Saturday, March 18, 2017

ಚುನಾವಣೆಗಳೆಂಬುದು ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬಗಳಲೊಂದು ನಿಜ ಆದರೆ ಈ ಹಬ್ಬಗಳು ಪದೇ ಪದೇ ಬಂದೆರಗಿದರೆ ಆ ಹಬ್ಬಗಳನ್ನು ಆಚರಿಸುವ ಮಾನಸಿಕ ಮತ್ತು ಆರ್ಥಿಕ ಚೈತನ್ಯವಿರಬೇಕಲ್ಲವೇ?

ಇನ್ನೇನ್ನು ಕೆಲವೇ ದಿನಗಳಲ್ಲಿ ಪಂಚ ರಾಜ್ಯಗಳ ಚುನಾವಣೆ ಮುಗಿದು ಸರ್ಕಾರ ರಚನೆಯ ಪ್ರಕ್ರಿಯೆ ಪ್ರಾರಂಭ್ವಾಗುತ್ತದೆ , ಅಷ್ಟರ ಮಟ್ಟಿಗೆ ರಾಜಕೀಯ ಪಕ್ಷಗಳಿಗೆ ಹಾಗು ಕೆಲವು ರಾಜ್ಯಗಳ ಗದ್ದುಗೆಯನ್ನೇರಿರುವ ರಾಜಕೀಯ ಪಕ್ಷಗಳಿಗೆ ನಿರಾಳ  ಆದರೆ ಹಾಗೆ ಬಂದು ಹೀಗೆ ನೋಡುವಷ್ಟರಲ್ಲಿ ಅಂದರೆ ಇನ್ನೊಂದು ೧೦ ತಿಂಗಳು ಕಳೆದರೆ ಗುಜರಾತ್ ವಿಧಾನಸಭೆಯ  ಚುನಾವಣೆಗೆ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಸಿದ್ಧವಾಗಬೇಕು, ತದನಂತರ ನಾಗಾಲ್ಯಾಂಡ್ , ಕರ್ನಾಟಕ, ಮೇಘಾಲಯ, ಹಿಮಾಚಲ ಪ್ರದೇಶ, ತ್ರಿಪುರ ಮತ್ತು ಮಿಜೋರಾಂ ಹೀಗೆ ೨೦೧೮ರ ವಿಧಾನಸಭಾ ಚುನಾವಣೆಗೆ ಅಣಿಯಾಗಬೇಕು , ಇದರ ಮಧ್ಯೆ ಕೆಲವು ರಾಜ್ಯಗಳಲ್ಲೇನಾದರೂ ವಿಧಾನಸಭೆಯ ಅವಧಿಗೂ ಮುಂಚೆ ವಿಸರ್ಜನೆ , ವಿಶ್ವಾಸ ಮತದ ಕೊರತೆ ಈ ರೀತಿಯ ಅನಿರೀಕ್ಷಿತ ಬೆಳವಣಿಗೆಗಳು ಕಂಡು ಬಂದಲ್ಲಿ ಆ ರಾಜ್ಯಗಳು ಕೂಡ ಚುನಾವಣೆಗೆ ಸಿದ್ದಗೊಳ್ಳುವ ಪಟ್ಟಿಗೆ ಸೇರ್ಪಡೆಯಾಗುತ್ತದೆ. ಹಾಗೆ ನೋಡಿದರೆ ಮೇಲ್ನೋಟಕ್ಕೆ ಕಂಡು ಬಂದಂತೆ ಪ್ರತಿ ವರ್ಷವೂ ಸರಿ ಸುಮಾರು ನಾಲ್ಕರಿಂದ ಆರು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯುತ್ತಲೇ ಇದೆ ಎಂದು ಹೇಳಬಹುದು.

ಈ ಮೇಲ್ಕಂಡ ಅಂಶಗಳನ್ನು ಗಮನಿಸಿದಾಗ ಹೀಗೆ ವರ್ಷದುದ್ದಕ್ಕೂ ಒಂದಲ್ಲ ಒಂದು ರಾಜ್ಯಗಳಲ್ಲಿ ಚುನಾವಣೆ ನಡೆಸುವದಕ್ಕಿಂತ, ವಿಧಾನಸಭೆಗೂ ಲೋಕಸಭೆಗೂ ಏಕ ಕಾಲಕ್ಕೆ ಚುನಾವಣೆ ನಡೆದರೆ ಹೇಗೆ ಎಂಬ ಪ್ರಸ್ಥಾಪನೆಯಾದರೆ ಆಶ್ಚರ್ಯಪಡಬೇಕಾಗಿಲ್ಲ. ಅದರಂತೆ ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ಯವರು ಕೂಡ "ಏಕ ಕಾಲಕ್ಕೆ" ಚುನಾವಣೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ ಮತ್ತು ಈ ಅಂಶದ ಚರ್ಚೆಯ ಬಗ್ಗೆ ಹೆಚ್ಚು ಒಲವು ತೋರಿಸಿದ್ದಾರೆ. ಚುನಾವಣಾ ಆಯೋಗವು ಕೂಡ ಎಲ್ಲಾ ರಾಜಕೀಯ ಪಕ್ಷಗಳೊಡನೆ ಹಾಗು ಇತರೆ ಸಂಸ್ಥೆಗಳೊಡನೆ ಚರ್ಚಿಸಿ ಮುಂದಡಿ ಇಡುವ ಲಕ್ಷಣಗಳು ಗೋಚರಿಸುತ್ತಿವೆ ಆದರೆ ಎಲ್ಲಾ ರಾಜಕೀಯ ಪಕ್ಷಗಳ ಒಮ್ಮತದ ಅಭಿಪ್ರಾಯ ಎಂಬ ಅಂಶವೇ ಬಹು ದೊಡ್ಡ ಸವಾಲು.

ಹಾಗಾದರೆ ಪದೇ ಪದೇ ಅಥವಾ ಬೇರೆಯದೇ ಹಂತದಲ್ಲಿ ಅಂದರೆ ವಿಧಾನಸಭೆಯ ಕಾಲ ಮಿತಿಗನುಸಾರವಾಗಿ ಚುನಾವಣೆಗಳು ಬೇಡವೆಂಬ ಕೂಗು ಕೇಳಲು ಕಾರಣವಾದ ಅಂಶಗಳು ಅಥವಾ ಕಾಲ ಮಿತಿಗನುಸಾರವಾಗಿ ಚುನಾವಣೆಗಳಿಂದಾಗಿ ಬಂದೊದಗುವ ಅನಾನುಕೂಲತೆಗಳು ಏನೆಂದು ನೋಡಿದಾಗ ಕಂಡ ಅಂಶಗಳು ಇಂತಿವೆ :
- ಅಘಾದವಾದ ಖರ್ಚುವೆಚ್ಚ
- ಚುನಾವಣೆ ಸಮಯದಲ್ಲಿ ಹೇರಲಾಗುವ ನೀತಿ ಸಂಹಿತೆಯಿಂದಾಗಿ ಹಲವಾರು ಕೆಲಸಗಳು ಮತ್ತು ಹೊಸ ಯೋಜನೆಗಳಿಗೆ ಪೆಟ್ಟು.
- ಅತೀ ಅಗತ್ಯ ಸೇವೆಗಳ ಪಾಲನೆಗಳಲ್ಲಿ ಉಂಟಾಗುವ ವ್ಯತ್ಯಯ
- ಶಾಲಾ ಕಾಲೇಜುಗಳಲ್ಲಿ ಮತ್ತು ಇತರೆ ಸರ್ಕಾರೀ ಕಚೇರಿಗಳಲ್ಲಿ ತೊಡಗಿಸಿಕೊಂಡ ಮಾನವ ಸಂಪನ್ಮೂಲದ ಮೇಲೆ ಹೊರೆ.
- ಪದೇ ಪದೇ ನಡೆಯುವ ಚುನಾವಣೆಗಳಿಂದಾಗಿ ಸರ್ಕಾರ ದೂರಾಲೋಚನೆಯಿಂದ ಕಾರ್ಯಪ್ರವರ್ತರಾಗದೆ, ತತಕ್ಷಣದ ನಿರ್ಧಾರದಿಂದಾಗುವ ಅನಕೂಲಗಳ  ಬಗ್ಗೆ ಕಾರ್ಯಪ್ರವರ್ತರಾಗುವುದು ಮತ್ತು ಚುನಾವಣೆ ಉದ್ದೇಶಿತ ಜನಪ್ರಿಯ ಯೋಜನೆಗಳ ಬಗ್ಗೆ ಮಾತ್ರ ಒಲವು
- ರಾಜ್ಯ ಬೊಕ್ಕಸಕ್ಕೆ ಅಪಾರ ಹೊರೆ ಮತ್ತು ಆಡಳಿತ ಒತ್ತಡ
- ಚುನಾವಣೆಯ ದಿನಾಂಕ ಘೋಷಣೆಯೊಂದಿಗೆ ಹೊಸ ಯೋಜನೆಗಳ ಘೋಷಣೆಯು ಮಾದರಿ ನೀತಿ ಸಂಹಿತೆಯಿಂದಾಗಿ ನಿಲ್ಲುವಂತಾಗುತ್ತದೆ ಮತ್ತು, ಚುನಾವಣಾ ಆಯೋಗದ ಅನುಮತಿಯಿಲ್ಲದೆ ಯಾವುದೇ ಹೊಸ ನೇಮಕಾತಿಗಳನ್ನು, ವರ್ಗಾವಣೆಗಳನ್ನು ಮಾಡಲು ಸಾಧ್ಯವಿಲ್ಲ, ಈ ಅಂಶಗಳು ಸ್ವಲ್ಪ ಮಟ್ಟಿಗಾದರೂ ಸರ್ಕಾರದ ಕೆಲಸ ಕಾರ್ಯಗಳನ್ನು ತಡೆಯುತ್ತವೆ.

ಹೀಗೆ ಪಟ್ಟಿ ಒಂದೋ ಎರಡೂ ಬೆಳೆಯುತ್ತಲೇ ಹೋಗುತ್ತದೆ, ಆದರೆ ಏಕ ಕಲಾಕ್ಕೆ ಚುನಾವಣೆ ಎಂಬುದು ಮುಳ್ಳಿನ ಹಾಸಿಗೆಯ ಮೇಲೆ ನಡೆದಂತೆ ಏಕೆಂದರೆ , ಮೊದಲನೆಯ ಅತಿ ದೊಡ್ಡ ಸವಾಲೆಂದರೆ ಎಲ್ಲ ರಾಜಕೀಯ ಪಕ್ಷಗಳನ್ನು ಈ ನಿಟ್ಟಿನಲ್ಲಿ ಒಂದು ಗೂಡಿಸುವುದು ಒಂದು ಅವಾಸ್ತವದ  ಅಂಶವೇ  ಸರಿ.ಸಾಮಾನ್ಯವಾಗಿ ಕೇಂದ್ರದಲ್ಲಿ ಯಾವ ಪಕ್ಷಕ್ಕೆ ಮತದಾರ ಒಲವು ತೋರುತ್ತಾನೋ ರಾಜ್ಯದಲ್ಲೂ ಅದೇ ಪಕ್ಕ್ಷಕ್ಕೆ ಒಲವು ತೋರುತ್ತಾನೆ (ಕರ್ನಾಟಕ ಹೊರತು ಪಡಿಸಿ) ಆದ್ದರಿಂದ ಪ್ರಾದೇಶಿಕ ರಾಜಕೀಯ ಪಕ್ಷಗಳು ಇದನ್ನು ಒಪ್ಪಲಾರರು.

ಇತ್ತೀಚೆಗೆ ನೀತಿ ಆಯೋಗ ಏಕ ಕಾಲಕ್ಕೆ ಚುನಾವಣೆಯ ಸವಾಲುಗಳನ್ನು ಈ ರೀತಿ ಪರಾಮರ್ಶಿಸಿದಾಗ ಕಂಡಂತ ಅಂಶಗಳೆಂದರೆ: ಈಗಾಗಲೇ ಸರ್ಕಾರವನ್ನು ನಡೆಸುತ್ತಿರುವ ಸರ್ಕಾರಗಳ ಅವಧಿಯನ್ನು ಏಕ ಕಾಲಕ್ಕೆ ಚುನಾವಣೆಗೋಸ್ಕರ ಮೊಟಕು ಗೊಳಿಸಬೇಕೇ ಅಥವಾ ಹೆಚ್ಚಿಸಬೇಕೆ?, ಹಾಗೆ ಏಕ ಕಾಲಕ್ಕೆ ಚುನಾವಣೆ ನಡೆದು ಒಂದೊಮ್ಮೆ ಸಮ್ಮಿಶ್ರ ಸರ್ಕಾರ ಆಡಳಿತದ ಸೂತ್ರ ಹಿಡಿದು ನಿಗದಿತ ಸಮಯದ ಮುಂಚೆ ಸರ್ಕಾರ ಅಧಿಕಾರ ಕಳೆದು ಕೊಂಡರೆ ಏನು ಮಾಡುವುದು, ಲೋಕ ಸಭಾ ಮತ್ತು ವಿಧಾನ ಸಭೆಯ ಅವಧಿಯನ್ನು ಪೂರ್ವ ನಿರ್ಧರಿಸಿಬಿಡುವಿದೆ, ಈಗ ನಮ್ಮ ನಂಜನಗೂಡಿನಲ್ಲಿ ಆದಂತ ಬೆಳವಣಿಗೆ ಆದರೆ ಹೇಗೆ ಉಪಚುನಾವಣೆಯನ್ನು ನೆರವೇರಿಸುವುದು , ಈ ರೀತಿಯಾಗಿ  ಏಕ ಕಾಲಕ್ಕೆ ಚುನಾವಣೆಯನ್ನು ಕಾರ್ಯಗತ ಗೊಳಿಸಿದಲ್ಲಿ ಬಂದೊದಗಬಹುದಾದ ಸಂವಿಧಾನಿಕ ಮತ್ತು ಇತರೆ ಸವಾಲುಗಳು ಚರ್ಚೆಯ ವ್ಯಾಪ್ತಿಗೆ ಒಳಪಟ್ಟಿವೆ.
ಹಾಗೆಂದು ಏಕ ಕಾಲಕ್ಕೆ ಚುನಾವಣೆ ಎಂಬುದು ನಮ್ಮ ದೇಶಕ್ಕೆ ಹೊಸತೇನಲ್ಲ, ೧೯೫೧ ರಿಂದ ೧೯೬೭ರ ವರೆಗೂ ವಿಧಾನಸಭೆಗೂ, ಲೋಕಸಭೆಗೂ ಚುನಾವಣಗೆಗಳು ಏಕಕಾಲಕ್ಕೆ ನಡೆದ ನಿದರ್ಶನ ನಮ್ಮ ಮುಂದೆ ಇದೆ ಆದರೆ ೧೯೬೭ ರ ನಂತರದ ಸ್ಥಿತ್ಯಂತರಗಳಿಂದಾಗಿ ಏಕ ಕಾಲದ ಚುನಾವಣೆಯ ಕೊಂಡಿ ಕಳಚಿ ಹೋಯಿತು, ಚುನಾವಣೆಗಳೆಂಬುದು ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬಗಳಲೊಂದು ನಿಜ ಆದರೆ ಈ ಹಬ್ಬಗಳು ಪದೇ ಪದೇ ಬಂದೆರಗಿದರೆ ಆ ಹಬ್ಬಗಳನ್ನು ಆಚರಿಸುವ ಮಾನಸಿಕ ಮತ್ತು ಆರ್ಥಿಕ ಚೈತನ್ಯವಿರಬೇಕಲ್ಲವೇ? ಅದೇನೇ ಇರಲಿ ಏಕಕಾಲಕ್ಕೆ ಚುನಾವಣೆಯ ನೆಪದಿಂದಾದರೂ ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ರಾಜಕೀಯ ಮತ್ತು ಆಡಳಿತ ಸ್ಥಿರತೆಯ ಬಗ್ಗೆ ಚಿಂತಿಸುವಂತಾಗಿ ರಾಷ್ತ್ರ ಮತ್ತು ರಾಜ್ಯದ ಅಭ್ಯದಯದ ಬಗ್ಗೆ ಚಿಂತಿಸಿ ಆ ಕಡೆಗೆ ದೇಶವನ್ನು ಕೊಂಡೊಯ್ಯುವ ಪ್ರಯತ್ನವಾದರೆ ಅದೇ ಭಾಗ್ಯ.


ಕಾರ್ತಿಕ್ ಯಸ್ ಬಾಪಟ್

No comments:

Post a Comment