ಆರೋಪಿಗಳ ನಿಲುವು , ಎಚ್ಚರಿಕೆಯ ಗಂಟೆ ಯಾರಿಗೆ ?
2019
ರಲ್ಲಿಯೇ ಯುಎಪಿಎ (ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ
ಕಾಯ್ದೆ) ಅಡಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ
ಚಟುವಟಿಕೆಗಳಿಗೆ ಹಣ ಒದಗಿಸಿದ ಆರೋಪದ ಮೇಲೆ ಇಂಜಿನಿಯರ್
ರಶೀದ್ ಬಂಧನವಾಗಿತ್ತು. ಹಾಗೆ ನೋಡಿದರೆ ರಶೀದ್ ರಾಜಕೀಯ
ಪ್ರವೇಶ ಇದೇ ಮೊದಲಲ್ಲ 2013 ರಲ್ಲಿಯೇ ಅವಾಮಿ ಇತಿಹಾದ್ ಪಾರ್ಟಿ (AIP) ಯನ್ನು ಹುಟ್ಟು ಹಾಕಿದ್ದುಂಟು
ಅದಕ್ಕೂ ಮುಂಚೆ 2008 ಹಾಗು 2014 ರಲ್ಲಿ ಲ್ಯಾನ್ಗಟೆ
ಕ್ಷೇತ್ರದಿಂದ ಶಾಸಕರಾಗಿಯೂ ಆಯ್ಕೆಯಾಗಿದ್ದುಂಟು,
ಆದರೆ ಆಗ ಯುಎಪಿಎ ಅಡಿಯಲ್ಲಿ ಜೈಲು ಸೇರಿರಲಿಲ್ಲ,
ಹಾಗಾದರೆ ಬಾರಾಮುಲ್ಲಾಅಂತಹ ಕ್ಷೇತ್ರದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾರಂತಹ
ನಾಯಕನ ವಿರುದ್ಧ ಭಾರಿ ಅಂತರದಿಂದ ಗೆದ್ದಿದ್ದು ಹೇಗೆ
ಎಂದು ನೋಡ ಹೊರಟರೆ ಕಾಣುವುದು ಅದೇ ಸಹಾನುಭೂತಿ ರಾಜಕಾರಣ. ಜೈಲಿನ ಸರಳುಗಳು ಕೆಲವೊಮ್ಮೆ ಎಂತೆಂತವರನ್ನು
ಏನೇನೊ ಮಾಡಿ ಹಾಕುತ್ತವೆ. ಶೇಕ್ ಅಬ್ದುಲ್ ರಶೀದ್ (ರಶೀದ್ ಇಂಜಿನಿಯರ್) ಕಂಬಿಗಳ ಹಿಂದೆ ಇದ್ದರು ಚುನಾವಣೆಯನ್ನು
ಸಂಪೂರ್ಣವಾಗಿ ನಡೆಸಿದ್ದು ರಶೀದ್ ಮಕ್ಕಳು. ಅಬ್ರಾರ ಹಾಗು ಅಸ್ರಾರ್ ರಶೀದ್ ಇಬ್ಬರು ಸೇರಿ
"ಜೈಲ್ ಕೆ ಬದ್ಲಾ ವೋಟ್ ಸೆ " ಎಂಬ ಘೋಷವಾಕ್ಯಗಳನ್ನು ಹುಟ್ಟು ಹಾಕಿ ಜನರನ್ನು ಭಾವನಾತ್ಮಕವಾಗಿ
ಕಟ್ಟಿ ಹಾಕಿದರು, ಅಲ್ಲದೆ ಅಲ್ಲಿನ ಜನರಿಗೆ ಒಮರ್ ಅಬ್ದುಲ್ಲಾ ವಿರುದ್ಧವಾಗಿ ಮತ ಚಲಾಯಿಸಬೇಕಾಗಿತ್ತು,
ಹತ್ತು ಹಲವು ಅವಕಾಶಗಳಿದ್ದರೂ ಒಮರ್ ಅಬ್ದುಲ್ಲಾ ಸರ್ಕಾರ ಕಾಶ್ಮೀರದ ಅಭಿವೃದ್ಧಿಯ ಬಗ್ಗೆ ಚಿಂತಿಸಲಿಲ್ಲ, ಅಂತಹ ಸಂದರ್ಭದಲ್ಲಿ ರಶೀದ್ ಇಂಜಿನಿಯರ್ ಯುಎಪಿಎ ಕಾಯ್ದೆಯಲ್ಲಿ
ಬಂಧಿತರಾಗಿರುವುದು ಮುಖ್ಯ ವಿಷಯವಾಗಲೇ ಇಲ್ಲ, ಇದು ವಿಪರ್ಯಾಸ. ಇಲ್ಲದ್ದಿದರೆ ಶತ್ರು ದೇಶದ ಭಯೋತ್ಪಾದಕರಿಗೆ ಹಣ ಒದಗಿಸಿದ
ಆರೋಪವನ್ನು ಹೊತ್ತಿರುವ ವ್ಯಕ್ತಿಯನ್ನು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವುದೆಂದರೆ
ಇದರ ತರ್ಕವೇನು? ತರ್ಕವಿಷ್ಟೇ ಒಮ್ಮೆ ಅಧಿಕಾರ ವಿರೋಧಿ ಅಲೆಯೆದ್ದರೆ ಆತನ ಮುಂದಿರುವ ವ್ಯಕ್ತಿ ಯಾರೆಂದು
ಜನರು ನೋಡುವುದಿಲ್ಲ ಅವರಿಗೆ ಆಳುವ ಹಾಗು ಆಳಿದ ಸರ್ಕಾರದ
ಅಹಂಕಾರಕ್ಕೆ ಆ ಕ್ಷಣಕ್ಕೆ ಮತಗಳ ಮೂಲಕ ಮದ್ದರೆಯುವದೇ ಏಕೈಕ ಧ್ಯೇಯವಾಗುತ್ತದೆ ಹಾಗು ಕೆಲವೊಮ್ಮೆ ಕೆಲವು
ಪಿತೂರಿಗಳನ್ನು ನಡೆಸಿ ನಡೆಯದೆ ಇದ್ದದನ್ನು ಇದೇ ನಡೆದದ್ದು ಎಂದು ಚಿಕ್ಕಂದಿನಿಂದಲೇ ತಲೆಯಲ್ಲಿ ತುಂಬ
ತೊಡಗಿದರೆ ಸತ್ಯವು ಸುಳ್ಳಿನೆದರು ತಲೆ ಎತ್ತಲು ಅಂಜುತ್ತದೆ.
ಇನ್ನು
ಅಮೃತಪಾಲ್ ಸಿಂಗ್ ಕೂಡ ಖಲಿಸ್ತಾನ್ ಪ್ರತ್ಯೇಕ ರಾಷ್ಟ್ರದ ಪರಿಕಲ್ಪನೆಯನ್ನು ಬೆಂಬಲಿಸುತ್ತಿರುವ
ಪ್ರತ್ಯೇಕತಾವಾದಿ. ಸೌದಿ ಅರೇಬಿಯಾದಲ್ಲಿ ಸಾರಿಗೆ ವಹಿವಾಟು
ನಡೆಸುತ್ತಿದ್ದ ಅಮೃತಪಾಲ್ ವಾರಿಸ್ ಪಂಜಾಬ್ ದೇ ಸ್ಥಾಪಕ ಪಂಜಾಬಿ ನಟ- ಕಾರ್ಯಕರ್ತ ದೀಪ್
ಸಿಂಗ್ ಸಿಧು ಮರಣಾನಂತರ ಈ ಸಂಸ್ಥೆಯ ಮುಖ್ಯಸ್ಥನಾದ,
ಜೊತೆಜೊತೆಗೆ ಎಂಬತ್ತರ ದಶಕದಲ್ಲಿ ರಕ್ತದೋಕುಳಿ ಹರಿಸಿದ್ದ ಭಿಂದ್ರನ್ವಾಲೆಯ ಖಲಿಸ್ತಾನ್ ಪರಿಕಲ್ಪನೆಯನ್ನು
ಮತ್ತೆ ಮುನ್ನೆಲೆಗೆ ತಂದ ಕುಖ್ಯಾತಿಗೊಳಗಾದ. ಸದ್ಯಕ್ಕೆ ಭಯೋತ್ಪಾದಕ ಚಟುವಟಿಕೆಗಳು ಹಾಗು ಪಂಜಾಬ್
ನ ಅಜನಾಳ ಪೊಲೀಸ್ ಠಾಣೆ ಮೇಲೆ ಅಮೃತಪಾಲ್ ಬೆಂಬಲಿಗರು ನಡೆಸಿದ ಹಲ್ಲೆಯ ಆರೋಪದ ಮೇಲೆ ನ್ಯಾಷನಲ್
ಸೆಕ್ಯೂರಿಟಿ ಆಕ್ಟ್ ನಡಿಯಲ್ಲಿ ಆರೋಪಿಯಾಗಿ ಬಂಧಿತನಾಗಿದ್ದಾನೆ. ಇಂತಹ ವ್ಯಕ್ತಿ ಖಡುರ್ ಸಾಹಿಬ್ ಕ್ಷೇತ್ರದಿಂದ
ಸರಿ ಸುಮಾರು ಹತ್ತಿರ ಹತ್ತಿರ ಎರಡು ಲಕ್ಷ ಮತಗಳ ಅಂತರದಿಂದ ಗೆದ್ದಿರುವುದು ನಿಜಕ್ಕೂ ಆಘಾತಕಾರಿ ವಿಷಯ,
ಹಾಗಾದರೆ ಅಮೃತಪಾಲ್ ಗೆದ್ದಿದೇಕೆ ಎಂದು ನೋಡ ಹೊರಟರೆ
ಕಾಣುವುದು ಹತ್ತು ಹಲವು ವಿಷಯಗಳು ನಾಯಕತ್ವದ ಕೊರತೆ
, ತಾಂಡವವಾಡುತ್ತಿರುವ ಡ್ರಗ್ ದಂಧೆ ಹಾಗು ಮತ್ತದೇ ಸಹಾನುಭೂತಿ ರಾಜಕೀಯ. ಖಡುರ್ ಸಾಹಿಬ್ ಜನರನ್ನು
ಅಮೃತಪಾಲ್‌ನನ್ನೇಕೆ ಗೆಲ್ಲಿಸಿದಿರಿ ಎಂದು ಕೇಳಿದಕ್ಕೆ ದೊರೆತ ಉತ್ತರ ಆತ ಡ್ರಗ್ಸ್ ಮಾಫಿಯಾ ವಿರುದ್ಧ
ಹೋರಾಟ ನಡೆಸಿದ್ದ ಆದ್ದರಿಂದ ಗೆಲ್ಲಿಸಿದೆವು ಎಂದರು.
ಅಂದರೆ ಅಲ್ಲಿನ ಜನ ಪ್ರತ್ಯೇಕ ಖಲಿಸ್ತಾನ್ ಹೋರಾಟಕ್ಕೆ ಬೆಂಬಲಿಸಿಲ್ಲ ಆದರೆ ಆತ ಖಲಿಸ್ತಾನ್ ದೊಂದಿಗೆ ಜೊತೆ ಜೊತೆಯಾಗಿ
ಮುನ್ನೆಲೆಗೆ ತಂದ ವಿಷಯಗಳು ಡ್ರಗ್ಸ್ ಮಾಫಿಯಾ, ನಿರುದ್ಯೋಗ
, ರೈತರ ಸಮಸ್ಯೆ ಹೀಗೆ ಸ್ಥಾಪಿತ ಸರ್ಕಾರಗಳು ಹಾಗು
ಪಕ್ಷಗಳು ಆಯಾ ಕಾಲಕ್ಕೆ ತತಕ್ಷಣಕ್ಕೆ ಗಣನೆಗೆ ತೆಗೆದು ಕೊಳ್ಳದ ವಿಷಯಗಳನ್ನು ಮುನ್ನೆಲೆಗೆ ತಂದು
ಈ ವಿಷಯಗಳ ಮೂಲಕ ಜನರಿಗೆ ಹತ್ತಿರ ಆಗುತ್ತಾ ಖಲಿಸ್ತಾನ್
ಚಳುವಳಿಗೆ ರಹದಾರಿಯನ್ನು ಸೃಷ್ಟಿ ಮಾಡುತ್ತಿದ್ದ, ಜನರ ಕಣ್ಣಲ್ಲಿ ಉಳಿದೆಲ್ಲ ಸಮಸ್ಯೆಗಳ ಮುಂದೆ ಈ
ಸಮಸ್ಯೆ ಗೌಣವಾಗಿ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ
.
ಒಟ್ಟಾರೆಯಾಗಿ
ಹೇಳುವದಾದರೆ ಇವರಿಬ್ಬರ ಜಯ ಇವರು ಪ್ರತಿಪಾದಿಸುತ್ತಿರುವ
ಪ್ರತ್ಯೇಕತಾವಾದದ ಸಿದ್ಧಾಂತಗಳಿಗೆ ಸಿಕ್ಕ ಜಯವಲ್ಲ.
ಇದು ಪರಿಸ್ಥಿತಯ ಒತ್ತಡಕೆ ಪರವಶವಾದ ಮತದಾರ ಇನ್ಯಾರಿಗೋ
ಪಾಠ ಕಲಿಸಲು ಹೋಗಿ ಇವರಿಬ್ಬರನ್ನು ಗೆಲ್ಲಿಸಿದ.
ಆದರೆ ಆಳುವ ಸರ್ಕಾರಗಳಿಗೆ ಇದರಲ್ಲಿ ಹಲವು ಪಾಠಗಳು ಅಡಗಿವೆ, ಕಾಲದಿಂದ ಕಾಲಕ್ಕೆ ನಮ್ಮನಾಳುವ
ಸರ್ಕಾರಗಳು ಕೆಲವೊಮ್ಮೆ ಅಲ್ಲಿಂದೆಲ್ಲಿಗೆ ಸಾರಿಸುವುದು ಎಂಬಂತೆ ಆ ಕ್ಷಣಕ್ಕೆ ಆ ಸಮಸ್ಯೆ ಬಗೆ ಹರಿದರಾಯಿತು
ಎಂಬಂತೆ ವರ್ತಿಸಿದ್ದೇ ಇದೆಲ್ಲದಕ್ಕೂ ಮೂಲ ಕಾರಣ. ಪಂಜಾಬ್ ಎಂಬತ್ತರ ದಶಕದ ನಂತರ ಪ್ರತ್ಯೇಕತಾವಾದಿಗಳ ಸಂಕೋಲೆಯಿಂದ ಹೊರ ಬಂದಾದ ಮೇಲೆ ಸರ್ಕಾರಗಳು
ಅಲ್ಲಿನ ಅಭಿವೃದ್ಧಿಯನ್ನೇ ಮರೆತವು, ತಾಂಡವ ವಾಡುತಿದ್ದ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲಿಲ್ಲ ಪರಿಣಾಮ
ಇಂದು ಅಮೃತಪಾಲ್ ನಂತವರು ಸಂಸತ್ ನಲ್ಲಿ ಪ್ರಮಾಣ ವಚನ ತೆಗೆದು ಕೊಳ್ಳುವಂತಾಯಿತು. ಅದೇ ರೀತಿ ಕಾಶ್ಮೀರದಲ್ಲಿ
370 ವಿಧಿಯನ್ನು ತೆಗೆದು ಹಾಕುವ ನಿರ್ಣಯವಿರಲಿ ಆ ವಿಷಯದ ಬಗ್ಗೆ ಮಾತನಾಡುವುದೇ ತಪ್ಪು ಎಂಬಂತಾಡುತ್ತಿದರು
ಆದರೆ ಇಂದು 370 ವಿಧಿ ರದ್ದಾಗಿದೆ ಹೀಗೆ ರಾಷ್ಟ್ರ ಹಿತ ಮತ್ತು ಭದ್ರತೆಯ ವಿಷಯ ಬಂದಾಗ ಯಾರೊಂದಿಗೂ
ರಾಜಿಯಾಗಬೇಕಿಲ್ಲ. ಒಟ್ಟಿನಲ್ಲಿ ಇವರಿಬ್ಬರ ಗೆಲುವು ಆಳುವ ಸರ್ಕಾರಗಳಿಗೆ ಎಚ್ಚರಿಕೆಯ ಗಂಟೆ ಜೊತೆಗೆ ಭಾರತದ ಭದ್ರತಾ ವ್ಯವಸ್ಥೆಯನ್ನು ಉತ್ತುಂಗಕ್ಕೇರಿಸಲು
ಹಾಗು ಗುಪ್ತಚರ ಇಲಾಖೆಗಳಿಗೆ ಇನ್ನಷ್ಟು ಬಲ ತುಂಬಲು
ಇದು ಸಕಾಲ ಎಂದು ಮತ್ತೊಮ್ಮೆ ನೆನಪಿಸಿದಂತಿದೆ.
ಕಾರ್ತಿಕ್ ಎಸ್ ಬಾಪಟ್.

No comments:
Post a Comment