Wednesday, June 26, 2024

 ಅಮರಾವತಿ ಕಲ್ಯಾಣದತ್ತ ಹೆಜ್ಜೆ 

                                                                                 ಕಾರ್ತಿಕ್ ಎಸ್ ಬಾಪಟ್



ಕಿಕ್ಕಿರಿದ ಜನಸ್ತೋಮ , ನೆರೆದಿದ್ದ ಜನರಲ್ಲೊಂದು ಉದ್ವೇಗ, ಭರವಸೆ  ಸುತ್ತ ಮುತ್ತ ಪೊಲೀಸ್ ವಾಹನ , ನೆರೆದಿದ್ದ ಜನೋತ್ಸಮದಿಂದ ಆಗಾಗ್ಗೆ ಕೇಳುತ್ತಿದ್ದ ಜೈ ಘೋಷ, ನೆಚ್ಚಿನ ನಾಯಕ ಕೊನಿಡೇಲ ಕಲ್ಯಾಣ ಬಾಬುರನ್ನು ನೋಡುತ್ತಿದಂತೆ ಜೈ ಜೈ ಜಯ ಸೇನಾ ಎಂದು ಮುಗಿಲು ಮುಟ್ಟುತ್ತಿದ್ದ ಜೈ ಘೋಷ ಇದೆಲ್ಲವೂ ಯಾವುದೊ ಚಲನ ಚಿತ್ರದ ಇಂಟ್ರೊಡಕ್ಷನ್ ಸೀನ್ ಅಲ್ಲ ಕೆಲವೇ ಕೆಲವು ತಿಂಗಳ ಹಿಂದೆ ಮುಕ್ತಯವಾದ ಆಂಧ್ರದ ಚುನಾವಣಾ ಸಭೆಗಳಲ್ಲಿ ಹಾಗು ರ‍್ಯಾಲಿಗಳಲ್ಲಿ ಕಂಡು ಬಂದ ದೃಶ್ಯ. ದಕ್ಷಿಣ ಭಾರತದಲ್ಲಿ ಅದರಲ್ಲೂ ಆಂಧ್ರ , ತೆಲಂಗಾಣ ಹಾಗು ತಮಿಳುನಾಡಿನಲ್ಲಿ ಚಲನ ಚಿತ್ರ ನಟರನ್ನು ಆರಾಧಿಸುವ ಪರಿ ಯಾರನ್ನಾದರೂ ಬೆಕ್ಕಸ ಬೆರಗಾಗಿಸುತ್ತದೆ ಹಾಗು ಮೆಚ್ಚಿನ ಅಭಿಮಾನಿಗಳನ್ನು ನೆಚ್ಚಿ ರಾಜಕೀಯಕ್ಕೆ ಬಂದವರಲ್ಲಿ ಕೊನಿಡೇಲ ಕಲ್ಯಾಣ ಬಾಬು ಅಂದರೆ ಪವನ್ ಕಲ್ಯಾಣ  ಮೊದಲಿಗರಂತೂ ಅಲ್ಲವೇ ಅಲ್ಲ  ತಮಿಳುನಾಡಿನಲ್ಲಿ ಎಂಜಿ ರಾಮಚಂದ್ರನ್ (ಎಂಜಿಆರ್)  ಆಂಧ್ರಪ್ರದೇಶದಲ್ಲಿ   ನಂದಮೂರಿ ತಾರಕ ರಾಮರಾವ್ (ಎನ್‌ಟಿಆರ್) ಮತ್ತು ಚಿತ್ರಕಥೆ ಬರಹಗಾರ ಮತ್ತು ಕವಿ ಎಂ ಕರುಣಾನಿಧಿ ಇವರೆಲ್ಲರೂ  ಅಭಿಮಾನಿಗಳ ಭರವಸೆಯ ಮೇಲೆಯೇ ರಾಜಕೀಯಕ್ಕೆ ಧುಮುಕಿ ಆ ರಾಜ್ಯದ  ಮುಖ್ಯ ಮಂತ್ರಿ  ಹುದ್ದೆಯನ್ನು ಅಲಂಕರಿಸಿದವರು, ಕೆಲವೇ ವರುಷಗಳ ಹಿಂದೆ  ರಜನಿಕಾಂತ್ ಕೂಡ  ರಾಜಕೀಯದತ್ತ ವಾಲಿದರು ಕಾರಣಾಂತರಗಳಿಂದ  ರಾಜಕೀಯದಿಂದ ದೂರವಿರುವ  ನಿರ್ಣಯವನ್ನು ಕೈಗೊಂಡರು, ಇತ್ತೀಚಿಗೆ ಕಮಲ್ ಹಾಸನ್ ಕೂಡ ರಾಜಕೀಯದ ರಂಗ ಪ್ರವೇಶ ಮಾಡಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಲೇ  ಇದ್ದಾರೆ ಇವರೊಂದಿಗೆ  ಪವನ್ ಕಲ್ಯಾಣ ಅಣ್ಣ  ಮೆಗಾಸ್ಟಾರ್ ಚಿರಂಜೀವಿ ಕೂಡ ಪ್ರಜಾರಾಜ್ಯಂ ಎಂಬ ಪಕ್ಷ ಕಟ್ಟಿ ಅದನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸುದ್ದು ಈಗ ಇತಿಹಾಸ.

 ಹಾಗೆ ನೋಡಿದರೆ ಪವನ್ ಕಲ್ಯಾಣ ರಾಜಕೀಯ ಪ್ರವೇಶ ನಿನ್ನೆ ಮೊನ್ನೆಯದಲ್ಲ ಮೆಗಾಸ್ಟಾರ್ ಚಿರಂಜೀವಿ  ಪ್ರಜಾರಾಜ್ಯಂ ಪಕ್ಷ ಕಟ್ಟಿದಾಗ ಯುವ ವಿಭಾಗದ ಚುಕ್ಕಾಣಿ ಹಿಡಿದಿದ್ದು ಪವನ್ ಕಲ್ಯಾಣ, ಆದರೆ  ಎನ್‌ಟಿಆರ್ ಅವರಿಗೆ ದಕ್ಕಿದ ರಾಜಕೀಯ ಯಶಸ್ಸು ಚಿರಂಜೀವಿ ಗೆ ದಕ್ಕಲಿಲ್ಲ 2009 ರಲ್ಲಿ ಅವಿಭಜಿತ ಆಂಧ್ರದಲ್ಲಿ ನಡೆದ ಚುನಾವಣೆಯಲ್ಲಿ  ವೈ ಎಸ್ ಆರ್ ಅಲೆಯ ಮುಂದೆ 294 ಸ್ಥಾನಗಳಲ್ಲಿ ಪ್ರಜಾರಾಜ್ಯಂ ಗೆದ್ದಿದ್ದು ಕೇವಲ 18 ಸ್ಥಾನಗಳನ್ನು ಆದರೆ 16 % ವೋಟ್ ಶೇರ್ ಪಡೆದಿತ್ತು ಇದು ಕಡಿಮೆ ಸಾಧನೆಯಾಗಿರಲಿಲ್ಲ ಆದರೆ ರಾಜಕೀಯದಲ್ಲಿ ಇರಲೇಬೇಕಾದ ಗುಣ ಎಂದರೆ ತಾಳ್ಮೆ. ಬಿ ಎಸ್ ಪಿ ಯ ಸಂಸ್ಥಾಪಕರು ಹಾಗು ನಾಯಕರು ಆದ ಕಾನ್ಷಿರಾಮ್    ತಮ್ಮ ಕಾರ್ಯಕರ್ತರಿಗೆ  ಹೇಳುತ್ತಿದ್ದರಂತೆ ಮೊದಲ ಚುನಾವಣೆ ಸೋಲಲ್ಲೆಂದೆ ನಿಲ್ಲಬೇಕು , ಎರಡನೇ ಚುನಾವಣೆ ಸೋಲಿಸಲು ನಿಲ್ಲಬೇಕು ಹಾಗಾದಾಗ ಮೂರನೇ ಚುನಾವಣೆಯಲ್ಲಿ ಗೆಲವು ಕಟ್ಟಿಟ್ಟ ಬುತ್ತಿ ನಿಮ್ಮಿಂದ ಗೆಲುವನ್ನು ಯಾರು ಕಿತ್ತುಕೊಳ್ಳಲಾರರು, ಅಂದರೆ  ಸೋತರು ಸೋತಲ್ಲೆ ಮತ್ತೆ ಮತ್ತೆ ಕ್ಷೇತ್ರದಲ್ಲಿ ಸಂಪರ್ಕದಲ್ಲಿರಬೇಕು , ಸಮಸ್ಯೆಗಳ ದನಿಯಾಗಬೇಕು, ಜನರೊಡನೆ ಬೆರೆಯಬೇಕು ಆಗ ಜನರಿಗೆ ಛೆ ಸೋಲಿಸಿಬಿಟ್ಟೆವಲ್ಲ ಎಂಬ ಸಣ್ಣ ಪಶ್ಚಾತಾಪ ಮೂಡಿ  ಸಹಾನುಭೂತಿ ಸೃಷ್ಟಿಯಾಗಬೇಕು ಆಗ ಗೆಲುವು ಕಟ್ಟಿಟ್ಟ ಬುತ್ತಿ ಎಂಬುದು ಇದರ ತಾತ್ಪರ್ಯ. ಬಹುಷಃ ಪವನ್ ಇವೆಲ್ಲವನ್ನೂ ಅಣ್ಣನೊಡನೆ ಇದ್ದು ಗಮನಿಸಿದ್ದರಬೇಕು ಆದ್ದರಿಂದಲೇ ಚಿರಂಜೀವಿ 2014 ರಲ್ಲಿ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್ ನೊಂದಿಗೆ ವಿಲೀನ ಗೊಳಿಸಿದರೂ  ಪವನ್ ಮಾತ್ರ ಕಾಂಗ್ರೆಸ್ ಸೇರಲಿಲ್ಲ ಕಾಂಗ್ರೆಸ್ ಸೇರದೆ ಬೇರೆ ಪಕ್ಷ ಸೇರಿದರೆ ಎಲ್ಲಿ ಅಣ್ಣನಿಗೆ ನೋವಾಗುವದೋ ಎಂದು ಬೇರೆಯೇ ಪಕ್ಷಕ್ಕೂ ಸೇರಲಿಲ್ಲ , ಒಂದಿಷ್ಟು ಕಾಲ ರಾಜಕೀಯದಿಂದ ದೂರವಿದ್ದು ಮತ್ತೆ ರಾಜಕೀಯ ಪ್ರವೇಶಿಸಿದ್ದು ಜನಸೇನಾ ಪಕ್ಷವನ್ನು ಸ್ಥಾಪಿಸಿದ ನಂತರವೇ.

 ಹೀಗೆ ಜನಸೇನಾ ವನ್ನು ಹುಟ್ಟು ಹಾಕಿದ ಮೇಲೆ ಪವನ್ ಹಾದಿಯೇನು ಅಷ್ಟೊಂದು  ಸುಗಮವಾಗಿರಲಿಲ್ಲ ಪಕ್ಷವನ್ನು ಹುಟ್ಟು ಹಾಕಿದ ನಂತರ 2019 ರಲ್ಲಿ  ಪವನ್ ಅಷ್ಟೇ ಅಲ್ಲ ಟಿ ಡಿ ಪಿ ಯ ನಾಯ್ಡುಗರು ಕೂಡ ಜಗನ್ ಅಬ್ಬರದ ಮುಂದೆ ಸೋಲಪ್ಪಿಕೊಳ್ಳಬೇಕಾಯಿತು, ಕೆಲವರಂತೂ ಅಣ್ಣನಂತೆ ತಮ್ಮನು ಸೋತು ಸುಣ್ಣವಾದನು ಇನ್ನೇನು  ಕೊನಿಡೇಲ ಕುಟುಂಬದ ರಾಜಕೀಯ ಪಯಣ ಅಂತ್ಯವಾದಂತೆ ಎಂದರು  ಆದರೆ ಒಬ್ಬ ಕಮೇಡಿಯನ್ ಗೆ ಹೇಗೆ ಟೈಮಿಂಗ್ ಮುಖ್ಯವೋ ರಾಜಕೀಯದಲ್ಲೂ ಅಷ್ಟೇ ಟೈಮಿಂಗ್ ಅಷ್ಟೇ ಮಹತ್ತರವಾದದ್ದು, 2023 ಸೆಪ್ಟೆಂಬರ್ ತಿಂಗಳಲ್ಲಿ ಅಂದಿನ ಆಂಧ್ರ ಸರ್ಕಾರ ಚಂದ್ರ ಬಾಬು ಅವರನ್ನು ಬಂಧಿಸುವಂತೆ  ಆದೇಶಿಸಿತು, ಚಂದ್ರ ಬಾಬು ನಾಯ್ಡು ಗೆ ಸಂಬಂಧವೇ ಇಲ್ಲದ ಕೇಸಿನಲ್ಲಿ ಬಂಧಿಸುವಂತೆ ಜಗನ್ ಸರ್ಕಾರ ಆದೇಶಿಸಿತು ಎಂಬುವುದು ಕೆಲವರ ವಾದ ಅದೇನೇ ಇರಲಿ ರಾಜಕೀಯದಲ್ಲಿ ಬಂಧನಕ್ಕೊಳಗಾದರು ಕೂಡ ಅದೊಂದು ಇಮೇಜ್ ಸೃಷ್ಟಿ ಮಾಡಿ ಸಹಾನುಭೂತಿ ಸೃಷ್ಟಿಸುತ್ತದೆ ಅದು ಸರಿಯೋ ತಪ್ಪೋ ಎನ್ನುವ ವಿಚಾರ ಒತ್ತಟ್ಟಿಗಿರಲಿ. ಈ ರೀತಿಯ ಎಕಾಏಕಿಯಾ ನಿರ್ಧಾರವನ್ನು ವಿರೋಧಿಸಿ ಪವನ್  ನಾಯ್ಡು ಅವರನ್ನು ಭೇಟಿಯಾಗಲು ರಾಜಮುಂಡ್ರಿ ಜೈಲ್ ಗೆ ಹೋಗುವುದಾಗಿ ಘೋಷಿಸಿ ಅತ್ತ ಪಯಣ ಬೆಳೆಸಿದರು. ಆದರೆ  ಜಗನ್ ಸರ್ಕಾರ  ಪವನ್ ರನ್ನು ಭೇಟಿಯಾಗಲು ಬಿಡದೆ ಮಾರ್ಗ ಮಧ್ಯದಲ್ಲೇ ತಡೆಯೊಡ್ಡಿತು , ಪವನ್ ಈ ಸಂಧರ್ಭದಲ್ಲಿ ಛಲ ಬಿಡದೆ ಆಂಧ್ರ ಹಾಗು ತೆಲಂಗಾಣದ ಸರಹದ್ದಿನಲ್ಲಿ ಜಗ್ಗಯ್ಯಪೇಠಾ ಎಂಬುವಲ್ಲಿ ರಾತ್ರಿ ಎಂಬುದನ್ನು ಲೆಕ್ಕಿಸದೆ ರಸ್ತೆಯ ಮೇಲೆ ನಿದ್ರಿಸಿ ಪ್ರತಿರೋಧ ಒಡ್ಡಿದ್ದರು ಈ ಚಿತ್ರ ಕ್ಷಣ ಮಾತ್ರದಲ್ಲಿ ಆಂಧ್ರ ಹಾಗು ತೆಲಂಗಾಣದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತ್ತು , ಅದಾಗಲೇ ನಾನಾ ಕಾರಣಗಳಿಗೆ ಜಗನ್ ವಿರುದ್ಧ ಅಕ್ರೋಷಗೊಂಡಿದ್ದ ಜನರಿಗೆ ಜಗನ್ ವಿರುದ್ಧ ತೊಡೆ ತಟ್ಟಿ ನಿಲ್ಲುವ ಶಕ್ತಿ ಯೊಂದು ಬೇಕಿತ್ತು, ಬಹುಶ ಆ ರಾತ್ರಿಯೇ ಆಂಧ್ರದ ಜನತೆ ಪವನ್ ಗೆಲುವು ಹಾಗು ಅಮರಾವತಿಯ ಕಲ್ಯಾಣಕ್ಕೆ ನಿರ್ಧರಿಸಿಬಿಟ್ಟಿರಬೇಕು ಕೊನೆಗೂ  ಜಗನ್ ಸರ್ಕಾರ ಪವನ್ ಗೆ ಮಣಿದು ನಾಯ್ಡು ಅವರನ್ನು ಭೇಟಿ ಮಾಡಲು ಅವಕಾಶ ಕೊಟ್ಟಿತು , ಭೇಟಿ ಮಾಡಿ ಬಂದ ನಂತರ ಅಂದೇ ಒಂದು ಬಗೆಯ ಟಿಡಿಪಿ ಹಾಗು ಜನಸೇನೆಯ ಮೈತ್ರಿಯನ್ನು ಪವನ್ ಘೋಷಿಸಿಯೇ ಬಿಟ್ಟರು 2020 ರಿಂದಲೇ ಬಿ ಜೆ ಪಿ ಗೆ ಬೆಂಬಲ ಘೋಷಿಸಿದ್ದ ಪವನ್ ನೇತೃತ್ವದಲ್ಲಿ ಟಿಡಿಪಿ , ಬಿ ಜೆ ಪಿ  ಮತ್ತೊಮ್ಮೆ ಒಂದಾಗುವಂತಾಯಿತು.

 2024 ರ ವಿಧಾನಸಭಾ ಹಾಗು ಲೋಕಸಭಾ  ಚುನಾವಣೆಗೆ   ಜನಸೇನಾ , ಟಿ ಡಿ ಪಿ ಹಾಗು ಬಿ ಜೆ ಪಿ ಒಟ್ಟಾಗಿ ಬರುವ ನಿರ್ಧಾರ ಮಾಡಿತು ಆಡಳಿತ  ವಿರೋಧಿ ಅಲೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು , ಅದೆಲ್ಲದರೊಂದಿಗೆ ಬಹುಷಃ ಆಂಧ್ರದ ಇತಿಹಾಸದಲ್ಲಿಯೇ ಪವನ್ ಕಾರಣಕ್ಕಾಗಿ ಮೊದಲಬಾರಿ ಎಂಬಂತೆ ಕಾಪು ಹಾಗು ಕಮ್ಮ ಸಮಾಜ ಒಟ್ಟಾಗಿ ಮೈತ್ರಿಕೂಟಕ್ಕೆ ಬೆಂಬಲ ನೀಡಿತು, ಟಿ ಡಿ ಪಿ , ಜನಸೇನಾ ಹಾಗು ಬಿ ಜೆ ಪಿ ಭಾರಿ ಜಯದೊಂದಿಗೆ ಅಧಿಕಾರಕ್ಕೇರಿ ಚಂದ್ರಬಾಬು ಇದೀಗ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ    ಚುನಾವಣೆಯ ಮ್ಯಾನ್ ಆ ದಿ ಮ್ಯಾಚ್ ಆಗಿ ಹೊರ ಹೊಮ್ಮಿದ  ಪವನ್ ಉಪ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ, ಅಣ್ಣ ಚಿರಂಜೀವಿಯ ಖುಷಿಗಂತೂ ಪಾರವಿಲ್ಲ ಅದೆಲ್ಲದರ ನಡುವೆ ಮೋದಿಜಿ ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ ಪವನ್ ಹಾಗು ಚಿರಂಜೀವಿ ಸಹೋದರರ ಕೈ ಮೇಲೆ ಎತ್ತಿ ಹಿಡಿದಿದ್ದು ಇದರಲ್ಲೇನೋ ತೆಲಂಗಾಣದ ರಾಜಕೀಯದ ಸೂಚನೆಗಳು ಕಂಡು ಬರುತ್ತಿದೆ ಎಂದು ಎಲ್ಲರೂ ವಿಮರ್ಶಿಸುತ್ತಿದರೆ ಅದೇನೇ ಇರಲಿ ಈ  ಬಾರಿ ಮಾತ್ರ ಪವನ್ ಕಲ್ಯಾಣ್  ಅವರ ಪ್ರತಿಯೊಂದು ನಡೆಯು ರಾಜಕೀಯವೆಂಬ  ನಿರಂತರ ಪ್ರಯೋಗ ಶಾಲೆಯಲ್ಲಿ ಪರಿಪಕ್ವಗೊಂಡ ಚತುರ ನಾಯಕನೊಬ್ಬನ  ಜಾಣ್ಮೆಯ ನಡೆಯಂತೆ ಕಂಡು ಬರುತ್ತಿತ್ತು , ಪ್ರತಿ ಹೆಜ್ಜೆಯು ಅಳೆದು ತೂಗಿ ಇಟ್ಟಂತಿತ್ತು , ಪವನ್ ಭಾಷಣವನ್ನು ಕೇಳಿದವರಂತೂ  ಒಂದು ರೀತಿಯ ಆವೇಶಕೊಳಗಾದವರಂತೆ ಕಾಣುತ್ತಿದ್ದರು ಅಂತಹ ಆಕರ್ಷಕ ಭಾಷಣಗಳು ಹಲೋ ಏ ಪಿ ಬೈ ಬೈ ವೈ ಸಿ ಪಿ ಎಂಬ ಘೋಷಣೆಗಳು ಆಂಧ್ರದ ಮೂಡನ್ನೇ ಬದಲಾಯಿಸಿಬಿಟ್ಟಿದವು   ಪರಿಣಾಮವಾಗಿ  ಈ ಬಾರಿಯ ಆಂಧ್ರದ ಚುನಾವಣೆಯನ್ನು ಪವನ್ ಬ್ಲಾಕ್ ಬ್ಲಾಸ್ಟರ್ ಮೂವಿಯನ್ನಾಗಿಸಿದರು, ಆದರೆ ಇಷ್ಟು ದಿನಗಳ ವಿಷಯವೇ ಬೇರೆ ನಿಜವಾದ ಸವಾಲುಗಳು ಪ್ರಾರಂಭವಾಗುವುದು ಆಡಳಿತ ಪಕ್ಷದಲ್ಲಿದ್ದಾಗಲೇ ಆದ್ದರಿಂದ ಎಲ್ಲರ ದೃಷ್ಠಿ ಪವನ್ ರತ್ತ ನೆಟ್ಟಿದೆ.  ಆಂಧ್ರದ ಜನತೆ ಹೊಸ ರಾಜಧಾನಿ ಅಮರಾವತಿಯ ಕಲ್ಯಾಣದ ನೀರಿಕ್ಷೆಯಲ್ಲಿದ್ದಾರೆ.




No comments:

Post a Comment