶದಲ್ಲಿ  ಮತದಾರರಿಗೆ ಮೋದಿ ಬಗ್ಗೆ ಯಾವ ಬೇಸರವೂ ಇಲ್ಲ  ಯೋಗಿ ಬಗ್ಗೆಯಂತೂ ಇಲ್ಲವೇ ಇಲ್ಲ ಆದರೆ ಬೇಸರವಿದ್ದರೆ ಅದು ಅಲ್ಲಿನ ಸಂಸದರ ಮೇಲೆ ಹಾಗು ತಾಂಡವವಾಡುತ್ತಿರುವ  ಬೆಲೆಯೇರಿಕೆ ಹಾಗು ನಿರುದ್ಯೋಗದ ಸಮಸ್ಯೆಯ ಮೇಲೆ  ಆದ್ದರಿಂದ  ಯಾವ ನಿರ್ಣಯವು ತೆಗೆದು ಕೊಳ್ಳದೆ ಕಂಪೌಂಡಿನ ಮೇಲೆ ಕುಳಿತಿರುವ ಮತದಾರ ಯೋಗಿ ಹಾಗು ಮೋದಿ ನೋಡಿ ಮತಗಟ್ಟೆಯತ್ತ  ಹೋದರೆ ಭಾ ಜ ಪ ಗೆ   ದೆಹಲಿಯ  ದಾರಿ ಸಲೀಸು   ಆದರೆ ಮತದಾರ  ಅಲ್ಲಿನ ಸಂಸದರ  ಹಾಗು ಜ್ವಲಂತ ಸಮಸ್ಯೆಯ ನೋಡಿ  ಮತಗಟ್ಟೆಗೆಯತ್ತ  ನಡೆದರೆ ಡಬಲ್ ಎಂಜಿನ್ ಇದ್ದರು ದೆಹಲಿಯ ದಾರಿ ಕಷ್ಟ ಕಷ್ಟ.

ಕಾರ್ತಿಕ್ ಎಸ್ ಬಾಪಟ್ .





No comments:

Post a Comment