Tuesday, June 4, 2024

 ಕಳಿಂಗ ನಾಡಲ್ಲಿ ಮತ್ತೆ ಶಂಖನಾದ ?         
                                                                 ಕಾರ್ತಿಕ್ ಎಸ್ ಬಾಪಟ್.



ಒರಿಸ್ಸಾದ ರಾಜಕೀಯ ಹಲವು ಕಾರಣಗಳಿಗಾಗಿ ದೇಶದ ಗಮನ ಸೆಳೆಯುತ್ತಿದೆ, ಬಾರಿ  ನವೀನ ಪಾಟ್ನಾಯಕ್ ಆರನೇ ಬಾರಿ ಗೆದ್ದು ಗದ್ದುಗೆ ಏರಿದರೆ ಸತತ 24 ವರ್ಷ 165 ದಿನಗಳ ಕಾಲ  ಆಡಳಿತ ನಡೆಸಿದ ಸಿಕ್ಕಿಂ ಪವನ್ ಚಾಮ್ಲಿಂಗ್ ದಾಖಲೆಯನ್ನು ಮುರಿಯಲಿದ್ದಾರೆ. ಅದಲ್ಲದೆ  ಇನ್ನೊಂದು ಅಂಶ ಇತ್ತೀಚಿಗೆ ಕೆಲವು ವರುಷಗಳಿಂದ ನವೀನ ಬಾಬು ರೊಂದಿಗೆ ಪ್ರತಿ ಫ್ರೇಮ್ ನಲ್ಲೂ ಕಾಣಿಸಿಕೊಳ್ಳುತ್ತಿರುವ ವಿ ಕೆ ಪಾಂಡಿಯನ್ ಎಂಬ ನಿವೃತ್ತ  ಐಎಎಸ್ ಅಧಿಕಾರಿಯ ಬಗ್ಗೆ ಎಲ್ಲರೂ ಕುತೂಹಲದಿಂದ ನೋಡುವಂತಾಗಿದೆ , ಎಷ್ಟರ ಮಟ್ಟಿಗೆಂದರೆ ಭಾರತೀಯ ಜನತಾ ಪಾರ್ಟಿಯ ಘಟಾನುಘಟಿ ನಾಯಕರಾದ ಮೋದಿ, ಅಮಿತ್ ಶಾ ಹಾಗು ಸಂಬಿತ್ ಪಾತ್ರಾ ಇವರೆಲ್ಲರ  ಚುನಾವಣಾ ಪ್ರಚಾರ, ಹೇಳಿಕೆಗಳು ಮತ್ತು  ಸಂದೇಶಗಳು  ಪಾಂಡಿಯನ್  ಸುತ್ತಲೇ  ಗಿರಕಿ ಹೊಡೆಯುತ್ತಿವೆ.ಇತಿಹಾಸದುದ್ದಕ್ಕೂ ಗಮನಿಸಿದರೆ  ಹಲವು ಎಸ್ , ಪಿ ಎಸ್ ಹಾಗು ಏಫ್ ಎಸ್ ಅಧಿಕಾರಿಗಳು ತಮ್ಮ ಸೇವಾ ನಿವೃತ್ತಿಯ ನಂತರ ಅಥವಾ ಸ್ವಯಂ ನಿವೃತ್ತಿಯ ನಂತರ ರಾಜಕೀಯ ರಂಗ ಪ್ರವೇಶಿಸಿರುವುದು ಮತ್ತು ಕೆಲವರು ಅದರಲ್ಲಿ ಯಶಸ್ವಿಯಾಗಿರುವದನ್ನು ಕಂಡಿದ್ದೇವೆ ಆದರೆ ಪಾಂಡಿಯನ್ ಒರಿಸ್ಸಾದ ರಾಜಕೀಯ ರಂಗಕ್ಕೆ  ನಡೆದು ಬಂದ ಹಾದಿ ಹಾಗು ಅಲ್ಲಿನ ಜನರ ಮಧ್ಯೆ ಪಡೆಯುತ್ತಿರುವ ಖ್ಯಾತಿ ಕೆಲವರ ಕಣ್ಣು ಕೆಂಪಾಗಿಸಿದರೆ ಕೆಲವರನ್ನು ಚಕಿತಗೊಳಿಸುತ್ತಿದೆ .

ಹಾಗಾದರೆ ಯಾರೀ ವಿ ಕಾರ್ತಿಕೇಯ ಪಾಂಡಿಯನ್ ?

ಮೇ 29, 1974 ರಂದು ತಮಿಳುನಾಡಿನ ಮಧುರೈ ಜಿಲ್ಲೆಯ ಮೇಲೂರಿನ ಕೂತಪ್ಪನ್ಪಟ್ಟಿ ಗ್ರಾಮದಲ್ಲಿ ಸಾಧಾರಣ ಕುಟುಂಬದಲ್ಲಿ  ಜನಿಸಿದ ಪಾಂಡಿಯನ್ ಮೂಲತಃ ಕ್ರೀಡಾ ಪ್ರೇಮಿ.    ಕೃಷಿ ವಿಭಾಗದಲ್ಲಿ (ಬಿಎಸ್ಸಿ ಇನ್ ಅಗ್ರಿಕಲ್ಚರ್)   ಪದವಿಯನ್ನು ಪಡೆದು ನಂತರ ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ತಮ್ಮ ಸ್ನಾತಕೋತ್ತರ  ಪದವಿಯನ್ನು ಪಡೆದು ಆಯ್ದು ಕೊಂಡಿದ್ದು ಭಾರತೀಯ ಲೋಕ ಸೇವಾ ಆಯೋಗದ ಪರೀಕ್ಷೆ, 2000ಇಸವಿಯಲ್ಲಿ ಪರೀಕ್ಷೆಯಲ್ಲಿ ತೇರ್ಗಡೆ ಗೊಂಡು ಆಯ್ದು ಕೊಂಡಿದ್ದು   ಪಂಜಾಬ್ ಕೇಡರ್‌ ಆದರೆ ಬ್ಯಾಚ್‌ಮೇಟ್ ಸುಜಾತಾ ರೌತ್ ಅವರನ್ನು ವರಿಸಿದ ನಂತರ ಕಾರ್ಯ ಕ್ಷೇತ್ರವಾಗಿ  ಆಯ್ಕೆ ಮಾಡಿಕೊಂಡದ್ದು ಒರಿಸ್ಸಾ ಕೇಡರ್, ಹೀಗೆ ಒರಿಸ್ಸಾ ಕ್ಯಾಡೆರ್ ಆಯ್ಕೆ ಮಾಡಿ ಕೊಂಡ ನಂತರ ಪಾಂಡಿಯನ್ ಎಂತಹ ಸವಾಲುಗಳು ಎದುರಾದರು ಹಿಂತಿರುಗಿ ನೋಡಿದ್ದಿಲ್ಲ .ಮೊದಲಿಗೆ  ಕಾಲಹಂಡಿಯ  ಧರಮ್‌ಗಢದಲ್ಲಿ ಸಬ್-ಕಲೆಕ್ಟರ್ ಆಗಿ ನೇಮಕಗೊಂಡಾಗ ಕನಿಷ್ಠ ಬೆಂಬಲ ಬೆಲೆ ಕಾರ್ಯಕ್ರಮದಲ್ಲಿ ಇದ್ದ ತೊಡಕುಗಳನ್ನು ಯಶಸ್ವಿಯಾಗಿ ನಿರ್ವಹಿಸಿ  ಭತ್ತ  ಸಂಗ್ರಹಣೆ ಮತ್ತು ವಿತರಣೆಯನ್ನು ಅತ್ಯಂತ ಸುಗಮ ಗೊಳಿಸಿ ರೈಸ್ ಮಿಲ್ ಲಾಬಿ ಯನ್ನು ಪಾಂಡಿಯನ್ ಬಗ್ಗು ಬಡೆದಿದ್ದರು ಆದರೆ ಅಂದು ರೈಸ್ ಮಿಲ್ ಲಾಬಿ ಹೇಗಾದರೂ ಮಾಡಿ  ಪಾಂಡಿಯನ್ ಎತ್ತಂಗಡಿಗೆ ಇನ್ನಿಲದ ಪ್ರಯತ್ನ ಮಾಡಿತ್ತು. ಹಾಗು ಅಂದು ಆಡಳಿತದಲ್ಲಿ ಇದ್ದದ್ದು ಬಿ ಜೆ ಡಿ ಹಾಗು ಬಿ ಜೆ ಪಿ ಮೈತ್ರಿ ಸರ್ಕಾರ ಹಾಗು  ಆಹಾರ ಇಲಾಖೆಯ ಮಂತ್ರಿಯಾಗಿದ್ದು ಬಿ ಜೆ ಪಿ ಶಾಸಕ ಆದರೆ ಬಿ ಜೆ ಪಿ ಶಾಸಕ ಹೇಳಿದ್ದು ಒಂದೇ ಮಾತು ಇದು ನವೀನ ಬಾಬು ಸರ್ಕಾರ ಇಲ್ಲಿ ಇದು ನಡೆಯುವುದಿಲ್ಲ ಹೀಗೆ ನವೀನ ಬಾಬು ಆಡಳಿತ ವೈಖರಿ ಅಷ್ಟು ಪಾರದರ್ಶಕವಾಗಿರುತ್ತಿತ್ತು.  ಅದೇ ರೀತಿ  ಒಡಿಶಾದ ಅತಿದೊಡ್ಡ ಜಿಲ್ಲೆಯಾದ ಮಯೂರ್‌ಭಂಜ್‌ನ ಕಲೆಕ್ಟರ್ ಆಗಿ ನೇಮಕಗೊಂಡಾಗ  ಅಲ್ಲಿ ವಿಕಲಾಂಗರನ್ನು ಗುರುತಿಸಿ ಗ್ರಾಮ ಮತ್ತು ಬ್ಲಾಕ್ ಮಟ್ಟದಲ್ಲಿ ಪುನರ್ವಸತಿ ಕಲ್ಪಿಸುವ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು, ಒಂದು ವಿಕಲಾಂಗ ಪ್ರಮಾಣಪತ್ರ ಪಡೆಯಬೇಕೆಂದರೆ ವಿಕಲಾಂಗರು ಹತ್ತು ಹಲವು ಕಚೇರಿಗಳಿಗೆ ಅಲಿಯಬೇಕಾದ ಪರಿಸ್ಥಿತಿ ಇತ್ತು ಆಗ ಈ ಎಲ್ಲ ಕಚೇರಿಗಳ ಸೇವೆಯನ್ನು ಒಂದೇ ಸೂರಿನಡಿ ತಂದು ಒಂದೇ ಕಚೇರಿಯಲ್ಲೇ ವಿಕಲಾಂಗ ಪ್ರಮಾಣಪತ್ರ  ಪಡೆಯುವ ಪ್ರಕ್ರಿಯೆಯನ್ನು ಸರಳ ಗೊಳಿಸಿದಾಗ   ಹೆಲೆನ್ ಕೆಲ್ಲರ್ ನಂತಹ  ಪ್ರಶಸ್ತಿ ಪಾಂಡಿಯನ್ ಅರಸಿ ಬಂದಿತ್ತು.

2007 ರಲ್ಲಿ ಗಂಜಾಂ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಬ್ಯಾಂಕ್ ಖಾತೆಗಳ ಮೂಲಕ ಕಾರ್ಮಿಕರಿಗೆ ವೇತನ ಪಾವತಿಸುವ ಪ್ರಕ್ರಿಯೆಯನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವಲ್ಲಿ ಪಾಂಡಿಯನ್ ಪ್ರಮುಖ ಪಾತ್ರ ವಹಿಸಿದರು, ಇದಕ್ಕಾಗಿ ಗಂಜಾಂನ  (NAREGA  )  ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಅತ್ಯುತ್ತಮ ಜಿಲ್ಲೆ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.ಆಗಿನ್ನೂ ಜನಧನ್ ಸ್ಕೀಮ್ ಹಾಗು ಜೀರೋ ಬ್ಯಾಲೆನ್ಸ್ ಅಕೌಂಟ್ ನಂತಹ ಯೋಜನೆಗಳು ಇರಲಿಲ್ಲ ಮೋದಿ ಪ್ರಧಾನ ಮಂತ್ರಿಯು ಆಗಿರಲಿಲ ಅಂದರೆ ಒಂದು ನಿರ್ಧಾರ ಎಷ್ಟು ಮಹತ್ವದಾಗಿತ್ತು ಎಂದು ನೀವೇ ಊಹಿಸಿ. ಒಂದು ಬದಲಾವಣೆ  ಮುಂದೆ ರಾಷ್ಟ್ರ ಮಟ್ಟದಲ್ಲಿ ನರೇಗಾ ವೇತನವನ್ನು ಸಂಪೂರ್ಣವಾಗಿ  ಬ್ಯಾಂಕ್ ಖಾತೆಗಳ ಮೂಲಕ ಪಾವತಿಸುವ ಪ್ರಕ್ರಿಯೆಗೆ ನಾಂದಿ ಹಾಡಿತು.

ಈ ರೀತಿ ಪಾಂಡಿಯನ್ ಕೆಲಸ ಮತ್ತು ಆಡಳಿತ ವೈಖರಿಯಿಂದ ಮುಖ್ಯ ಮಂತ್ರಿ  ನವೀನ ಪಾಟ್ನಾಯಕ್ ಪ್ರಭಾವಿತರಾಗಿ  2011 ರಲ್ಲಿ ಪಾಂಡಿಯನ್ ಅವರನ್ನು  ಮುಖ್ಯಮಂತ್ರಿ ಕಚೇರಿಗೆ ತಮ್ಮ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಿದರು, ಅಂದಿನಿಂದ ನವೀನ ಬಾಬು ಹಾಗು ಪಾಂಡಿಯನ್ ಜುಗಲ್ಬಂದಿ ಒರಿಸ್ಸಾ ಜನರನ್ನು ಸಮ್ಮೋಹ ಗೊಳಿಸುತ್ತ ಸಾಗಿತು. 2012 ರಲ್ಲಿ ನವೀನ ಬಾಬು ಲಂಡನ್ ಪ್ರವಾಸದಲ್ಲಿದ್ದರು ಆಗ ನವೀನ ಬಾಬು ಆಪ್ತ ಸಲಹೆಗಾರ ದಿವಂಗತ ಪ್ಯಾರಿಮೋಹನ್ ಕೆಲವು ಬೆಂಬಲಿಗರೊಂದಿಗೆ  ನವೀನ ಬಾಬು ವಿರುದ್ಧ ಬಂಡೆದ್ದಾಗ ಈ ಬಂಡನ್ನು ಹತ್ತಿಕ್ಕಲು ಸಹಾಯ ಮಾಡಿದ್ದೂ  ಪಾಂಡಿಯನ್‌, ಈ ಪ್ರಸಂಗದ ನಂತರ ಪಾಂಡಿಯನ್ ಹಾಗು ನವೀನ ಬಾಬು ಸಂಬಂಧ ಮತ್ತಷ್ಟು ಗಟ್ಟಿ ಆಗುವತ್ತ ಸಾಗಿತು. ಪಾಂಡಿಯನ್ ನವೀನ ಬಾಬು ನಂಬಿಕಸ್ತ ಸಲಹೆಗಾರರಾಗಿ ರೂಪು ಗೊಳ್ಳುತ್ತ ಹೋದರು ಪಾಂಡಿಯನ್ ಪ್ರಾಮುಖ್ಯತೆ ಹೆಚ್ಚುತ್ತಾ ಹೋಯಿತು  ಇದು ಪಕ್ಷದಲ್ಲಿಯೇ ಕೆಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು ಆದರೆ ಶಾಸಕರಿಗೆ ಹಾಗು ನಾಯಕರಿಗೆ ನವೀನ ಬಾಬು ರೊಂದಿಗೆ ಸಹಕರಿಸುವುದರ ಹೊರತಾಗಿ ಬೇರೆ ಆಯ್ಕೆಯಿರಲಿಲ್ಲ. ನವೀನ ಬಾಬು ಇಚ್ಛಾ ಶಕ್ತಿ ಹಾಗು ನವೀನ ಬಾಬು ಕನಸನ್ನು ಇನ್ನಷ್ಟು ಮೌಲ್ಯವರ್ಧನೆ ಗೊಳಿಸಿ  ಕಾರ್ಯಗತ ಗೊಳಿಸುವ ಪಾಂಡಿಯನ್ ಕಾರ್ಯವೈಖರಿ  2014 ಹಾಗು 2019 ರಲ್ಲಿ ನಡೆದ ಒರಿಸ್ಸ ವಿಧಾನಸಭಾ ಚುನಾವಣೆಯಲ್ಲಿ ಅಪಾರವಾದ ರಾಜಕೀಯ ಯಶಸ್ಸನ್ನು ತಂದು ಕೊಟ್ಟಿದರಲ್ಲಿ ಅತಿಶೋಕ್ತಿಯಿಲ್ಲ. ಹೀಗೆ ಪಾಂಡಿಯನ್ ಗಳಿಸಿದ ಜನಪ್ರಿಯತೆ ಬಿ ಜೆ ಡಿ ಪಕ್ಷದಲ್ಲಿನ ಹಲವರಿಗೆ ಜೀರ್ಣಿಸಿಕೊಳ್ಳಲಾಗಲಿಲ್ಲ ಇದೆಲ್ಲವನ್ನು ಅರಿತ ನವೀನ ಪಾಟ್ನಾಯಕ್ 2019 ರಲ್ಲಿ ಪಾಂಡಿಯನ್ ರನ್ನು  5T ಮುಖ್ಯಸ್ಥರನ್ನಾಗಿ ನೇಮಿಸಿ ಆದೇಶ ಹೊರಡಿಸಿದರು.ಹಾಗೆ ನೋಡಿದರೆ 5 T ಎಂಬ ಯಾವುದೇ ಇಲಾಖೆಯೇ ಇರಲಿಲ್ಲ ಈಗಲೂ ಇಲ್ಲ ಆದರೆ 5 T ಪರಿಕಲ್ಪನೆ ಹೆಸರೇ ಹೇಳುವಂತೆ ಟೀಮ್ ವರ್ಕ್ , ಟೆಕ್ನಾಲಜಿ , ಟ್ರಾನ್ಸ್ಪರೆನ್ಸಿ, ಟೈಮ್ ಮತ್ತು ಟ್ರಾನ್ಸ್ಫಾರ್ಮೇಷನ್ ಅಂದರೆ ಯಾವುದೇ ಸಂಸ್ಥೆಯಿರಲಿ ಐದು ಅಂಶಗಳನ್ನೊಳಗೊಂಡ ದೃಷ್ಠಿಕೋನ ಹೊಂದಿರಬೇಕು ಆದ್ದರಿಂದ ಯಾವುದೇ ಇಲಾಖೆಯ ವರದಿಯಿರಲಿ ವರದಿ ಪಾಂಡಿಯನ್ ಕೈ ಸೇರಲೇಬೇಕು ಒಂದು ಯೋಜನೆಯಾಗಿ ಇದು ನಿಜಕ್ಕೂ ಅತ್ಯಂತ ಪರಿಣಾಮಕಾರಿ ಯೋಜನೆ ಯಾಗಿ ರೂಪು ಗೊಂಡಿದ್ದರಲ್ಲಿ ಎರಡು ಮಾತಿಲ್ಲ ಆದರೆ ಕೆಲವರು ವ್ಯವಸ್ಥೆಯನ್ನು ದೂಷಿಸಿದರು ಹಾಗು ಹೊಸ ವ್ಯವಸ್ಥೆ ಮುಖ್ಯ ಕಾರ್ಯದರ್ಶಿಯ ಅಧಿಕಾರವನ್ನೇ  ಕುಬ್ಜಗೊಳಿಸಿತು ಎಂಬ ಆರೋಪವನ್ನು ಎದುರಿಸಬೇಕಾಯಿತು.

2017 ರಲ್ಲಿ, ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಅನ್ನು ರಾಂಚಿಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಕ್ರೀಡಾ ಕೂಟಕ್ಕೆ ಕೇವಲ 90 ದಿನಗಳಿರುವಾಗ ಜಾರ್ಖಂಡ್ ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ನಿರ್ಧಾರದಿಂದ ಹಿಂದೆ ಸರಿಯಿತು, ಅವಕಾಶವನ್ನು ಪಾಂಡಿಯನ್ ಸಮರ್ಥವಾಗಿ ಬಳಸಿಕೊಂಡು ಒಡಿಶಾ ಆತಿಥೇಯರಾಗಲು ಒಪ್ಪಿಕೊಂಡಿತು ಮತ್ತು ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿತು ಅಲ್ಲದೆ 2018 ಮತ್ತು 2023 ರಲ್ಲಿ ಎರಡು ಪುರುಷರ ವಿಶ್ವಕಪ್ ಹಾಕಿ ಚಾಂಪಿಯನ್ಶಿಪ್ಗಳು 2019 ರಲ್ಲಿ FIH ಪುರುಷರ ಸರಣಿ ಫೈನಲ್ಗಳು ಮತ್ತು ಒಲಂಪಿಕ್ ಹಾಕಿ ಕ್ವಾಲಿಫೈಯರ್ಪಂದ್ಯಗಳಿಗೆ ಒರಿಸ್ಸಾ ಆತಿಥೇಯರಾಗಿ ಕಾರ್ಯ ನಿರ್ವಹಿಸಿ ಒರಿಸ್ಸಾ ರಾಜ್ಯಕ್ಕೆ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಗುರುತರ ಜಾಗವನ್ನು ಸೃಷ್ಟಿಸಿ ಒರಿಸ್ಸಾ ವನ್ನು  ಭಾರತದ ಕ್ರೀಡಾ ರಾಜಧಾನಿ ಎಂಬ ಖ್ಯಾತಿಗೆ ಪಾತ್ರವಾಗುವಂತೆ ಮಾಡಿದೆ  .ಅಷ್ಟಲ್ಲದೇ ಕಳೆದ ಕೆಲವು  ವರ್ಷಗಳಲ್ಲಿ ಕೈ ಗೊಂಡ  ಜಗನ್ನಾಥ ದೇವಾಲಯದ ಸುತ್ತ ಮುತ್ತಲಿನ ಅಭಿವೃದ್ಧಿ ಮತ್ತು  ಸುಂದರೀಕರಣದ ಕೆಲಸ, ಸರ್ಕಾರಿ ಶಾಲೆಗಳಿಗೂ  5T ಯೋಜನೆಯನ್ನು ವಿಸ್ತರಿಸಿ ಶಾಲೆಗಳಿಗೆ ಹೊಸ ಕಟ್ಟಡಗಳು ಮತ್ತು ಸ್ಮಾರ್ಟ್ ಡಿಜಿಟಲ್ ಬೋರ್ಡ್ ಗಳನ್ನೂ ಅಳವಡಿಸಿದ್ದಲ್ಲದೆ ಸರಿ ಸುಮಾರು 315 ಒಡಿಶಾ ಆದರ್ಶ ವಿದ್ಯಾಲಯ ಎಂಬ ಇಂಗ್ಲಿಷ್ ಶಾಲೆಗಳನ್ನು ತೆರೆದಿರುವುದು ಇವೆಲ್ಲವೂ ಜನಮಾನಸದಲ್ಲಿ ನವೀನ ಬಾಬು ಹಾಗು ಪಾಂಡಿಯನ್ ಬಗೆಗೊಂದು ಧನ್ಯತಾ ಭಾವ ಮೂಡಿಸಿದೆ. ಆದರೆ ಕೆಲವೊಮ್ಮೆ ಅತಿ ಉತ್ಸಾಹ ಆರೋಪಕ್ಕೂ ಕಾರಣವಾಗುತ್ತದೆ ಕೋವಿಡ್ ನಂತರದ ಕಾಲದಲ್ಲಿ ಪಾಂಡಿಯನ್ ಇನ್ನು ಎಸ್ ಹುದ್ದೆಯಲ್ಲಿ ಇದ್ದಾಗಲೇ ಸರಿ ಸುಮಾರು 30 ಕ್ಕೂ ಹೆಚ್ಚು ಪ್ರದೇಶಗಳಿಗೆ  ಸರ್ಕಾರದ ಪ್ರಾಯೋಜಕತ್ವದಲ್ಲಿ  ಹೆಲಿಕ್ಯಾಪ್ಟರ್ ಬಳಸಿ ಕುಂದು ಕೊರತೆ ಆಲಿಸಲು ಸಭೆಗಳಿಗೆ ತೆರಳಿದ್ದು ಚರ್ಚೆಯ ವಿಷಯವಾಗಿದೆ , ಒಬ್ಬ ಲೋಕ ಸೇವಾ ಆಯೋಗದ ಅಧಿಕಾರಿಯಾಗಿ  ಮಾಧ್ಯಮದ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳದೆ  ಸದ್ದಿಲ್ಲದೇ ಸಚಿವರುಗಳು ರೂಪಿಸಿದ ನೀತಿ ನಿಯಮಗಳನ್ನು ಕಾರ್ಯಗತ ಗೊಳಿಸಬೇಕೇ ಹೊರತು ತಾನೇ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಹಲವು  ಎತ್ತಿದ್ದರು, ಬಹುಷ್ಯ ಇದೆಲ್ಲವನ್ನು ಗಮನಿಸಿ ನವೀನ ಪಾಟ್ನಾಯಕ್ ಪಾಂಡಿಯನ್ ರನ್ನು ತಮ್ಮ ವೃತ್ತಿಗೆ ರಾಜೀನಾಮೆ ಕೊಡಿಸಿ ಸೀದಾ ರಾಜಕೀಯಕ್ಕೆ ಕರೆ ತಂದಿದ್ದಾರೆ.

ಹೀಗೆ ಪಾಂಡಿಯನ್ ಸಕ್ರಿಯವಾಗಿ ರಾಜಕಾರಣಕ್ಕೆ ಪ್ರವೇಶಿಸಿದ ಮೇಲೆ ಬಿ ಜೆ ಪಿ ಘಟಾನುಘಟಿ ನಾಯಕರು ಪಾಂಡಿಯನ್ ನವೀನ ಬಾಬು ಉತ್ತರಾಧಿಕಾರಿಯಂತೆ  ಕಾಣುತ್ತಿದ್ದಾರೆ ಅಷ್ಟೇ ಅಲ್ಲ ನವೀನ ಬಾಬು ಸಂಪ್ಪೂರ್ಣವಾಗಿ ಪಾಂಡಿಯನ್ ನಿಯಂತ್ರಣದಲ್ಲಿದ್ದಾರೆ, ಮುಂದಿನ ದಿನಗಳಲ್ಲಿ ಪಾಂಡಿಯನ್ ಮುಖ್ಯಮಂತ್ರಿ ಆದರೆ ಒರಿಸ್ಸಾದ ಜನತೆ ಅದ್ಹೇಗೆ ಸಹಿಸಿಕೊಳ್ಳುತ್ತೀರಿ ಆದ್ದರಿಂದ ಇದು ಒರಿಸ್ಸಾದ ಅಸ್ಮಿತೆಯ ಸವಾಲೆಂಬಂತೆ ಬಿ ಜೆ ಪಿ ಒಂದು ಕಾಲದ ಮಿತ್ರ ಬಿ ಜೆ ಡಿ ವಿರುದ್ಧ ಹರಿಹಾಯುತ್ತಿದೆ, ಹಾಗೆ ನೋಡಿದರೆ ವಾದದಲ್ಲಿ ಹುರುಳಿಲ್ಲ ಈ  ಹಿಂದೆ ಜಯಲಲಿತಾ , ಜಾರ್ಜ್ ಫೆರ್ನಾಂಡಿಸ್ ,  ಅಷ್ಟೇ ಏಕೆ ಬಿ ಜೆ ಪಿ ಯವರೇ ಆದ ಸುಷ್ಮಾ ಸ್ವರಾಜ್ , ಜಗನ್ನಾಥ್ ಜೋಶಿ ಇವರೆಲ್ಲರೂ ಪ್ರವರ್ಧಮಾನಕ್ಕೆ ಬಂದದ್ದು ತಮ್ಮ ರಾಜ್ಯದಲ್ಲಲ್ಲ ಅಷ್ಟೇ ಏಕೆ ಕಾಂಗ್ರೆಸ್ ನ ಇಂದಿರಮ್ಮ ರಾಜಕೀಯ ಪುನರ್ಜನ್ಮಕ್ಕಾಗಿ ಆಯ್ದು ಕೊಂಡ ಕ್ಷೇತ್ರ ಚಿಕ್ಕಮಗಳೂರು ಇದೀಗ   ಮೋದೀಜಿಯಂತಹ  ಮೋದಿಜಿ ಅವರೇ ಗುಜರಾತ್ ಬಿಟ್ಟು ಉತ್ತರ ಪ್ರದೇಶದ  ವಾರಾಣಸಿಯಲ್ಲಿ ಚುನಾವಣೆಗೆ ನಿಲ್ಲುವುದಾದರೆ ಪಾಂಡಿಯನ್ ಒರಿಸ್ಸಾದ  ರಾಜಕೀಯದಲ್ಲಿ ರಂಗ ಪ್ರವೇಶ ಬಯಸಿದರೆ ತಪಲ್ಲ , ಅದೇನೇ ಇರಲಿ ಈ ಬಾರಿ  ಪಾಂಡಿಯನ್ ವಿಧಾನ ಸಭೆಯಲ್ಲಿ ಆಗಲಿ ಲೋಕಸಭೆಯಲ್ಲಿ ಆಗಲಿ ಸ್ಪರ್ದಿಸಿಲ್ಲ ಆದರೆ ಒರಿಸ್ಸಾ ಉದ್ದಗಲಕ್ಕೂ ನವೀನ ಬಾಬು ಪರ ಮತ ಯಾಚಿಸಿ ಸಭೆಗಳನ್ನು ನಡೆಸುತ್ತಿದ್ದಾರೆ ಜನರ ಕಂಗಳಲ್ಲಿ ನವೀನ ಬಾಬುಗಿರುವ ಪ್ರೀತಿಯೇ  ಪಾಂಡಿಯನ್ ಪರವೂ ಪ್ರಜ್ವಲಿಸುತ್ತಿದೆ. ಇದು ಬಿ ಜೆ ಪಿ ಗರಿಗಷ್ಟೇ ಅಲ್ಲ ಖುದ್ದು  ಬಿಜು ಜನತಾದಳ ಪಕ್ಷದ ನಾಯಕರ ನಿದ್ದೆಯನ್ನು ಕೆಡಿಸಿದೆ ಒರಿಸ್ಸಾದ ಮತದಾರ ಸತತ ಆರನೇ ಬಾರಿ ಬಿಜು ಜನತಾದಳದ  ಶಂಖ ದ ಚಿಹ್ನೆಗೆ ಮತ ಕೊಟ್ಟು ಮತ್ತೊಮ್ಮೆ  ಕಳಿಂಗ ನಾಡಲ್ಲಿ  ಶಂಖನಾದ ಮೊಳಗಿಸುವನೇ?  ಎಲ್ಲದಕ್ಕೂ ನಾಳೆಯೇ ಉತ್ತರ ದೊರೆಯಲಿದೆ. 

ಕಾರ್ತಿಕ್ ಎಸ್ ಬಾಪಟ್ 




No comments:

Post a Comment