Monday, September 2, 2024

 ಸಿದ್ಧಿ ಸಾಧಿಸಿದ ಹೃದಯವಂತ

ಅದೆಷ್ಟೋ ಬಾರಿ ನಮ್ಮ ಹೃದಯಕ್ಕೆ ಏನು ಬೇಕು ಎಂದು ನಮಗೆ ಗೊತ್ತಾಗುವುದಿಲ್ಲ ಆದರೆ ಇವರು ಹಾಗಲ್ಲ , ಕ್ಷಣ ಮಾತ್ರದಲ್ಲಿ ಬೇರೆಯವರ ಹೃದಯ ನೋಡಿ ಹ್ರದಯಕ್ಕೇನೂ ಬೇಕು ಎಂದು ಹೇಳುವ ಸಿದ್ಧಿ ಸಾಧಿಸಿದ ಹೃದಯವಂತ ವೈದ್ಯ ದೇವಿ  ಶೆಟ್ಟಿ. ಬಹುಶಹ ಇಡೀ ದೇಶದಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಎಂದರೆ ಹೌ ಹಾರುತ್ತಿದ್ದ 90 ರ ದಶಕದಲ್ಲಿ ಅದಕ್ಕೊಂದು ಸರಳತೆಯ ಆಯಾಮ ತಂದು ಕೊಟ್ಟ ಶ್ರೇಯಸ್ಸು ಡಾ ದೇವಿ ಶೆಟ್ಟಿ ಅವರಿಗೆ ಸಲ್ಲಬೇಕು.  ಯಾವುದೊ ಒಂದು ಹಿಂದಿ ಚಿತ್ರದಲ್ಲಿ ಕೇಳಿದ ಸುಪ್ರಸಿದ್ದ ಸಂಭಾಷಣೆಯ ನೆನಪು " ಅಗರ್ ಕಿಸಿ ಚೀಜ್ ಕೋ ದಿಲ್ ಸೆ ಚಾಹೋ ತೊ ಪೂರಿ ಕಾಯಿನಾತ್ ಉಸೇ ತುಮಸೆ ಮಿಲಾನೇ  ಕೆ ಕೊಶಿಶ್ ಮೇ ಲಗ ಜಾತಿ ಹೆ " ಅಂದರೆ ನೀವು ಪೂರ್ಣ ಹೃದಯದಿಂದ ಏನನ್ನಾದರೂ ಬಯಸಿದರೆ ಅಥವಾ ಮಾಡಬೇಕೆಂಬ ಪಣ ತೊಟ್ಟರೆ, ಇಡೀ ವಿಶ್ವವೇ ಅದನ್ನು ನಿಮ್ಮ ಬಳಿಗೆ ತರಲು ಪ್ರಯತ್ನಿಸುತ್ತದೆ ಎಂದು ಇದರ ಅರ್ಥ ಬಹುಶಃ ದೇವಿ ಶೆಟ್ಟರ ಬಾಳಲ್ಲೂ ಅದೇ ಆಗಿರಬೇಕು. ಅವರು ಐದನೇ ತರಗತಿಯಲ್ಲಿರುವಾಗ ಅವರ ಶಾಲೆಯ  ಶಿಕ್ಷಕರು ಡಾಕ್ಟರ್ ಕ್ರಿಶ್ಚಿಯನ್ ಬರ್ನಾರ್ಡ್ ಎಂಬುವವರು ಕೇಪ್ಟೌನ್  ನಲ್ಲಿ ಮೊಟ್ಟ ಮೊದಲ ಹಾರ್ಟ್ ಟ್ರಾನ್ಸಪ್ಲಾಂಟ್ ಮಾಡಿದರು ಎಂದು ಎಳೆ ಎಳೆಯಾಗಿ ಮಕ್ಕಳಿಗೆ ಬಿಡಿಸಿ ಹೇಳಿದರಂತೆ. ಈ ಒಂದು ವಿಷಯ ಹಾಗು ಮನೆಯಲ್ಲಿನ ವಾತಾವರಣ ಇವೆಲ್ಲವೂ ಪ್ರಭಾವ ಬೀರಿ ಐದನೇ ತರಗತಿಯಲ್ಲಿದ್ದ ಬಾಲಕ ದೇವಿ ಶೆಟ್ಟಿ ಅಂದೇ ಹಾರ್ಟ್ ಸರ್ಜನ್ (ಹೃದಯ ಶಸ್ತ್ರ ಚಿಕಿತ್ಸಕ) ಆಗಬೇಕೆಂದು ನಿರ್ಧರಿಸಿದ್ದರಂತೆ, ಆದರೆ ಹಾರ್ಟ್ ಸರ್ಜನ್ ಆಗುವ ಮೊದಲು ಡಾಕ್ಟರ್ ಆಗಬೇಕೆಂದು ಅವರಿಗೆ ಗೊತ್ತಿರಲಿಲ್ಲವಂತೆ  ಆದರೆ  ಅಂತಹ ಮುಗ್ದ ಬಾಲ್ಯದಲ್ಲೇ  ಹಾರ್ಟ್ ಸರ್ಜನ್ ಆಗಬೇಕೆಂಬ ತೊಟ್ಟ ಪಣ ಹಾಗು ಸಂಕಲ್ಪ ಕಾಲದಿಂದ ಕಾಲಕ್ಕೆ ಅದು ದೃಢವಾಗುತ್ತ ಬಂದಿತ್ತು ಎಂಬುದು ಗಮನಾರ್ಹ ಸಂಗತಿ. ಅದೇ ರೀತಿ ಕೇವಲ ಪುಸ್ತಕದ ಪಾಠವನ್ನು ಮಾಡದೆ ಅಂದು  ದೂರದ ದೇಶದಲ್ಲಿ ಏನಾಗುತ್ತಿದೆ ಎಂದು ತಿಳಿದು ಅದನ್ನು ಮಕ್ಕಳವರೆಗೆ ತಲುಪಿಸಬೇಕೆಂಬ ತುಡಿತ  ಆ ಗುರುವಿಗೆ ಇತ್ತಲ್ಲ ಅದು ಬಹು ದೊಡ್ಡ ಸಂಗತಿ , ಬಹುಶಃ ಇಂತಹ ಸರಳ ಉದಾಹರಣೆ ಸಾಕು ಬದುಕಿನಲ್ಲಿ ಗುರುವಿನ ಮಹತ್ವವೇನು ಎಂದು ಸಾರಲು. 

ಹೀಗೆ ಇದು ಡಾಕ್ಟರ್ ಆಗುವಲ್ಲಿ  ದೇವಿ ಶೆಟ್ಟರಿಗೆ  ಇದ್ದ ಪ್ರೇರಣೆಯ ಸಂಗತಿಗಳಾದರೆ ಲಂಡನ್ನಲ್ಲಿ ಯಶಸ್ವಿ ಪ್ರಾಕ್ಟಿಸ್  ಬಿಟ್ಟು ಭಾರತಕ್ಕೆ ಅದರಲ್ಲೂ ಕೋಲ್ಕತ್ತಾಗೆ ಕೆಲಸ ಅರಸಿ ಬಂದದ್ದು ಮತ್ತೊಂದು ಕುತೂಹಲಕಾರಿ ಸಂಗತಿ. ದೇವಿ ಶೆಟ್ಟರು ಲಂಡನ್ ಸೇರಿದ್ದು ಹೆಚ್ಚಿನ ಅನುಭವ ಹಾಗು ಪರಿಣಿತಿಗಾಗಿ ಮಾತ್ರ,  ಆದ್ದರಿಂದ ಅವರಿಗೆ ಭಾರತಕ್ಕೆ ಮರಳ ಬೇಕೆಂಬ ತುಡಿತ ಬಲವಾಗಿತ್ತು. ಈ ನಿಟ್ಟಿನಲ್ಲಿ ಅವರು ನಮ್ಮ ಬೆಂಗಳೂರಿನ ಸೆಂಟ್ ಜಾನ್ಸ್ ಮೆಡಿಕಲ್ ಹಾಸ್ಪಿಟಲ್ ನಲ್ಲೂ ಕೆಲಸಕ್ಕೆ ಸೇರಲು ಪ್ರಯತ್ನಿಸಿದ್ದರಂತೆ, ಆದರೆ ಅಂದು ಸೆಂಟ್ ಜಾನ್ಸ್   ಹಾಸ್ಪಿಟಲ್ ಯು ಆರ್ ಟೂ ಯಂಗ್ ಟು ಬಿ ಹಾರ್ಟ್ ಸರ್ಜನ್ ಎಂದು ಹೇಳಿತ್ತಂತೆ. ಕೆಲವು ದಿನಗಳ ನಂತರ ಲಂಡನ್ ನ  ಗಯ್ಸ್ ಹಾಸ್ಪಿಟಲ್ ಸರ್ಜನ್ ಒಬ್ಬರು ದೇವಿ ಶೆಟ್ಟರಿಗೆ ಬರ್ಲಾ ಫ್ಯಾಮಿಲಿ ಕೋಲ್ಕತ್ತಾದಲ್ಲಿ ಬಹು ದೊಡ್ಡ ಹಾರ್ಟ್ ರಿಸರ್ಚ್ ಸೆಂಟರ್ ಸ್ಥಾಪಿಸುತ್ತಿದ್ದರೆ ನೀವೇಕೆ ಸೇರಬಾರದು ಎಂದು ಕೇಳಿದರಂತೆ, ಆಗ ದೇವಿ ಶೆಟ್ಟಿ ಬರ್ಲಾ ಯಾರು ನನಗೆ ತಿಳಿದಿಲ್ಲ ನಾನು ಸೇರುವುದಿಲ್ಲ ಅಂದರಂತೆ ಮತ್ತೆ ಒಂದು ವರ್ಷದ ನಂತರ ಬಿರ್ಲಾ ಕುಟುಂಬ ಮತ್ತೆ ಲಂಡನ್ ಗೆ ಭೇಟಿ ನೀಡಿದರಂತೆ ಆಗ ಅಲ್ಲಿನ ಸರ್ಜನ್ ಹಿಂದೆ ಮಾಡಿದ್ದ ತಪ್ಪು ಮಾಡಲಿಲ್ಲ, ಬರ್ಲಾ ಎನ್ನದೆ ಬಿರ್ಲಾ ಕುಟುಂಬ ಆಸ್ಪತ್ರೆ ಕಟ್ಟುತ್ತಿದೆ ಮತ್ತೊಮ್ಮೆ ಯೋಚನೆ ಮಾಡಿ ಅಂದರಂತೆ ಆಗ ಒಹೋ ಇದು ಬಿರ್ಲಾ ಎಂದು ತಿಳಿದು ದೇವಿ ಶೆಟ್ಟಿ ಒಪ್ಪಿ ಕೋಲ್ಕತ್ತಾ ನಗರಕ್ಕೆ ಬಂದರು. ಹಾಗೆ ಬಂದ ದೇವಿ ಶೆಟ್ಟಿ ಮತ್ತೆ ಹಿಂದಿರುಗಿ ನೋಡಲಿಲ್ಲ ಕೆಲವೇ ಕೆಲವು ವರುಷಗಳಲ್ಲಿ ದೇಶವೇ ನಿಬ್ಬೆರಗಾಗಿ ನೋಡುವಂತೆ ಎತ್ತರಕ್ಕೆ ಬೆಳೆದು ನಿಂತರು. ಡಾಕ್ಟಾರಿಕೆ ಬಿಡುವಿಲ್ಲದೆ ನಡೆಯುತಿತ್ತು ಯಾವುದೊ ಸಮಾರಂಭದಲ್ಲಿ ಯಾರೋ ಮಹಾನುಭವರು ನಿಮ್ಮ ಸೇವೆ ಸಣ್ಣ ಸಣ್ಣ ಪಟ್ಟಣ ಹಾಗು  ಹಳ್ಳಿಗಳಿಗೂ ವಿಸ್ತಾರವಾಗಬೇಕು ನೀವು ಸರ್ಕಾರಕ್ಕೆ ಜಾಗಕ್ಕಾಗಿ ಅರ್ಜಿ ಸಲ್ಲಿಸಿ ಜಾಗ ಪಡೆದು ನೀವೇ ಏಕೆ ಆಸ್ಪತ್ರೆ ಕಟ್ಟಬಾರದು  ಎಂದರಂತೆ, ದೇವಿ ಶೆಟ್ಟರು ಆಯಿತು ಆಯಿತು ಎಂದು ಬಿಟ್ಟಿ ಸಲಹೆಗಳಿಗೇನು ಬರ ಎಂದು ಅಸಡ್ಡೆ ಮಾಡಿದ್ದರಂತೆ, ಆದರೆ ಆ ಮಹಾನುಭಾವರು ಎರಡು ವಾರದ ನಂತರ ಮುಖ್ಯ ಮಂತ್ರಿಗಳ ಕಛೇರಿಯಿಂದ ಮತ್ತೆ ಕರೆ ಮಾಡಿ ಜಾಗಕ್ಕಾಗಿ ಅರ್ಜಿ ಏಕೆ ಸಲ್ಲಿಸಿಲ್ಲ ಎಂದು ಕೇಳಿದರು, ಆಗ ದೇವಿ ಶೆಟ್ಟರು ಸ್ವಲ್ಪ ಗಂಭೀರವಾಗಿ  ಈ ವಿಷಯದ ಬಗ್ಗೆ ಚಿಂತನೆ ನಡೆಸಿ ತಮ್ಮ ಶ್ರೀಮತಿ ಬಳಿ ಕೂಡಿಟ್ಟಿದ್ದ ಹಣವನ್ನು ಬಳಸಿ  ಜಾಗಕ್ಕೆ ಅರ್ಜಿ ಸಲ್ಲಿಸಿದರು. ಆದರೆ ಜಾಗ ತೆಗೆದು ಕೊಂಡ ಮೇಲೆ ಕಟ್ಟಡ ಎದ್ದು ನಿಲ್ಲಬೇಕು , ಆಸ್ಪತ್ರೆಗೆ ಬೇಕಾಗುವ ಸಲಕರಣೆ ಕೊಂಡು ಕೊಳ್ಳಬೇಕು ಇದಕ್ಕೆಲ್ಲ ಹಣ ಬೇಕು ಹಾಗು ಅಂದು ಈಗಿನಂತೆ ಸ್ಟಾರ್ಟ್ ಅಪ್ ಕಾನ್ಸೆಪ್ಟ್ ಇರಲಿಲ್ಲ. ಈಗಿನಂತೆ ಹೇರಳವಾಗಿ ಹಣ ಸಹಾಯ ಮಾಡುವ ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಇರಲಿಲ್ಲ ಇದ್ದ ಒಂದೇ ಒಂದು ಮಾರ್ಗ ಬ್ಯಾಂಕ್ಗಳು ಅಥವಾ ಹಣಕಾಸು ಸಂಸ್ಥೆಗಳು. ಈ ಸಂಸ್ಥೆಗಳು  ಸಾಲ ಕೊಟ್ಟರೆ ಏನಾದರೂ ಮಾಡುವ ಆಲೋಚನೆ ಮಾಡಬಹುದಾಗಿತ್ತು. ಈ ನಿಟ್ಟಿನಲ್ಲಿ ದೇವಿ ಶೆಟ್ಟರು ಹಲವಾರು ಬ್ಯಾಂಕ್ಗಳ ಕದ ತಟ್ಟಿದರು ಪ್ರಯೋಜನವಾಗಲಿಲ್ಲ, ಆದರೆ ಅಂದಿನ ಐಸಿ ಐಸಿ ಐ ಚೇರ್ಮೆನ್ ಕೆ ವಿ ಕಾಮತ್ ಸಹಾಯ ಮಾಡಲು ಉತ್ಸುಕರಾಗಿದ್ದರು. ಆದರೆ ಎಲ್ಲ ಬ್ಯಾಂಕ್ಗಳು ಸಾಮಾನ್ಯವಾಗಿ ಸಂಪೂರ್ಣ ಹಣವನ್ನು ಸಾಲದ ರೂಪದಲ್ಲಿ ಕೊಡುವುದಿಲ್ಲ ಒಂದಿಷ್ಟು ಹಣವನ್ನು ಬಂಡವಾಳದ ರೂಪದಲ್ಲಿ ಸ್ಥಾಪಕರು ತೊಡಗಿಸಬೇಕೆಂದು ಬಯಸುತ್ತದೆ ದೇವಿ ಶೆಟ್ಟರ ವಿಷಯದಲ್ಲೂ ಅದೇ ಆಯಿತು. ಐಸಿ ಐಸಿ ಐ ನೀವೆಷ್ಟು ಬಂಡವಾಳ ತೊಡಗಿಸುತ್ತೀರಾ ಎಂದು ಕೇಳಿತು, ದೇವಿ ಶೆಟ್ಟಿ ಸುಮ್ಮನಾದರು, ಆದರೆ ಪ್ರಯತ್ನ ಮುಂದುವರೆದಿತ್ತು ಆಗ ಕಂಡಿದ್ದು ದೇವಿ ಶೆಟ್ಟರ ಸ್ನೇಹಿತರು  ಟಾಟಾ ಕ್ಯಾಪಿಟಲ್ ನ ಕೃಷ್ಣ ಕುಮಾರ್ , ಅವರ ಬಳಿ ಹೋಗಿ ಹಣ ಕೇಳಿದರಂತೆ ಅವರು ಕೂಡ ಆಯಿತು ಮಾಡೋಣ ಎಂದರು ಆದರೆ ಅವರು ಕೂಡ ಐಸಿ ಐಸಿ ಐ ನಂತೆ ನಿಮ್ಮ ಬಂಡವಾಳ ಎಷ್ಟು ಅಂದರಂತೆ, ಮತ್ತೆ ಕೆಲ ಕಾಲ ಸುಮ್ಮನಾದ ದೇವಿ ಶೆಟ್ಟಿ ಕೆಲವು ದಿನಗಳ ನಂತರ ಐಸಿ ಐಸಿ ಐ ಬಳಿ ಹೋಗಿ ಟಾಟಾ ಕ್ಯಾಪಿಟಲ್ ಒಂದಿಷ್ಟು ಹಣ ಹೂಡುತ್ತಿದ್ದಾರೆ ಅಂದರಂತೆ ಅದೇ ರೀತಿ ಟಾಟಾ ಕ್ಯಾಪಿಟಲ್ ಅವರ ಬಳಿ ಹೋಗಿ ಐಸಿ ಐಸಿ ಐ ಒಂದಿಷ್ಟು ಹಣ ಹೂಡುತ್ತಿದ್ದಾರೆ ಎಂದು ಹೇಳಿದರಂತೆ ಆಗ ಇಬ್ಬರು ಗುಡ್ ಗುಡ್ ಎಂದು ಹೇಳಿ ಸಾಲ ಕೊಡಲು ಮುಂದಾದರು ನಂತರ ನಡೆದದ್ದು ಇತಿಹಾಸ.

ದೇವಿ ಶೆಟ್ಟಿ ಅವರ  ಪರಿಶ್ರಮದ ಫಲವಾಗಿ ನಾರಾಯಣ ಹೃದಯಾಲಯ ಇಂದು ಬ್ರಹತ್ ಸಂಸ್ಥೆಯಾಗಿ ಬೆಳೆದಿದೆ. ಇಲ್ಲಿ ಎಕನಾಮಿಕ್ಸ್ ನ ಲಾರ್ಜ್ ಸ್ಕೇಲ್ ಆಫ್ ಪ್ರೊಡಕ್ಷನ್ ನ ಫ್ಯಾಕ್ಟರಿ  ವಿಧಾನವನ್ನು ಆಸ್ಪತ್ರೆಗೆ  (ಹೆಚ್ಚು ಹೆಚ್ಚು ಉತ್ಪಾದನೆ ಮಾಡುವುದರಿಂದ ವೆಚ್ಚ ಕಡಿಮೆ ಮಾಡುವ ವಿಧಾನ ) ಅಳವಡಿಸಿ ಹೃದಯ ಚಿಕಿತ್ಸೆಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಯಶಸ್ವಿಯೂ ಆಗಿದೆ, ಅಲ್ಲದೆ  ತನ್ನದಲ್ಲದ   ಕ್ಷೇತ್ರ ಸಾಫ್ಟ್ವೇರ್ ಕ್ಷೇತ್ರಕ್ಕೂ ಕೈ ಹಾಕಿ ರೋಗಿಗಳ ಎಲ್ಲ ಮಾಹಿತಿಯನ್ನು ಕಾಪಿಟ್ಟು ಅದನ್ನು ಚಿಕಿತ್ಸೆಗೆ ಬಳಸಿಕೊಳ್ಳುವ ವಿಶಿಷ್ಟ ಸಾಫ್ಟ್ವೇರ್ ಅಭಿವೃದ್ಧಿಗೂ ಮುನ್ನುಡಿ ಬರೆದಿದೆ. ಇದೀಗ ಕೆಲವೇ ದಿನಗಳ ಹಿಂದೆ ತಮ್ಮ ಸಂಸ್ಥೆಯಿಂದ "ಅದಿತಿ" ಎಂಬ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊರ ತಂದಿದೆ, ಇದು ಅತ್ಯಂತ ಕಡಿಮೆ ಪ್ರೀಮಿಯಂ ನ ಸೌಲಭ್ಯ ಎಂದು ಸಂಸ್ಥೆ ಹೇಳಿ ಕೊಂಡಿದೆ. ಸಾಮಾನ್ಯವಾಗಿ ಈ ಹೆಲ್ತ್ ಇನ್ಶೂರೆನ್ಸ್ ವ್ಯವಸ್ಥೆಯಲ್ಲಿ ಮೂವರ ಪಾಲ್ಗೊಳ್ಳುವಿಕೆ ಇರುತ್ತದೆ  ಅದರಲ್ಲಿ ಆಸ್ಪತ್ರೆಗಳು, ಇನ್ಶೂರೆನ್ಸ್ ಕಂಪನಿಗಳು ಹಾಗು ಇನ್ಶೂರೆನ್ಸ್ ಪಾಲಿಸಿ ಹೊಂದಿದ ರೋಗಿಗಳು . ಸಾಮಾನ್ಯವಾಗಿ ಈ ಮೂವರಲ್ಲಿ ಪರಸ್ಪರ ಒಬ್ಬರಿಗೊಬ್ಬರಿಗೆ ನಂಬಿಕೆ ವಿಶ್ವಾಸಗಳಿರುವುದಿಲ್ಲ ಇನ್ಶೂರೆನ್ಸ್ ಕಂಪನಿಗೆ ಆಸ್ಪತ್ರೆಯ ಮೇಲೆ ನಂಬಿಕೆ ಇರುವುದಿಲ್ಲ, ಆಸ್ಪತ್ರೆಗೆ ಇನ್ಶೂರೆನ್ಸ್ ಕಂಪನಿಗಳ ಮೇಲೆ ನಂಬಿಕೆ ಇರುವುದಿಲ್ಲ  ಇನ್ನು ರೋಗಿಗೆ ಬಿಡಿ ಇಬ್ಬರ ಮೇಲು ನಂಬಿಕೆ ಇರುವುದಿಲ್ಲ. ಇಂತಹ ಸಂಧರ್ಭದಲ್ಲಿ ಆಸ್ಪತ್ರೆಯೇ ತನ್ನ ಸಂಸ್ಥೆಯಿಂದ ಇನ್ಶೂರೆನ್ಸ್ ಸ್ಕೀಮ್ ಅನ್ನು ಹೊರ ತಂದಿರುವುದು ಆಸಕ್ತಿದಾಯಕ ಸಂಗತಿ, ಹಾಗು ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಹೇಗೆ ಕೆಲಸ ಮಾಡಬಹುದು ಎಂದು ಕಾಲ ಕ್ರಮೇಣ ಕಂಡು ಕೊಳ್ಳಬಹುದು. ಅದೇನೇ ಇರಲಿ ದೇವಿ ಶೆಟ್ಟಿ ಉದ್ದೇಶ ಇಡೀ ಜಗವೇ ಮೆಚ್ಚುವಂತಹದು ಅವರು ಹೇಳುವ ಪ್ರಕಾರ ನಮ್ಮಲಿರುವ ಸಂಪನ್ಮೂಲ ಆರೋಗ್ಯದ ಚಿಕಿತ್ಸೆಯನ್ನು ನಿರ್ಧರಿಸಬಾರದು, ಅಂದರೆ ಒಬ್ಬ ಕೋಟ್ಯಧಿಪತಿಗೆ  ಸಿಗುವ ಚಿಕಿತ್ಸೆ ಹಾಗು ದಿನ ಕೂಲಿ ಮಾಡುವ ಕಾರ್ಮಿಕನಿಗೆ ಸಿಗುವ ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಾಸವಾಗಬಾರದು. ಚಿಕಿತ್ಸೆ ಪಡೆಯುವ ಸಮಯದಲ್ಲಿ ಉಳಿದು ಕೊಳ್ಳುವ ಕೋಣೆ ಡೀಲಕ್ಸ್ , ಡೈಮಂಡ್ ಹೀಗೆ ಯಾವುದೇ ಆಗಿರಬಹುದು ಆದರೆ ಚಿಕಿತ್ಸೆ ಒಂದೇ ಆಗಿರಬೇಕು ಹಾಗು ಅದು ಕೈ ಗೆಟಕುವಂತಿರಬೇಕು ಎಂಬುದು, ಹಾಗಾಗಲಿ ಎಂಬುದೇ ಎಲ್ಲರ ಹಾರೈಕೆಯು ಕೂಡ ಏಕೆಂದರೆ ಸರ್ಕಾರ ಸರ್ಕಾರೀ ಆಸ್ಪತ್ರೆಗಳ ಮೂಲಕ ಇದನ್ನು ಸಾಧಿಸಬೇಕಾಗಿತ್ತು ಆದರೆ ಅದು ಕೇವಲ ಕನಸು ಹಾಗು ಗಗನ ಕುಸುಮ ಎಂಬತಾಗಿದೆ. ಇಂದು ಒಬ್ಬ ರೋಗಿ ಸರ್ಕಾರೀ ಆಸ್ಪತ್ರೆ ಗೆ ಹೋಗಲು ಮೀನಾ ಮೇಷ ಎಣಿಸುವುದು ಅಲ್ಲಿ ಚಿಕಿತ್ಸೆ ಹೇಗೋ ಏನೋ ಎಂದಲ್ಲ ಅಲ್ಲಿನ ಅನುಭವದಿಂದ ಅದು ಬದಲಾಗಬೇಕು. ಏಕೆಂದರೆ ಎಲ್ಲೆಡೆ ದೇವಿ ಶೆಟ್ಟಿ ಅಂತವರು ಇರಲಾಗುವುದಿಲ್ಲ, ಅಲ್ಲದೆ ಖಾಸಗಿ ಸಂಸ್ಥೆಗಳ ಆಮ್ಲಜನಕವೇ ಹಣ , ಸರ್ಕಾರೀ ಆಸ್ಪತ್ರೆಗಳ ಆಮ್ಲಜನಕವು ಹಣವೇ ಆದರೆ ಸರ್ಕಾರಕ್ಕೆ ಈ ಆಮ್ಲಜನಕ  ಆಸ್ಪತ್ರೆಗಳಿಂದಲೇ ಬರಬೇಕೆಂದಿಲ್ಲ ಸರ್ಕಾರಕ್ಕೆ ಹಣವೆಂಬ ಆಮ್ಲ ಜನಕದ ಮೂಲ ಬಹಳಷ್ಟಿದೆ. ಮೇಲಾಗಿ ಇದು ಸರ್ಕಾರದ ಕರ್ತವ್ಯವು ಹೌದು. ಒಬ್ಬ ವೈದ್ಯ ಹಾಗು ಒಂದು ಸಂಸ್ಥೆಯ ಅರಿವಿಗೆ ಬಂದ  ಅರೋಗ್ಯ ಭಾಗ್ಯದ ಸತ್ಯದರ್ಶನ ಸರ್ಕಾರಗಳ ಅರಿವಿಗೂ ಬರಬೇಕು. ಅದಾಗಬೇಕೆಂದರೆ ಮೂಡ, ದೂಡ , ನಿಗಮ ಹಾಗು  ಲ್ಯಾಟರಲ್ ಎಂಟ್ರಿ ಇವುಗಳಿಂದ ಪುರುಸೊತ್ತು ಸಿಗಬೇಕು.

https://epaper.samyukthakarnataka.com/editionname/Bangalore/SMYK_BANG/page/6/article/SMYK_BANG_20240826_06_2

ಕಾರ್ತಿಕ್ ಎಸ್ ಬಾಪಟ್.

No comments:

Post a Comment